ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಾಖಾ ತನಿಖೆಗೆ ಹೈಕೋರ್ಟ್ ತಡೆ

Last Updated 7 ಸೆಪ್ಟೆಂಬರ್ 2011, 10:00 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಎಂ.ಸರಿತಾ ಅವರಿಗೆ ವಿಭಾಗದ ಮುಖ್ಯಸ್ಥ ಪ್ರೊ.ಶಿವಬಸವಯ್ಯ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿ.ವಿ. ಇಲಾಖೆ ತನಿಖೆ ನಡೆಸಲು ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ವಿ.ವಿ. ಮಹಿಳಾ ದೌರ್ಜನ್ಯ ತಡೆ ದೂರು ಸಮಿತಿ ನಡೆಸಿದ್ದ ತನಿಖಾ ವರದಿಯನ್ನು ಪರಿಗಣಿಸದೆ, ಇಲಾಖಾ ತನಿಖೆ ಮುಗಿಯುವವರೆಗೂ ಶಿವಬಸವಯ್ಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗದು ಎಂದು ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಿದ್ದರಿಂದ ಮೈಸೂರು ವಿಶ್ವವಿದ್ಯಾನಿಲಯ, ಉನ್ನತ ಶಿಕ್ಷಣ ಇಲಾಖೆ ಮತ್ತು ಶಿವಬಸವಯ್ಯ ಅವರಿಗೆ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.

`ಇನ್ನು ಮುಂದೆ ಯಾವ ತನಿಖೆಗೂ ಹಾಜರಾಗಿ ಪುರುಷ ಅಧಿಕಾರಿಯ ಮುಂದೆ ಹೇಳಿಕೆ ನೀಡಲಾರೆ~    ಎಂದು ಸರಿತಾ ಅವರು ವಿ.ವಿ.ಗೆ ತಿಳಿಸಿದ್ದರು.

`ಸಿಂಡಿಕೇಟ್ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಸರಿತಾ ಅವರು ಇನ್ನು ಮುಂದೆ ತನಿಖಾಧಿಕಾರಿ ಮುಂದೆ ಹಾಜರಾಗುವ ಅಗತ್ಯವಿಲ್ಲ. ತನಿಖೆಗೆ ಹಾಜರಾಗುವುದು ಸರಿತಾ ಅವರಿಗೆ ಬಿಟ್ಟದ್ದು. ಇಲಾಖಾ ತನಿಖೆಗೆ ಸರಿತಾ ಅವರು ಬಯಸಿದ್ದಲ್ಲಿ ಮಾತ್ರ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಹಾಜರಾಗಬಹುದು~ ಎಂದು ಇಲಾಖೆ ತನಿಖಾ ಮಂಡನಾ ಅಧಿಕಾರಿ ಡಾ.ಡಿ.ವಿ.ಗೋಪಾಲಪ್ಪ ಪತ್ರದಲ್ಲಿ ತಿಳಿಸಿದ್ದನ್ನು ಸ್ಮರಿಸಬಹುದು.

ಈ ನಡುವೆ ನವದೆಹಲಿಯ ಎಸ್‌ಸಿ ರಾಷ್ಟ್ರೀಯ ಆಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬರುವ ಸೆ.13ರಂದು ಬೆಳಿಗ್ಗೆ 11.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸರಿತಾ ಅವರಿಗೆ ಪತ್ರವನ್ನು ಕಳುಹಿಸಿದೆ.

ಶಿವಬಸವಯ್ಯ ವಿರುದ್ಧ ಕಠಿಣ ಶಿಕ್ಷೆಗೆ ಸಮಿತಿ ಶಿಫಾರಸು
`ಮೈಸೂರು ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಎಂ.ಸರಿತಾ ಮೇಲೆ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ.ಶಿವಬಸವಯ್ಯ ಅವರು ಲೈಂಗಿಕ ಕಿರುಕುಳ ಮಾಡಿರುವುದು ತನಿಖೆಯಿಂದ ಸಾಬೀತಾಗಿದ್ದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು~ ಎಂದು ಪ್ರಕರಣ ಕುರಿತು ತನಿಖೆ ನಡೆಸಿದ್ದ ಮಹಿಳಾ ದೌರ್ಜನ್ಯ ವಿಚಾರಣಾ ಸಮಿತಿ ವಿ.ವಿ.ಗೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿರುವುದು ಗೊತ್ತಾಗಿದೆ. 

  ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯಲ್ಲಿ ವರದಿಯ ಪೂರ್ಣ ಮಾಹಿತಿ ತಿಳಿದು ಬಂದಿದ್ದು, `ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಿತಿಯ ನಿರ್ದೇಶನದ ಮೇರೆಗೆ ಹಾಜರಾದ ಸಾಕ್ಷಿಗಳ ವಿಚಾರಣೆ, ಹೇಳಿಕೆ ಇವುಗಳ ಜೊತೆಗೆ ಅರ್ಜಿದಾರರು ಸಲ್ಲಿಸಿದ ದಾಖಲೆಗಳನ್ನು ಆಧರಿಸಿ ಸರಿತಾ ಮೇಲೆ ಲೈಂಗಿಕ ಕಿರುಕುಳ ನಡೆದಿರುವುದು ಸತ್ಯವೆಂದು ಸಮಿತಿಯ ಒಮ್ಮತದ ತೀರ್ಮಾನ. ತಪ್ಪಿತಸ್ಥರಿಗೆ ಶಿಕ್ಷೆ ನೀಡದೆ ಇದ್ದ ಪಕ್ಷದಲ್ಲಿ ಅಧ್ಯಾಪಕರು ಮತ್ತು ವಿಶ್ವವಿದ್ಯಾನಿಲಯದ ಮೇಲೆ ಸಾರ್ವಜನಿಕರು ಇಟ್ಟಿರುವ ನಂಬಿಕೆಗೆ ಧಕ್ಕೆ ಬರುತ್ತದೆ~ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT