ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿನ ಫ್ಯಾಷನ್ ಹೊರಗಿನವರ ಪುಳಕ

ಚೆಲುವಿನ ಚಿತ್ತಾರ
Last Updated 30 ಜುಲೈ 2013, 19:59 IST
ಅಕ್ಷರ ಗಾತ್ರ

ಅಲ್ಲಿ ಫ್ಯಾಷನ್ ಪ್ರಿಯರೆಲ್ಲಾ ಸೇರಿದ್ದರು. ಸಣ್ಣಗೆ ನಗು, ತಣ್ಣನೆ ಮಾತು, ಪಾಶ್ಚಾತ್ಯ ಸಂಗೀತದ ಥಳುಕು ಬಳುಕು. ಅದೊಂದು ಹೊಸ ಜಗತ್ತಿನಂತೆ ಕಾಣಿಸುತ್ತಿತ್ತು. ರೂಪದರ್ಶಿಗಳ ಮೈಮಾಟದತ್ತ ಕಂಡೂ ಕಾಣದಂತೆ ಕುಡಿ ನೋಟ ಬೀರುವ ಹುಡುಗರು, ಬಿಗುಮಾನವಿಲ್ಲದೆ ಸಿಗರೇಟ್ ಸುಡುವ ರೂಪದರ್ಶಿಗಳು, ಹೋಟೆಲ್ ಒಳಗೆ ತಲೆಎತ್ತಿದ ಸ್ಟಾಲ್‌ಗಳು, ಅವುಗಳಲ್ಲಿರುವ ದುಬಾರಿ ವಸ್ತುಗಳ ವಿನ್ಯಾಸದ ಬಗ್ಗೆ ಹೆಂಗಳೆಯರ ಚರ್ಚೆ ನೋಡುಗರಿಗೆ ಸೋಜಿಗವಾದರೂ ಒಂದು ರೀತಿಯ ಮನೋರಂಜನೆ ನೀಡಿತ್ತು. ಇವೆಲ್ಲಾ ಕಳೆದ ವಾರ ನಡೆದ `ಬ್ಲೆಂಡರ್ಸ್ ಪ್ರೈಡ್ ಫ್ಯಾಷನ್' ಶೋನಲ್ಲಿ ಕಂಡ ಝಲಕ್‌ಗಳು.

ಈ ಫ್ಯಾಷನ್ ಶೋಗೆಂದು ದೇಶ ವಿದೇಶಗಳಿಂದ ಜನರು ಆಗಮಿಸಿದ್ದರು. ಭಾರತೀಯ ದಿರಿಸುಗಳು ನೋಡಲು ಸುಂದರ. ಆದರೆ ಧರಿಸಲು ತಮಗೆ ತುಸು ಕಷ್ಟ ಎಂಬುದು ಈ ವಿದೇಶಿಯರ ಅಳಲು. `ಮೆಟ್ರೊ'ದೊಂದಿಗೆ ಮಾತಿಗೆ ಸಿಕ್ಕ ಮೂವರು ವಿದೇಶಿಯರು ಫ್ಯಾಷನ್ ಶೋ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ...

ಕೂಲ್ ಕೂಲ್
ಕಳೆದ ಎರಡು ವರ್ಷದಿಂದ ಇಲ್ಲಿಯೇ ಇದ್ದೇನೆ. ಸೀರೆ ಬಗ್ಗೆ ನನಗೆ ಒಲವಿಲ್ಲ. ರಷ್ಯಾದಲ್ಲಿ ಈ ರೀತಿಯ ಬಟ್ಟೆ ಧರಿಸುವುದೂ ವಿರಳ. ಹಗುರವಾದ, ತೆಳುವಾದ ಬಟ್ಟೆಗೇ ಆದ್ಯತೆ. ಈ ಸೀರೆಗಳನ್ನು ಉಡುವುದು ಸ್ವಲ್ಪ ಕಷ್ಟದ ಕೆಲಸ. ಇಲ್ಲಿನ ಫ್ಯಾಷನ್ ಶೋಗಳಲ್ಲೂ ತುಂಬಾ ವ್ಯತ್ಯಾಸವಿದೆ. ಇಷ್ಟೊಂದು ವೈವಿಧ್ಯ ನಮ್ಮ ದೇಶದ ಫ್ಯಾಷನ್ ಶೋಗಳಲ್ಲಿ ಊಹಿಸಿಕೊಳ್ಳುವುದೂ ಸಾಧ್ಯವಿಲ್ಲ. ಇಲ್ಲಿ ಬಣ್ಣಬಣ್ಣದ ಉಡುಪುಗಳನ್ನು ಧರಿಸುತ್ತಾರೆ. ನೋಡುವುದಕ್ಕೂ ಚೆನ್ನಾಗಿ ಕಾಣುತ್ತದೆ.

ರೂಪದರ್ಶಿಗಳು ತುಂಬಾ ಚೆನ್ನಾಗಿದ್ದಾರೆ. ಯಾವುದೇ ಬಟ್ಟೆ ಧರಿಸಿದರೂ ಅವರು ಸುಂದರವಾಗಿ ಕಾಣುತ್ತಾರೆ. ಫ್ಯಾಷನ್ ಶೋ ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ.

ನನಗೆ ಇಲ್ಲಿ ತುಂಬಾ ಜನ ಸ್ನೇಹಿತರಿದ್ದಾರೆ. ಇಲ್ಲಿ ಸಮಯ ಕಳೆಯಲು ಒಳ್ಳೆಯ ಜಾಗವಿದೆ. ಕೂಲ್ ಸಿಟಿ.
-ಅನ್ನಾ, ರಷ್ಯಾ

ಸೀರೆ ಇಷ್ಟ, ತೊಡಲು ಕಷ್ಟ
ನನ್ನ ಸಂಗಾತಿ ಜೋಸೆಫ್ ಬೆಂಗಳೂರಿಗೆ ಕೆಲಸದ ಮೇಲೆ ಬಂದಿದ್ದಾರೆ. ಹಾಗಾಗಿ ರಜೆ ಕಳೆಯಲು ಜರ್ಮನಿಯಿಂದ ಈ ನಗರಕ್ಕೆ ಬಂದಿದ್ದೇನೆ. ಇಂಡಿಯಾದಲ್ಲಿರುವ ಫ್ಯಾಷನ್ ಶೋಗೂ, ಜರ್ಮನಿಯಲ್ಲಿ ನಡೆಯುವ ಫ್ಯಾಷನ್ ಶೋಗೂ ಅಜಗಜಾಂತರ.

ಇಲ್ಲಿ ವಿವಿಧ ಬಣ್ಣದ ಉಡುಪುಗಳನ್ನು ಬಳಸುತ್ತಾರೆ. ಸೀರೆ, ಸಲ್ವಾರ್ ಮೇಲೆ ಚಿತ್ತಾಕರ್ಷಕ ಕುಸುರಿ ಕೆಲಸಗಳನ್ನು ನೋಡಿದಾಗ ತುಂಬಾ ಖುಷಿಯಾಗುತ್ತದೆ. ಇದನ್ನೆಲ್ಲಾ ಹಾಕಿಕೊಂಡು ಹೇಗೆ ನಡೆಯುತ್ತಾರೆ ಎಂದು ಆಶ್ಚರ್ಯ ಕೂಡ ಆಗುತ್ತದೆ. ರೂಪದರ್ಶಿಗಳು ಉದ್ದಗೆ ಸಣ್ಣಗೆ ಇರುವುದರಿಂದ ಈ ಉಡುಪುಗಳು ಅವರ ಮೈಕಟ್ಟಿಗೆ, ಬಣ್ಣಕ್ಕೆ ತುಂಬಾ ಚೆನ್ನಾಗಿ ಹೊಂದುತ್ತದೆ.

ಜರ್ಮನಿಯಲ್ಲಿ ನಡೆಯುವ ಫ್ಯಾಷನ್ ಶೋನಲ್ಲಿ ಇಷ್ಟು ಬಣ್ಣದ ದಿರಿಸುಗಳನ್ನು ಬಳಸುವುದಿಲ್ಲ. ಕಪ್ಪು, ಬಿಳಿ ಬಣ್ಣ ಜಾಸ್ತಿ ಬಳಸುತ್ತಾರೆ. ಇಲ್ಲಿ ವೇದಿಕೆ ಅಕ್ಕಪಕ್ಕ ಕುಳಿತುಕೊಳ್ಳಲು ವಿಐಪಿಗಳಿಗೆ ಅದೇಕೆ ಮೊದಲ ಆದ್ಯತೆಯೊ ಕಾಣೆ. ಜರ್ಮನಿಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತುಕೊಳ್ಳುತ್ತಾರೆ. ವಿಐಪಿಗಳಿಗೆ ಎಂದು ಬೇರೆ ಆಸನದ ವ್ಯವಸ್ಥೆ ಇಲ್ಲ.

ಜರ್ಮನಿಯಲ್ಲಿ ಇಲ್ಲಿಯವರ ಹಾಗೆ ದಪ್ಪನೆಯ, ಭಾರವಾದ ಬಟ್ಟೆ ಹಾಕುವುದಿಲ್ಲ. ಇಲ್ಲಿ ದೊಡ್ಡ ದೊಡ್ಡ ಕಿವಿಯ ಓಲೆ ಹಾಕುತ್ತಾರೆ. ನಾವು ಚಿಕ್ಕ ಓಲೆ ಹಾಕುತ್ತೇವೆ. ಇಂಡಿಯಾದ ಸೀರೆ ನೋಡಿದರೆ ತುಂಬಾ ಇಷ್ಟ. ಆದರೆ ಇದನ್ನು ತೊಡುವುದು ಕಷ್ಟ. ಒಂದು ಬಾರಿ ಪ್ರಯತ್ನಿಸಿದ್ದೆ. ನಡೆಯಲು ಆಗಲೇ ಇಲ್ಲ! ಬೇಸರವಾಯಿತು.

ನಮ್ಮ ಚರ್ಮ ತುಂಬಾ ಬಿಳಿ. ಹಾಗಾಗಿ ವಿವಿಧ ಬಣ್ಣದ ಸೀರೆಗಳು ನಮಗೆ ಅಷ್ಟಾಗಿ ಹೊಂದುವುದಿಲ್ಲ. ಭಾರತೀಯ ಹುಡುಗಿಯರು ಸೀರೆಯಲ್ಲಿ ತುಂಬಾ ಮುದ್ದಾಗಿ ಕಾಣುತ್ತಾರೆ.
-ಕಾರ್ಮೆನ್, ಜರ್ಮನಿ

ಹಿತ ನೀಡುವ ವಾತಾವರಣ
ನನಗಂತೂ ಈ ಫ್ಯಾಷನ್ ಶೋ ತುಂಬಾ ಖುಷಿ ನೀಡಿದೆ. ಬಣ್ಣಬಣ್ಣದ ಉಡುಪಿನಲ್ಲಿ ರೂಪದರ್ಶಿಗಳು ಚೆನ್ನಾಗಿ ಕಾಣುತ್ತ್ದ್ದಿದಾರೆ.

ಯಾವುದೇ ಉಡುಪು ತೊಟ್ಟರೂ ಇಲ್ಲಿನವರು ಸುಂದರವಾಗಿ ಕಾಣುತ್ತಾರೆ. ಭಾರತೀಯರಿಗೆ ಫ್ಯಾಷನ್ ಬಗ್ಗೆ ಹೆಚ್ಚಿನ ಅರಿವಿದೆ ಎಂಬುದು ತಿಳಿಯಿತು. ವಿನ್ಯಾಸಕರ ಶ್ರಮ ಈ ಬಟ್ಟೆಗಳಲ್ಲಿ ಎದ್ದು ಕಾಣುತ್ತಿದೆ.

ಬೆಂಗಳೂರಿನ ವಾತಾವರಣವೂ ತುಂಬಾ ಹಿತವಾಗಿದೆ. ಊಟ ತಿಂಡಿಯಲ್ಲೂ ವೈವಿಧ್ಯವಿದೆ. ಇಲ್ಲಿನ ಜನ ಕೂಡ ಒಳ್ಳೆಯವರು.
-ಜೋಸೆಫ್, ಜರ್ಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT