ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಿ ಮತ್ತು ಬೆಕ್ಕಿನ ಪ್ರೇಮ ಕಥೆ

ಬಣ್ಣದ ತಗಡಿನ ತುತ್ತೂರಿ
Last Updated 13 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಒಬ್ಬ ರೈತನ ತೋಟದ ಮನೆಯಲ್ಲಿ ಬೆಕ್ಕೊಂದು ವಾಸವಾಗಿತ್ತು. ಅಲ್ಲಿಯೇ ಹತ್ತಿರದಲ್ಲಿ ಇಲಿ ಬಿಲ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಒಮ್ಮೆ ಬೆಕ್ಕು ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿರುವಾಗ ಅದರ ಕೆಟ್ಟ ದೃಷ್ಟಿಗೆ ಇಲಿ ಬಿತ್ತು. ಮೊದಲೇ ಏರು ಯೌವನದಲ್ಲಿ ಪೊಗದಸ್ತಾಗಿದ್ದ ಇಲಿ. ಬೆಕ್ಕು ಮನಸ್ಸಿನಲ್ಲೇ ಸಂತೋಷಪಟ್ಟಿತು. ಎಷ್ಟು ದಷ್ಟಪುಷ್ಟವಾಗಿದೆ. ಇದನ್ನು ಈಗಲೇ ತಿಂದರೆ ಸರಿ ಅನ್ನಿಸುವುದಿಲ್ಲ. ತುಂಬಾ ಹಸಿವಾಗಿದ್ದ ದಿನ ಬರೋಣ. ಅಷ್ಟು ಹೊತ್ತಿಗೆ ಇಲಿ ಇನ್ನಷ್ಟು ದಪ್ಪವಾಗಿರುತ್ತದೆ ಎಂದುಕೊಂಡಿತು. ತಕ್ಷಣ ಇಲಿಗೆ ಬೈ ಹೇಳಿ ತೋಟದ ಮನೆ ಸೇರಿತು. ಇದೇ ರೀತಿ ಪ್ರತಿ ದಿನ ಇಲಿಯನ್ನು ತಿನ್ನಲು ಬೆಕ್ಕು ಅದೇ ಜಾಡು ಹಿಡಿದು ಬರುತ್ತಿತ್ತು. ಈಗ ತಿನ್ನಬೇಕು, ನಾಳೆ ತಿನ್ನಬೇಕು ಅಂತ ಯೋಚಿಸುತ್ತಾ ದಿನಗಳನ್ನು ಮುಂದೂಡುತ್ತಿತ್ತು. ಹೀಗೆ ದಿನಾಲೂ ಬಂದು ಹೋಗುತ್ತಿದ್ದ ಬೆಕ್ಕನ್ನು ಕಂಡು ಯೌವನ ತುಂಬಿದ ಇಲಿಗೆ ಪ್ರೇಮರಸ ಉಕ್ಕಿತು.

ಒಂದು ದಿನ ಫೆಬ್ರುವರಿ 14 ಬಂದೇ ಬಿಟ್ಟಿತ್ತು. ಈ ದಿನ ನನ್ನ ಪ್ರೀತಿಯನ್ನು ನನ್ನ ಪ್ರಿಯಕರನಿಗೆ ತಿಳಿಸಬೇಕು ಎಂದು ನಿರ್ಧರಿಸಿ, ತನ್ನ ಪ್ರಿಯಕರ ಬರುವ ದಾರಿಯನ್ನೇ ಕಾಯುತ್ತಾ ಶೃಂಗಾರ ಮಾಡಿದ ಮದುವಣಗಿತ್ತಿಯ ಹಾಗೆ ಇಲಿ ತನ್ನ ಬಿಲದ ಬಾಗಿಲ ಹೊರಗೆ ಬಂದು ಕುಳಿತ್ತಿತ್ತು. ಆದರೆ ಅದೇ ದಿನ ಬೆಕ್ಕು ಅದನ್ನು ಹೇಗಾದರೂ ಮಾಡಿ ತಿನ್ನಲೇ ಬೇಕು ಎಂದು ಇಲಿಯ ಬಿಲದ ಹತ್ತಿರ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಬಂತು.

ತನ್ನ ಕಡೆಗೆ ಬರುತ್ತಿರುವ ಪ್ರಿಯಕರನನ್ನು ಕಂಡು ನಾಚುತ್ತಾ, `ಅಯ್ಯೋ ನನ್ನ ಪ್ರಿಯ ಗೆಳೆಯ ಬಂದೇ ಬಿಟ್ಟ. ಛೀ ಎಷ್ಟು ನಾಚಿಕೆ ಅವನಿಗೆ. ಪ್ರೀತಿಯನ್ನು ಹೇಳಲು ಇಷ್ಟೊಂದು ಕಷ್ಟ ಪಡುತ್ತಿರುವನಲ್ಲ. ಅಯ್ಯೋ ಬೇಗ ಬಾ, ಪ್ರೀತಿ ನಿವೇದಿಸಿಕೋ' ಎಂದು ಮನಸ್ಸಿನಲ್ಲಿಯೇ ಕೋರಿತು. ಬೆಕ್ಕಿಗೋ ಅದನ್ನು ತಿನ್ನುವುದು ಹೇಗೆ ಎಂಬ ಯೋಚನೆ. ಅದರ ಬರುವಿಕೆ ಕಂಡು ಇಲಿಯ ಮೋಹ ಹೆಚ್ಚಿತು. `ಪ್ರೀತಿ ವಿಷಯ ತಿಳಿಸಲು ಹೇಗೆ ಓಡಿ ಬರುತ್ತಿದ್ದಾನೆ' ಎಂದು ಇನ್ನಷ್ಟು ಖುಷಿಪಟ್ಟಿತು. ಆ ಹೊತ್ತಿಗೆ, ಬೆಕ್ಕು ಇಲಿಯ ಹತ್ತಿರ ಹೋಗಿ ಗಟ್ಟಿಯಾಗಿ ಹಿಡಿದುಕೊಂಡಿತು. ಇಲಿ ಪ್ರೀತಿಯ ಅಮಲಿನಿಂದ ಹೊರಬರಲೇ ಇಲ್ಲ. `ಛೀ ಕಳ್ಳ, ನನ್ನನ್ನು ಪ್ರೀತಿಯಿಂದ ತಬ್ಬಿಕೊಳ್ಳುತ್ತಿರುವುದು ನೋಡು' ಎಂದು ಮತ್ತಷ್ಟು ನಾಚಿಕೊಂಡಿತು. ಇತ್ತ ಬೆಕ್ಕು ಇನ್ನೇನು ತಿಂದು ಬಿಡಲು ಬಾಯಿ ತೆರೆಯಿತು. ಬೆಕ್ಕು ತುಟಿಗೆ ಮುತ್ತಿಕ್ಕುತ್ತಿದೆ ಎಂಬ ಭ್ರಮೆಯಲ್ಲಿತ್ತು ಇಲಿ. ಆದರೆ ಕ್ಷಣಾರ್ಧದಲ್ಲಿ ಇಲಿ ಬೆಕ್ಕಿನ ಹೊಟ್ಟೆ ಸೇರಿತು. ಹಸಿವು ತೀರಿ ಹಿಂದಿರುವಾಗ ನೆಲದ ಮೇಲೆ ಒಂದು ಕಾಗದ ಬಿದ್ದಿತ್ತು. ಅದು ಇಲಿ ಬರೆದ ಕಾಗದ.

ಓ ಪ್ರಿಯತಮಾ,ನೀನು ಪ್ರತಿ ದಿನ ನನ್ನನ್ನು ನೋಡಲಿಕ್ಕೆ ಬರುತ್ತಿದ್ದೆ. ಆಗ ನಿನ್ನ ಮೇಲೆ ಪ್ರೀತಿ ಹುಟ್ಟಿತು. ಆದರೆ ಆ ಪ್ರೀತಿಯನ್ನು ಹೇಳುವಷ್ಟರಲ್ಲಿ ನೀನು ಹೋಗಿ ಬಿಡುತ್ತಿದ್ದೆ. ಆದ್ದರಿಂದ ಈ ಅಮರ ಪ್ರೇಮಿಗಳ ದಿನ ಪ್ರೇಮ ನಿವೇದಿಸಿಕೊಳ್ಳಬೇಕು ಎಂದು ಬಯಸಿ ಈ ಪ್ರೇಮದ ಓಲೆ ಬರೆಯುತ್ತಿದ್ದೇನೆ. ಐ ಲವ್ ಯೂ.

ಓದಿದ ಬೆಕ್ಕಿಗೆ ಕಣ್ಣಲ್ಲಿ ನೀರು. `ಅಯ್ಯೋ ನಾನು ಎಂಥ ಪಾಪಿ ಇಲಿಯ ಮನಸ್ಸನ್ನು ಅರ್ಥಮಾಡಿಕೊಳ್ಳಲಾರದೆ ತಿಂದುಬಿಟ್ಟೆನಲ್ಲಾ. ನಾನೆಂಥ ನತದೃಷ್ಟ. ಈಗತಾನೆ ತಿಂದಿರುವೆ ಅದು ಇಷ್ಟು ಬೇಗ ಸತ್ತಿರುವುದಿಲ್ಲ' ಎಂದು ಚೀರಿ ತನ್ನ ಎರಡೂ ಕೈಗಳಿಂದ ಹೊಟ್ಟೆಯನ್ನು ಹರಿಯಿತು. ಆದರೆ ಇಲಿ ಸಿಗಲಿಲ್ಲ. ಎದೆ ಭಾಗವನ್ನು ಹರಿಯಿತು. ಅಲ್ಲಿಯೂ ದೊರೆಯದೆ ಎರಡೂ ಕೈಗಳಿಂದ ಗಂಟಲು ಭಾಗವನ್ನು ಸೀಳಿ ಸತ್ತ ಪ್ರೇಮಿಯನ್ನು ಹೊರಗೆ ತೆಗೆಯಿತು. ಕೈಯಲ್ಲಿ ಇಲಿಯನ್ನು ಹಿಡಿದು ಪ್ರೀತಿಯ ನಗೆ ಬೀರಿ ಪ್ರಾಣ ಬಿಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT