ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಒಬ್ಬರಿಗೆ ಒಂದೇ ಅವಕಾಶ!

Last Updated 4 ಏಪ್ರಿಲ್ 2013, 6:26 IST
ಅಕ್ಷರ ಗಾತ್ರ

ವಿಜಾಪುರ: ಇಬ್ಬರು ಅಭ್ಯರ್ಥಿಗಳನ್ನು ಮೂರು ಬಾರಿ ಗೆಲ್ಲಿಸಿದ, ಇನ್ನಿಬ್ಬರನ್ನು ಒಮ್ಮೆ ಮಾತ್ರ ಗೆಲ್ಲಿಸಿ ಎರಡು ಬಾರಿ ಸೋಲಿಸಿರುವುದು ಹಿಂದಿನ ಬಳ್ಳೊಳ್ಳಿ ಹಾಗೂ ಈಗಿನ ನಾಗಠಾಣ ಮೀಸಲು ಕ್ಷೇತ್ರದ ಮಹಿಮೆ.

ಬಹುತೇಕ ಪಕ್ಷಗಳ ಅಭ್ಯರ್ಥಿಗಳನ್ನು ಈ ಕ್ಷೇತ್ರದ ಜನ ಅಪ್ಪಿಕೊಂಡಿದ್ದಾರೆ. ಕಾಂಗ್ರೆಸ್‌ಗೆ ಐದು ಬಾರಿ, ಜನತಾ ಪಕ್ಷಕ್ಕೆ ಮೂರು, ಜನತಾ ದಳಕ್ಕೆ ಎರಡು ಬಾರಿ, ಆರ್‌ಪಿಐ, ಜೆಡಿಎಸ್ ಮತ್ತು ಬಿಜೆಪಿಗೆ ತಲಾ ಒಂದು ಬಾರಿ ಒಲಿದಿದ್ದಾರೆ.

ಹಿಂದಿನ `ಜನತಾ' ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದ ಹಾಲಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ರಾಜಕೀಯ ಜನ್ಮ ನೀಡಿದ್ದು ಇದೇ ಕ್ಷೇತ್ರ. ಜೆ.ಎಲ್. ಕಬಾಡೆ ಮತ್ತು ರಮೇಶ ಜಿಗಜಿಣಗಿ ಅವರು ಮೂರು ಬಾರಿ, ಎಸ್.ಎಸ್. ಅರಕೇರಿ ಅವರು ಎರಡು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1994ರ ಚುನಾವಣೆಯ ನಂತರ ಇಲ್ಲಿ ಯಾರೊಬ್ಬರೂ ಮರು ಆಯ್ಕೆಯಾಗಿಲ್ಲ.

1957, 1962ರ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಜೆ.ಎಲ್. ಕಬಾಡೆ, 1967ರ ಚುನಾವಣೆಯಲ್ಲಿ ಆರ್‌ಪಿಐನ ಎಸ್.ಎಸ್. ಅರಕೇರಿ ಆಯ್ಕೆಯಾಗಿದ್ದರು. 1972ರ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನ ಜೆ.ಎಲ್. ಕಬಾಡೆ 15,537 ಮತ ಪಡೆದು ಆಯ್ಕೆಯಾದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬಿ.ಆರ್. ಹುಜೂರ 11,204 ಮತ ಪಡೆದಿದ್ದರು.

1978ರ ಚುನಾವಣೆಯಲ್ಲಿ ಐವರು ಕಣದಲ್ಲಿದ್ದರು. ಎಸ್.ಎಸ್. ಅರಕೇರಿ ಜನತಾ ಪಕ್ಷದಿಂದ ಸ್ಪರ್ಧಿಸಿ 23,023 ಮತ ಪಡೆದು ಆಯ್ಕೆಯಾದರು. ಇಂದಿರಾ ಕಾಂಗ್ರೆಸ್‌ನ ಸಿ.ಕೆ. ಹೊಸಮನಿ 14,204, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಎಚ್.ಎಂ. ಗಾಡಿವಡ್ಡರ 2,667 ಮತ ಪಡೆದರು. 1983ರ ಚುನಾವಣೆಯಲ್ಲಿ ಜನತಾ ಪಕ್ಷದ ರಮೇಶ ಜಿಗಜಿಣಗಿ 24,003 ಮತ ಪಡೆದು ಆಯ್ಕೆಯಾದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಎಸ್.ಎಸ್. ಅರಕೇರಿ 11,876, ಪಕ್ಷೇತರ ಜೆ.ಎಲ್. ಕಬಾಡೆ 11,555 ಮತ ಪಡೆದರು.1985ರ ಚುನಾವಣೆಯಲ್ಲಿ ಆರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಜನತಾ ಪಕ್ಷದಿಂದ ಮತ್ತೆ ಕಣಕ್ಕಿಳಿದಿದ್ದ ರಮೇಶ ಜಿಗಜಿಣಗಿ  32,260 ಮತ ಪಡೆಯುವ ಮೂಲಕ ಪುನರಾಯ್ಕೆಯಾದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಡಿ.ವೈ. ಕೊಂಡಗೂಳಿ 21,113 ಮತ ಪಡೆದರು.

1989ರ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮನೋಹರ ಐನಾಪುರ 27,782 ಮತ ಪಡೆಯುವ ಮೂಲಕ ಜನತಾ ದಳದ ರಮೇಶ ಜಿಗಜಿಣಗಿ (23,557) ಅವರನ್ನು ಪರಾಭವಗೊಳಿಸಿ ಆಯ್ಕೆಯಾದರು.

1994ರ ಚುನಾವಣೆಯಲ್ಲಿ ಎಂಟು ಜನ ಕಣದಲ್ಲಿದ್ದರು. ಜನತಾ ದಳದ ರಮೇಶ ಜಿಗಜಿಣಗಿ 29,018 ಮತ ಪಡೆದು ಆಯ್ಕೆಯಾದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪಿ.ಎಸ್. ಚವ್ಹಾಣ 17,591, ಕರ್ನಾಟಕ ರಾಜ್ಯ ರೈತ ಸಂಘದ ಎಸ್.ಎಂ. ಗೊಣಸಗಿ 14,245, ಬಿಜೆಪಿಯ ವಿಠ್ಠಲ ಕಟಕಧೋಂಡ 9,090 ಮತ ಪಡೆದರು.

ಜನತಾ ದಳದಿಂದ ಉಚ್ಛಾಟಿಸಿದ ನಂತರ ರಾಮಕೃಷ್ಣ ಹೆಗಡೆ ಅವರು ಲೋಕಶಕ್ತಿ ಪಕ್ಷ ಕಟ್ಟಿದ್ದರು. ಅವರ ಕಟ್ಟಾ ಅನುಯಾಯಿ ರಮೇಶ ಜಿಗಜಿಣಗಿ ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾದರು. ಜಿಗಜಿಣಗಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ 1994ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜನತಾ ದಳದ ವಿಲಾಸಬಾಬು ಆಲಮೇಲಕರ ಆಯ್ಕೆಯಾದರು.

ಕಾಂಗ್ರೆಸ್ ಪಕ್ಷದಿಂದ ಪ್ರಕಾಶ ರಾಠೋಡ, ಪಕ್ಷೇತರರಾಗಿ ಮನೋಹರ ಐನಾಪುರ ಸ್ಪರ್ಧಿಸಿದ್ದರು. 1999ರ ಚುನಾವಣೆಯಲ್ಲಿ ಕಣದಲ್ಲಿದ್ದ ಎಂಟು ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್‌ನ ರಾಜು ಆಲಗೂರ 27,194 ಮತ ಪಡೆದು ಆಯ್ಕೆಯಾದರು. ಜೆಡಿಸ್‌ನ ಆರ್.ಕೆ. ರಾಠೋಡ 24,667, ಸಂಯುಕ್ತ ಜನತಾ ದಳದ ವಿಲಾಸಬಾಬು ಆಲಮೇಲಕರ 23,668, ರೈತ ಸಂಘದ ಪ್ರಕಾಶ ತಿಪ್ಪಣ್ಣ ಅಲಕುಂಟೆ 3,419, ಬಿಎಸ್‌ಪಿಯ ಎಚ್.ಯು. ಚಲವಾದಿ 1,373 ಮತ ಪಡೆದುಕೊಂಡರು.

2004ರ ಚುನಾವಣೆಯಲ್ಲಿ ಜೆಡಿಎಸ್‌ನ ಆರ್.ಕೆ. ರಾಠೋಡ 39,915 ಮತ ಪಡೆದು ಆಯ್ಕೆಯಾದರು. ಕಾಂಗ್ರೆಸ್‌ನ ರಾಜು ಆಲಗೂರ 28,873, ಬಿಜೆಪಿಯ ವಿಠ್ಠಲ ಕಟಕಧೋಂಡ 27,448, ಕನ್ನಡ ನಾಡು ಪಕ್ಷದ ಪರಶುರಾಮ ವಸಂತ ಜಿಗಜಿಣಗಿ 1,958, ಪಕ್ಷೇತ್ರ ಪ್ರಕಾಶ ಅಲಕುಂಟೆ 1,840 ಮತ ಪಡೆದರು.

ಕ್ಷೇತ್ರ ಪುನರ್ ವಿಂಗಡಣೆಯ ನಂತರ ಈ ಕ್ಷೇತ್ರದ ಹೆಸರು ನಾಗಠಾಣ ಎಂದು ಬದಲಾಯಿತು. 2008ರ ಚುನಾವಣೆಯಲ್ಲಿ ಬಿಜೆಪಿಯ ವಿಠ್ಠಲ ಕಟಕಧೋಂಡ 40,225 ಮತ ಪಡೆದು 4207 ಮತಗಳ ಅಂತರದಿಂದ ಆಯ್ಕೆಯಾದರು. ಕಾಂಗ್ರೆಸ್‌ನ ರಾಜು ಆಲಗೂರ 36,018,ಜೆಡಿಎಸ್‌ನ ಆರ್.ಕೆ. ರಾಠೋಡ 21,806 ಮತ ಪಡೆದರು. ಈ ಚುನಾವಣೆಯಲ್ಲಿ ಒಟ್ಟಾರೆ ಒಂಬತ್ತು ಅಭ್ಯರ್ಥಿಗಳು ಕಣದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT