ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿದೆ ಕಾರ್ ಡಿಸ್ಕೌಂಟ್

ವರ್ಷಾಂತ್ಯಕ್ಕೆ ಕಾರ್ ಮಾರುವ ತಂತ್ರ, ಗ್ರಾಹಕರಿಗೆ ಲಾಭ
Last Updated 4 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವರ್ಷಾಂತ್ಯ ಬರುತ್ತಿದ್ದಂತೆ ಬಹುತೇಕ ಎಲ್ಲ ರೀತಿಯ ಉತ್ಪನ್ನಗಳ ಡಿಸ್ಕೌಂಟ್ ಮಾರಾಟ ಶುರುವಾಗುತ್ತದೆ. ಸಾಮಾನ್ಯವಾಗಿ ಬಟ್ಟೆ, ಮೊಬೈಲ್ ಫೋನ್ ಇತ್ಯಾದಿಗಳನ್ನು ಎಂಡ್ ಆಫ್ ದಿ ಇಯರ್ ಸೇಲ್ ಎಂದು ರಿಯಾಯಿತಿ ದರದಲ್ಲಿ ಮಾರುತ್ತಾರೆ.

ತಮ್ಮಲ್ಲಿ ಉಳಿದುಕೊಂಡಿರುವ ಹಳೆಯ ಉತ್ಪನ್ನಗಳನ್ನು ಸಾಗಿಹಾಕುವುದು ಇದರ ಮೂಲ ಉದ್ದೇಶ. ಇದು ವಾಹನ ಕ್ಷೇತ್ರವನ್ನೂ ಬಿಟ್ಟಿಲ್ಲ. ವರ್ಷದ ಕೊನೆಯಲ್ಲಿ ನಾ ಮುಂದು ತಾ ಮುಂದು ಎಂಬಂತೆ ತಮ್ಮ ಹಳೆಯ ಕಾರ್‌ಗಳನ್ನು ಕಡಿಮೆ ಬೆಲೆಗೆ ಮಾರುತ್ತಾರೆ. ಆಗ ಒಳ್ಳೆಯ ಕಾರ್ ಅನ್ನು ಆಯ್ಕೆ ಮಾಡಿ ಕೊಳ್ಳುವವನು ನಿಜಕ್ಕೂ ಜಾಣ!

ಭಾರತದಲ್ಲೂ ಅನೇಕ ಕಾರ್ ಕಂಪೆನಿಗಳು ಈ ರೀತಿ ತಮ್ಮ ಕಾರ್‌ಗಳನ್ನು ರಿಯಾಯಿತಿ ದರದಲ್ಲಿ ಮಾರಲು ಮುಂದಾಗಿವೆ. ಸಾಮಾನ್ಯವಾಗಿ ವರ್ಷ ಮುಗಿಯಲು ಅಥವಾ ಆರಂಭವಾಗಲು ಒಂದೆರಡು ತಿಂಗಳು ಇವೆ ಎಂಬಂತೆ ಹೊಸ ಕಾರ್‌ಗಳನ್ನು ಕೊಳ್ಳಲು ಕೆಲವರು ಇಷ್ಟ ಪಡುವುದಿಲ್ಲ. ಏಕೆಂದರೆ ಹೊಸ ಕಾರ್ ಆದರೂ ಮಾಡೆಲ್ ಹಳೆಯದಾಗುತ್ತದೆ ಎಂಬ ಲೆಕ್ಕಾಚಾರ.

ಕಾರ್ ಅನ್ನು ಮಾರುವಾಗ ೨೦೧೪ನೇ ಮಾಡೆಲ್ ಎಂದರೆ ಹೆಚ್ಚು ಬೆಲೆಗೆ ಕಾರ್ ಹೋಗುತ್ತದೆ. ಅದೇ ೨೦೧೩ ಎಂದರೆ ಹಳೆಯದಾಯಿತಲ್ಲ. ಹಾಗೆಯೇ ಬೆಲೆಯೂ ಕಡಿಮೆ. ಆದರೆ ಗ್ರಾಹಕರಿಗೆ ಬೆಲೆಯಲ್ಲಿ ರಿಯಾಯಿತಿ ತೋರಿ ಆಮಿಷ ಒಡ್ಡಿದಲ್ಲಿ ಕೊಳ್ಳಲು ಮುಂದಾಗುತ್ತಾರೆ. ಅದೇ ರೀತಿ ಅನೇಕ ಕಾರ್ ಕಂಪೆನಿಗಳು ಆಮಿಷ ಒಡ್ಡಿವೆ. ಜಾಣ್ಮೆ ಬಳಸಿ ಕಾರ್ ಕೊಳ್ಳುವುದು ಗ್ರಾಹಕರಿಗೆ ಇರುವ ಸವಾಲು. ಜತೆಗೆ ಉತ್ತಮ ಅವಕಾಶ.

ಬರೋಬ್ಬರಿ 8 ಕಂಪೆನಿಗಳ ಆಯ್ಕೆ!
ಹೌದು. ಗ್ರಾಹಕರಿಗೆ ತಮಗೆ ಬೇಕಾದ ಕಾರನ್ನು ಆಯ್ಕೆ ಮಾಡಿಕೊಳ್ಳಲು ವಿವಿಧ ೮ ಪ್ರತಿಷ್ಠಿತ ಕಂಪೆನಿಗಳು ತಮ್ಮ ಕಾರ್‌ಗಳನ್ನು ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಇಟ್ಟಿವೆ. ಅವುಗಳ ಕಿರು ಮಾಹಿತಿ ಇಲ್ಲಿದೆ.

ಆಡಿ
ಆಡಿ ತನ್ನ ಕ್ಯೂ-೭ ಡೀಸೆಲ್ ಲಕ್ಷುರಿ ಕಾರ್‌ನ ಮೇಲೆ ಬರೋಬ್ಬರಿ ೨ ಲಕ್ಷ ರೂಪಾಯಿ ರಿಯಾಯಿತಿ ನೀಡಿದೆ. ಕ್ಯೂ ೫ ಎಸ್‌ಯುವಿಗೆ ೫ ಲಕ್ಷ, ಎ೮ ೫ ಲಕ್ಷುರಿ ಸೆಡಾನ್ ಮೇಲೆ ೨೦ ಲಕ್ಷ ರೂಪಾಯಿ ರಿಯಾಯಿತಿ ನೀಡಿವೆ. ಆದರೆ ಇವೆಲ್ಲ ಜನಸಾಮಾನ್ಯರ ಕಾರ್‌ಗಳಲ್ಲ. ಇವುಗಳ ಪ್ರಾರಂಭಿಕ ಬೆಲೆಯೇ ೩೦ ಲಕ್ಷ ರೂಪಾಯಿಗಳು. ಇವನ್ನು ಕೊಳ್ಳುವ ಗ್ರಾಹಕರೂ ಇರುವುದರಿಂದ ಒಂದು ಕೈ ನೋಡುವವರು ಮನಸ್ಸು ಮಾಡಬಹುದು!

ಮಾರುತಿ ಸುಜುಕಿ
ವರ್ಷಾಂತ್ಯ ಮಾತ್ರವಲ್ಲದೇ ವರ್ಷದಾದ್ಯಂತ ರಿಯಾಯಿತಿ ಕೊಡುವ ಕಾರ್ ಮಾರುತಿ ಸುಜುಕಿ. ಈಗ ಎಸ್ಟಿಲೊ, ವ್ಯಾಗನ್ ಆರ್ ಕಾರ್‌ಗಳ ಮೇಲೆ ವರ್ಷಾಂತ್ಯದ ರಿಯಾಯಿತಿ ಪ್ರಕಟಿಸಿದೆ. ಎಸ್ಟಿಲೊಗೆ ೩೫೦೦೦ ರೂಪಾಯಿ, ವ್ಯಾಗನ್‌ಆರ್‌ಗೆ ೫೩೦೦೦ ರೂಪಾಯಿ ರಿಯಾಯಿತಿ ನೀಡಿದೆ. ಇದರ ಜತೆ ಕಾರ್ ಎಕ್ಸ್‌ಚೇಂಜ್‌ಗೆ ಸುಮಾರು ೬೦೦೦೦ ರೂಪಾಯಿವರೆಗೆ ರಿಯಾಯಿತಿ ಸಿಗುತ್ತಿರುವುದು ವಿಶೇಷ.

ಬಿಎಂಡಬ್ಲ್ಯೂ
ಬಿಎಂಡಬ್ಲ್ಯೂ ತನ್ನ ೫ ಸರಣಿ ಕಾರ್‌ಗಳ ಮೇಲೆ ೫ ಲಕ್ಷ ರೂಪಾಯಿ ರಿಯಾಯಿತಿ ನೀಡಿದೆ. ಬಿಎಂಡಬ್ಲ್ಯೂ ೩ ಹಾಗೂ ಎಕ್ಸ್೧ ಸರಣಿಗಳ ಮೇಲೆ ೩.೫ ಲಕ್ಷ ರೂಪಾಯಿ ರಿಯಾಯಿತಿ ಘೋಷಿಸಿದೆ.

ಮರ್ಸಿಡೆಸ್ ಬೆನ್ಸ್
ಮರ್ಸಿಡೆಸ್ ಬೆನ್ಸ್ ಕಾರ್‌ನ ಎ ಕ್ಲಾಸ್ ಕಾರ್‌ಗಳಿಗೆ ೧ ರಿಂದ ೧.೫ ಲಕ್ಷ ರೂಪಾಯಿ ರಿಯಾಯಿತಿ ಇದೆ. ಮರ್ಸಿಡೆಸ್ ಬೆನ್ಸ್ ಸಿ ಕ್ಲಾಸ್ ಸಲೂನ್ ಕಾರ್‌ಗಳ ಮೇಲೆ ೩.೫ ರಿಂದ ೫ ಲಕ್ಷ ರೂಪಾಯಿ ರಿಯಾಯಿತಿ ಇದೆ.

ಹುಂಡೈ
ಹುಂಡೈನ ಎಲಾಂಟ್ರಾ ಕಾರ್‌ಗಳಿಗೆ ೪೦ ಸಾವಿರ ರೂಪಾಯಿ ರಿಯಾಯಿತಿ ಪ್ರಕಟಿಸಿದೆ. ತನ್ನ ಸೊನಾಟಾ ಕಾರ್‌ಗಳಿಗೂ ೧ ರಿಂದ ೧.೫ ರೂಪಾಯಿ ರಿಯಾಯಿತಿ ಪ್ರಕಟಿಸಿದೆ. ಈ ಕಾರ್‌ಗಳ ಮಾರಾಟ ಇತ್ತೀ ಚೆಗೆ ತೀರಾ ಕಡಿಮೆಯಾಗಿದೆ ಎಂಬುದನ್ನು ಗ್ರಾಹಕರು ಗಮನಿಸಬೇಕು.

ಎಸ್‌ಸಾಂಗ್‌ಯಾಂಗ್ ರೆಕ್ಸ್‌ಸ್ಟನ್
ಮಹಿಂದ್ರಾ ಅಂಡ್ ಮಹಿಂದ್ರಾ ಆಮದು ಮಾಡಿಕೊಳ್ಳುತ್ತಿರುವ ಎಸ್‌ಸಾಂಗ್‌ಯಾಂಗ್ ರೆಕ್ಸ್‌ಸ್ಟನ್ ಎಸ್‌ಯುವಿ ಲಕ್ಷುರಿ ವಾಹನಕ್ಕೆ ೫೦ ಸಾವಿರ ರೂಪಾಯಿ ರಿಯಾಯಿತಿ ಇದೆ. ಟಯೋಟ ಫಾರ್ಚೂನರ್ ಹಾಗೂ ಮಿಟ್ಸುಬಿಷಿ ಪಜೇರೊಗೆ ಸ್ಪರ್ಧೆ ನೀಡುವುದು ಇದರ ಉದ್ದೇಶ.

ಟಯೋಟ
ಟಯೋಟ ತನ್ನ ಕ್ಯಾಮ್ರಿ ಕಾರ್‌ಗೆ ೪೦ ಸಾವಿರ ರೂಪಾಯಿ ರಿಯಾಯಿತಿ ನೀಡಿದೆ. ಕರೋಲಾ ಆಲ್ಟಿಸ್ ಸಲೂನ್‌ಗೂ ೫೦ ಸಾವಿರ ರೂಪಾಯಿ ರಿಯಾಯಿತಿ ಕೊಟ್ಟಿದೆ. ಹಾಗೆಯೇ ಫೋಕ್ಸ್‌ವೇಗನ್ ತನ್ನ ಜೆಟ್ಟಾ ಸಲೂನ್‌ಗೆ ೧ ಲಕ್ಷ ರೂಪಾಯಿ ರಿಯಾಯಿತಿ ಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT