ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ಗೆ ಭದ್ರಾವತಿ ಎಂಪಿಎಂ ಮುದ್ರಣ ಕಾಗದ

Last Updated 7 ಜುಲೈ 2012, 19:30 IST
ಅಕ್ಷರ ಗಾತ್ರ

ಭದ್ರಾವತಿ: ಇಲ್ಲಿನ ಪ್ರತಿಷ್ಠಿತ ಮೈಸೂರು ಕಾಗದ ಕಾರ್ಖಾನೆ (ಎಂಪಿಎಂ) ಇದೇ ಮೊದಲ ಬಾರಿಗೆ `ನ್ಯೂಸ್‌ಪ್ರಿಂಟ್~ ಕಾಗದವನ್ನು ಇರಾನ್ ದೇಶಕ್ಕೆ ರಫ್ತು ಮಾಡುತ್ತಿದೆ.

ಮೊದಲ ಹಂತದ ಕಾಗದ ರವಾನೆ ಕಾರ್ಯಕ್ಕೆ ಕಾರ್ಖಾನೆ ಅಧ್ಯಕ್ಷ ಆರಗ ಜ್ಞಾನೇಂದ್ರ ಶನಿವಾರ ಹಸಿರು ನಿಶಾನೆ ತೋರಿಸುವ ಮೂಲಕ ಸುಮಾರು 500 ಟನ್ ಕಾಗದ ವಿಲೇವಾರಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇರಾನ್‌ಗೆ ಕಳುಹಿಸಿದ್ದ ಸ್ಯಾಂಪಲ್‌ಗಳಿಗೆ ಉತ್ತಮ ಪ್ರತಿಕ್ರಿಯ ಸಿಕ್ಕಿದೆ. ಅದರ ಫಲವಾಗಿ ಮೊದಲ ಹಂತವಾಗಿ ಸುಮಾರು 20,000 ಟನ್ ಮುದ್ರಣ ಕಾಗದಕ್ಕೆ ಬೇಡಿಕೆ ಬಂದಿದೆ. ಅದನ್ನು ಹಂತ-ಹಂತವಾಗಿ ಪೂರೈಸಲು ಕಾರ್ಖಾನೆ ಸಜ್ಜಾಗಿದೆ. ನಮ್ಮ ಕಾರ್ಖಾನೆಯ `ನ್ಯೂಸ್‌ಪ್ರಿಂಟ್~ ಬೇಡಿಕೆ ಕಡಿಮೆಯಾಗಿತ್ತು. ಈ ಹೊಸ ಮಾರುಕಟ್ಟೆ ಕಾರಣ ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಮ್ಮ ಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದರು.

ಈ ವ್ಯವಹಾರದಿಂದ ಉತ್ತಮ ರೀತಿಯ ವಿದೇಶಿ ವಿನಿಮಯ ವ್ಯವಹಾರ ಕುದುರಲಿದೆ. ಸದ್ಯ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದರಿಂದ ನಮ್ಮ ಉತ್ಪನ್ನಕ್ಕೆ ಹೆಚ್ಚಿನ ಲಾಭ ಸಿಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ನೋಟ್‌ಬುಕ್‌ಗೆ ಬೇಡಿಕೆ
 `ಎಂಪಿಎಂ `ನೋಟ್‌ಬುಕ್‌ಗೂ ಸಹ ಉತ್ತಮ ಮಾರುಕಟ್ಟೆ ಸಿಕ್ಕಿದೆ. ಅಮೆರಿಕ ಹಾಗೂ ಕೆನಡಾ ದೇಶದಿಂದ ಸುಮಾರು 57 ಲಕ್ಷ ನೋಟ್‌ಬುಕ್‌ಗೆ ಬೇಡಿಕೆ ಬಂದಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ಎಂಪಿಎಂ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಇದೆ. ಆದರೆ, ಅದನ್ನು ಸೂಕ್ತ ವ್ಯವಸ್ಥೆ ಮೂಲಕ ತಲುಪಿಸುವ ಕಾರ್ಯ ನಮ್ಮಿಂದ ನಡೆದಿಲ್ಲ. ಅದನ್ನು ಸರಿಪಡಿಸುವ ವಿಶ್ವಾಸವಿದೆ ಎಂದರು.

ರಾಜಕಾರಣದ ಅಡ್ಡಿ

ಸ್ಥಳೀಯ ರಾಜಕೀಯ ಷಡ್ಯಂತ್ರ ಫಲವಾಗಿ ಕಾರ್ಖಾನೆ ಹೆಸರು ಹಾಳು ಮಾಡುವ ಹುನ್ನಾರ ನಡೆದಿದೆ. ಇದರಿಂದ ನಮ್ಮ ಮಾರಾಟಗಾರರಿಗೆ, ಖರೀದಿದಾರರಿಗೆ, ಕಚ್ಚಾವಸ್ತು ನೀಡುವ ಮಂದಿಗೆ ಹಾಗೂ ಇನ್ನಿತರೆ ಹಣಕಾಸು ಸಂಸ್ಥೆಗಳಿಗೆ ತಪ್ಪು ಸಂದೇಶ ರವಾನೆ ಆಗುವ ಸಾಧ್ಯತೆ ಇದೆ. ಅದಕ್ಕೆ ಯಾರು ಅವಕಾಶ ಕೊಡಬಾರದು ಎಂದು ಮನವಿ ಮಾಡಿದರು.

ಈಚೆಗೆ ಮೆಸ್ಕಾಂ ಎರಡು ಗಂಟೆ ಕಾಲ ಕಾರ್ಖಾನೆಗೆ ವಿದ್ಯುತ್ ನಿಲುಗಡೆ ಮಾಡುವಲ್ಲಿ ಸ್ಥಳೀಯ ರಾಜಕಾರಣದ ಹಸ್ತಕ್ಷೇಪವಿದೆ. ಈ ಕುರಿತು ಮುಖ್ಯಮಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ನೇರವಾಗಿ ದೂರು ನೀಡಿದ್ದೇನೆ. ಮುಖ್ಯಮಂತ್ರಿ ಈ ಕುರಿತಾಗಿ ಸಂಬಂಧಿಸಿದ `ಮೆಸ್ಕಾಂ~ ಕಾರ್ಯ ನಿರ್ವಾಹಕ ಎಂಜಿನಿಯರ್ ಹಾಗೂ ಸಹಾಯಕ ಎಂಜಿನಿಯರ್ ಅವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿ, ವರದಿ ನೀಡುವಂತೆ ಆದೇಶಿಸಿದ್ದಾರೆ ಎಂದರು.

ಕಾರ್ಮಿಕ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್, ಮಂಜುನಾಥ್, ಸುರೇಶ್‌ಬಾಬು, ಡಿ.ಕೆ. ಶ್ರೀನಿವಾಸ್, ಅಧಿಕಾರಿಗಳಾದ ಬಿ.ಎನ್. ಶ್ರೀನಿವಾಸ್, ಎನ್.ಸಿ. ಪ್ರಭು, ಜಿ.ಎ. ಷಾ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT