ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ನಲ್ಲಿ ವಿಶ್ವಸಂಸ್ಥೆ ಕಾವಲು ಸಮಿತಿ

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಟೆಹರಾನ್ (ಎಎಫ್‌ಪಿ, ಪಿಟಿಐ): ಇರಾನ್ ಅಣ್ವಸ್ತ್ರ ಕಾರ್ಯಕ್ರಮದ ಮೇಲಿನ ವಿವಾದವನ್ನು ಬಗೆಹರಿಸುವ ಗುರಿಯೊಂದಿಗೆ ವಿಶ್ವಸಂಸ್ಥೆಯ ಪರಮಾಣು ಕಾವಲು ಸಮಿತಿಯ ನಿಯೋಗವೊಂದು ಸೋಮವಾರ ಇಲ್ಲಿಗೆ ಎರಡು ದಿನಗಳ ಭೇಟಿಗಾಗಿ ಬಂದಿರುವುದಾಗಿ `ಇಸ್ನಾ~ ಸುದ್ದಿಸಂಸ್ಥೆ ತಿಳಿಸಿದೆ.

ಕಳೆದ ಮೂರು ವಾರಗಳಲ್ಲಿ ಇದು ಇರಾನ್‌ಗೆ ಸಮಿತಿಯ ಎರಡನೇ ಭೇಟಿಯಾಗಿದೆ. ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ ನವೆಂಬರ್‌ನಲ್ಲಿ ಸಿದ್ಧಪಡಿಸಿದ ವರದಿಯಲ್ಲಿ ಪ್ರಸ್ತಾಪಿಸಿರುವ ತನ್ನ ಶಂಕಿತ ಚಟುವಟಿಕೆಗಳ ಕುರಿತು ಚರ್ಚಿಸಲು ಇರಾನ್ ಮುಂದಾಗಿರುವುದು ಪ್ರಮುಖ ಬೆಳವಣಿಗೆಯಾಗಿದೆ.

ಈ ತಂಡದ ನೇತೃತ್ವ ವಹಿಸಿರುವ ವಿಶ್ವಸಂಸ್ಥೆಯ ಮುಖ್ಯ ಪರಮಾಣು ಪರೀಕ್ಷಕ ಹರ್ಮನ್ ನಾಕೇರ್ಟ್ಸ್ ಅವರು ವಿಯೆನ್ನಾದಲ್ಲಿ ವಿಮಾನವೇರುವ ಮುನ್ನ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಇರಾನ್ ಭೇಟಿಯಿಂದ `ನಿಶ್ಚಿತ ಫಲಿತಾಂಶ~ ಹೊರಬೀಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಭೇಟಿ ಉತ್ತಮ ಮತ್ತು ರಚನಾತ್ಮಕ ಫಲಿತಾಂಶಕ್ಕೆ ಕಾರಣವಾಗಬಹುದು ಎಂದೂ ನುಡಿದರು.

ಸೇನಾ ಕವಾಯತು
ಟೆಹರಾನ್ ವರದಿ:  ಇರಾನ್‌ನ ಇಸ್ಲಾಮಿಕ್ ಕ್ರಾಂತಿಕಾರಿ ಭೂಸೇನಾ  (ಐಆರ್‌ಜಿಸಿ) ಯೋಧರು ಭಾನುವಾರ ಇಲ್ಲಿ ಮತ್ತೆ ಸೈನಿಕ ಕವಾಯತು ಆರಂಭಿಸಿದ್ದಾಗಿಯೂ `ಇಸ್ನಾ~ವನ್ನು ಉಲ್ಲೇಖಿಸಿ `ಕ್ಸಿನ್ಹುವಾ~ ವರದಿ ಮಾಡಿದೆ.

ಎರಡು ದಿನಗಳ ಈ ಸೇನಾ ಕವಾಯತುವಿನಲ್ಲಿ ಐಆರ್‌ಜಿಸಿ ಪದಾತಿ ದಳ ಮತ್ತು ಬಸೀಜಿ ಸ್ವಯಂ ಪಡೆಗಳ ತುಕಡಿಗಳು ಭಾಗವಹಿಸಿರುವುದಾಗಿ ಐಆರ್‌ಜಿಸಿ ಭೂಪಡೆಗಳ ಕಮಾಂಡರ್ ಮೊಹಮ್ಮದ್ ಪಾಕ್ಪೋರ್ ತಿಳಿಸಿದ್ದಾರೆ ಎಂದು ಅದು ಹೇಳಿದೆ.

ವಿಳಂಬಗೊಳಿಸಲು ಸಿದ್ಧ
ವಾಷಿಂಗ್ಟನ್ ವರದಿ:
ಇಸ್ರೇಲ್ ಸೇನಾ ದಾಳಿಯು ಇರಾನ್ ಅಣ್ವಸ್ತ್ರ ಕಾರ್ಯಕ್ರಮವನ್ನು ಕೆಲವು ವರ್ಷಗಳ ಕಾಲ ವಿಳಂಬವಾಗಿಸುವ ಸಾಮರ್ಥ್ಯ ಹೊಂದಿದೆ ಎಂದಿರುವ ಪೆಂಟಗಾನ್ ಅಧಿಕಾರಿಯೊಬ್ಬರು, ಆದರೆ ಈ ಕ್ರಮವು ಟೆಹರಾನ್ ಮೇಲೆ ದಾಳಿ ನಡೆಸಲು ಎಚ್ಚರಿಕೆಯಲ್ಲ ಎಂದೂ ಹೇಳಿದ್ದಾರೆ.

`ಇರಾನ್‌ಗೆ ಅಣ್ವಸ್ತ್ರ ಹೊಂದಲು ಬಿಡುವುದಿಲ್ಲ~ ಎಂದು ಒಬಾಮ ಆಡಳಿತ ಮತ್ತು ಇಸ್ರೇಲ್ ಹೇಳಿರುವ ಬೆನ್ನಲ್ಲೇ `ಸಿಎನ್‌ಎನ್~ಗೆ ಪ್ರತಿಕ್ರಿಯಿಸಿರುವ ಅಮೆರಿಕ ಜಂಟಿ ಸೇನಾಪಡೆಗಳ ಮುಖ್ಯಸ್ಥರ ವಿಭಾಗದ ಅಧ್ಯಕ್ಷ ಜನರಲ್ ಮಾರ್ಟಿನ್ ಡೆಂಪ್ಸೆ ಅವರು, ಇಸ್ರೇಲ್‌ಗೆ ಇರಾನ್ ಮೇಲೆ ದಾಳಿ ನಡೆಸಿ ಅಣಸ್ತ್ರ ಕಾರ್ಯಕ್ರಮವನ್ನು ವಿಳಂಬ ಮಾಡುವ ಸಾಮರ್ಥ್ಯವಿದೆ ಎಂದಿದ್ದಾರೆ.

ಜೆರುಸಲೇಂ ವರದಿ: ಇಸ್ರೇಲ್ ತನ್ನನ್ನು ರಕ್ಷಿಸಿಕೊಳ್ಳಲು ಇರಾನ್ ಮೇಲೆ ದಾಳಿ ನಡೆಸುವ ಬಗ್ಗೆ ಅಂತಿಮವಾಗಿ ಸ್ವಯಂ ಅಧಿಕೃತ ನಿರ್ಧಾರ ಪ್ರಕಟಿಸಲಿದೆ ಎಂದು ಇಸ್ರೇಲ್ ಸೇನಾಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಬೆನ್ನಿ ಗಾಟ್ಜ್ ತಿಳಿಸಿದ್ದಾರೆ.

ಇಸ್ಲಾಮಿಕ್ ಗಣರಾಜ್ಯ ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಇಲ್ಲಿಗೆ ಆಗಮಿಸಿರುವ ಹಿರಿಯ ಅಮೆರಿಕ ಅಧಿಕಾರಿಯೊಡನೆ ಮಾತುಕತೆಗೂ ಮುನ್ನ ಶನಿವಾರ ಸರ್ಕಾರಿ `ಒನ್ ಟಿವಿ~ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ಇರಾನ್‌ನಿಂದ ಭಾರತಕ್ಕೆ ತೈಲ: ಅಮೆರಿಕಕ್ಕೆ ಕಪಾಳಮೋಕ್ಷ

ವಾಷಿಂಗ್ಟನ್ (ಪಿಟಿಐ): ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಲು ಭಾರತ ನಿರ್ಧಾರ ಕೈಗೊಂಡಿರುವುದು ಅಮೆರಿಕಕ್ಕೆ ಕಪಾಳ ಮೋಕ್ಷವಾಗಿದ್ದು, ಇದು ಇರಾನನ್ನು ಏಕಾಂಗಿಯಾಗಿಸುವ ಅಂತರರಾಷ್ಟ್ರೀಯ ಪ್ರಯತ್ನಕ್ಕೆ ಹಿನ್ನಡೆಯಾದಂತಾಗಿದೆ ಎಂದು ಮಾಜಿ ರಾಜತಾಂತ್ರಿಕ ನಿಕೋಲಸ್ ಬರ್ನ್ಸ್ ಹೇಳಿದ್ದಾರೆ.

ಬರ್ನ್ಸ್ ಅವರು ಬುಷ್ ಆಡಳಿತದಲ್ಲಿ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಮೇಲಿನ ಸಮಾಲೋಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರಲ್ಲದೆ, ಅಮೆರಿಕ ವಿದೇಶಾಂಗ ರಾಜಕೀಯ ವ್ಯವಹಾರಗಳ ಉಪ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಇವರು ಸೋಮವಾರ `ದಿ ಡಿಪ್ಲೊಮ್ಯಾಟ್~ ನಿಯತಕಾಲಿಕಕ್ಕೆ ಬರೆದ ಲೇಖನದಲ್ಲಿ ಭಾರತದ ನಿಲುವನ್ನು ಟೀಕಿಸಿದ್ದಾರೆ.

`ಭಾರತದೊಡನೆ ಉತ್ತಮ ಬಾಂಧವ್ಯ ಹೊಂದಲು ಪ್ರಯತ್ನಿಸಿದ ನಮ್ಮಂತಹವರಿಗೆ ಇದೊಂದು ಅತ್ಯಂತ ನಿರಾಶದಾಯಕ ಸುದ್ದಿಯಾಗಿದೆ.  ಭಾರತ ಸರ್ಕಾರದೊಡನೆ ಯಶಸ್ವಿ, ಆಪ್ತ ಹಾಗೂ ತಂತ್ರಗಾರಿಕೆಯ ಪಾಲುದಾರಿಕೆ ಸ್ನೇಹವನ್ನು ಹೊಂದಬೇಕೆಂಬ ಬಯಕೆ ನಿರರ್ಥಕವಾಗಿದೆ. ಇದು ಎರಡೂ ದೇಶಗಳ ಬಾಂಧವ್ಯಕ್ಕೆ ಮುಖ್ಯ ಹಿನ್ನಡೆ~ ಎಂದು ಅವರು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT