ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿವಯಸ್ಸಿನಲ್ಲೂ ಕೆಎಎಸ್ ಉತ್ತೀರ್ಣ!

Last Updated 14 ಸೆಪ್ಟೆಂಬರ್ 2011, 6:05 IST
ಅಕ್ಷರ ಗಾತ್ರ

ಕಾರವಾರ: ಸಾಧನೆಗೆ ವಯಸ್ಸು ಅಡ್ಡಿ ಬರುವುದಿಲ್ಲ ಎನ್ನುವುದು ಸತ್ಯ. ಈ ಸತ್ಯವನ್ನು ನಂಬಿ ಸಾಧನೆ ಮಾಡುತ್ತಿರುವವರ ಸಾಲಿಗೆ ಸೇರುತ್ತಾರೆ ನಗರದ ದೋಬಿಘಾಟ್‌ನ ನಿವಾಸಿ ಜನಾರ್ದನ ಮಡಿವಾಳ.

ಮೂಲತಃ ಮುಂಡಗೋಡ ತಾಲ್ಲೂಕಿನವರಾದ ಜನಾರ್ದನ ಅವರು ಕಳೆದ 3-4 ವರ್ಷಗಳಿಂದ ದೋಬಿಘಾಟ್‌ನಲ್ಲಿ ನೆಲೆಸಿದ್ದಾರೆ. ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ನಡೆಸುತ್ತಿರುವ ಅವರು 2010ರಲ್ಲಿ ನಡೆದ ಕೆಎಎಸ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಯಶಸ್ಸು ಕಂಡಿದ್ದಾರೆ.

ಮಾಜಿ ಸೈನಿಕ ಕೋಟಾದಡಿ ಕೆಎಎಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಪ್ರಿಲಿಮಿನರಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಅವರು ಕಳೆದ ಮೇನಲ್ಲಿ ನಡೆದ ಸಂದರ್ಶನಲ್ಲಿ ಭಾಗವಹಿಸಿ ಈಗ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ.

1979ರಲ್ಲಿ ಭಾರತೀಯ ಭೂ ಸೇನೆಗೆ ಸಿಪಾಯಿಯಾಗಿ ಸೇರ್ಪಡೆಗೊಂಡ ಜನಾರ್ದನ ಅವರು ಸೇನೆಯ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿ ಸುಬೇದಾರ್ ರ‌್ಯಾಂಕ್‌ಪಡೆದು ನಿವೃತ್ತಿ ಹೊಂದಿದರು.

ಸಿಖ್ ಉಗ್ರರ ವಿರುದ್ಧ ಪಂಜಾಬ್‌ನ ಅಮೃತಸರದಲ್ಲಿ ನಡೆದ ಆಪರೇಷನ್ ಬ್ರಾಸ್‌ಟ್ರ್ಯಾಕ್ (1987), ಆಸ್ಸಾಂನಲ್ಲಿ ಉಲ್ಫಾ  ಉಗ್ರರ ವಿರುದ್ಧ ನಡೆದ ಆಪರೇಷನ್ ಭಜರಂಗ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಜನಾರ್ದನ ಅವರು, ರಾಜಸ್ತಾನ, ಜಮ್ಮು ಮತ್ತು ಕಾಶ್ಮೀರ, ದೆಹಲಿ, ಮಧ್ಯಪ್ರದೇಶ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಸೇನೆಯಿಂದ ನಿವೃತ್ತಿ ಹೊಂದಿದ ಬಳಿಕ ತವರಿಗೆ ಮರಳಿದ ಜನಾರ್ದನ  ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಅರ್ಜಿ ಹಾಕಿದರು. ಆದರೆ ಯಶಸ್ಸು ಸಿಗಲಿಲ್ಲ. ನಂತರ ಕೆಪಿಎಸ್‌ಸಿ ಪ್ರಕಟಣೆ ನೋಡಿ ಕೆಎಎಸ್‌ಗೆ ಅರ್ಜಿ ಹಾಕಿದರು.

ಕೆಎಎಸ್ ಪರೀಕ್ಷೆಗೆ ಅರ್ಜಿ ಹಾಕಿದ ಅಭ್ಯರ್ಥಿಗಳು ಕೊಚಿಂಗ್ ತೆಗೆದುಕೊಳ್ಳುವುದು, ದಿನಕ್ಕೆ ಏಳೆಂಟು ಗಂಟೆ ಅಧ್ಯಯನ ಮಾಡುವುದು. ಅಧ್ಯಯನಕ್ಕಾಗಿ ಹತ್ತಾರು ಪುಸ್ತಕಗಳನ್ನು ಓದುವುದು ಸಾಮಾನ್ಯ.

ಆದರೆ, 53 ವರ್ಷದ ಜನಾರ್ದನ ಮಡಿವಾಳ ಅವರು ರಾಜಕೀಯ ಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು, ಸಮಾಜಶಾಸ್ತ್ರದ ಕುರಿತು ಒಂದೊಂದು ಪುಸ್ತಕ ಮತ್ತು ಸಾಮಾನ್ಯ ಜ್ಞಾನ ಹಾಗೂ ದಿನಪತ್ರಿಕೆಗಳನ್ನು ಓದಿ ಯಶಸ್ಸು ಕಂಡಿದ್ದಾರೆ. ಓದಿಗಾಗಿಯೇ ಅವರು ಪ್ರತ್ಯೇಕವಾಗಿ ವೇಳಾಪಟ್ಟಿಯನ್ನು ಹಾಕಿಕೊಂಡಿರಲಿಲ್ಲ. ಸಿಕ್ಕ ಸಮಯವನ್ನೇ ಸದುಪಯೋಗಪಡಿಸಿಕೊಂಡು ಓದಿ ಕೆಎಎಸ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಸಹಾಯಕ ನಿಯಂತ್ರಣಾಧಿಕಾರಿ (ಎಸ್‌ಎಡಿ) ಗ್ರೂಪ್-ಎ, ಡಿವೈಎಸ್‌ಪಿ ಗ್ರೂಪ್-ಎ, ಅಸಿಸ್ಟಂಟ್ ಕಮಿಶನರ್ (ಗ್ರೂಪ್, ಜ್ಯೂನಿಯರ್ ಸ್ಕೆಲ್). ಅಸಿಸ್ಟಂಟ್ ಟ್ರಜರಿ ಆಫಿಸರ್ (ಗ್ರೂಪ್ ಬಿ), ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ (ಗ್ರೂಪ್-ಬಿ) ಹುದ್ದೆಗೆ ಜನಾರ್ದನ ಅವರು ಆದ್ಯತೆ ನೀಡಿದ್ದಾರೆ.

`ಕೆಎಎಸ್ ಮಾಡಬೇಕು ಎನ್ನುವ ಆಸೆ ಇರಲಿಲ್ಲ. ಪತ್ರಿಕೆಯಲ್ಲಿ ಪ್ರಕಟಣೆ ನೋಡಿದ ನಂತರ ಅರ್ಜಿ ಹಾಕಬೇಕಿನಿಸಿತು. ಅರ್ಜಿ ಹಾಕಿದೆ. ಪರೀಕ್ಷೆಯಲ್ಲಿ ಪಾಸಾಗಿ ಸಂದರ್ಶನವನ್ನೂ ನೀಡಿದ್ದೇನೆ. ಆದರೆ, ಹುದ್ದೆ ನೀಡಲು ಲಕ್ಷಗಟ್ಟಲೇ ಹಣ ಕೇಳುತ್ತಿದ್ದಾರೆ. ನನ್ನೊಂದಿಗೆ ಸಂದರ್ಶನಕ್ಕೆ ಹಾಜರಾದವರು ಈಗಾಗಲೇ ಹಣ ನೀಡಿದ್ದಾರೆ. ಲಕ್ಷಗಟ್ಟಲೆ ಹಣ ಕೊಡಲು ನನ್ನಿಂದ ಸಾಧ್ಯವಿಲ್ಲ~ ಎನ್ನುತ್ತಾರೆ ಜನಾರ್ದನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT