ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿದು ಇಳಿದು ಬಾರೆ...

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಪ್ರಸಿದ್ಧ ಜರ್ಮನ್ ಕವಿ ವಾನ್ ಗೋಯಥೆ `ಟ್ರಮಲ್ ಬಾಚ್' ಜಲಪಾತವನ್ನು ನೋಡಿದ ತಕ್ಷಣ ತೆಗೆದ ಉದ್ಗಾರ- ‘Gesung der geister uberden wassern’. ಜರ್ಮನ್‌ನ ಈ ನುಡಿಯನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿದರೆ ‘Songs of spirits above the water’ಎಂದಾಗುತ್ತದೆ. ಹೌದು, ಈ ಜಲಧಾರೆಯೊಂದು ಸ್ಫೂರ್ತಿಗೀತ.

ಟ್ರಮಲ್ ಬಾಚ್ ಎಂಬ ಜಲಧಾರೆ ವಿಸ್ಮಯ ಇರುವುದು ಸ್ವಿಟ್ಜರ್‌ಲೆಂಡ್ ದೇಶದ ಇಂಟರ್ ಲೇಖನ್ ನಗರದ ಸಮೀಪದಲ್ಲಿ.  ಲೌಟರ್‌ಬ್ರೂನನ್ ಎನ್ನುವ ಸುಂದರ ಕಣಿವೆಯಲ್ಲಿ ಇರುವ ಹಿಮಪರ್ವತಗಳು ಕರಗಿ ನೀರಾಗಿ, ಬೆಟ್ಟದ ಹೊಟ್ಟೆಯಲ್ಲೇ ಅಂತರ್ಗತವಾಗಿ ಧುಮುಕುತ್ತವೆ.

ಮಂಜು ಮತ್ತು ಹಿಮಬಂಡೆಗಳು ಕರಗಿ ನೀರಾಗಿ ಸುರಿಯುವ 72 ಜಲಪಾತಗಳನ್ನು ಒಳಗೊಂಡ ರಮ್ಯ ಪ್ರಕೃತಿ ಧಾಮವನ್ನು ಕಣ್ತುಂಬಿಕೊಳ್ಳುವುದು ಬದುಕಿನ ಸಾರ್ಥಕ್ಯದ ಉತ್ತುಂಗದ ಕ್ಷಣಗಳಲ್ಲೊಂದು. ಇಲ್ಲಿನ ಎಲ್ಲಾ ಜಲಪಾತಗಳೂ ವೀಕ್ಷಿಸಲು ಮನೋಹರವೇ! ಪ್ರಕೃತಿ ಮಾತೆ ಯಾವುದನ್ನೂ ಪುನರಾವರ್ತಿಸಳು ಎಂಬ ಮಾತಿಗೆ ಈ ಕಣಿವೆಯ ಪ್ರತಿಯೊಂದು ಜಲಪಾತವೂ ಉದಾಹರಣೆಯಂತಿದೆ. ಇಲ್ಲಿನ ವಿವಿಧ ಜಲಪಾತಗಳ ನೀರಿನಿಂದ ಎರಡು ಬೃಹತ್ ಸರೋವರಗಳು ನಿರ್ಮಾಣವಾಗಿವೆ. ಅವುಗಳ ಮಧ್ಯದ ವಸತಿ ಪ್ರದೇಶವನ್ನು ಇಂಟರ್ ಲೇಖನ್ ನಗರ ಎಂದು ಕರೆಯುತ್ತಾರೆ. ಈ ಮನಮೋಹಕ ನಗರದಿಂದ ಲೌಟರ್‌ಬ್ರೂನನ್ ಕಣಿವೆಗೆ ಎಲ್ಲಾ ವಿಧವಾದ ಸಂಪರ್ಕ ಸೇವೆಗಳಿವೆ.

ಈ ಕಣಿವೆಯ 72 ಜಲಪಾತ ಸೋದರಿಯರ ಹಿಂಡಿನಲ್ಲಿ ಹಿರಿಯಕ್ಕನಂತೆ ಇರುವವಳು ಟ್ರಮಲ್ ಬಾಚ್ ಜಲಪಾತ. ಈ ಭುವನ ಸುಂದರಿಯ ವಿಶೇಷತೆ ಏನೆಂದರೆ, ಸಂಪೂರ್ಣ ಜಲಪಾತ ಪರ್ವತದ ಒಳಗೇ ಇರುವುದು. ಬೆಟ್ಟದ ಆಚೆಗೆ ತನ್ನ ಸೌಂದರ್ಯ ಗೋಚರಿಸದಂತೆ ಈ ಜಲಸುಂದರಿ ಧರೆಗೆ ಇಳಿಯುತ್ತಾಳೆ.

ಈ ಪರ್ವತಪುತ್ರಿಯನ್ನು ನೋಡಲು ಕುತೂಹಲದ ಜೊತೆಗೆ ಧೈರ್ಯ - ಸಾಹಸ ಪ್ರವೃತ್ತಿಗಳು ಇರಬೇಕು. ಪರ್ವತದ ಒಳಗೆಯೇ ಸುಮಾರು 460 ಅಡಿ ಎತ್ತರದಿಂದ ಈ ಜಲಪಾತ ಧುಮ್ಮಿಕ್ಕುತ್ತದೆ. ಈ ಕೌತುಕ ದೃಶ್ಯವನ್ನು ವೀಕ್ಷಿಸಲು ಪರ್ವತವನ್ನು ಕೊರೆದು ಹತ್ತು ಹಂತಗಳಲ್ಲಿ ವೀಕ್ಷಣಾ ಸ್ಥಳಗಳನ್ನು ನಿರ್ಮಿಸಲಾಗಿದೆ. ಈ ಗುಹೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ.

ಜಲಪಾತದ ಆರನೇ ಹಂತಕ್ಕೆ ಒಮ್ಮೆಲೇ ತೆರಳಲು ಪರ್ವತದ ಸುರಂಗದಲ್ಲೇ ಲಿಫ್ಟ್ ಸೌಲಭ್ಯ ಇದೆ. ಅಲ್ಲಿಂದ ಕಾಲ್ನಡಿಗೆಯಲ್ಲಿ ಉಳಿದ ನಾಲ್ಕು ಹಂತಗಳನ್ನು ಏರಿ ಈ ಸೌಂದರ್ಯವತಿಯ ಸೌಂದರ್ಯವನ್ನು ಹಂತ ಹಂತವಾಗಿ ಸವಿಯಬಹುದು. ಪ್ರತಿಯೊಂದು ಹಂತದಲ್ಲೂ ಈಕೆ ಮಾಡುವ ಶಬ್ದ, ಆರ್ಭಟದಿಂದ ನೋಡುಗರು ಕಿವುಡರಂತಾಗಿ, ಈಕೆಯ ಓಟದ ಮಂಥನದಲ್ಲಿ ಉಂಟಾದ ದಟ್ಟ ನೀರಿನ ಸೂಕ್ಷ್ಮ ಹನಿಗಳ ಪದರ, ಅದರಿಂದ ಉಂಟಾಗುವ ಮೈನಡುಗಿಸುವ ಚಳಿ ರಮ್ಯ-ರೋಚಕ ಎನ್ನಿಸುತ್ತದೆ.

ಟ್ರಮಲ್ ಬಾಚ್ ಜಲಪಾತದ ಸೌಂದರ್ಯದ ತುಣುಕುಗಳನ್ನು ಸೆರೆಹಿಡಿಯಲು ಹೋಗುವ ಸಾಮಾನ್ಯ ಕ್ಯಾಮೆರಾಗಳು ಹಾಳಾಗುವ ಸಂಭವ ಹೆಚ್ಚು. ಈ ಭಯದಿಂದ ಹಲವರು ಫೋಟೋ ತೆಗೆಯುವ ಗೋಜಿಗೇ ಹೋಗುವುದಿಲ್ಲ. ಆರನೇ ಹಂತದ ವೀಕ್ಷಣೆಯಲ್ಲೇ ನಮಗೆ ಸೋಪುರಹಿತ ಸ್ನಾನ ಮಾಡಿಸುವ ಈಕೆಯಿಂದ ಬಚಾವ್ ಆಗಲು ರೈನ್‌ಕೋಟ್, ಗ್ಲೌಸ್, ಹೆಲ್ಮೆಟ್‌ಗಳ ಮೊರೆ ಹೋಗುವುದು ಅನಿವಾರ್ಯ. ಎಂತಹ ಗಟ್ಟಿ ಗುಂಡಿಗೆಯವರಿಗೂ ಈ ಸುರಸುಂದರಿಯೊಂದಿಗೆ ಸರಸವಾಡಲು ಧೈರ್ಯ ಬಾರದೆ ವಿನಯ ಗೌರವಗಳನ್ನು ಸೂಚಿಸಿ, ಮಾತು ಮರೆತು ಹಿಂತಿರುಗಬೇಕು.

ಈ ಜಲಪಾತ ಜವ್ವನೆ ತನ್ನ ಪಾದಗಳನ್ನು ಮಾತ್ರ ವೀಕ್ಷಿಸಲು ಮೆಟ್ಟಿಲು ಮತ್ತು ಸೇತುವೆಗಳಿಗೆ 1886ರಲ್ಲಿ ಅನುವು ಮಾಡಿಕೊಟ್ಟಳು. 1913ರ ವೇಳೆಗೆ ಸುರಂಗಗಳು ರೂಪುಗೊಂಡು ಚೆಲುವೆಯ ಕಾಲುಗಳನ್ನು ನೋಡುವ ಅವಕಾಶವೂ ದೊರೆಯಿತು. 1986ರ ಸುಮಾರಿಗೆ ಮೆಟ್ಟಿಲುಗಳು ಹಾಗೂ ವೀಕ್ಷಣಾ ಸ್ಥಳಗಳನ್ನು ನಿರ್ಮಾಣವಾದವು.

1990ರ ಸುಮಾರಿಗೆ 10 ವೀಕ್ಷಣಾ ಸ್ಥಳಗಳು ರೂಪುಗೊಳ್ಳುವುದರ ಮೂಲಕ ಜಲಪಾತ ಸುಂದರಿಯ ಪೂರ್ಣ ದರ್ಶನಕ್ಕೆ ಅವಕಾಶ ದೊರೆಯಿತು. 140 ಮೀಟರ್ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತ ಹರನ ಜಡೆಯಿಂದ ಭೂಮಿಗಿಳಿಯುವ ಗಂಗೆಯಂತೆ ಕಾಣಿಸುತ್ತದೆ.

ಚಳಿಗಾಲದಲ್ಲಿ ಜಲಪಾತದ ಆಕಾರವೇ ಬದಲಾಗುತ್ತದೆ. ಈ ಅವಧಿಯಲ್ಲಿ ತನ್ನ ಶಕ್ತಿ ನವೀಕರಿಸಿಕೊಳ್ಳಲು ಧ್ಯಾನಕ್ಕೆ ಕೂತ ಚೆಲುವೆಯಂತೆ ಟ್ರಮಲ್ ಬಾಚ್ ಕಾಣಿಸುತ್ತದೆ. ಹಿಮದ ಪದರಗಳಿಂದ ನಿಧಾನಗತಿಯಲ್ಲಿ ತೊಟ್ಟಿಕ್ಕುವ ಸದ್ದಿನ ಹೊರತು, ಉಳಿದಂತೆ ಜಲಪಾತ ಘನೀಕೃತಗೊಳ್ಳುತ್ತವೆ. ಬೇಸಿಯಲ್ಲಿ ಮತ್ತದೇ ರುದ್ರವಿಲಾಸ. ಜುಂಗ್‌ಪ್ರೊ, ಮಾಂಚ್ ಮತ್ತು ಈಗಲ್ ಪರ್ವತ ಶ್ರೇಣಿಗಳ 24 ಚದರ ಕಿಲೋಮೀಟರ್ ಪ್ರದೇಶದಲ್ಲಿ ಕ್ರೋಡೀಕೃತಗೊಂಡ ಹಿಮದ ಪದರ ಕರಗಿ ದೈತ್ಯ ಆಲಿಕೆಯಲ್ಲಿ ಸುರಿವ ಬಿಳಿ ನೊರೆಯ ತಣ್ಣನೆ ಕ್ಷೀರದಂತೆ ಜಲಪಾತ ಭಾಸವಾಗುತ್ತದೆ.

ಗಾತ್ರ, ಸೌಂದರ್ಯ, ಸನ್ನಿವೇಶಗಳ ಹಿನ್ನೆಲೆಯಲ್ಲಿ ಜಗತ್ತಿನಲ್ಲಿ ಅನೇಕ ಜಲಪಾತಗಳು ಸಹೃದಯರ ಗಮನಸೆಳೆದಿವೆ. ಆದರೆ, ಈ ಜಲಪಾತಗಳ ಸಾಲಿನಲ್ಲಿ ಟ್ರಮಲ್ ಬಾಚ್ ತನ್ನ ಅನನ್ಯತೆಯಿಂದ ಗಮನಸೆಳೆಯುತ್ತಾಳೆ. ಆಕೆಯದು ಕೆಣಕುವ, ದಂಗುಬಡಿಸುವ ಸೌಂದರ್ಯ ಶಕ್ತಿ! 

ಸ್ವಿಟ್ಜರ್‌ಲೆಂಡ್‌ನಿಂದ ಮರಳಿದರೂ ಈಗಲೂ ಟ್ರಮಲ್ ಬಾಚ್‌ನ ಚಿತ್ರಿಕೆಗಳು, ಅದರ ಸಪ್ಪಳ ನನ್ನೊಳಗೆ ಅನುರಣಿಸುತ್ತಲೇ ಇದೆ.

ಆಕೆಯ ರಭಸ...
ಟ್ರಮಲ್ ಬಾಚ್ ಜಲಪಾತ ಪ್ರತಿ ಕ್ಷಣಕ್ಕೆ ಹೊರಹಾಕುವ ನೀರಿನ ಪ್ರಮಾಣ ಸುಮಾರು 22000 ಲೀಟರ್. ಈ ಜಲಪಾತದ ರೌದ್ರ ಓಟದಲ್ಲಿ ವರ್ಷಕ್ಕೆ 20000 ಟನ್‌ಗಳಷ್ಟು ಪರ್ವತದ ಕಲ್ಲಿನ ಪದರದ ಒಡಕು, ಸಣ್ಣ-ದೊಡ್ಡ ಕಲ್ಲಿನ ಚೂರುಗಳು, ಮರಳು ರೂಪುಗೊಳ್ಳುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT