ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರುವೆಗಳ ಜೊತೆ ಪ್ರೀತಿಯ ಪಯಣ

Last Updated 23 ಮೇ 2012, 19:30 IST
ಅಕ್ಷರ ಗಾತ್ರ

ಹದಿನೈದು ವರ್ಷದ ಹಿಂದೆ `ಇರುವೆ~ ಬೆನ್ನತ್ತಿದ ಬೆಂಗಳೂರಿನ ಯುವಕ ಎಂ.ಸುನಿಲ್‌ಕುಮಾರ ಇರುವೆ ಜೊತೆಗಿನ ಒಡನಾಟ ಮತ್ತು ಅದು ಉಂಟು ಮಾಡಿದ ಪರಿಣಾಮ ಅಚ್ಚರಿ ಪಡುವಂತಹದ್ದು. ಇರುವೆಗಳ ಅಧ್ಯಯನದ ಭಾಗವಾಗಿ ಆರಂಭವಾದ ಒಡನಾಟ, ಸ್ನೇಹ, ಪ್ರೀತಿಯಾಗಿ ಪರಿವರ್ತನೆ ಆಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಹತ್ತಾರು ವರ್ಷಗಳ ಕಾಲ ಇರುವೆಗಳ ಜೊತೆಗಿನ ಒಡನಾಟ ಕಲಿಸಿದ ಪಾಠ ಹಲವು. ಇರುವೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತ ಹೋದಂತೆ ಅವುಗಳದ್ದೇ ಒಂದು ಲೋಕ ತೆರೆದುಕೊಂಡಿತು. ಅಲ್ಲಿನ ಪ್ರೀತಿ-ಪ್ರೇಮ-ಪ್ರಣಯ, ದೈಹಿಕ- ರಾಸಾಯನಿಕ ಸಂವಹನ, ಆಹಾರ ಸಂಗ್ರಹಣೆ, ಗೂಡು ನಿರ್ಮಾಣ, ಕಾಲೋನಿಯಗಳ ನಿರ್ವಹಣೆ, ಮಳೆ-ಗಾಳಿಗೆ ರಕ್ಷಣೆ ಪಡೆಯುವ ವಿಧಾನ, ಮೊಟ್ಟೆಗಳ ರಕ್ಷಣೆ, ಮರಿಗಳ ಪಾಲನೆ-ತರಬೇತಿ ಹೀಗೆ ಅದೊಂದು ಅತ್ಯಂತ ಸುಸಜ್ಜಿತವಾದ ವ್ಯವಸ್ಥೆ ಇರುವ ಲೋಕ. ಅದನ್ನು ಅರಿಯುವುದೇ ಒಂದು ವಿಶಿಷ್ಟ ಅನುಭವ.

`ಪರಿಸರ ವಿಜ್ಞಾನ~ದಲ್ಲಿ ಎಂ.ಎಸ್‌ಸಿ. ಪದವಿಗಾಗಿ ಓದುತ್ತಿರುವಾಗ ಕೋರ್ಸಿನ ಭಾಗವಾಗಿ ಒಂದು ವಿಷಯದ ಬಗ್ಗೆ ಪ್ರಾಜೆಕ್ಟ್ ಮಾಡಬೇಕಾಗಿತ್ತು. ಏನು ವಿಷಯದ ಮೇಲೆ ಪ್ರಾಜೆಕ್ಟ್ ಮಾಡಬೇಕು? ಅಂತ ಯೋಚನೆ ಮಾಡುತ್ತಿದ್ದಾಗ ನಮ್ಮ ಗುರುಗಳಾಗಿದ್ದ ರಾಘವೇಂದ್ರ ಗದಗಕರ್ ಅವರು `ಬೆಂಗಳೂರಿನ ಇರುವೆ~ಯ ಜೀವವೈವಿಧ್ಯ ಮತ್ತು ನಡವಳಿಕೆ ಬಗ್ಗೆ ಪ್ರಾಜೆಕ್ಟ್ ಮಾಡಲು ತಿಳಿಸಿದರು. ನಾನು ಮತ್ತು ಸ್ನೇಹಿತ ಶ್ರೀಹರಿ ಜಂಟಿಯಾಗಿ ಈ ಪ್ರಾಜೆಕ್ಟ್‌ಗೆ ಕೈಗೆತ್ತಿಕೊಂಡೆವು~ ಎಂದು ತಮ್ಮ ಇರುವೆಯ ಒಡನಾಟ ಆರಂಭವಾದ ಕ್ಷಣಗಳನ್ನು ಎಂ.ಸುನೀಲ್‌ಕುಮಾರ ಮೆಲುಕು ಹಾಕುತ್ತಾರೆ. 

`ಆರಂಭದಲ್ಲಿ ಒಂಥರಾ ಬೇಜಾರಿತ್ತು. ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮಾಡಿದ ಸ್ನೇಹಿತರೆಲ್ಲ ಕೆರೆ, ಮಾಲಿನ್ಯ, ನೀರು ಅಂತಹ ಪ್ರಾಜೆಕ್ಟ್ ಮಾಡುತ್ತಿರಬೇಕಾದರೆ ನಮಗ್ಯಾಕಪ್ಪ ಈ ಇರುವೆಗಳು? ಅಂತ ಅನ್ನಿಸಿದ್ದುಂಟು. ಶುರು ಮಾಡಿದಾಗ ಕಪ್ಪಿರುವೆ, ಕೆಂಪಿರುವೆ, ಚಿಕ್ಕಿರುವೆ ಅಂತ ಮಾತ್ರ ಗೊತ್ತಿತ್ತು.

ಇರುವೆಯೊಂದನ್ನು ಹಿಡಿದು ಮೈಕ್ರೋಸ್ಕೋಪ್‌ನಲ್ಲಿ ಇಟ್ಟು ನೋಡಿದಾಗ ಅದರ ಕಣ್ಣು ನೋಡಿ `ಲವ್~ ಶುರುವಾಯ್ತು. ಒಂದ್ಸಲ ಪ್ರೀತಿ ಅಂತ ಆದರೆ ಅದು ಹುಚ್ಚಾಗಿ ಬಿಡುತ್ತೆ. ನಂತರ ಇರುವೆಗಳನ್ನು ಹುಡುಕಿಕೊಂಡು ಓಡಾಡದ ಜಾಗವಿಲ್ಲ. ನಮ್ಮನ್ನು ಭೇಟಿಯಾದವರೆಲ್ಲ ಹೇಗಿದ್ದೀರಿ? ಎಂದು ಕೇಳುವ ಬದಲು `ನಿಮ್ಮ ಇರುವೆ ಹೇಗಿವೆ?~ ಕೇಳಲಾರಂಭಿಸಿದರು. ಕಂಡಕಂಡವರಿಗೆಲ್ಲ ಇರುವೆಗಳ ಬಗ್ಗೆ ವಿವರಿಸಿದೆವು. ನೋಡಿ ಅಪಹಾಸ್ಯ ಮಾಡಿದವರು, ಹಿಂದೆ ಆಡಿಕೊಂಡವರು ಕಡಿಮೆಯೇನಿಲ್ಲ. ಇಷ್ಟೆಲ್ಲ ಆದರೂ ನಮ್ಮ `ಇರುವೆ ಪ್ರೀತಿ~ಯನ್ನು ಖುಷಿಯಿಂದಲೇ ಮಾಡಿದ್ದೇನೆ.

ಬೆಳಿಗ್ಗೆ ಕಾಫಿ ತೆಗೆದುಕೊಂಡು ಹೋಗಿ ಟಾಟಾ ಇನ್ಸ್‌ಟಿಟ್ಯೂಟ್‌ನ ಪಾರ್ಕ್‌ನಲ್ಲಿ ಕುಳಿತುಕೊಳ್ಳುತ್ತಿದ್ದೆವು. ಇರುವೆಗಳ ನಡುವಳಿಕೆಯನ್ನು ಗಮನಿಸುತ್ತ ಕೂರುತ್ತಿದ್ದೆವು. ಇರುವೆಗಳು ಏನು ಮಾಡುತ್ತವೆ? ಏಕೆ ಮಾಡುತ್ತವೆ? ಎಂದು ನೋಡುತ್ತಿದ್ದೆವು.

ಆರಂಭದಲ್ಲಿ ಏನೂ ಗೊತ್ತಾಗುತ್ತಿರಲಿಲ್ಲ. ಇದೇನಪ್ಪ `ಇರುವೆ ಕಾಟ~ ಎಂದು ಗೊಣಗಾಡಿಕೊಂಡಿದ್ದಿದೆ. ಬರಬರುತ್ತ ಇರುವೆಗಳ ಇರುವಿಕೆ ಪ್ರಿಯವಾಗತೊಡಗಿತು. ಇರುವೆಯೊಂದನ್ನು ಹಿಡಿದುಕೊಂಡು ಹೋಗಿ ಮೈಕ್ರೋಸ್ಕೋಪ್‌ನಲ್ಲಿ ಇಟ್ಟು ನೋಡಿದೆ.

ಅದರ ಕಣ್ಣುಗಳು ಎಷ್ಟೊಂದು ಚಂದ ಇದ್ದವು ಎಂದರೆ ಆಗಲೇ ~ಲವ್~ ಆಗ್ಬಿಟ್ತು. ಕಪ್ಪಿರುವೆ, ಕೆಂಪಿರುವೆ, ಚಿಕ್ಕಿರುವೆ, ದೊಡ್ಡಿರುವೆ ಮಾತ್ರ ಗೊತ್ತಿತ್ತು. ನೋಡ್ತಾ ನೋಡ್ತಾ ಇರುವೆಗಳ ಜಾತಿ, ಪ್ರಬೇಧಗಳ ಬಗ್ಗೆ ತಿಳಿದುಕೊಳ್ತಾ ಹೋದೆವು. ಇರುವೆಗಳಿಂದ ನಾವು ಕಲಿಯುವುದು ಬಹಳಷ್ಟಿದೆ~ ಎನ್ನುತ್ತಾರೆ ಸುನೀಲ್.

ರೋಡ್‌ನಲ್ಲಿ, ಫುಟ್‌ಪಾತ್ ಮೇಲೆ, ಮನೆಯಲ್ಲಿ, ಪಾರ್ಕ್‌ನಲ್ಲಿ ಹೀಗೆ ಹಲವು ಕಡೆಗಳಲ್ಲಿ ಇರುವೆಗಳನ್ನು ಹುಡುಕಿಕೊಂಡು ಸುತ್ತಾಡಿದ್ದಾಯಿತು. ಎಲ್ಲವೂ ಬೇರೆ ಬೇರೆಜಾತಿಯವು ಮಾತ್ರವಲ್ಲದೆ ತಮಗೆ ಬೇಕಾದಂತಹ ನಡವಳಿಕೆ, ಜೀವನ ವಿಧಾನ ರೂಪಿಸಿಕೊಂಡಿದ್ದವು. ಆದರೆ, ಅದರಲ್ಲಿಯೂ ಏಕಸೂತ್ರ ಇತ್ತು. ರಸ್ತೆಯಲ್ಲಿ ನಡೆದುಕೊಂಡು ಓಡಾಡುವಾಗ, ಪಾರ್ಕ್‌ನಲ್ಲಿ ಕುಳಿತಾಗ, ಮನೆಯಲ್ಲಿದ್ದಾಗ ಕಾಣಿಸಿಕೊಳ್ಳುವ ಪುಟ್ಟ ಜೀವಿಗಳ ಬಗೆಗಿನ ಆಸಕ್ತಿಯು ಬೆಂಗಳೂರು ನಗರದ ಹಾದಿ-ಬೀದಿ ಸುತ್ತುವಂತೆ ಮಾಡಿದೆ. ಮಲ್ಲೇಶ್ವರಂನ ಫುಟ್‌ಪಾತ್‌ನಲ್ಲಿ ಇರುವ ಇರುವೆಗಳನ್ನು ಗೆಳೆಯ, ಸಹಪಾಠಿ ಶ್ರೀಹರಿ ಜೊತೆ ಸೇರಿ ನೋಡುತ್ತ ಅದರ ವಿವರಗಳನ್ನು ದಾಖಲಿಸಿಕೊಳ್ಳುತ್ತಿದ್ದರೆ ಅಲ್ಲಿ ಹಾದುಹೋಗುತ್ತಿದ್ದ ಜನರೆಲ್ಲ ಸೇರಿ ಇವರೇನು ಮಾಡುತ್ತಿದ್ದಾರೆ?  ಎಂದು ಕುತೂಹಲಕ್ಕೆ ಇಣುಕಿ ನೋಡಿ  ಇರುವೆಗಳ ಬಗ್ಗೆ ಅಧ್ಯಯನ ಎಂದು ಕಮೆಂಟು ಮಾಡಿದ್ದಿದೆ. ಒಬ್ಬರನ್ನು ನೋಡಿ ಮತ್ತೊಬ್ಬರು ನಿಂತು ರಸ್ತೆಯಲ್ಲಿ ಹೋಗುತ್ತಿದ್ದವರೆಲ್ಲ ಗುಂಪಾಗಿ ಸೇರಿ ಇರುವೆ ಅರಿಯುವ ಕ್ರಿಯೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದುಂಟು.

ಸಂಘಜೀವಿಗಳಾದ ಇರುವೆಗಳ ಬದುಕು ನಡೆಸುವ ರೀತಿ ಸೋಜಿಗ. ಮನುಷ್ಯಜೀವಿ ಭೂಮಿಯ ಮೇಲೆ ಕಾಣಿಸಿಕೊಳ್ಳುವುದಕ್ಕಿಂತ ಬಹಳಷ್ಟು ಮುಂಚಿನಿಂದಲೂ ಅಸ್ತಿತ್ವದಲ್ಲಿ ಇರುವ ಇರುವೆಗಳು ಮನುಷ್ಯನ ಜೊತೆಯಲ್ಲಿಯೇ ಜೀವಿಸು ವಲ್ಲಿ ಯಶಸ್ವಿಯಾಗಿವೆ.

ಡೈನೋಸಾರ್‌ಗಳಂತಹ ಬೃಹತ್ ಜೀವಿಗಳು ಮರೆಯಾಗುವುದಕ್ಕೆ ಈ ಪುಟ್ಟ ಜೀವಿಗಳು ಸಾಕ್ಷಿಯಾಗಿರಬಹುದು. ಆರಂಭದ ದಿನಗಳಿಂದಲೂ ಭೂಮಿಯಲ್ಲಿನ ಜೀವ ವ್ಯವಸ್ಥೆಯ ಪ್ರಮುಖ ಭಾಗವಾಗಿಯೇ ಇರುವ ಈ ಜೀವಿಗಳು ಒಟ್ಟು ಪ್ರಾಣಿ ಜಗತ್ತಿನ ತೂಕದ ಶೇ. 25ರಷ್ಟು ಭಾಗ ಇರುವೆಗಳದ್ದಾಗಿದೆ. ಬದಲಾದ ಮತ್ತು ಬದಲಾಗುವ ಪರಿಸರಕ್ಕೆ ತಕ್ಕಂತೆ ಜೀವನಶೈಲಿ ಬದಲಿಸಿಕೊಳ್ಳುವ ಪರಿಪಾಠ ಇಟ್ಟುಕೊಂಡ ಇರುವೆಗಳು ತಮ್ಮ ಈ ಯಾನದಲ್ಲಿ ~ಅರಣ್ಯದಲ್ಲಿ ಚಾವಣಿಯಂತಹ ಗೂಡು ಕಟ್ಟುವುದಲ್ಲದೆ, ನೆಲದಡಿಯಲ್ಲಿ ಸುರಂಗ ಕೊರೆಯುವಲ್ಲಿಯೂ ಪರಿಣಿತಿ ಪಡೆದುಕೊಂಡಿವೆ. ಹೊಲಸು-ಕೊಳಕಿನ ನಡುವೆ ತಮಗೆ ಬೇಕಾದಂತೆ ಗೂಡು ಕಟ್ಟಿಕೊಳ್ಳುವುದರ ಜೊತೆಗೆ ಕಾಂಕ್ರಿಟ್ ಕಟ್ಟಡಗಳಲ್ಲಿನ ಬಿರುಕಗಳಲ್ಲಿಯೂ ನೆಲೆ ರೂಪಿಸಿಕೊಳ್ಳಬಲ್ಲವು. ಕಣ್ಣಿಗೆ ಗೋಚರವಾಗುವ ಜೀವಿಗಳ ಪೈಕಿ ಅತ್ಯಂತ ಸಣ್ಣದಾದ ಇರುವೆಗಳು ಕೇವಲ ಒಂದೇ ಗಾತ್ರದವಲ್ಲ. ಅವುಗಳ ನಡುವಿನ ಅಂತರ ಅಚ್ಚರಿಗೊಳಿಸುವಷ್ಟಿದೆ. ಅತ್ಯಂತ ಸಣ್ಣ ಇರುವೆಗಿಂತ ಅತಿದೊಡ್ಡ ಇರುವೆ 80 ಪಟ್ಟು ದೊಡ್ಡದಾಗಿರುತ್ತದೆ. ಪಶ್ಚಿಮ ಆಫ್ರಿಕಾದ ~ಡ್ರೈವರ್ ಆ್ಯಂಟ್~,ಆಸ್ಟ್ರೇಲಿಯಾದ ಮರುಭೂಮಿಯಲ್ಲಿ ಕಾಣಸಿಗುವ ~ಇಂಚ್ ಆ್ಯಂಟ್‌ಗಳು, ಭಾರತದ ~ಜಂಪಿಂಗ್ ಆ್ಯಂಟ್~ಗಳು ಗಾತ್ರದಲ್ಲಿ ಜಗತ್ತಿನ ಅತಿದೊಡ್ಡದಾಗಿರುವ ಇರುವೆಗಳ ಸಾಲಿಗೆ ಸೇರುತ್ತವೆ. ಇರುವೆಗಳ ವರ್ಣವೈವಿಧ್ಯ ಕೂಡ ಬೆರಗುಗೊಳಿಸುವಂತಿದೆ. ಕಪ್ಪಿನಿಂದ ಹಿಡಿದು ಕೆಂಪು, ನಾಸಿ ಬಣ್ಣದಿಂದ ಎಲೆಹಸಿರು, ಬೂದಿಬಣ್ಣದಿಂದ ಕೇಸರಿಯವರೆಗಿನ ಹಲವು ಬಣ್ಣಗಳ ಇರುವೆ ನೋಡಲು ಸಿಗುತ್ತವೆ. ಬಹುತೇಕ ಇರುವೆಗಳು ಸಕ್ಕರೆಯಂತಹ ಪದಾರ್ಥಗಳನ್ನು ಆಹಾರವಾಗಿ ಬಳಸುತ್ತವಾದರೂ ಬೇಟೆಯಾಡುವ ಇರುವೆಗಳೂ ಇಲ್ಲದಿಲ್ಲ. ಹಲವು ಪ್ರಾಣಿಗಳು ಇರುವೆಗಳನ್ನು ತಿಂದು ಜೀವಿಸುವುದರಿಂದ ಅವರು ಆಹಾರ ಸರಪಳಿಯ ಪ್ರಮುಖ ಭಾಗವೂ ಆಗಿವೆ.

`ಸಸ್ತನಿಗಳ ಬಗ್ಗೆ, ಪಕ್ಷಿಗಳ ಬಗ್ಗೆ ಅಧ್ಯಯನ ಮಾಡಬೇಕು ಎನ್ನುವವರು ಅವುಗಳನ್ನು ಹುಡುಕಿಕೊಂಡು ಬಂಡಿಪುರಕ್ಕೋ ನಾಗರಹೊಳೆಗೋ ಹೋಗಬೇಕು. ನನ್ನ ಸಬ್ಜೆಕ್ಟ್ ಹಾಗಿಲ್ಲ. ನಮ್ಮ ಪಕ್ಕದಲ್ಲಿಯೇ ಇರುತ್ತೆ. ಹುಡುಕಿ ಕಾಡಿಗೆ ಹೋಗಬೇಕಿಲ್ಲ. ದೂರ ದೂರ ಅಲೆಯುವ ಅಗತ್ಯವಿಲ್ಲ. ಹಾಗಂತ ಬೇರೆ ಕಡೆ ಹೋದಾಗ ಇರುವೆಗಳ ಬಗ್ಗೆ ತಿಳಿದುಕೊಳ್ಳುವುದು ಇರುವುದಿಲ್ಲ ಅಂತಲ್ಲ. ಇರುವೆಗಳನ್ನು ಹುಡುಕಿ ಈಶಾನ್ಯ ರಾಜ್ಯಗಳಿಗೆ ಹೋಗಿ ಬಂದದ್ದಿದೆ. ಹಾಗೆಯೇ ಮರುಭೂಮಿಯಲ್ಲಿಯೂ ಸುತ್ತಾಡಿದ್ದೇನೆ.

ದಾಖಲಾಗದೇ ಇರುವ ಇರುವೆ ಪ್ರಬೇಧ ಇನ್ನೂ ಸಾಕಷ್ಟಿವೆ. 1996ರಲ್ಲಿ ಒಂದಿನ ಕಬ್ಬನ್ ಪಾರ್ಕ್‌ನಲ್ಲಿ `ಆ್ಯಂಟ್ ವಾಚಿಂಗ್~ ಮಾಡುವಾಗ ಒಂದು ವಿಶಿಷ್ಟ ಜಾತಿಯ ಇರುವೆ ನೋಡಿದೆ. ಅದನ್ನು ತಗೊಂಡು ಹೋಗಿ ಅದರ ವಿವರಗಳನ್ನೆಲ್ಲ ದಾಖಲಿಸಿಕೊಂಡೆ. ಆಗ ಇದು ವಿಜ್ಞಾನ ಜಗತ್ತಿಗೇ ಹೊಸದಾಗಿ ಪರಿಚಯ ಆಗುತ್ತಿರುವ ಇರುವೆ ಪ್ರಬೇಧ ಎಂಬ ಅರಿವು ಇರಲಿಲ್ಲ. ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಕ್ಯಾಟಲಾಗ್ ಮಾಡುವಾಗ ಇದು ಅಪರೂಪ ಪ್ರಬೇಧ ಎಂಬ ಸಂಗತಿ ಗೊತ್ತಾಯಿತು. ನಂತರ ಅದನ್ನು `ಡೈಲೊಬೊಕಾಂಡೈಲಾ~ ಪ್ರಬೇಧದ `ಬೆಂಗಳೂರಿಕಾ~ ಎಂದು ಹೆಸರಿಸಲಾಯಿತು ಎಂದು ಸುನೀಲ್ ವಿವರಿಸುತ್ತಾರೆ.

ಸತತ ಹತ್ತು ವರುಷಗಳ ಇರುವೆಗಳ ಜೊತೆಗಿನ ಒಡನಾಟ ಹಲವು ಸಂಗತಿಗಳ ಬಗ್ಗೆ ಮಾಹಿತಿ ನೀಡಿ ಕುತೂಹಲ ತಣಿಸಿತು. ಮಾತ್ರವಲ್ಲದೆ, ತಮಗೆ ದೊರೆತ ವಿವರಗಳನ್ನು ಬೇರೆಯವರಿಗೆ ತಿಳಿಸಬೇಕು ಎನ್ನಿಸಿತು. ಆಗಾಗ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಇರುವೆಗಳ ಬಗ್ಗೆ ವಿವರಿಸಲಾಗುತ್ತಿತ್ತು. ಆಗೆಲ್ಲ, ಹೆಚ್ಚಿನ ವಿವರಗಳು ಎಲ್ಲಿವೆ?

ಯಾವ ಪುಸ್ತಕದಲ್ಲಿ ಎಂದು ಕೇಳುತ್ತಿದ್ದರು. ಪಕ್ಷಿ ವೀಕ್ಷಣೆಗೆ ಸಲೀಂ ಅಲಿ ಬರೆದ ಪುಸ್ತಕ ಇರುವ ಹಾಗೆ `ಇರುವೆ ವೀಕ್ಷಣೆ~ಗೆ ಒಂದು ಪುಸ್ತಕ ಯಾಕಿರಬಾರದು ಅನ್ನಿಸಿತು. ಪುಸ್ತಕ ಪ್ರಕಟಿಸಬೇಕು ಅಂತ ಯೋಚಿಸಿದ ನಂತರ ಹಲವಾರು ಜನ ಪ್ರಕಾಶಕರ ಬಾಗಿಲಿಗೆ ಎಡತಾಕಿದ್ದೂ ಉಂಟು. ಆಗೆಲ್ಲ `ಇರುವೆಗಳ ಬಗ್ಗೆ ಯಾರು ಓದ್ತಾರೆ? ಹುಲಿ, ಚಿರತೆ, ಆನೆ ಬಗ್ಗೆ ಬರೀರಿ~ ಎಂದು ಉಚಿತ ಸಲಹೆ ನೀಡಿದರು. ಇರುವೆಗಳ ಫೋಟೊ ತೆಗೆಯುವುದು ಬಹಳ ಕಷ್ಟ ಇತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮ್ಯಾಕ್ರೊ ಕ್ಯಾಮರಾ ಖರೀದಿಸುವುದು ಸಾಧ್ಯವಿರಲಿಲ್ಲ. ಆದರೆ, ಪುಸ್ತಕ ಪ್ರಕಟಿಸಲೇಬೇಕಿತ್ತು.

ಅದಕ್ಕಾಗಿ ಇರುವೆಗಳ ಲೈನ್ ಡ್ರಾಯಿಂಗ್ ಮಾಡಿ ಅದನ್ನೇ ಬಳಸಿ ಪುಸ್ತಕ ಪ್ರಕಟಿಸಬೇಕು ಎಂದು ಯೋಚಿಸುತ್ತಿದ್ದ ದಿನಗಳಲ್ಲಿಯೇ ಎಂ.ಬಿ. ಕೃಷ್ಣ ಎಂಬ ಸ್ನೇಹಿತರು ಇರುವೆಗಳ ಬಗ್ಗೆ ಆಸಕ್ತಿ ಇರುವ ಅಜಯ್ ನರೇಂದ್ರ ಅವರನ್ನು ಪರಿಚಯಿಸಿದರು.

ಅಜಯ್‌ಗೆ ಇರುವೆ ಅಧ್ಯಯನಕ್ಕಾಗಿ ಆಸ್ಟ್ರೇಲಿಯಾದ ಫೆಲೋಷಿಪ್ ದೊರೆತದ್ದರಿಂದ ಅದರ ಹಣ ಬಳಸಿ ಕ್ಯಾಮರಾ ಖರೀದಿಸಿ, ಇರುವೆಗಳ ಚಿತ್ರಗಳನ್ನು ದಾಖಲಿಸಿಕೊಳ್ಳಲಾಯಿತು. ಇರುವೆ ಪುಸ್ತಕದಲ್ಲಿ ಅಜಯ್ ಪಾತ್ರ ತುಂಬ ಇದೆ~ ಎಂದು ಸ್ಮರಿಸುತ್ತಾರೆ.

ಗಾತ್ರದಲ್ಲಿ ಚಿಕ್ಕದಾದ ಆದರೆ ಕಠಿಣ ಪರಿಶ್ರಮ ಮತ್ತು  ಸಮೂಹ ಜೀವನಕ್ಕೆ ಹೆಸರಾದ ಜೀವಿ ಇರುವೆ. ಅದರ ಹೆಸರು ಕೇಳುತ್ತಿದ್ದಂತೆಯೇ  ಅದೇನು ಮಹಾ?  ಎಂದನ್ನಿಸುತ್ತದೆ. ಅಧ್ಯಯನ ನಡೆಸಿ ಅನನ್ಯ ಕೊಡುಗೆ ನೀಡಿದ್ದಾರೆ. ಸ್ನೇಹಿತರ `ಇರುವೆ ಸುನೀಲ್~ ಎಂದೇ ಚಿರಪರಿಚಿತರಿರುವ ಅವರು ಇರುವೆಗಳ ಜೊತೆ ಒಡನಾಟದಿಂದ ರೂಪಿಸಿದ ಕೃತಿ ~ಆನ್ ದ ಟ್ರೇಲ್ ವಿತ್ ಆ್ಯಂಟ್ಸ್: ಎ ಹ್ಯಾಂಡ್‌ಬುಕ್ ಆಫ್ ಆ್ಯಂಟ್ಸ್ ಆಫ್ ಪೆನಿನ್ಸುಲಾರ್ ಇಂಡಿಯಾ~. ಸದ್ಯ ಆಸ್ಟ್ರೇಲಿಯಾ ನಿವಾಸಿ ಆಗಿರುವ ಈ ಪುಸ್ತಕದ ಸಹಲೇಖಕರಾಗಿರುವ ಅಜಯ್ ನರೇಂದ್ರ `ಗೂಡಿನಿಂದ ಹೊರಟ ಇರುವೆ ಹೇಗೆ ಮರಳುತ್ತೆ? ಅವು ಸಂಚಾರಕ್ಕಾಗಿ ರೂಪಿಸಿಕೊಂಡ, ರೂಢಿಸಿಕೊಂಡ ವಿಧಾನಗಳೇನು?~ ಎನ್ನುವ ಸಂಗತಿಯ ಬಗ್ಗೆ ಆಸಕ್ತರಾಗಿರುವವರು. ಇಬ್ಬರೂ ಸೇರಿ ಭಾರತದ ಇರುವೆಗಳ ಅದ್ಭುತಲೋಕವನ್ನೇ ತೆರೆದಿಟ್ಟಿದ್ದಾರೆ. ಇರುವೆಗಳ ಜಾತಿ, ಪ್ರಬೇಧಗಳ ವೈಜ್ಞಾನಿಕ ವಿವರಗಳ ಜೊತೆಯಲ್ಲಿಯೇ ಅವುಗಳ ಜೀವನ ವಿಧಾನ-ಬದುಕುವ ಪರಿಯನ್ನು ಸರಳವಾದ, ನೇರವಾದ ಭಾಷೆಯಲ್ಲಿ ದಾಖಲಿಸಿದ್ದಾರೆ.

ಜರ್ಮನ್ ಆರ್ಟ್ ಪೇಪರ್ ಮೇಲೆ ಸುಂದರವಾಗಿ ಆಕರ್ಷಕವಾಗಿ ಮುದ್ರಣವಾಗಿರುವ ಪುಸ್ತಕದಲ್ಲಿ ಇನ್ನೂರಕ್ಕೂ ಹೆಚ್ಚು ವರ್ಣಚಿತ್ರಗಳಿವೆ. ಇರುವೆಗಳ ದೈಹಿಕ ಚಹರೆ, ಜೀವನ ವಿವರಿಸುವ ರೇಖಾಚಿತ್ರಗಳೂ ಪುಸ್ತಕದ ಸೊಗಸು ಹೆಚ್ಚಿಸಿವೆ. 1903ರಲ್ಲಿ ಲೆಫ್ಟಿನೆಂಟ್ ಕರ್ನಲ್ ಸಿ.ಟಿ. ಬಿಂಗ್ಯಾಮ್ ಇರುವೆಗಳ ಪ್ರಬೇಧಗಳನ್ನು ಗುರುತಿಸಿ, ವರ್ಗೀಕರಿಸಿ ಪ್ರಕಟಿಸಿದ `ಆ್ಯಂಟ್ಸ್ ಅಂಡ್ ಕುಕೂ ವ್ಯಾಸ್ಪ್ಸ್ ಆಫ್ ಬ್ರಿಟಿಷ್ ಇಂಡಿಯಾ~ ಪುಸ್ತಕ ಪ್ರಕಟವಾಗಿತ್ತು. ಅದಾದ ಸರಿಸುಮಾರು ನೂರು ವರ್ಷಗಳ ನಂತರ ಭಾರತದ ಇರುವೆಗಳ ಕುರಿತ ಮತ್ತೊಂದು ಮಹತ್ವದ ಗ್ರಂಥ ಪ್ರಕಟಗೊಂಡಿದೆ. ಈ ಪುಸ್ತಕದ ಪ್ರತಿಗಳು ಇಂಗ್ಲೆಂಡ್, ಸ್ಪೇನ್, ಆಸ್ಟ್ರೇಲಿಯಾ, ಇಂಡೋನೆಷ್ಯಾ ಸೇರಿದಂತೆ ಹತ್ತಾರು ದೇಶಗಳಿಗೆ ಹೋಗಿದೆ. ಅಲ್ಲೆಲ್ಲ ಮನ್ನಣೆಗೆ ಪಾತ್ರವಾಗಿವೆ.

ಇರುವೆಗಳನ್ನು ಅರಿಯುವ ಪ್ರಕ್ರಿಯೆಯ ಭಾಗವಾಗಿ ಆರಂಭವಾದ `ಆ್ಯಂಟ್ ವಾಚಿಂಗ್~ ಹವ್ಯಾಸವನ್ನು ಸುನೀಲ್ ಈಗ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಹರಡುತ್ತಿದ್ದಾರೆ. ಶಾಲೆ-ಕಾಲೇಜುಗಳಿಗೆ ಹೋಗಿ ಇರುವೆಗಳ ಬದುಕು-ಅವುಗಳ ಮಹತ್ವ ಕುರಿತು ಉಪನ್ಯಾಸ ನೀಡುತ್ತಾರೆ. ಅಷ್ಟು ಮಾತ್ರವಲ್ಲದೆ ಪಾರ್ಕ್‌ಗಳಿಗೆ ಕರೆದೊಯ್ದು ಅಲ್ಲಿನ ಇರುವೆ ಸಮೂಹದ `ನಡವಳಿಕೆ~ ಸೋದಾಹರಣವಾಗಿ ವಿವರಿಸುತ್ತಾರೆ. ಸಕ್ಕರೆ ಬಯಸುವ `ಇರುವೆ~ಯನ್ನು ಇಷ್ಟಪಡುವ ಸುನೀಲ್ ಇರುವೆ ಕುರಿತ ಮಾಹಿತಿಯ `ಸಿಹಿ~ ಹಂಚುತ್ತಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 080-28367275.
ಇ ಮೇಲ್: poirotsunil@gmail.com  
    ಇರುವೆ ಚಿತ್ರಗಳು: ಅಜಯ್ ನರೇಂದ್ರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT