ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಇಲ್ಲಿ ಓಡಿದರೆ ಆಸ್ತಮಾ ಬರುತ್ತೆ..!'

Last Updated 24 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಒಂದು ಕಾಲದಲ್ಲಿ ರಾಜ್ಯದ ಉತ್ತಮ ಕ್ರೀಡಾಂಗಣಗಳಲ್ಲಿ ಒಂದು ಎನಿಸಿದ್ದ ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಈಗ ಕುಡಿಯುವ ನೀರಿನ ವ್ಯವಸ್ಥೆಯೂ ಸರಿಯಾಗಿಲ್ಲ ಎಂದು ಕ್ರೀಡಾಪಟುಗಳು ದೂರುತ್ತಿದ್ದಾರೆ. ಆಡಳಿತಗಾರರು ಇಲ್ಲಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಬೇಕೆಂದು ಯೋಚಿಸಿದಂತೆಯೇ ಇಲ್ಲ. ಪ್ರಸಕ್ತ ಇರುವ ಸೌಲಭ್ಯಗಳನ್ನೂ ನಿರ್ವಹಣೆಯ ಕೊರತೆಯಿಂದಾಗಿ ಕ್ರೀಡಾಪಟುಗಳಿಗೆ ಬಳಸಲು ಸಾಧ್ಯವಾಗುತ್ತಿಲ್ಲ.

ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಬೇಕೆಂಬ ಬೇಡಿಕೆ ಹಲವು ವರ್ಷಗಳದ್ದಾಗಿದೆ. ಆದರೆ ಅದು ಯಾರ ಕಿವಿಗೂ ಬೀಳುತ್ತಿಲ್ಲ.  ಇದೊಂದೇ ಅಲ್ಲ, ಹಾಕಿ ಮೈದಾನಕ್ಕೂ ಆಸ್ಟ್ರೋ ಟರ್ಫ್ ಬೇಕು, ಕ್ರೀಡಾಂಗಣದ ಸುತ್ತ ವಾಕಿಂಗ್ ಟ್ರ್ಯಾಕ್  ನಿರ್ಮಿಸಬೇಕು ಎಂಬ ಪ್ರಸ್ತಾವನೆಗಳೂ ನೆನೆಗುದಿಗೆ ಬಿದ್ದಿವೆ.

ಜಿಲ್ಲಾ ಕ್ರೀಡಾಂಗಣದಲ್ಲಿರುವ ಸಿಂಡರ್ ಟ್ರ್ಯಾಕ್‌ಗೆ ನೀರು ಹರಿಸದ ಕಾರಣ ಸದಾ ಧೂಳು ಕವಿದಿರುತ್ತದೆ.  `ಸಿಂಡರ್ ಟ್ರ್ಯಾಕ್‌ನ ಧೂಳು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಅಸ್ತಮಾ ಸಮಸ್ಯೆ ಬರುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಧೂಳು ಹಾರದಂತೆ ಇದಕ್ಕೆ ಸತತವಾಗಿ ನೀರು ಹಾಕುತ್ತಿರಬೇಕು'ಎಂದು ರಾಜ್ಯ ಅಥ್ಲೆಟಿಕ್ ಸಂಸ್ಥೆ ಸದಸ್ಯ ಮಹೇಂದ್ರ ನುಡಿಯುತ್ತಾರೆ. ಆದರೆ  ಕ್ರೀಡಾಂಗಣದಲ್ಲಿ ನೀರಿನ ಸಮಸ್ಯೆ ಇರುವುದರಿಂದ ಸಿಂಡರ್ ಟ್ರ್ಯಾಕ್ ಮೇಲೆ ನೀರು ಚಿಮುಕಿಸುವುದನ್ನು ಕಂಡವರೇ ಇಲ್ಲ. ಹೀಗಾಗಿ `ಕಲ್ಲಿದ್ದಲ ಧೂಳು' ಆರೋಗ್ಯವಂತರ ಆರೋಗ್ಯವನ್ನೂ ಕೆಡಿಸುತ್ತದೆ.

ಮುಂಜಾನೆ ವಾಯುವಿಹಾರಕ್ಕೆ ಬರುವ ನೂರಾರು ಜನರೂ ಇದೇ ಟ್ರ್ಯಾಕ್ ಮೇಲೆ ನಡೆದಾಡುತ್ತಾರೆ ಎಂದು ಕ್ರೀಡಾಪಟುಗಳು ಆಕ್ಷೇಪಿಸುತ್ತಿದ್ದಾರೆ. ಕ್ರೀಡಾಂಗಣ ಗ್ಯಾಲರಿಯ ಮೆಟ್ಟಿಲುಗಳು ಶಿಥಿಲಗೊಂಡು ಅಲ್ಲಲ್ಲಿ ಕುಸಿಯುತ್ತಿವೆ. ನೀರು ಹರಿಯುವ ವ್ಯವಸ್ಥೆ ಸರಿ ಇಲ್ಲದೆ ಮಳೆಗಾಲದಲ್ಲಿ ಕ್ರೀಡಾಂಗಣ ಅಲ್ಲಲ್ಲಿ ಕೆರೆಯಂತಾಗುತ್ತದೆ.

ಕ್ರೀಡಾಂಗಣದ ಸುತ್ತ ಬೇಲಿ ಇಲ್ಲದೆ ಸಂಜೆ ವೇಳೆ ಕ್ರೀಡಾಂಗಣ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಸುತ್ತ ಬೀದಿ ದೀಪಗಳ ಕೊರತೆಯಿಂದಾಗಿ ಇಲ್ಲಿ ಆಗಾಗ ಸರಗಳ್ಳತನ, ಹಲ್ಲೆ ಮುಂತಾದ ಪ್ರಕರಣಗಳು ವರದಿಯಾಗುತ್ತಲೇ ಇವೆ. ಬ್ಯಾಸ್ಕೆಟ್‌ಬಾಲ್ ಹಾಗೂ ವಾಲಿಬಾಲ್ ಕ್ರೀಡಾಂಗಣಗಳು ಮಾತ್ರ ಇಲ್ಲಿ ಪೂರ್ತಿ ಪ್ರಮಾಣದಲ್ಲಿ ಬಳಕೆಯಾಗುತ್ತಿವೆ. ತರಬೇತುದಾರರ ಕೊರತೆ ಎಲ್ಲ ಕ್ರೀಡೆಗಳಲ್ಲೂ ಇದ್ದೇ ಇದೆ.

ಕ್ರೀಡಾಂಗಣದ ಸಮೀಪದಲ್ಲೇ ಸುಮಾರು 5.20 ಕೋಟಿ ರೂಪಾಯಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಿದೆ. ಸುಮಾರು ಎರಡು ವರ್ಷದ ಹಿಂದೆ ಇದನ್ನು ಉದ್ಘಾಟಿಸುವಾಗ ಜಿಲ್ಲೆಯ ಜನರು ಭಾರಿ ನಿರೀಕ್ಷೆ ಇಟ್ಟಿದ್ದರು.  ಆದರೆ ವರ್ಷದೊಳಗೆ ಅವರ ನಿರೀಕ್ಷೆಗಳೆಲ್ಲ ಹುಸಿಯಾಗಿವೆ.

ಕ್ರೀಡಾಂಗಣದ ಒಳಗೆ ನಿರ್ಮಿಸಿರುವ ಈಜುಕೊಳದಲ್ಲಿ ನೀರು ಬಿಸಿಯಾಗುತ್ತದೆ, ರಾಜ್ಯದಲ್ಲಿ ಇಂಥ ಮೊದಲ ಈಜುಕೊಳ ಇದು ಎಂದು ಬಿಂಬಿಸಲಾಗಿತ್ತು. ಆದರೆ ಒಂದೇ ಒಂದು ದಿನ ಈಜುಪಟುಗಳು ಬಿಸಿನೀರನ್ನು ಕಾಣಲಿಲ್ಲ ! ಈಗ ಈಜು ಕೊಳದ ನಿರ್ವಹಣೆಯನ್ನು ಖಾಸಗಿಯವರಿಗೆ  ವಹಿಸಲಾಗಿದೆ.

ಬ್ಯಾಡ್ಮಿಂಟನ್ ಕೋರ್ಟ್‌ಗೆ ಹಾಕಿರುವ ಮರದ ಹಾಸು ಸರಿಯಾಗಿಲ್ಲ ಎಂಬ ಕಾರಣದಿಂದ ವೃತ್ತಿಪರ ಆಟಗಾರರು ಈಗ ಇಲ್ಲಿಗೆ ಬರುತ್ತಿಲ್ಲ. ಕೆಲವು ಅಧಿಕಾರಿಗಳು, ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಬೆಳಿಗ್ಗೆ ಬಂದು ಆಟವಾಡಿ ಹೋಗುತ್ತಿದ್ದಾರೆ. ಒಟ್ಟಾರೆಯಾಗಿ ಒಳಾಂಗಣ ಕ್ರೀಡಾಂಗಣದ ಉದ್ದೇಶ ಸಫಲವಾದಂತೆ ಕಾಣುತ್ತಿಲ್ಲ.

`ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್, ಹಾಕಿ ಮೈದಾನದಲ್ಲಿ ಟರ್ಫ್ ಮುಂತಾದವುಗಳಿಗೆ ಪ್ರಸ್ತಾವನೆ ಕಳಿಸಿದ್ದೇವೆ. ಈ ವರ್ಷದ ಬಜೆಟ್‌ನಲ್ಲಿ ಇದರ ಪ್ರಸ್ತಾಪವಾಗಿಲ್ಲ. ಮುಂದಿನ ವರ್ಷ ಆರಂಭದಿಂದಲೇ ಇಲಾಖೆಯ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಆ ಕೆಲಸವನ್ನು ಮಾಡಲು ಪ್ರಯತ್ನಿಸುತ್ತೇವೆ' ಎಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶಿವಾನಂದ್ ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT