ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿದ ಪ್ರವಾಹ ಭೀತಿ: ಬೆಳೆ ನಷ್ಟದ್ದೇ ಚಿಂತೆ

Last Updated 4 ಆಗಸ್ಟ್ 2013, 6:38 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ಕೊಡ್ಲಿಪೇಟೆ, ಶಾಂತಳ್ಳಿ ಭಾಗಗಳಲ್ಲಿ ಶನಿವಾರ ಕೂಡ ಮಳೆಯ ಅಬ್ಬರ ಮುಂದುವರಿದಿದೆ. ದಕ್ಷಿಣ ಕೊಡಗಿನಲ್ಲಿ ಮಳೆ ಕೊಂಚ ಇಳಿಮುಖವಾಗಿದ್ದು, ಪ್ರವಾಹ ಭೀತಿಯಿಂದ ಜನ ಹೊರಬರುವಂತಾಗಿದೆ.

ನಾಪೋಕ್ಲು, ಸಂಪಾಜೆ, ಭಾಗಮಂಡಲ, ವೀರಾಜಪೇಟೆ, ಹುದಿಕೇರಿ, ಶ್ರಿಮಂಗಲ, ಪೊನ್ನಂಪೇಟೆ, ಅಮ್ಮತ್ತಿ, ಬಾಳಲೆ, ಕುಶಾಲನಗರ, ಸುಂಟಿಕೊಪ್ಪ ಭಾಗಗಳಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದೆ.

ಸೋಮವಾರಪೇಟೆ ತಾಲ್ಲೂಕಿನಾದ್ಯಂತ ವಾಡಿಕೆಗೂ ಮೀರಿದಂತೆ ಅಧಿಕ ಮಳೆ ಸುರಿಯುತ್ತಿರುವ ಪರಿಣಾಮ ಈ ಭಾಗಗಳಲ್ಲಿ ಪ್ರತನಿತ್ಯ ಮನೆ ಜಖಂ, ರಸ್ತೆ ಕುಸಿತ, ಮರ, ವಿದ್ಯುತ್ ಕಂಬಗಳು ಧರೆಗುರುಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಜಿಲ್ಲೆಯಲ್ಲಿ ವಾಡಿಕೆಗೂ ಮೀರಿದಂತೆ ಮಳೆ ಸುರಿಯುತ್ತಿರುವ ಪರಿಣಾಮ ಈಗಾಗಲೇ ಕಾಫಿ, ಭತ್ತ, ತಂಬಾಕು, ಜೋಳ ಸೇರಿದಂತೆ ಮತ್ತಿತರರ ಬೆಳೆಗಳು ಹಾಳಾಗಿದ್ದು, ರೈತರು ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣ ಕೊಡಗಿನ ಭಾಗದಲ್ಲಿ ಉಕ್ಕಿ ಹರಿಯುತ್ತಿದ್ದ ಭಾಗಮಂಡಲದ ತ್ರಿವೇಣಿ ಸಂಗಮ, ಶ್ರೀಮಂಗಲ ಸಮೀಪದಲ್ಲಿ ಹರಿಯುತ್ತಿರುವ ಲಕ್ಷ್ಮಣ ತೀರ್ಥ ನದಿ, ನಾಪೋಕ್ಲು ಭಾಗಗದಲ್ಲಿ ಕಾವೇರಿ ನದಿಗಳ ನೀರಿನ ರಭಸದಲ್ಲಿ ಕೊಂಚ ಇಳಿಕೆಯಾಗಿದೆ.

ಮಡಿಕೇರಿಯಲ್ಲೂ ಕೂಡ ಮಳೆ ಮುಂದುವರೆದಿದ್ದು, ಗಾಳಿ-ಮಳೆಯ ಅಬ್ಬರಕ್ಕೆ ಜನರು ತತ್ತರಿಸಿದ್ದಾರೆ. ನಗರದ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ.

ಮಳೆ ವಿವರ: ಕೊಡಗು ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆ ಅವಧಿ ಅಂತ್ಯಗೊಂಡಂತೆ  69.84 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 10.56 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 2,539 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 970.72 ಮಿ.ಮೀ. ಮಳೆ ದಾಖಲಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ 52.9 ಮಿ.ಮೀ., ವೀರಾಜಪೇಟೆ ತಾಲ್ಲೂಕಿನಲ್ಲಿ 75 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 81.63 ಮಿ.ಮೀ. ಮಳೆ ಸುರಿದಿದೆ.

ಗದ್ದೆ ಜಲಾವೃತ
ಕುಶಾಲನಗರ: ಸುಂಟಿಕೊಪ್ಪ ಹಾಗೂ ಕುಶಾಲನಗರ ಎರಡೂ ಹೋಬಳಿಗಳಾದ್ಯಂತ ಶನಿವಾರ ಧಾರಾಕಾರ ಮಳೆ ಸುರಿದಿದ್ದು ಹಲವೆಡೆ ಹೊಲಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ.

ಸಮೀಪದ ಕಣಿವೆ ಬಳಿ ದಿವಾಕರ್ ಎಂಬವರ ಗದ್ದೆ, ರಾಜು ಎಂಬವರ ಜೋಳದ ಹೊಲ ಜಲಾವೃತಗೊಂಡಿದ್ದು ಬಹುತೇಕ ನೀರಿನಲ್ಲಿ ಮುಳುಗಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದಲೇ ಸುರಿದ ಮಳೆ ಕೆಲ ಸಮಯ ತುಂತುರಾಗಿ ಸುರಿದರೆ ಮತ್ತೆ ಕೆಲ ಸಮಯ ಬಿಡುವು ನೀಡಿತ್ತು.

ಮಧ್ಯಾಹ್ನ 3ಕ್ಕೆ ಜಿಟಿಜಿಟಿಯಾಗಿ ಸುರಿಯಲು ಆರಂಭವಾದ ಮಳೆ ಪುನಃ ಬಿಡುವು ನೀಡಲೇ ಇಲ್ಲ. ಸುಂಟಿಕೊಪ್ಪ ಸಿದ್ದಾಪುರ ಮುಂತಾದೆಡೆಗಳಲ್ಲಿ ಸುರಿದ ಮಳೆಯಿಂದಾಗಿ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಕೊಲ್ಲಿ ಪ್ರದೇಶಗಳಲ್ಲಿ ಹೊಲ ಗದ್ದೆಗಳಿಗೆ ನುಗ್ಗಿದೆ.

ತುಂಬಿದ ಮುಳ್ಳೂರು ಕೆರೆ
ಶನಿವಾರಸಂತೆ: ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಶನಿವಾರ ಮಳೆಯ ರಭಸ ಹಾಗೂ ಗಾಳಿ ಬಿರುಸು ಕಡಿಮೆಯಾಗಿದೆ.
ಸಮೀಪದ ಮುಳ್ಳೂರಿನಲ್ಲಿ ಮುಳ್ಳೂರು ಕೆರೆ ತುಂಬಿದ್ದು ಮುಖ್ಯ ರಸ್ತೆಯ ಮೇಲೆ ಹರಿಯಲು ಸಿದ್ಧವಾಗಿದೆ. ಮುನ್ನೆಚ್ಚರಿಕೆಯಾಗಿ ರಸ್ತೆಯಂಚಿನಲ್ಲಿ ಕೆಂಪು ಬಾವುಟದೊಂದಿಗೆ ಹಗ್ಗ ಕಟ್ಟಲಾಗಿದೆ.

ಶನಿವಾರ ವಾರದ ಸಂತೆಯ ದಿನವಾಗಿದ್ದು ಕಳೆದ ನಾಲ್ಕು ದಿನಗಳಲ್ಲಿ ಸುರಿದಿದ್ದ ಭಾರಿ ಮಳೆಯಿಂದಾಗಿ ಸಂತೆ ಮಾರುಕಟ್ಟೆ ಕೆಸರುಮಯವಾಗಿತ್ತು. .  
    
ಕೊಡ್ಲಿಪೇಟೆ: ಕೊಡ್ಲಿಪೇಟೆ ಹೋಬಳಿಯಾದ್ಯಂತ ಶನಿವಾರವೂ ಮಳೆ ಮುಂದುವರೆದಿದೆ. ನಾಲ್ಕೈದು ದಿನಗಳಿಂದ ರಭಸವಾಗಿ ಬೀಸುತ್ತಿರುವ ಗಾಳಿಯೊಂದಿಗೆ ಭಾರಿ ಮಳೆ ಸುರಿಯುತ್ತಿದೆ. ನೂರಾರು ಎಕರೆ ಭತ್ತದ ಗದ್ದೆಗಳು ನೀರು ಪಾಲಾಗಿವೆ. 15 ಮನೆಗಳ ಗೋಡೆ ಕುಸಿದು ಬಿದ್ದಿವೆ.

ವಾರದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಕೊಡ್ಲಿಪೇಟೆ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳು ಕತ್ತಲಿನಲ್ಲಿ ಕಳೆಯುವಂತಾಗಿದೆ.

ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಶಾಸಕ ಟಿ. ಜಾನ್ ಜನ ಮತ್ತು ಲಾರಿ ಕಳುಹಿಸಿ ವ್ಯವಸ್ಥಿತವಾಗಿ ವಿದ್ಯುಚ್ಛಕ್ತಿ ನೀಡುವುದಾಗಿ ಭರವಸೆ ನೀಡಿದ್ದರು. ಈವರೆಗೆ ಯಾವುದೂ ಇಲ್ಲ. ಮಡಿಕೇರಿಯ ಸಹಾಯಕ ಎಂಜಿನಿಯರ್ ಕೂಡಲೇ ವಿದ್ಯುತ್ ಸಮಸ್ಯೆ ಬಗೆ ಹರಿಸಬೇಕು ಎಂದು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಚ್.ಸಿ. ಯತೀಶ್‌ಕುಮಾರ್ ಹಾಗೂ ಕಾರ್ಯದರ್ಶಿ ಜಿ.ಆರ್. ಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ಸ್ಥಳೀಯ ಕೆನರಾ ಬ್ಯಾಂಕಿನಲ್ಲಿ 4 ದಿನಗಳಿಂದ ವ್ಯವಹಾರ ಸ್ಥಗಿತಗೊಂಡು ಗ್ರಾಹಕರು ಪರದಾಡುವಂತಾಗಿದೆ.

ಕ್ಷೀಣಗೊಂಡ ಮಳೆ: ಅಲ್ಲಲ್ಲಿ ಹಾನಿ
ನಾಪೋಕ್ಲು: ನಾಲ್ಕುನಾಡು ವ್ಯಾಪ್ತಿಯಲ್ಲಿ ಶನಿವಾರ ಮಳೆ ಕ್ಷೀಣಗೊಂಡಿದ್ದರೂ ಪ್ರವಾಹ ಪರಿಸ್ಥಿತಿ ಹಾಗೆಯೇ ಇದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ನಾಪೋಕ್ಲು- ಭಾಗಮಂಡಲ, ನಾಪೋಕ್ಲು-ಮೂರ್ನಾಡು ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಎರಡು ದಿನಗಳಿಂದ ವಾಹನ ಸಂಚಾರ ಸ್ಥಗಿತವಾಗಿದೆ. ನಾಪೋಕ್ಲು- ಬೆಟ್ಟಗೇರಿ ನಡುವೆ ಕೊಟ್ಟಮುಡಿಯಲ್ಲಿ ಕಾವೇರಿ ನೀರು ರಸ್ತೆ ಮಟ್ಟದಲ್ಲಿ ಹರಿಯುತ್ತಿದ್ದು ಮಳೆ ಬಿರುಸುಗೊಂಡಲ್ಲಿ ನಾಪೋಕ್ಲು ಮಡಿಕೇರಿ ನಡುವಿನ ಸಂಪರ್ಕವೂ ಕಡಿತಗೊಳ್ಳಲಿದೆ. 

ಸಮೀಪದ ಹೊದ್ದೂರಿನ ಚೌರೀರ ಕುಟುಂಬಸ್ಥರ ಹಲವು ಗದ್ದೆಗಳು, ಬಲಮುರಿ ವ್ಯಾಪ್ತಿಯಲ್ಲಿನ ನಾಟಿ ಮಾಡಿದ ಗದ್ದೆಗಳು ಜಲಾವೃತವಾಗಿವೆ. ಕಕ್ಕಬ್ಬೆ ಬಳಿಯ ನಾಲಡಿ ಗ್ರಾಮದ ಹಲವು ಭಾಗಗಳು ಜಲಾವೃತವಾಗಿವೆ. ನಾಪೋಕ್ಲು-ವಿರಾಜಪೇಟೆ ಮುಖ್ಯರಸ್ತೆಯ ಕೋಟೇರಿ ಬಳಿ ರಸ್ತೆಯ ಒಂದು ಪಾರ್ಶ್ವ ಹೊಳೆಗೆ ಕುಸಿದಿದ್ದು ಅಪಾಯ ಎದುರಾಗಿದೆ. ಆಲೆ ಹೊಳೆ ಸೇತುವೆಯು ನೀರಿನ ಪ್ರವಾಹಕ್ಕೆ ಸಿಲುಕಿ ತಡೆಬೇಲಿಗಳು ಕೊಚ್ಚಿ ಹೋಗಿವೆ. ನಾಲಡಿ-ಯವಕಪಾಡಿ ಮರಂದೋಡ ಗ್ರಾಮಗಳ ಕಾಫಿ ತೋಟಗಳ ನೆರಳು ಮರಗಳು, ಸಿಲ್ವರ್ ಮರಗಳು ಉರುಳಿ ಬಿದ್ದಿವೆ. ಕಾಫಿ , ಕಾಳು ಮೆಣಸು ಫಸಲು ನೆಲಕಚ್ಚಿವೆ. ಗಾಳಿ ಮಳೆಯ ಕಾರಣ ನಾಲಡಿ ಗ್ರಾಮಕ್ಕೆ 15 ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಕ್ಕಬ್ಬೆ ವ್ಯಾಪ್ತಿಯ ಹಲವು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ.

ಮುಂದುವರಿದ ಮಳೆ: ಅಪಾರ ಹಾನಿ
ಸೋಮವಾರಪೇಟೆ:  ತಾಲ್ಲೂಕಿನ ಎಲ್ಲ ಹೋಬಳಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶನಿವಾರ ಸಹ ವರುಣನ ಆರ್ಭಟ ಮುಂದುವರಿದಿದೆ.

ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಹಣಕೋಡು ಗ್ರಾಮದಲ್ಲಿ ಬರೆ ಕುಸಿದು ಮಣ್ಣು ಅಗಸನ ಕೆರೆಗೆ ಸೇರಿ, ನೀರು ಉಕ್ಕಿ ಹರಿದ ಪರಿಣಾಮ, ಕೆಳ ಭಾಗದಲ್ಲಿರುವ  ಕೃಷಿಕರ ನೂರಾರು ಎಕರೆ ಭತ್ತದ ಭೂಮಿ ಜಲಾವೃತಗೊಂಡಿದೆ.

ಸಮೀಪದ ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಅರೆಬೆಟ್ಟ ಕಾಲೋನಿಗೆ ತೆರಳುವ ರಸ್ತೆಯಲ್ಲಿ 4 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ ಪರಿಣಾಮ, ಕಾಲೋನಿಯ ಸಂಪರ್ಕ ರಸ್ತೆ ಬಂದ್ ಆಗಿದೆ. ಕೂಡಲೇ ವಿದ್ಯುತ್ ಮಾರ್ಗವನ್ನು ಸರಿಪಡಿಸುವಂತೆ ಅಲ್ಲಿನ ನಿವಾಸಿಗಳು ಸೆಸ್ಕ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಬೇಳೂರು ಕೆಂಚಮ್ಮನ ಬಾಣೆ ನಿವಾಸಿ ನಾಗಪ್ಪ, ಬಜೆಗುಂಡಿ ಗ್ರಾಮದ ಕುಮಾರಿ, ಮೇರಿ, ಸೋಮ ಎಂಬವರ ಮನೆ ಗೋಡೆ ಕುಸಿದಿದೆ. ಐಗೂರು ಗ್ರಾಮದ ಸುಭಾಶ್ ಎಂಬವರ ಮನೆಯ ಶೀಟ್ ಹಾರಿ ಹೋಗಿದೆ. 

ಹೊಸಬೀಡು ಗ್ರಾಮದ ಕೃಷ್ಣಪ್ಪ ಎಂಬವರ ಮನೆ ಮೇಲೆ ಮರ ಬಿದ್ದಿದೆ. ಮಾಲಂಬಿ ಗ್ರಾಮದ ಚೆನ್ನಯ್ಯ ಎಂಬವರ ಮನೆ ಗೋಡೆ ಭಾಗಶಃ ಕುಸಿದಿದೆ. ದೊಡ್ಡಬ್ಬೂರು ಗ್ರಾಮದ ರಾಜಮಣಿ ಎಂಬವರ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದಿದೆ. ಹಾನಗಲ್ಲು ಗ್ರಾಮದ ಚಂದ್ರ ಎಂಬವರ ಕುರಿ ಸತ್ತಿದೆ.

ಚೌಡ್ಲು ಗ್ರಾಮದ ಕಾವೇರಮ್ಮ ಎಂಬವರ ಮನೆಯ ಗೋಡೆಯ ಒಂದು ಪಾರ್ಶ್ವ ಕುಸಿದಿದೆ. ಹಾನಗಲ್‌ಶೆಟ್ಟಳ್ಳಿ ಮಲ್ಲೇಶ್ ಎಂಬುವವರ ಕೊಟ್ಟಿಗೆಯ ಮೇಲೆ ಮರ ಬಿದ್ದು, ಚೌಡ್ಲು ಗ್ರಾಮದ ಪುಷ್ಪವತಿ ಎಂಬವರ ಮನೆ ಸಮೀಪದ ಬರೆಕುಸಿದು ಶೌಚಾಲಯದ ಮೇಲೆ ಬಿದ್ದಿದೆ. ಶಂಕರ ಎಂಬವರ ಮನೆ ಮೇಲೆ ಮರ ಬಿದ್ದಿದೆ. ಶುಂಟಿ ಮಂಗಳೂರು ಗ್ರಾಮದ ನಾರಾಯಣ, ಎಂ.ಟಿ. ನಂಜುಂಡ, ಆಲೂರು ಗ್ರಾಮದ ಗಿರಿಜನ ಕಾಲೋನಿಯ ಕಮಲ ಎಂಬವರ ಮನೆ ಗೋಡೆ ಕುಸಿದಿದೆ. ದೊಡ್ಡಹಣಕೋಡು ವಿಜಯ ಎಂಬವರ ಮನೆಯ ಮೇಲೆ ಮರ ಬಿದ್ದಿದೆ.

ಬಾಣವಾರ ರಸ್ತೆಯ ಗಿರಿಯಪ್ಪ ಎಂಬವರ ಮನೆಯ ಮೇಲೆ ಮರಬಿದ್ದು, ಗೋಡೆ ಜಖಂಗೊಂಡಿದೆ. ತಲ್ತರ್‌ಶೆಟ್ಟಳ್ಳಿಯ ಜಾರನ ಮನೆ ಎಂಬಲ್ಲಿ ದೇವಾಲಯದ ಮೇಲೆ ಮರ ಬಿದ್ದು, ಮೇಲಿನ ಶೀಟ್ ಮತ್ತು ಗೋಡೆಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT