ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರುವ ರೈಲಿಗೆ ಅತಿವೇಗ: ಬಿಐಎಲ್‌ಗೆ ಸಂಪರ್ಕ ಸರಾಗ

Last Updated 16 ಫೆಬ್ರುವರಿ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು: ದೇವನಹಳ್ಳಿ ಬಳಿ ಇರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಬಿಐಎಎಲ್) ತ್ವರಿತ ಸಂಪರ್ಕ ಕಲ್ಪಿಸಲು ಅತಿ ವೇಗದ ರೈಲು ಯೋಜನೆ ರೂಪಿಸಿರುವ ಸರ್ಕಾರವನ್ನು ನೋಡಿದರೆ ‘ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲ ಹುಡುಕಾಡಿದಂತೆ’ ಎಂಬ ನಾಣ್ನುಡಿ ನೆನಪಾಗುತ್ತದೆ.

ರೈಲು ಎಲ್ಲ ವರ್ಗದ ಜನರು ಇಷ್ಟಪಡುವ ಅತ್ಯುತ್ತಮ ಸಂಪರ್ಕ ವ್ಯವಸ್ಥೆ; ಜಗತ್ತಿನಾದ್ಯಂತ ಮನ್ನಣೆ ಪಡೆದಿರುವ ಸಂಪರ್ಕ ಸಾಧನ. ರೈಲ್ವೆ ಮಾರ್ಗದ ನಿರ್ಮಾಣ ವೆಚ್ಚವೂ ಕಡಿಮೆ; ಅದರಿಂದಾಗಿ ಪ್ರಯಾಣ ದರವೂ ಕಡಿಮೆ ಇರಲಿದೆ.

ಈಗಾಗಲೇ ಇರುವ ರೈಲ್ವೆ ಮೂಲ ಸೌಕರ್ಯವನ್ನು ಬಳಸಿಕೊಂಡು ಮಹಾನಗರದಿಂದ ಬಿಐಎಎಲ್‌ಗೆ ತ್ವರಿತ ರೈಲ್ವೆ ಸಂಪರ್ಕ ವ್ಯವಸ್ಥೆಯನ್ನು ಏರ್ಪಾಡು ಮಾಡಬಹುದು.
ನಿಜ, ನಗರದಿಂದ ಬಿಐಎಎಲ್‌ಗೆ ನೇರ ರೈಲ್ವೆ ಮಾರ್ಗ ಇಲ್ಲದಿರಬಹುದು. ಆದರೆ ನಗರದಿಂದ ದೇವನಹಳ್ಳಿವರೆಗೆ ರೈಲು ಮಾರ್ಗ ಇದೆ. ಅದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ.

ಮುಂಬೈ, ಕೋಲ್ಕತ್ತ, ಚೆನ್ನೈ ಮೊದಲಾದ ಮಹಾನಗರಗಳಲ್ಲಿ ಸ್ಥಳೀಯ ರೈಲು ಸೇವೆಯನ್ನು ಪರಿಣಾಮಕಾರಿಯಾಗಿ ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಬೆಂಗಳೂರಿನ ಮಟ್ಟಿಗೆ ಅಂತಹ ಯಾವುದೇ ಪ್ರಯತ್ನ ನಡೆದಿಲ್ಲ. ‘ನಗರ ಸಂಚಾರ ದಟ್ಟಣೆ ಪರಿಹಾರಕ್ಕೆ ಸ್ಥಳೀಯ ರೈಲು ಬೇಕು’ ಎಂಬ ಬೇಡಿಕೆ ಆಗೊಮ್ಮೆ ಈಗೊಮ್ಮೆ ಕೇಳಿ ಬಂದಿದೆಯಷ್ಟೆ.

ನಗರದ ಹೊರ ವಲಯದ ಉಪನಗರಗಳು ಮತ್ತು ಪಟ್ಟಣಗಳ ನಡುವೆ ಸಂಪರ್ಕ ಕಲ್ಪಿಸುವ ವರ್ತುಲ ರೈಲ್ವೆ ಯೋಜನೆಯ ಪ್ರಸ್ತಾವವು ಇನ್ನೂ ಕಾಗದದ ಮೇಲೆ ಉಳಿದಿದೆ. ್ಙ500 ಕೋಟಿ ವೆಚ್ಚದ ಯೋಜನೆಯನ್ನು ಕೂಡಲೇ ಕಾರ್ಯಗತಗೊಳಿಸುವಂತೆ ರಾಜ್ಯ ಸರ್ಕಾರ, ಕೇಂದ್ರವನ್ನು ಒತ್ತಾಯಿಸುತ್ತಿದೆ. ಆದರೆ ಯೋಜನೆ ಸಾಕಾರವಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ವರ್ತುಲ ರೈಲು ಮಾರ್ಗ ನಿರ್ಮಾಣವಾದರೆ ಅದರಿಂದ ಬಿಐಎಎಲ್ ಸೇರಿದಂತೆ ನಗರದ ಎಲ್ಲ ಪ್ರಮುಖ ಸ್ಥಳಗಳಿಗೆ ಸುಗಮ ಸಂಪರ್ಕ ವ್ಯವಸ್ಥೆ  ಸಾಧ್ಯ  ವಾಗಲಿದೆ. 

ಈಗ  ಬಿಐಎ ಎಲ್‌ಗೆ  ಸಂಪರ್ಕ ಕಲ್ಪಿಸುವ ವಿಚಾರಕ್ಕೆ ಬರೋಣ. ವಿಮಾನ ಪ್ರಯಾಣಿಕರಿಗೆ ಮಾತ್ರ ಅನುಕೂಲವಾಗುವ ಅತಿವೇಗದ ರೈಲು ಯೋಜನೆ ಜಾರಿಗೊಳಿಸುವ ಬದಲು ಈಗಾಗಲೇ ಇರುವ ರೈಲಿಗೆ ‘ಅತಿವೇಗ’ದ ಎಲ್ಲ ಸೌಕರ್ಯ ಅಳವಡಿಸಿಬಿಟ್ಟರೆ ಸಾಕು; ಆರೇಳು ಸಾವಿರ ಕೋಟಿ ರೂಪಾಯಿ ಖರ್ಚು ಮಾಡುವ ಅಗತ್ಯ ಬೀಳುವುದಿಲ್ಲ. ಕೆಲವೇ ನೂರು ಕೋಟಿ ರೂಪಾಯಿ ವೆಚ್ಚದಲ್ಲೇ ಹೆಚ್ಚಿನ ಭೂ ಸ್ವಾಧೀನದ ಅಗತ್ಯವಿಲ್ಲದೇ ವಿಮಾನ ನಿಲ್ದಾಣಕ್ಕೆ ರೈಲ್ವೆ ಸಂಪರ್ಕ ಕಲ್ಪಿಸಬಹುದು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನಸ್ಸು ಮಾಡಬೇಕಷ್ಟೆ.

ನಗರ- ದೇವನಹಳ್ಳಿ ನಡುವೆ ರೈಲ್ವೆ ಮಾರ್ಗವನ್ನು ಸ್ವಲ್ಪ ಪ್ರಮಾಣದ ಬದಲಾವಣೆಯೊಂದಿಗೆ ಬಿಐಎಎಲ್ ಸಂಪರ್ಕ ಮಾರ್ಗವನ್ನಾಗಿ ಬಳಸಿಕೊಳ್ಳಬಹುದು. ಈ ಮಾರ್ಗದಲ್ಲಿ 2010ರ ಏಪ್ರಿಲ್‌ನಿಂದಯಶವಂತಪುರದಿಂದ ದೇವನ  ಹಳ್ಳಿ   ವರೆಗೆ ಪ್ರಯಾಣಿಕ ರೈಲು ಸಂಚಾರವನ್ನು ಆರಂಭಿಸಲಾಗಿದೆ. ಈ ರೈಲು ಯಲಹಂಕ- ಬೆಟ್ಟಹಲಸೂರು- ದೊಡ್ಡ ಜಾಲ ಮಾರ್ಗವಾಗಿ ದೇವನಹಳ್ಳಿ ತನಕ ಓಡಾಡುತ್ತಿದೆ. ತಲಾ 110 ಪ್ರಯಾಣಿಕರು ಕುಳಿತು ಪ್ರಯಾಣಿಸಬಹುದಾದ ಐದು ಬೋಗಿಗಳು ಒಂದು ಸಲಕ್ಕೆ 500ಕ್ಕೂ ಹೆಚ್ಚಿನ ಜನರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿವೆ.

ಪ್ರತಿ ದಿನ ಬೆಳಿಗ್ಗೆ 10.40ಕ್ಕೆ ಯಶವಂತಪುರ (ವೈಪಿಆರ್) ಬಿಡುವ ಈ ರೈಲು ಮಧ್ಯಾಹ್ನ 12ಕ್ಕೆ ದೇವನಹಳ್ಳಿ ತಲುಪಲಿದೆ. ಇದೇ ರೈಲು ಮಧ್ಯಾಹ್ನ 1.45ಕ್ಕೆ ದೇವನಹಳ್ಳಿ ಬಿಟ್ಟು ಮಧ್ಯಾಹ್ನ 3.35ಕ್ಕೆ ಯಶವಂತಪುರ ತಲುಪಲಿದೆ.ಇದೇ ರೈಲು ಬೆಳಿಗ್ಗೆ ಹೊಸೂರಿನಿಂದ ಯಶವಂತಪುರಕ್ಕೆ, ಮಧ್ಯಾಹ್ನ ಯಶವಂತಪುರದಿಂದ ಹೊಸೂರುವರೆಗೆ ಓಡಾಡುತ್ತಿದೆ. ವೈಪಿಆರ್- ಹೊಸೂರು  ನಡುವಿನ ಮಾರ್ಗ      ಹೀಗಿದೆ;

 
ಹೆಬ್ಬಾಳ- ಬಾಣಸವಾಡಿ- ಹೀಳಿಗೆ (ಎಲೆಕ್ಟ್ರಾನಿಕ್ ಸಿಟಿ ಸಮೀಪ)- ಆನೇಕಲ್.
ಸದ್ಯಕ್ಕೆ ಎರಡನೇ ದರ್ಜೆ ಆಸನ ವ್ಯವಸ್ಥೆಯನ್ನು ಮಾತ್ರ ಹೊಂದಿರುವ ಈ ರೈಲಿನಲ್ಲಿ ಪ್ರಯಾಣ ದರ ಅತ್ಯಂತ ಕಡಿಮೆ. ವೈಪಿಆರ್- ಯಲಹಂಕ: ್ಙ2, ವೈಪಿಆರ್- ಬೆಟ್ಟಹಲಸೂರು: ್ಙ4, ವೈಪಿಆರ್- ದೊಡ್ಡಜಾಲ: ್ಙ4, ವೈಪಿಆರ್- ದೇವನಹಳ್ಳಿ: ್ಙ6.
ಈ ರೈಲು ಎರಡು ನಿಲ್ದಾಣಗಳಲ್ಲಿ ನಿಂತು ಹೊರಟರೂ ವೈಪಿಆರ್‌ನಿಂದ ದೇವನಹಳ್ಳಿ ತಲುಪಲು ತೆಗೆದುಕೊಳ್ಳುತ್ತಿರುವ ಸಮಯ 80 ನಿಮಿಷಗಳು. ದಿನದಲ್ಲಿ ಒಂದೇ ಒಂದು ಸಲ ಓಡಾಡುತ್ತಿರುವುದರಿಂದ ಈ ರೈಲು ಹೆಚ್ಚು ಜನಪ್ರಿಯವಾಗಿಲ್ಲ.

ಈ ಸಾಮಾನ್ಯ ರೈಲನ್ನು ಅತಿವೇಗಗೊಳಿಸಲಿಕ್ಕೆ ಭಾರಿ ವೆಚ್ಚವೇನೂ ಆಗದು. ಆಗಬೇಕಿರುವ ಕೆಲಸಗಳಾದರೂ ಇಷ್ಟೆ; ರೈಲುಗಳು ವೇಗವಾಗಿ ಚಲಿಸುವ ಹಾಗೆ ಹಳಿ ವ್ಯವಸ್ಥೆಯನ್ನು ಸುಧಾರಿಸಬೇಕು; ಯಲಹಂಕದಿಂದ ದೇವನಹಳ್ಳಿವರೆಗೆ ವಿದ್ಯುದ್ದೀಕರಣ ಮಾಡಬೇಕು; ಬಿಐಎಎಲ್ ಬಳಿ ಸುಸಜ್ಜಿತ ರೈಲು ನಿಲ್ದಾಣ ನಿರ್ಮಿಸಬೇಕು. ಇವಿಷ್ಟು ಕೆಲಸಕ್ಕೆ ಬೇಕಾಗುವ ಆರ್ಥಿಕ ಸಂಪನ್ಮೂಲವನ್ನು ವಿಶೇಷ ಪ್ರಯಾಣ ದರ ವಿಧಿಸುವ ಮೂಲಕ ಸಂಗ್ರಹಿಸಬಹುದು. ಈ ವಿಶೇಷ ದರವನ್ನು ಖಾಸಗಿ ಸಹಭಾಗಿತ್ವದ ಯೋಜನೆಯ ರೈಲಿನಲ್ಲಿ ವಸೂಲಿ ಮಾಡುವ ದರಕ್ಕಿಂತ ಸಾಕಷ್ಟು ಕಡಿಮೆ ಇರುವಂತೆ ನೋಡಿಕೊಳ್ಳುವುದು ಕಷ್ಟವಾಗಲಿಕ್ಕಿಲ್ಲ.

ವಿಮಾನ ನಿಲ್ದಾಣವನ್ನು ಬೇಗ ತಲುಪುವ ವಿಶ್ವಾಸ ಜನರಲ್ಲಿ ಮೂಡಿದರೆ ಹೆಚ್ಚು ಹೆಚ್ಚು ವಿಮಾನ ಪ್ರಯಾಣಿಕರು ಬಿಐಎಎಲ್‌ಗೆ ಹೋಗಿ ಬರಲು ರೈಲನ್ನೇ ಅವಲಂಬಿಸುತ್ತಾರೆ. ಇದರಿಂದ ಈ ಭಾಗದಲ್ಲಿ ವಿಮಾನ ಪ್ರಯಾಣಿಕರು ಮಾತ್ರವಲ್ಲದೇ ಇತರ ಲಕ್ಷಾಂತರ ಮಂದಿ ಸಾರ್ವಜನಿಕರಿಗೂ ಅನುಕೂಲವಾಗಲಿದೆ.
ರೈಲಿನ ಆಗಮನ- ನಿರ್ಗಮನ ಸಮಯಕ್ಕೆ ಸರಿಯಾಗಿ ರೈಲು ನಿಲ್ದಾಣಗಳ ಬಳಿಯಿಂದ ನಗರ ಸಾರಿಗೆ ಬಸ್ ಮತ್ತು ಟ್ಯಾಕ್ಸಿ ಸೇವೆಯನ್ನು ಸಮರ್ಪಕವಾಗಿ ಒದಗಿಸುವ ಕಾರ್ಯವೂ ಆಗಬೇಕು. ಅಷ್ಟಾದರೆ ಸಾಕು; ವಿಮಾನ ಪ್ರಯಾಣಿಕರಿಗೆ ಆರಾಮದಾಯಕ ತ್ವರಿತ ರೈಲು ಸೌಕರ್ಯ ಸಿಕ್ಕಂತಾಗುತ್ತದೆ.

ಮನಸ್ಸಿದ್ದರೆ ಮಾರ್ಗ
ಅತಿ ವೇಗದ ರೈಲು ಯೋಜನೆಗೆ ಸಾವಿರ ಕೋಟಿ ರೂಪಾಯಿ ಅಥವಾ ಅಷ್ಟೇ ಮೌಲ್ಯದ ಜಮೀನು ನೀಡಲು ಸಿದ್ಧವಿರುವ ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ನಗರಕ್ಕೆ ಸಂಬಂಧಿಸಿದ ರೈಲು ಯೋಜನೆಗಳನ್ನು ಕೇಂದ್ರದ ಮರ್ಜಿಗೆ ಕಾಯದೇ ಸ್ವತಃ ಕೈಗೆತ್ತಿಕೊಳ್ಳಬಹುದು.

ಬಿಐಎಎಲ್‌ಗೆ ಅತ್ಯುತ್ತಮವಾದ ರೈಲ್ವೆ ಸಂಪರ್ಕ ಒದಗಿಸಲು ರೂ 200ರಿಂದ 300 ಕೋಟಿ ಸಾಕು. ವರ್ತುಲ ರೈಲ್ವೆ ನಿರ್ಮಾಣಕ್ಕೆ ಬೇಕಾಗುವ ರೂ 500 ಕೋಟಿ ಹೊಂದಿಸುವುದು ಸಹ ಕಷ್ಟದ ಸಂಗತಿಯಲ್ಲ.

ಅಗತ್ಯವಿರುವ ಜಮೀನು ಮತ್ತು ಹಣವನ್ನು ತಾನೇ ಒದಗಿಸುವ ಮೂಲಕ ರಾಜ್ಯ ಸರ್ಕಾರ, ರೈಲ್ವೆ ಇಲಾಖೆ ಅಥವಾ ಕೇಂದ್ರ ಸರ್ಕಾರ ಯೋಜನೆಗೆ ಮಂಜೂರಾತಿ ಪಡೆದುಕೊಳ್ಳಬಹುದು.

ಬುಧವಾರ ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ, ‘ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ಯೋಜನೆಗೆ ಅಗತ್ಯವಿರುವ ಜಮೀನನ್ನು ರಾಜ್ಯಸರ್ಕಾರ ಸ್ವಾಧೀನಪಡಿಸಿಕೊಟ್ಟರೆ ರೈಲ್ವೆ ಇಲಾಖೆಯು ಸ್ಥಳೀಯ ರೈಲು ಯೋಜನೆಯನ್ನು ಕೈಗೊಳ್ಳಲು ಸಿದ್ಧವಿದೆ’ ಎಂದರು.

ಶತಾಬ್ದಿ ಮಾದರಿ ರೈಲಾದರೆ...
ಸದ್ಯ ರಾಜ್ಯದಲ್ಲಿ ಬೆಂಗಳೂರು ಮಾರ್ಗವಾಗಿ ಚೆನ್ನೈ ಮತ್ತು ಮೈಸೂರು ನಡುವೆ ಸಂಚರಿಸುವ ಶತಾಬ್ದಿ ರೈಲೇ ಅತಿವೇಗದ್ದು. ಇದರ ಉದಾಹರಣೆಯನ್ನು ನೋಡುವುದಾದರೆ ಬೆಂಗಳೂರು- ಮೈಸೂರು ನಡುವೆ ತಡೆ ರಹಿತವಾಗಿ ಸಂಚರಿಸುವ ಶತಾಬ್ದಿ ರೈಲು ಸುಮಾರು 140 ಕಿ.ಮೀ ದೂರವನ್ನು 110 ನಿಮಿಷಗಳಲ್ಲಿ ಕ್ರಮಿಸುತ್ತಿದೆ. ಇದೇ ಮಾದರಿಯ ರೈಲುಗಳನ್ನು ನಗರದಲ್ಲಿರುವ ಯಾವುದೇ ರೈಲು ನಿಲ್ದಾಣದಿಂದ ದೇವನಹಳ್ಳಿ ಕಡೆಗೆ ಓಡಿಸಿದರೂ 30 ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ ಬಿಐಎಎಲ್ ತಲುಪಬಹುದು. ಉದ್ದೇಶಿತ ಅತಿವೇಗದ ರೈಲಿನ ಪ್ರಯಾಣದ ಅವಧಿ 25 ನಿಮಿಷ. 5ರಿಂದ 10 ನಿಮಿಷದ ವ್ಯತ್ಯಾಸವನ್ನು ಸರಿದೂಗಿಸುವುದು ಅಸಂಭವವೇನಲ್ಲ.

ಕೆ.ಆರ್.ಪುರ, ಬೈಯಪ್ಪನಹಳ್ಳಿ, ಬಾಣಸವಾಡಿ, ದಂಡು ಪ್ರದೇಶ ನಿಲ್ದಾಣ, ಕೆಂಗೇರಿ, ನಾಯಂಡಹಳ್ಳಿ, ನಗರ ರೈಲು ನಿಲ್ದಾಣ, ಯಶವಂತಪುರ ಮೊದಲಾದ ನಿಲ್ದಾಣಗಳಿಂದ ವೇಗದ ಮತ್ತು ತಡೆರಹಿತ ರೈಲುಗಳನ್ನು ವಿಮಾನ ನಿಲ್ದಾಣಕ್ಕೆ ಓಡಿಸಲು ಸಾಧ್ಯವಾಗುವುದಾದರೆ ಭಾರಿ ವೆಚ್ಚದ ಹೊಸ ಯೋಜನೆಗಳ ಅಗತ್ಯವೇ ಬೀಳುವುದಿಲ್ಲ. ಇಲ್ಲಿ ಹೆಸರಿಸಿದ ನಿಲ್ದಾಣಗಳ ಪೈಕಿ ದಂಡು ಪ್ರದೇಶ ನಿಲ್ದಾಣವು ಹೈಸ್ಪೀಡ್ ರೈಲಿನ ಪ್ರಥಮ ನಿಲ್ದಾಣ ನಿರ್ಮಿಸಲು ಉದ್ದೇಶಿಸಿರುವ ಬಿಆರ್‌ವಿ ಪೊಲೀಸ್ ಮೈದಾನಕ್ಕೆ ಎರಡು ಕಿ.ಮೀ.ಗಿಂತ ಕಡಿಮೆ ಅಂತರದಲ್ಲಿದೆ ಎಂಬುದು ಗಮನಾರ್ಹ.

ಹೆಚ್ಚು ಕಡೆ ನಿಲುಗಡೆ ಪ್ರಯೋಜನ ಅಪಾರ
ಮಹಾನಗರದ ವ್ಯಾಪ್ತಿಯಲ್ಲಿರುವ ರೈಲ್ವೆಯ ಈಗಿರುವ ಮೂಲ ಸೌಕರ್ಯವನ್ನೇ ಬಳಸಿಕೊಂಡು ಪ್ರಯಾಣಿಕ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ಅವಕಾಶವಿದೆ. ಸದ್ಯ ಹೊರ ಊರು ಮತ್ತು ಹೊರ ರಾಜ್ಯಗಳಿಂದ ಬರುವ ರೈಲುಗಳಿಗೆ ಒಂದೆರಡು ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ನೀಡಲಾಗುತ್ತಿದೆ. ರೈಲುಗಳು ನಿಲ್ಲುವ ನಿಲ್ದಾಣದಿಂದ ದೂರದ ಬಡಾವಣೆಗಳಿಗೆ ತೆರಳಲು ಪ್ರಯಾಣಿಕರು ನಿತ್ಯ ಪ್ರಯಾಸ ಪಡಬೇಕಿದೆ. ಆಯಾ ಮಾರ್ಗದಲ್ಲಿನ ಇತರ ನಿಲ್ದಾಣಗಳಲ್ಲಿ ನಿಲುಗಡೆ ನೀಡುವ ಮೂಲಕ ಪ್ರಯಾಣಿಕರ ಬವಣೆಯನ್ನು ಸುಲಭವಾಗಿ ತಪ್ಪಿಸಬಹುದು.

ಉದಾಹರಣೆಗೆ ತುಮಕೂರು ಮಾರ್ಗವಾಗಿ ಸಂಚರಿಸುವ ರೈಲುಗಳಿಗೆ ಯಶವಂತಪುರಕ್ಕೆ ಮುಂಚೆಯೇ ಪೀಣ್ಯ, ಟಿ.ದಾಸರಹಳ್ಳಿ, ಹೆಸರುಘಟ್ಟ ಮೊದಲಾದ ಕಡೆ ನಿಲುಗಡೆ ನೀಡಿದರೆ ಆ ಪ್ರದೇಶದ ಪ್ರಯಾಣಿಕರಿಗೆ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗಲಿದೆ. ಬಿಡದಿ ಮಾರ್ಗವಾಗಿ ಸಂಚರಿಸುವ ರೈಲುಗಳಿಗೆ ಕೆಂಗೇರಿ ಅಲ್ಲದೇ ನಾಯಂಡನಹಳ್ಳಿ, ದೀಪಾಂಜಲಿನಗರ, ವಿಜಯನಗರ ಮೊದಲಾದ ಕಡೆ ನಿಲುಗಡೆ ನೀಡಬಹುದು.

ಮೈಸೂರು ಕಡೆಯಿಂದ ಬರುವ ರೈಲುಗಳನ್ನು ಕೆ.ಆರ್.ಪುರದವರೆಗೆ ಓಡಿಸಿ ದಂಡು ಪ್ರದೇಶ, ಬಾಣಸವಾಡಿ, ಬೈಯಪ್ಪನಹಳ್ಳಿ ಮತ್ತಿತರ ಕಡೆ ನಿಲುಗಡೆ ಕೊಡಬಹುದು; ಅಥವಾ ಯಶವಂತಪುರ ಮಾರ್ಗವಾಗಿ ಯಲಹಂಕದವರೆಗೆ ಓಡಿಸಿ ಮಲ್ಲೇಶ್ವರ, ಹೆಬ್ಬಾಳ ಮತ್ತಿತರ ಕಡೆ ನಿಲುಗಡೆ ಸೌಕರ್ಯ ಒದಗಿಸಬಹುದು.
ತುಮಕೂರು ಕಡೆಯಿಂದ ಬರುವ ರೈಲುಗಳನ್ನು ಕೆಂಗೇರಿ ಅಥವಾ ಬೈಯಪ್ಪನಹಳ್ಳಿವರೆಗೆ ಓಡಿಸಿ ಆಯಾ ಮಾರ್ಗಗಳಲ್ಲಿ ಬರುವ ಮುಖ್ಯ ಬಡಾವಣೆಗಳಲ್ಲಿ ನಿಲುಗಡೆ ನೀಡಬಹುದು.

ರೈಲ್ವೆ ಇಲಾಖೆಗೆ ಈ ಸಲಹೆಯನ್ನು ನೀಡಿದರೆ ‘ಕಷ್ಟ ಕಷ್ಟ’ ಎಂಬ ಸಿದ್ಧ ಉತ್ತರ ತಟ್ಟನೆ ಬರುತ್ತದೆ; ಮೂರ್ನಾಲ್ಕು ಕಡೆ ನಿಲುಗಡೆ ನೀಡಿದರೆ  ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬೇಕಾಗುತ್ತದೆ; ಇದರಿಂದ ರಾಷ್ಟ್ರೀಯ ವ್ಯಾಪ್ತಿಯ ರೈಲುಗಳ ಸಂಚಾರದಲ್ಲೂ ವ್ಯತ್ಯಯ ಮಾಡಬೇಕಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಲಾಗುತ್ತದೆ.
ಈ ರೀತಿಯ ನಿರಾಶಾದಾಯಕ ಪ್ರತಿಕ್ರಿಯೆಗಳನ್ನು ಕೇಳಿ ಅಧೀರರಾಗಬಾರದು ಎನ್ನುವ ರೈಲ್ವೆ ಇಲಾಖೆಯ ರಾಜ್ಯದ ಅಧಿಕಾರಿಯೊಬ್ಬರು, ‘ಜನರಿಗೆ ಅನುಕೂಲ ಮಾಡಿಕೊಡಬೇಕೆಂಬ ಕಾಳಜಿ, ಮನಸ್ಸು ಇದ್ದರೆ ಯಾವುದೂ ಕಷ್ಟವಲ್ಲ. ನಿಗದಿತ ಸಮಯಕ್ಕೆ ನಿಗದಿತ ನಿಲ್ದಾಣ ತಲುಪುವ ರೈಲುಗಳ ಸಂಖ್ಯೆ ಒಂದೋ ಎರಡೋ ಇರಬಹುದು. ಉಳಿದಂತೆ ಬಹುತೇಕ ರೈಲುಗಳು ವಿಳಂಬವಾಗಿಯೇ ನಿಲ್ದಾಣ ಸೇರುತ್ತವೆ. ಎರಡು ಮೂರು ಕಡೆ ಹೆಚ್ಚು ನಿಲುಗಡೆ ನೀಡಿದರೆ ಅದರಿಂದ ಆಗಬಾರದ್ದೇನೂ ಆಗುವುದಿಲ್ಲ’ ಎಂದು ಹೇಳುತ್ತಾರೆ.

‘ಸಿಟಿ ಲಿಮಿಟ್‌ನಲ್ಲಿ ಬಹುಪಾಲು ಜೋಡಿ ಮಾರ್ಗವೇ ಇರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಿಲುಗಡೆ ಸೌಕರ್ಯ ಕೊಡಲು ಕಷ್ಟವಾಗುವುದಿಲ್ಲ. ಸ್ವಲ್ಪ ಮಟ್ಟಿನ ತಾಂತ್ರಿಕ ವ್ಯವಸ್ಥೆ ಮಾಡಬೇಕು. ಜತೆಗೆ ಕನಿಷ್ಠ ಸೌಕರ್ಯಗಳನ್ನು ಒಳಗೊಂಡ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಿದರೆ ಹೆಚ್ಚು ನಿಲುಗಡೆ ಸೌಕರ್ಯವನ್ನು ಸುಲಭವಾಗಿ ಏರ್ಪಡಿಸಬಹುದು’ ಎಂದು ಅವರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT