ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲಿ ಹಿಡಿಯಲು ಹೊರಟ ವಾಣಿಜ್ಯ ಇಲಾಖೆ

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಏಳು ವರ್ಷಗಳ ಹಿಂದಿನಿಂದಲೂ ಬಳ್ಳಾರಿ, ತುಮಕೂರು ಮತ್ತಿತರ ಕಡೆಗಳಲ್ಲಿ ಅಕ್ರಮ ಅದಿರು ಮಾರಾಟ ನಡೆಯುತ್ತಿದ್ದಾಗ ಕಣ್ಣುಮುಚ್ಚಿ ಕುಳಿತಿದ್ದ ವಾಣಿಜ್ಯ ತೆರಿಗೆ ಇಲಾಖೆ ಈಗ `ಬೆಟ್ಟ ಅಗೆದು ಇಲಿ ಹಿಡಿಯಲು~ ಹೊರಟಿದೆ. ವ್ಯಾಪಾರ ಮಾಡಿ ಜೇಬು ಭರ್ತಿ ಮಾಡಿಕೊಂಡು ತೆರಿಗೆ ವಂಚಿಸಿರುವವರ ಪತ್ತೆಗೆ ಈಗ ಕಾರ್ಯಾಚರಣೆ ಆರಂಭವಾಗಿದೆ!

ಬೇನಾಮಿಯಾಗಿ ಅದಿರು ಮಾರುವವರು, ನೋಂದಣಿರಹಿತ ಸಂಸ್ಥೆಗಳು ಮತ್ತು ನೋಂದಣಿ ಇದ್ದೂ ದಾಖಲೆ ಸಲ್ಲಿಸದೇ ಅದಿರು ಖರೀದಿ-ಮಾರಾಟದಲ್ಲಿ ತೊಡಗಿರುವವರು ರಾಜ್ಯದ ಬೊಕ್ಕಸಕ್ಕೆ ತೆರಿಗೆ ವಂಚಿಸುತ್ತಿದ್ದಾರೆ ಎಂಬ ದೂರುಗಳನ್ನು ಇಲಾಖೆ ಪರಿಗಣಿಸಿಯೇ ಇರಲಿಲ್ಲ. ಲೋಕಾಯುಕ್ತರ ತನಿಖಾ ವರದಿಯಲ್ಲಿ ಇಲಾಖೆಯ ಹೊಣೆಗೇಡಿತನ ಬಟಾಬಯಲಾದ ಬಳಿಕವೂ ಮೌನಕ್ಕೆ ಶರಣಾಗಿತ್ತು. ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಕುರಿತ ಸಿಬಿಐ ತನಿಖೆಯ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಚ್ಚಿಬಿದ್ದಿರುವ ಇಲಾಖೆ, ಗಣಿಗಾರಿಕೆ ಸ್ಥಗಿತಗೊಂಡು ಎರಡು ವರ್ಷಗಳೇ ಉರುಳಿದ ಬಳಿಕ ಶೋಧ ನಡೆಸಲು ಹೊರಟಿದೆ.

ಬಳ್ಳಾರಿ, ಹೊಸಪೇಟೆ ಹಾಗೂ ತುಮಕೂರು `ಮೌಲ್ಯವರ್ಧಿತ ತೆರಿಗೆ~ (ವ್ಯಾಟ್) ಕಚೇರಿಗಳ ವ್ಯಾಪ್ತಿಯಲ್ಲಿ ನೋಂದಾಯಿಸಿಕೊಂಡಿದ್ದ ಕಬ್ಬಿಣದ ಅದಿರು ವ್ಯಾಪಾರಿಗಳು ನೋಂದಣಿ ಪಡೆದ ನಂತರ ಮಾಸಿಕ ನಮೂನೆಗಳನ್ನು ಸಲ್ಲಿಸದೇ ಇರುವುದು, ಮಾಸಿಕ ನಮೂನೆಗಳಲ್ಲಿ ಸುಳ್ಳು ಮಾಹಿತಿ ನೀಡಿ ತೆರಿಗೆ ವಂಚಿಸಿರುವುದು, ರಫ್ತಿನ ಹೆಸರಿನಲ್ಲಿ ತೆರಿಗೆ ಮರುಪಾವತಿ ಮಾಡಿಸಿಕೊಂಡಿರುವುದು ಮತ್ತು ದೊಡ್ಡ ಸಂಖ್ಯೆಯ ವ್ಯಾಪಾರಿಗಳು ಬೇನಾಮಿಯಾಗಿ ನೋಂದಣಿ ಪಡೆದು ವಂಚಿಸಿರುವುದು ನಡೆದಿದೆ ಎಂಬುದನ್ನು ಈಗ ಇಲಾಖೆ ಒಪ್ಪಿಕೊಂಡಿದೆ. ಮೇ 8ರಂದು ವಾಣಿಜ್ಯ ತೆರಿಗೆ ಆಯುಕ್ತ ಪ್ರದೀಪ್ ಸಿಂಗ್ ಖರೋಲ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಸಂಗತಿಯನ್ನು ಒಪ್ಪಿಕೊಳ್ಳಲಾಗಿದೆ.

100 ಅಧಿಕಾರಿಗಳ ತಂಡ: ಲೋಕಾಯುಕ್ತ ವರದಿಯ ಕಾರಣಕ್ಕಾಗಿಯೇ ಕಾರ್ಯಾಚರಣೆ ಆರಂಭವಾಗಿದೆ ಎಂಬುದು ಆಯುಕ್ತರು ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟವಾಗಿದೆ.

ಬಳ್ಳಾರಿಯ ಎರಡು `ವ್ಯಾಟ್~ ಕಚೇರಿಗಳು, ಹೊಸಪೇಟೆಯ ಒಂದು ಕಚೇರಿ, ತುಮಕೂರಿನ ಎರಡು `ವ್ಯಾಟ್~ ಕಚೇರಿಗಳು ಮತ್ತು ತಿಪಟೂರಿನ ಉಪ ಕಚೇರಿಯ ವ್ಯಾಪ್ತಿಯಲ್ಲಿ ತೆರಿಗೆ ವಂಚಕರ ಪತ್ತೆ ಕಾರ್ಯಾಚರಣೆಗೆ ಆದೇಶಿಸಲಾಗಿದೆ.  

ವಾಣಿಜ್ಯ ತೆರಿಗೆ ಇಲಾಖೆಯ ಮೂವರು ಜಂಟಿ ಆಯುಕ್ತರ ನೇತೃತ್ವದಲ್ಲಿ ಲೆಕ್ಕ ಪರಿಶೋಧನೆ ನಡೆಯುತ್ತಿದೆ. ಉಪ ಆಯುಕ್ತರು, ಸಹಾಯಕ ಆಯುಕ್ತರ ಶ್ರೇಣಿಯ 30ಕ್ಕೂ ಹೆಚ್ಚು ಅಧಿಕಾರಿಗಳನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ವಾಣಿಜ್ಯ ತೆರಿಗೆ ಅಧಿಕಾರಿಗಳು, ಸಹಾಯಕ ಅಧಿಕಾರಿಗಳು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ತಂಡದಲ್ಲಿದ್ದಾರೆ. ಹದಿನೈದು ದಿನಗಳಿಂದ ಬಳ್ಳಾರಿ, ಹೊಸಪೇಟೆ ಮತ್ತು ತುಮಕೂರಿನಲ್ಲಿ ಬೀಡುಬಿಟ್ಟಿರುವ ಈ ತಂಡ ವಂಚಕರ ಪತ್ತೆಗೆ ಶ್ರಮಿಸುತ್ತಿದೆ.

ತೆರಿಗೆ ವಂಚನೆಯ ನಡುವೆಯೂ ಗಣಿ ಉದ್ಯಮ ವಾಣಿಜ್ಯ ತೆರಿಗೆ ಇಲಾಖೆಯ ಪ್ರಮುಖ ಆದಾಯದ ಮೂಲವಾಗಿತ್ತು. ಈ ಕಾರಣಕ್ಕಾಗಿ ಇಲಾಖೆ ತೆರಿಗೆ ಕಳ್ಳರನ್ನು ಗುರುತಿಸುವ ಗೋಜಿಗೆ ಹೋಗಿರಲಿಲ್ಲ. ಈಗ ದೂಳು ಹಿಡಿದಿರುವ ಕಡತಗಳಿಗೆ ಕೈ ಇರಿಸಿದೆ. 2005ರ ಏಪ್ರಿಲ್ 1ರಿಂದ 2012ರ ಮಾರ್ಚ್ 31ರ ಅವಧಿಯಲ್ಲಿ ನಡೆದಿರುವ ವ್ಯಾಟ್ ನೋಂದಣಿಯ ಪರಿಶೀಲನೆಗೆ ಆದೇಶಿಸಲಾಗಿದೆ. 2005ರ ಏಪ್ರಿಲ್‌ನಿಂದ 2010ರ ಮಾರ್ಚ್ ಅವಧಿಯಲ್ಲಿ ಸಲ್ಲಿಕೆಯಾದ ಮಾಸಿಕ ನಮೂನೆಗಳ ಲೆಕ್ಕ ಪರಿಶೋಧನೆಯೂ ನಡೆಯುತ್ತಿದೆ.

ಎಲ್ಲಕ್ಕಿಂತಲೂ ಮುಖ್ಯವಾಗಿ ಬಳ್ಳಾರಿಯ ಎರಡು ವ್ಯಾಟ್ ಕಚೇರಿಗಳಲ್ಲಿ ನೋಂದಣಿಯಾದ 206 ಅದಿರು ವ್ಯಾಪಾರಿಗಳಿಗೆ ಸಂಬಂಧಿಸಿದ ನೋಂದಣಿ ಕಡತಗಳನ್ನು ಅಲ್ಲಿನ ಅಧಿಕಾರಿಗಳು ಇದುವರೆಗೂ ಲೆಕ್ಕಪರಿಶೋಧನೆಗೆ ಸಲ್ಲಿಸಿರಲಿಲ್ಲ ಎಂಬುದು ಖರೋಲ ಹೊರಡಿಸಿರುವ ಆದೇಶದಲ್ಲೇ ಬಹಿರಂಗವಾಗಿದೆ. ಈ ಕಡತಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುವ ಜವಾಬ್ದಾರಿಯನ್ನೂ ತನಿಖಾ ತಂಡಗಳಿಗೆ ಒಪ್ಪಿಸಲಾಗಿದೆ.

ಹುಣಸೆಹಣ್ಣು ತೊಳೆದಂತೆ: ಗಣಿಗಾರಿಕೆ ಉತ್ತುಂಗ ಸ್ಥಿತಿಯಲ್ಲಿದ್ದ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಳ್ಳಾರಿಯ ಕಡೆ ಮುಖ ಮಾಡಿದ್ದ ಅದಿರು ವ್ಯಾಪಾರಿಗಳು ಬಳ್ಳಾರಿಯ ಗಾಂಧಿನಗರ, ಸತ್ಯನಾರಾಯಣ ಪೇಟೆ ಮತ್ತಿತರ ಬಡಾವಣೆಗಳಲ್ಲಿ ಬಾಡಿಗೆ ಮನೆ ಪಡೆದು ಠಿಕಾಣಿ ಹೂಡಿದ್ದರು. ಅಲ್ಲಿನ ವಿಳಾಸವನ್ನೇ ನೀಡಿ `ವ್ಯಾಟ್~ ನೋಂದಣಿಯನ್ನೂ ಮಾಡಿಸಿಕೊಂಡಿದ್ದರು. ಅವರಲ್ಲಿ ಹಲವರು ತೆರಿಗೆ ವಂಚನೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಕೆಲವರು ಅಂತರರಾಜ್ಯ ವಹಿವಾಟು, ರಫ್ತಿನ ಹೆಸರಿನಲ್ಲಿ ತೆರಿಗೆ ವಂಚಿಸಿ ಜಾಗ ಖಾಲಿ ಮಾಡಿದ್ದಾರೆ.

ಈಗ ಅವರನ್ನೆಲ್ಲ ಹುಡುಕಲು ಹೊರಟ ವಾಣಿಜ್ಯ ತೆರಿಗೆ ಇಲಾಖೆಗೆ ಬಾಡಿಗೆ ಮನೆಗಳಷ್ಟೇ ಕಾಣುತ್ತಿವೆ. ಇನ್ನು ಕೆಲವು ಪ್ರಕರಣಗಳಲ್ಲಿ `ವ್ಯಾಟ್~ ನೋಂದಣಿ, ಮಾಸಿಕ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳೇ ಲಭ್ಯವಿಲ್ಲ. 15 ದಿನಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಕೆಲವು ಪ್ರಕರಣಗಳನ್ನಷ್ಟೇ ಪತ್ತೆಹಚ್ಚಲು ಸಾಧ್ಯವಾಗಿದೆ. ಇದರಿಂದ ಬಹುತೇಕ ಅಧಿಕಾರಿಗಳು ಹೈರಾಣಾಗಿದ್ದಾರೆ.

`ಹದಿನೈದು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರೂ, ಹೆಚ್ಚು ಪ್ರಕರಣಗಳ ಪತ್ತೆ ಸಾಧ್ಯವಾಗಿಲ್ಲ. ವಾಣಿಜ್ಯ ತೆರಿಗೆ ಇಲಾಖೆಯ ಬಳ್ಳಾರಿ ಕಚೇರಿಯಲ್ಲಿ ಕೆಲವು ಕಡತಗಳೇ ಇಲ್ಲ. ಇದರಿಂದಾಗಿ ಕಾರ್ಯಾಚರಣೆಗೆ ಮತ್ತಷ್ಟು ಹಿನ್ನಡೆ ಆಗಿದೆ. ಗಣಿಗಾರಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಅದಿರು ವ್ಯಾಪಾರಿಗಳೆಲ್ಲ ಬಳ್ಳಾರಿ, ತುಮಕೂರು ತ್ಯಜಿಸಿ ಒಂದೂವರೆ ವರ್ಷವಾಗಿದೆ. ಬಾಡಿಗೆ ಮನೆ ವಿಳಾಸ ನೀಡಿದ ಪ್ರಕರಣಗಳಲ್ಲಿ ತೆರಿಗೆ ವಂಚಕರ ಪತ್ತೆ ಅಸಾಧ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ~ ಎನ್ನುತ್ತಾರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಹಿರಿಯ ಅಧಿಕಾರಿಯೊಬ್ಬರು.

ಅಧಿಕಾರಿಗಳ ಅಸಹಕಾರ: `ಬಳ್ಳಾರಿಯ ವಾಣಿಜ್ಯ ತೆರಿಗೆ ಕಚೇರಿಗಳು ಅವ್ಯವಸ್ಥೆಯ ಆಗರಗಳಾಗಿವೆ. ವಿಶೇಷ ಕಾರ್ಯಾಚರಣೆ ತಂಡಕ್ಕೆ ಯಾವುದೇ ನೆರವು ದೊರೆಯುತ್ತಿಲ್ಲ. ಕುಳಿತುಕೊಳ್ಳಲು ಕುರ್ಚಿ, ಮೇಜು ಕೂಡ ಒದಗಿಸುತ್ತಿಲ್ಲ. ಹತ್ತು ಕಡತ ಕೇಳಿದರೆ ಒಂದನ್ನಷ್ಟೇ ನೀಡುತ್ತಾರೆ. ಸ್ಥಳೀಯ ಅಧಿಕಾರಿಗಳ ಅಸಹಕಾರದ ಪರಿಣಾಮವಾಗಿ ಈ ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಗುತ್ತಿದೆ~ ಎಂದು   ಹೇಳುತ್ತಾರೆ.

`ಕಳ್ಳರ ಹಿಡಿಯುವ ಪ್ರಯತ್ನ~
ಗಣಿಗಾರಿಕೆ ಸ್ಥಗಿತವಾಗಿ ಎರಡು ವರ್ಷಗಳ ಬಳಿಕ ತೆರಿಗೆ ವಂಚಕರ ಪತ್ತೆಗೆ ಹೊರಟ ಔಚಿತ್ಯ ಕುರಿತು ಪ್ರತಿಕ್ರಿಯಿಸಿದ ಪ್ರದೀಪ್ ಸಿಂಗ್ ಖರೋಲ, `2005ರ ಏಪ್ರಿಲ್‌ನಿಂದ ನಡೆದ ನೋಂದಣಿಯ ಕಡತಗಳು ಪರಿಶೀಲನೆಗೆ ಬಾಕಿ ಇವೆ. ತೆರಿಗೆ ವಂಚನೆ ನಡೆದಿರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ಆರಂಭಿಸಲಾಗಿದೆ. ವಂಚಕರನ್ನು ಪತ್ತೆಮಾಡುವ ಉದ್ದೇಶದಿಂದ ಈ ಪ್ರಯತ್ನ ನಡೆಯುತ್ತಿದೆ~ ಎಂದರು. ಈಗ ವಂಚಕರ ಪತ್ತೆ ಸಾಧ್ಯವೇ ಎಂಬ ಮರುಪ್ರಶ್ನೆಗೆ, `ಪ್ರಯತ್ನ ಮಾಡುತ್ತಿದ್ದೇವೆ~ ಎಂದಷ್ಟೇ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT