ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಸ್ವಚ್ಛತೆ ಎಂದರೆ ಗೊತ್ತೇ ಇಲ್ಲ!

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಮನೆಗೆ ಅಂಟಿಕೊಂಡೇ ತಿಪ್ಪೆ. ಎಲ್ಲೆಲ್ಲೂ ಹರಡಿಕೊಂಡ ಕಸ. ರಸ್ತೆ ಮೇಲೆಯೇ ಹರಿಯುವ ಚರಂಡಿ ನೀರು. ಹಾದಿಯ ಇಕ್ಕೆಲಗಳೇ ಶೌಚಾಲಯ. ಕೋಳಿ- ಹಂದಿ, ಮಕ್ಕಳು  ಒಟ್ಟೊಟ್ಟಿಗೆ...

ಜಮಖಂಡಿ, ಹುನಗುಂದ, ದೇವದುರ್ಗ ತಾಲ್ಲೂಕುಗಳ ಹಲವು ಗ್ರಾಮಗಳ ದಯನೀಯ ಸ್ಥಿತಿ ಇದು.

ಬಡತನ, ದಾರಿದ್ರ್ಯ. ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ, ಮಹಿಳೆಯರಲ್ಲಿ ರಕ್ತಹೀನತೆ. ನೈರ್ಮಲ್ಯದ ಬಗ್ಗೆ ಎಳ್ಳಷ್ಟೂ ಕಾಣಸಿಗದ ಕಾಳಜಿ. ಪಕ್ಕದಲ್ಲೇ ಕಾಲುವೆ ಹರಿಯುತ್ತದೆ; ಕುಡಿಯಲು ಶುದ್ಧ ನೀರು ಇಲ್ಲ. ಕೆಲವು ಗ್ರಾಮಗಳಿಗೆ ಬಸ್ ಸೌಕರ್ಯದ ಭಾಗ್ಯ ಇನ್ನೂ ಒಲಿದಿಲ್ಲ! 

ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಅಧಿಕ. ಈ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಸುತ್ತಾಡಿದಾಗ ಈ ಕೊರತೆಯೊಂದಿಗೆ ಇನ್ನೂ ಹತ್ತಾರು ಕೊರತೆಗಳು, ಸಮಸ್ಯೆಗಳು ಕಣ್ಣಿಗೆ ರಾಚಿದವು.

ಹುನಗುಂದ ತಾಲ್ಲೂಕಿನ ಕಮತಗಿ ಸುಮಾರು 20 ಸಾವಿರ ಜನಸಂಖ್ಯೆಯುಳ್ಳ ದೊಡ್ಡ ಗ್ರಾಮ. ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಈ ಊರಿನ ಹೆಸರನ್ನು ಸೂಚಿಸಲಾಗಿದೆ. ಹಾಗಂತ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹೇಳಿದರು. ಆದರೆ ಗ್ರಾಮದ ನೈರ್ಮಲ್ಯ ಸ್ಥಿತಿ ಇದಕ್ಕೆ ವಿರುದ್ಧ ದಿಕ್ಕಿಗೆ ಮುಖಮಾಡಿದೆ ಎಂಬುದಕ್ಕೆ ಊರಿನ ನಟ್ಟನಡುವೆ ಸಣ್ಣ ತೊರೆಯಂತೆ ಹರಿಯುತ್ತಿದ್ದ ಚರಂಡಿ ನೀರೇ ಸಾಕ್ಷಿ ಒದಗಿಸಿತು. ಗ್ರಾಮದಲ್ಲಿ ನೈರ್ಮಲ್ಯದ ಬಗ್ಗೆ ಗೋಡೆ ಬರಹ ಕಂಡಿತು. ಆದರೆ, ಬರಹದ ಆಶಯವನ್ನು ಕ್ರಿಯೆಗಿಳಿಸಿದ ಒಂದೇ ಒಂದು ನಿದರ್ಶನ ಗೋಚರಿಸಲಿಲ್ಲ.

ಅಂಗನವಾಡಿ ಕೇಂದ್ರವೊಂದರ ಮುಂದೆಯೂ ಅದೇ ಕೊಳಚೆ ನೀರು. ಅಲ್ಲೇ ಮಕ್ಕಳ ಊಟ-ಆಟ. ಮತ್ತೊಂದು ಅಂಗನವಾಡಿ ಕೇಂದ್ರದ ಸ್ಥಿತಿ ಇನ್ನಷ್ಟು ದಾರುಣ. ಪಕ್ಕದಲ್ಲೇ ಇದ್ದ ಕಸದ ರಾಶಿಗೆ ಹಂದಿಗಳು ಮುತ್ತಿಕೊಂಡಿದ್ದವು. ಕಟ್ಟಡಕ್ಕೆ ತಾಗಿಕೊಂಡಿರುವ ಹಿಂಬದಿಯ ಬಯಲಿಗೆ ತಂಬಿಗೆ ಹಿಡಿದು ತಲೆ ತಗ್ಗಿಸಿಕೊಂಡು ಹೊರಟಿದ್ದರು ಮಹಿಳೆಯರು. ಪಟ್ಟಣ ಪಂಚಾಯ್ತಿ ಆಗಿ ತನ್ನನ್ನು ಎತ್ತರಿಸಿಕೊಳ್ಳಲು ಅಣಿಯಾಗಿರುವ ಗ್ರಾಮದ ಸ್ಥಿತಿ ಇದು!

ದೇವದುರ್ಗ ತಾಲ್ಲೂಕಿನ ಮರಕಮದಿನ್ನಿ ಸುಮಾರು 1,000 ಜನಸಂಖ್ಯೆ ಇರುವ ಗ್ರಾಮ. ಊರಿನ ಪಕ್ಕದಲ್ಲೇ ತುಂಗಭದ್ರಾ ಎಡದಂಡೆ ಕಾಲುವೆ ಹರಿಯುತ್ತದೆ. ಈ ಕಾಲುವೆ ನೀರನ್ನೇ ಗ್ರಾಮದ ಜನರು ಕುಡಿಯಲು ಬಳಸುತ್ತಿದ್ದಾರೆ; ಆದರೆ, ಸಣ್ಣ ಅಳುಕಿನೊಂದಿಗೆ!

`ಕಾಲುವೆಯಲ್ಲಿ ನೀರಿನೊಂದಿಗೆ ಆಗಾಗ್ಗೆ ಹೆಣ, ದನ-ಕರುಗಳ ಮೃತದೇಹಗಳೂ ಬರುತ್ತವೆ. ಕೊಳೆತ ದೇಹಗಳು ಕೆಲವೊಮ್ಮೆ ವಾರಗಟ್ಟಲೆ ಅಲ್ಲೇ ಇದ್ದುಬಿಡುತ್ತವೆ~ ಎಂದು ಮುದ್ದುರಂಗಣ್ಣ ಕಾರಣ ಬಿಡಿಸಿಟ್ಟರು. ಇದರಿಂದ ಮೂರು-ನಾಲ್ಕು ಬಾರಿ ವಾಂತಿ-ಭೇದಿ ಕೂಡ ಆಗಿದೆಯಂತೆ. ಕಾಲುವೆ ದಂಡೆಗೆ ಹೋಗಿ ನೋಡಿದರೆ ಹರಿವ ನೀರಿನಲ್ಲೇ ಮಹಿಳೆಯರು ಬಟ್ಟೆ ತೊಳೆಯುತ್ತಿದ್ದರು.

ಮಧುಮೇಹದಿಂದ ಬಳಲುತ್ತಿದ್ದ ಇದೇ ಊರಿನ 15 ವರ್ಷದ ಬಾಲಕ ನಾಗರಾಜ ಕಳೆದ ಅಕ್ಟೋಬರ್‌ನಲ್ಲಿ ಸಾವಪ್ಪಿದ್ದಾನೆ. ಮಧುಮೇಹದೊಂದಿಗೆ ಅಪೌಷ್ಟಿಕತೆಯೂ ಸೇರಿದ ಪರಿಣಾಮ ಈ ಸಾವು ಸಂಭವಿಸಿದೆ ಎಂದು ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸೂಚನೆ ಮೇರೆಗೆ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿಶ್ವನಾಥ ವಿ. ಅಂಗಡಿ ಅವರು ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿ ವರದಿ ನೀಡಿದ್ದಾರೆ.

ಕಾಲುವೆಯ ನೀರನ್ನೂ ಪರಿಶೀಲಿಸಿದ್ದಾರೆ. ಆ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಶುದ್ಧೀಕರಿಸಿದ ನೀರು ಪೂರೈಸಲು ಜಿಲ್ಲಾ ಆಡಳಿತ ಕ್ರಮ ಕೈಗೊಳ್ಳಬೇಕು. ಗ್ರಾಮಕ್ಕೆ ನೀರು ಪೂರೈಸಲು 50 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ ಅದು ವ್ಯರ್ಥವಾಗಿಬಿದ್ದಿದೆ. ಅದನ್ನೂ ಬಳಕೆಯೋಗ್ಯಗೊಳಿಸಬೇಕು ಎಂದು ಸೂಚಿಸಿದ್ದಾರೆ.

ಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರ, 10 ಕಿ.ಮೀ. ದೂರದ ಸಿರಿವಾರದಲ್ಲಿ ಇದೆ. ಹತ್ತಿರದಲ್ಲೇ ಆಸ್ಪತ್ರೆ ಇದ್ದಿದ್ದರೆ ಮಗನನ್ನು ಉಳಿಸಿಕೊಳ್ಳಬಹುದಿತ್ತು ಎಂದು ನಾಗರಾಜನ ತಾಯಿ ಪಾರ್ವತಿ ಅವರು ಗೋಳಿಟ್ಟರು.

ಕಾಲುವೆ ನೀರಿದೆ. ಕೃಷಿಗೆ ಇದರಿಂದ ಪ್ರಯೋಜನ ಆಗಿಲ್ಲವೇ ಎಂದು ವೃದ್ಧರೊಬ್ಬರನ್ನು ಪ್ರಶ್ನಿಸಿದರೆ, `ಜಮೀನಿದ್ದವರಿಗೆ ಅನುಕೂಲ. ಭೂರಹಿತರಿಗೆ ಏನು ಬಂತು? ಆಗಲೂ ಕೂಲಿ ಈಗಲೂ ಕೂಲಿ. ಅದು ಕೂಡ ಸಿಕ್ಕಿದರೆ ಉಂಟು ಇಲ್ಲದಿದ್ದರೆ ಇಲ್ಲ~ ಎಂದರು.

ಜಮಖಂಡಿಯ ಅಂಬೇಡ್ಕರ ವೃತ್ತದಲ್ಲಿ `ಶ್ರೀ ಶ್ರೀನಿವಾಸ ಚಿಕ್ಕಮಕ್ಕಳ ಆಸ್ಪತ್ರೆ~ ಇದೆ. ಈ ಭಾಗದಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಹೆಚ್ಚಿಗೆ ಇರಲು ಕಾರಣವಾದ ಅಂಶಗಳ ಬಗ್ಗೆ ವೈದ್ಯರ ಅಭಿಪ್ರಾಯ ಪಡೆಯಲು ಒಳಗೆ ಹೋದರೆ ಕಾಲಿಡಲು ಜಾಗವಿಲ್ಲದಷ್ಟು ಜನ. ಮಕ್ಕಳನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ತಮ್ಮ ಸರದಿಗಾಗಿ ಕಾಯುತ್ತಿದ್ದರು ಅಮ್ಮಂದಿರು!

ಶಿಶುತಜ್ಞ ಡಾ.ಆರ್.ಎನ್. ಸೋನವಾಲ್ಕರ ಅವರು ಇದರ ನಡುವೆಯೇ ಸ್ವಲ್ಪ ಬಿಡುವು ಮಾಡಿಕೊಂಡು `ಪ್ರಜಾವಾಣಿ~ ಜತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. `ಹೈಜೀನ್ (ನೈರ್ಮಲ್ಯ) ಪ್ರಾಬ್ಲಂ ಬಹಳ ಐತಿ. ವರ್ಕಿಂಗ್ ಕ್ಲಾಸ್ ಹೆಚ್ಚು. ಕುಡಿಯುವ ನೀರಿನ ಬಗ್ಗೆನೂ ಕಾಳಜಿ ಮಾಡೋಲ್ಲ. ಹಣ್ಣು-ಹಂಪಲುಗಳನ್ನೂ ಸೇವಿಸುವುದಿಲ್ಲ~ ಎಂದರು.

ದಿನಕ್ಕೆ ಸಿಗುವುದೇ 90 ರೂಪಾಯಿ ಕೂಲಿ. ಅದರಲ್ಲಿ ಹಣ್ಣು-ಹಂಪಲು ಹೇಗೆ ಖರೀದಿಸಲಿ? ಅವರಿವರ ಹಿತ್ತಿಲಲ್ಲಿ ತರಕಾರಿ, ಗುಡ್ಡದಲ್ಲಿ ಹಣ್ಣು ಸಿಗುವ ಕಾಲ ಹೋಗಿದೆ. ಎಲ್ಲವನ್ನೂ ಖರೀದಿಸಬೇಕಾಗಿದೆ ಎಂದು ಅಂಬಣ್ಣ, ಬದಲಾದ ಕೃಷಿ ಪದ್ಧತಿ ಮತ್ತು ಗ್ರಾಮೀಣ ಬದುಕಿಗೆ ಕನ್ನಡಿ ಹಿಡಿದರು.

ಶೌಚಾಲಯಗಳ ಬಗ್ಗೆ ಪ್ರಸ್ತಾಪಿಸಿದರೆ, ಒಬ್ಬೊಬ್ಬರದು ಒಂದೊಂದು ಬಗೆಯ ಪ್ರತಿಕ್ರಿಯೆ. ಅದಕ್ಕೆ ಬಕೆಟ್‌ಗಟ್ಟಲೆ ನೀರು ಎಲ್ಲಿಂದ ತರುವುದು ಎಂಬ ಮೂಲ ಪ್ರಶ್ನೆಯನ್ನು ಕೆಲವರು ಮುಂದಿಟ್ಟರು. ತಮಗೆ ಅದು ಒಗ್ಗುವುದಿಲ್ಲ ಎಂಬ ಧಾಟಿಯಲ್ಲಿ ಉತ್ತರಿಸಿದರು ರುದ್ರಪ್ಪ. ಮನೆ ಪಕ್ಕದಲ್ಲಿ ಜಾಗ ಇಲ್ಲ ಎಂದರು ಶರಣಬಸಪ್ಪ.
ಈ ಭಾಗದ ಇತರೆ ಗ್ರಾಮಗಳ ಸ್ಥಿತಿಯೂ ಇದಕ್ಕಿಂತ ಭಿನ್ನವೇನಲ್ಲ. ಸಮಸ್ಯೆಗಳೂ ರಾಶಿ ರಾಶಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT