ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿ ವಯಸ್ಸಲ್ಲೂ ಬತ್ತದ ಉತ್ಸಾಹ

Last Updated 3 ಜನವರಿ 2012, 8:55 IST
ಅಕ್ಷರ ಗಾತ್ರ

ಭಾಲ್ಕಿ: 77ರ ವಯಸ್ಸಿನಲ್ಲಿ ಪರೀಕ್ಷೆ ಬರೆಯೋದಾ? ಅದು ಕನ್ನಡ ಸಾಹಿತ್ಯ ಪರಿಷತ್‌ನವರು ನಡೆಸುವ ಕನ್ನಡ ರತ್ನ ಪರೀಕ್ಷೆ..! ಹೀಗೊಂದು ಆಶ್ಚರ್ಯ ಮತ್ತು ಉದ್ಗಾರ ತೆಗೆದದ್ದು ಪರೀಕ್ಷಾ ಕೇಂದ್ರದ ಉಪನ್ಯಾಸಕರು ಮತ್ತು ಹದಿ ಹರೆಯದ ಯುವಕರು.

ಕನ್ನಡಾಭಿಮಾನ, ಓದುವ ಹವ್ಯಾಸ ಅಂದ್ರೆ ಹೀಗಿರಬೇಕು ನೋಡ್ರಿ.... ಅಂತ ಆ ಅಜ್ಜಿ ಭಾನುವಾರ ಉತ್ತರ ಪತ್ರಿಕೆ ಬರೆಯುತ್ತಿದ್ದಾಗ ಹಲವರು ಹುಬ್ಬೇರಿಸಿ ಕಿಟಕಿಯಿಂದ ನೋಡುತ್ತಿದ್ದರು.

ಹೌದು, ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ರಾಚಮ್ಮ ಮಾಣಿಕರಾವ ಪಾಟೀಲ ಹೊಸ ವರ್ಷದ ದಿನದಂದು ಕನ್ನಡ ರತ್ನ ಪರೀಕ್ಷೆ ಬರೆದಿದ್ದಾರೆ. 1935 ಜುಲೈ 5ರಂದು ಜನಿಸಿದ ಈ ಅಜ್ಜಿಗೆ ಈಗ 77 ವರ್ಷದ ಇಳಿ ಹೊತ್ತು. ಆದರೆ ಈ ಅಮ್ಮನ ಉತ್ಸಾಹ ನೋಡಿದರೆ ಯುವ ಉತ್ಸಾಹ ಚಿಮ್ಮುತ್ತದೆ.

ಬಾಲ್ಯದಲ್ಲಿ ಔಪಚಾರಿಕ ಶಿಕ್ಷಣ ಪಡೆದಿದ್ದು ಕೇವಲ 4ನೇ ವರ್ಗದವರೆಗೆ. ನಂತರ 50 ವರ್ಷಗಳ ಕೆಳಗೆ ಸಾಹಿತ್ಯ ಪರಿಷತ್‌ನ `ಕಾವ~ ಮತ್ತು `ಜಾಣ~ ಪರೀಕ್ಷೆ ಬರೆದು ಪಾಸಾಗಿದ್ದಾರೆ.

ವಿದ್ಯಾವಂತ ಮಗಳು ರೇಣುಕಾ ಮತ್ತು 5 ಮೊಮ್ಮಕ್ಕಳ ಜೊತೆಗೆ ಕಳೆದ ವಾತಾವರಣ ಅಜ್ಜಿಗೆ ಓದುವ ಹವ್ಯಾಸ ಬೆಳೆಸಿದೆ. ಈಗ ಆ ಹಳೆಯ ಅಂಕ ಪಟ್ಟಿ ತೆಗೆದುಕೊಂಡು `ರತ್ನ~ ಪರೀಕ್ಷೆಗೆ ಶುಲ್ಕ ಕಟ್ಟಿದ್ದಾರೆ. ಓದಲು ಅಗತ್ಯವಿರುವ 7 ಪುಸ್ತಕಗಳನ್ನು ತರಿಸಿಕೊಂಡು ಅಭ್ಯಾಸ ಮಾಡಿದ್ದಾರೆ.

ಶುಕ್ರವಾರದಿಂದ ಭಾನುವಾರದವರೆಗೆ ಬೀದರ್‌ನ ಬಿ.ವಿ. ಭೋಮರೆಡ್ಡಿ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆಯನ್ನೂ ಬರೆದಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಸತತ ಮೂರು ತಾಸು ಕುಳಿತು ಉತ್ತರ ಪತ್ರಿಕೆ ಬರೆದರೂ ದಣಿಯದ ಈ ಅಜ್ಜಿ `ಸಮಯ ಮುಗೀತು ಪೇಪರ್ ಕೊಡ್ರಿ..~ ಅಂದ್ರೆ... ಇನ್ನೊಂದ್ ಹತ್ ನಿಮಿಷ ಕೊಡ್ರಿ... ಆಯ್ತು ಅನ್ಬೇಕಾ..? ಅದನ್ನು ಕೇಳಿದ ಯುವ ಬರಹಗಾರರು ಸುಸ್ತೋ ಸುಸ್ತು..!

ವ್ಹಾರೆ ವ್ಹಾ.. ಬತ್ತದ ಉತ್ಸಾಹ ಅಂದ್ರೆ ಇದು ನೋಡ್ರಿ.. ಅಂತ ಈ ಓಲ್ಡ್ ಏಜ್ ಗೋಲ್ಡ್ ಅಜ್ಜಿಯ ಬಂಗಾರದಂಥ ಉತ್ಸಾಹ ನೋಡಿ ಭೇಷ್ ಅಂದ್ರು ಅಲ್ಲಿದ್ದವರು.

ಅಂದ ಹಾಗೆ ಇವರು ಬೀದರ್‌ನ ಖ್ಯಾತ ವೈದ್ಯ ಡಾ. ಎಸ್.ಆರ್. ಕೊಂಡೇದ್‌ರ ಅತ್ತೆ. ವೈದ್ಯರ ಪತ್ನಿ ರೇಣುಕಾ ಅವರ ತಾಯಿ. ಶರಣರ ನೂರಾರು ವಚನಗಳನ್ನು, ತತ್ವಪದಗಳನ್ನು ನಿರರ್ಗಳವಾಗಿ ಹಾಡುತ್ತಾರೆ. ನಾಡಿನ ಖ್ಯಾತ ಕವಿ, ಸಾಹಿತಿಗಳ ಮೌಲ್ಯಯುಕ್ತ ಮಾತುಗಳನ್ನು ಉದಾಹರಿಸಿ ಒಳ್ಳೆಯ ಚಿಂತನೆ ಮಾತುಗಳನ್ನು ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT