ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಕಡುಬಡವರಿಗೆ ಉಚಿತ ಚಿಕಿತ್ಸೆ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕ್ಯಾನ್ಸರ್. ಏಡಿಯ ಕೊಂಬುಗಳು ದೇಹವನ್ನು ಕಚ್ಚಿ ಹಿಡಿದುಕೊಂಡರೆ ಬಿಡಿಸಿಕೊಳ್ಳುವುದು ಸುಲಭವಲ್ಲ; ಅದು ಸಾವಿನ ಮನೆಯ ಕದ ತಟ್ಟಿದಂತೆ. ಎಲ್ಲೋ ಕೆಲವು ಅದೃಷ್ಟವಂತರು ಪಟ್ಟು ಸಡಿಲಗೊಂಡು ಹೊರಬಂದರೂ ಆರ್ಥಿಕವಾಗಿ, ಸಾಮಾಜಿಕವಾಗಿ ಕುಗ್ಗಿ ಹೋಗುತ್ತಾರೆ. ಜೊತೆಗೆ ಎಂದು ಮರಳಿ ಬರುವುದೋ ಎಂಬ ನಿರಂತರ ಭಯ.

ಈ ಏಡಿಗಂತಿಯ (ಕ್ಯಾನ್ಸರ್) ಲಕ್ಷಣವೇ ಹಾಗೆ. ಅಂಟಿಕೊಂಡವರನ್ನು ಬಿಡೆ ಎನ್ನುವ ಧೂರ್ತತನ. ಸುತ್ತಲಿನವರ ಭವಿಷ್ಯವನ್ನೇ ಕತ್ತಲಿಗೆ ನೂಕಿ ಅವಲಕ್ಷಣ ನೋಡುವ ಢಾಂಬಿಕತನ. ಉಳ್ಳವರು, ಅರಿವಿರುವವರು, ಹೈಟೆಕ್‌ನತ್ತ ಕತ್ತೆತ್ತಿ ನೋಡುವ ಸಮರ್ಥರು ಈ ಅರ್ಬುದದ ಹಿಡಿತವನ್ನು ಹಣವನ್ನು ನೀರಿನಂತೆ ಖರ್ಚು ಮಾಡಿ ತೊಲಗಿಸಿಕೊಂಡುಬಿಡುತ್ತಾರೆ. ಅದಕ್ಕೆಂದೇ ಮಹಾನಗರಗಳಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳು ಅಣಬೆಗಳಂತೆ ಹುಟ್ಟಿಕೊಳ್ಳುತ್ತಿವೆ. ಇ್ಲ್ಲಲಿಯೂ ಇಲ್ಲವಾದರೆ ವಿದೇಶಗಳತ್ತ ಮುಖ ಮಾಡುತ್ತಾರೆ.

ಆದರೆ ಕಾಸಿಗೆ ಕಾಸು ಸೇರಿಸಿ, ಎರಡು ಹೊತ್ತು ಗಂಜಿ, ಮೈ ಮುಚ್ಚಿಕೊಳ್ಳುವಷ್ಟು ಬಟ್ಟೆಗೇ ಹೋರಾಡುತ್ತ ಬದುಕೆಂಬ ಬಂಡಿಯನ್ನು ಎಳೆಯುವವರು ಎಲ್ಲಿಗೆ ಹೋಗಬೇಕು? ಸರ್ಕಾರಿ ಆಸ್ಪತ್ರೆಗಳು 20- 30 ವರ್ಷಗಳ ಹಿಂದಿನ ತಂತ್ರಜ್ಞಾನ ಬಳಸಿದರೆ, ತುಕ್ಕು ಹಿಡಿದ ಉಪಕರಣಗಳ ಜೊತೆ ಗುದ್ದಾಡಿದರೆ ಈ ಏಡಿಯ ಹಿಡಿತ ಇನ್ನಷ್ಟು ಬಿಗಿಯಾಗಿ ಕೊರಳಿಗೆ ಉರುಳಿನಂತೆ ಸುತ್ತಿಕೊಳ್ಳುತ್ತದೆಯೇ ಹೊರತು ಜೀವದೊಂದಿಗೆ ಮನೆಗೆ ಮರಳುವ ವಿಶ್ವಾಸವೇ ಕ್ಷೀಣವಾಗಿಬಿಡುತ್ತದೆ.

ಈ ಬಡವರ ಕಣ್ಣೀರನ್ನು ಒಂದಿಷ್ಟು ಒರೆಸಲು, ದುಡ್ಡಿದ್ದವರಿಗೆ ನಿಲುಕುವ ಆಧುನಿಕ ಚಿಕಿತ್ಸಾ ವಿಧಾನ, ದುಬಾರಿ ಔಷಧಿಗಳನ್ನು ಬಡ ಗ್ರಾಮಸ್ಥರು, ಕೂಲಿ ಕಾರ್ಮಿಕರಿಗೂ ದೊರಕುವಂತೆ ಮಾಡಲು ಬೆಂಗಳೂರಿನಲ್ಲೇ ತಲೆಯೆತ್ತುತ್ತಿದೆ ಹೈಟೆಕ್ ಕ್ಯಾನ್ಸರ್ ಆಸ್ಪತ್ರೆ. ಒಂದು ದೂರದೃಷ್ಟಿ, ಅದಕ್ಕೆ ಬೆಂಗಾವಲಾಗಿ ನೆರವು ನೀಡುವ ಹತ್ತಾರು ಕೈಗಳೊಂದಿಗೆ ಹಂತಹಂತವಾಗಿ ಕಣ್ಮುಂದೆ ನಿಂತಿದೆ `ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ~.

ಬೆಂಗಳೂರಿನ ಕೇಂದ್ರ ಭಾಗವಾದ ಬಸವನಗುಡಿಯ ಶಂಕರಪುರಂನ ಶಂಕರಮಠದ ಆವರಣದಲ್ಲಿ ಇದೀಗ ರೆಡಿಯೋಥೆರಪಿ ವಿಭಾಗವನ್ನು ಆರಂಭಿಸಿರುವ `ಶ್ರೀ ಶಂಕರ ಕ್ಯಾನ್ಸರ್ ಪ್ರತಿಷ್ಠಾನ~ದ ಈ ಆಸ್ಪತ್ರೆಯ ಉಳಿದ ಕೆಲವು ವಿಭಾಗಗಳು ಇದೇ ತಿಂಗಳ ಕೊನೆಯೊಳಗೆ ಆರಂಭವಾಗಲಿವೆ.

`400 ಹಾಸಿಗೆಗಳ ಈ ಆಸ್ಪತ್ರೆಯಲ್ಲಿ 35 ಹಾಸಿಗೆಗಳನ್ನು ಬಡವರಿಗೆ ಸಂಪೂರ್ಣ ಉಚಿತ ಚಿಕಿತ್ಸೆಗೆ ಮೀಸಲಿಡಲಾಗಿದೆ. ಸುಮಾರು 120 ಹಾಸಿಗೆಗಳನ್ನು ಬಡವರಿಗೆ ರಿಯಾಯ್ತಿ ದರದಲ್ಲಿ ನೀಡಲಾಗುತ್ತದೆ. ಈ ಉಚಿತ ಚಿಕಿತ್ಸಾ ವೆಚ್ಚವೇ 5 ಕೋಟಿ ರೂಪಾಯಿಯಷ್ಟು ಆಗಲಿದೆ. ಶೃಂಗೇರಿ ಶಾರದಾಪೀಠದ ಭಾರತೀತೀರ್ಥ ಸ್ವಾಮೀಜಿ ಒಂದು ಎಕರೆಗಿಂತಲೂ ಅಧಿಕ ವಿಸ್ತೀರ್ಣದ ಜಾಗವನ್ನು 2009ರಲ್ಲೇ ನೀಡಿದ್ದು, ಸಂಪೂರ್ಣ ದಾನಿಗಳ ನೆರವಿನಿಂದಲೇ ಸುಮಾರು 80 ಕೋಟಿ ವೆಚ್ಚದ ಆಸ್ಪತ್ರೆ ನಿರ್ಮಾಣವಾಗುತ್ತಿದೆ~ ಎಂದು ವಿವರ ಬಿಚ್ಚಿಡುತ್ತಾರೆ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ, ಹೆಸರಾಂತ ಕ್ಯಾನ್ಸರ್ ತಜ್ಞ ಡಾ.ಬಿ.ಎಸ್.ಶ್ರೀನಾಥ್.

ನೆಲಮಹಡಿಯಲ್ಲಿ ರೇಡಿಯೊಥೆರಪಿ ಉಪಕರಣಗಳನ್ನು ಜೋಡಿಸಲಾಗಿದ್ದು ನಿತ್ಯ ಸರಾಸರಿ 50 ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ಕಾರ‌್ಯ ಆರಂಭವಾಗಿದೆ. ಈ ಉಪಕರಣವನ್ನು ಅಮೆರಿಕದಿಂದ ತರಿಸಲಾಗಿದ್ದು ಇದರ ಖರ್ಚು ಸುಮಾರು 18 ಕೋಟಿ ರೂಪಾಯಿ. ಜೊತೆಗೆ ಈ ಉಪಕರಣವಿರುವ ಕೊಠಡಿಯ ಗೋಡೆ, ಛಾವಣಿಯ ದಪ್ಪ 8 ಅಡಿ. ಹೀಗಾಗಿ ಇದಕ್ಕೆ ಹೆಚ್ಚು ವೆಚ್ಚ ತಗುಲಿದೆ.

`ಮೆಕೆನ್ಜಿ ಅಧ್ಯಯನದ ಪ್ರಕಾರ ಭಾರತದಲ್ಲಿ ಒಬ್ಬ ಹೃದ್ರೋಗಿಗೆ ಚಿಕಿತ್ಸೆ ಕೊಡಿಸಬೇಕಾದರೆ ಸರಾಸರಿ ಖರ್ಚು 29 ಸಾವಿರ ರೂಪಾಯಿ ಆಗುತ್ತದೆ. ಆದರೆ ಒಬ್ಬ ಕ್ಯಾನ್ಸರ್ ರೋಗಿಗೆ ಮಾಡಬೇಕಾದ ಸರಾಸರಿ ವೆಚ್ಚ 3.5 ಲಕ್ಷ ರೂಪಾಯಿ! ಈ ಹಣವನ್ನು ಬಡವ ಎಲ್ಲಿಂದ ಹೊಂದಿಸಲು ಸಾಧ್ಯ? ಬಡವರಿಗೆ ಈ ಕ್ಯಾನ್ಸರ್ ಬಂದುಬಿಟ್ಟರೆ ಬದುಕುವ ಅವಕಾಶವೇ ಇಲ್ಲವೆ? ಈಗ ಕ್ಯಾನ್ಸರ್ ಕಾಯಿಲೆ ಗುಣವಾಗುವ ಸಾಧ್ಯತೆ ಶೇ 46ರಷ್ಟು. ಆದರೆ ಹಣ ಇರುವವರು ಮಾತ್ರ ಬದುಕುತ್ತಾರೆ ಎನ್ನುವಂತಾಗಿಬಿಟ್ಟಿದೆ.

ಹೀಗಾಗಿ ಬಡವರಿಗೂ ಇಂತಹ ಆಧುನಿಕ ಚಿಕಿತ್ಸಾ ಸವಲತ್ತು ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ಈ ಆಸ್ಪತ್ರೆಯ ನಿರ್ಮಾಣಕ್ಕೆ ಕೈ ಹಾಕಿದ್ದೇವೆ~ ಎನ್ನುತ್ತಾರೆ ಡಾ.ಶ್ರೀನಾಥ್.

`ಗರ್ಭಕೊರಳಿನ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಪ್ರಮಾಣ ಜಾಸ್ತಿ ಇರುವ ಗ್ರಾಮೀಣ ಪ್ರದೇಶದಲ್ಲಿ ಕ್ಯಾನ್ಸರ್ ತಪಾಸಣೆ ಶಿಬಿರಗಳನ್ನು ಏರ್ಪಡಿಸಲಾಗುವುದು, ಗ್ರಾಮೀಣ ವೈದ್ಯರಿಗೆ ಈ ಬಗ್ಗೆ ತರಬೇತಿ ನೀಡಲಾಗುವುದು. ಅರಿವು ಮೂಡಿಸಲು `ಕ್ಯಾನ್ ಏಡ್~ ಎಂಬ ಚಳವಳಿ ಆರಂಭಿಸಲಾಗಿದೆ. ಆಸ್ಪತ್ರೆಯಲ್ಲೂ ಒಂದು ಸಭಾಂಗಣವನ್ನು `ಸಮುದಾಯ ಮತ್ತು ಕ್ಯಾನ್ಸರ್ ತಡೆ~ ಕಾರ‌್ಯಕ್ರಮಕ್ಕಾಗಿ ಮೀಸಲಿಡಲಾಗಿದೆ~ ಎಂದು ವಿವರಿಸುತ್ತಾರೆ.

ಈ ಆಸ್ಪತ್ರೆಯಲ್ಲಿ ಬಂದ ಲಾಭವನ್ನು ಬಡರೋಗಿಗಳ ಉಚಿತ ಚಿಕಿತ್ಸೆಗೇ ಬಳಸಲಾಗುವುದು. ಅವರ ಪ್ರಯತ್ನ ಯಶಸ್ವಿಯಾಗಿ ಉಳಿದವರಿಗೂ ಪ್ರೇರಣೆಯಾಗಿ ಬೇರೆ ಕಡೆ ಇಂತಹ ಆಸ್ಪತ್ರೆಗಳನ್ನು ತೆರೆದರೆ ಭಾರತದ ಬಡ ರೋಗಿಗಳು ಒಂದಿಷ್ಟು ಧೈರ್ಯ, ವಿಶ್ವಾಸದಿಂದ ಚಿಕಿತ್ಸೆ ತೆಗೆದುಕೊಳ್ಳಲು ಮುಂದಾಗಬಹುದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT