ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರ ಬದುಕಿಗೂ ಬೇಕು ಸ್ವಚ್ಛತೆಯ ಬೆಳಕು...

Last Updated 8 ಅಕ್ಟೋಬರ್ 2012, 4:20 IST
ಅಕ್ಷರ ಗಾತ್ರ

ಬೆಳ್ಳಂಬೆಳ್ಳಗೆ ಮುಂಗೋಳಿ ಕೂಗುವ ಮುನ್ನವೇ ಅವರ ದಿನಚರಿ ಆರಂಭ. ಮಳೆಯಿರಲಿ, ಚಳಿಯಿರಲಿ, ಬಿಸಿಲಿರಲಿ ಪ್ರತಿದಿನ ಅವರ ಸೇವೆ ಇಲ್ಲದಿದ್ದರೆ ಉಳಿದವರ ಬದುಕು ಅಸಹನೀಯ. ಹಾಗೆ ತಮ್ಮ ಸೇವೆ ಮೂಲಕ ಒಂದು ಊರಿನ ಆರೋಗ್ಯಕ್ಕೆ ಕಾರಣರಾಗುವವರು ಪೌರಕಾರ್ಮಿಕರು.

ಸ್ವಚ್ಛತೆಯ ಮೂಲಕ ಆರೋಗ್ಯಕರ ಬದುಕಿಗೆ ಬುನಾದಿ ಹಾಕುವ ಪೌರಕಾರ್ಮಿಕರ ಬದುಕು ಮಾತ್ರ ಇನ್ನೂ ಕತ್ತಲಲ್ಲೇ ಉಳಿದಿದೆ. ಅವರ ಬದುಕಿಗೆ `ಸ್ವಚ್ಛತೆ~ಯ ಬೆಳಕು ಬೀರುವ ಅಗತ್ಯವಿದೆ. ಆ ಬೆಳಕಿನ ಕಿರಣದ ಹಾದಿಯಾದರೂ ಯಾವುದು? ಪೌರಕಾರ್ಮಿಕರ ಬದುಕಿಗೆ ಭದ್ರತೆ ಒದಗಿಸುವವರಾರು? ಅವರ ಸಮಸ್ಯೆ- ಸವಾಲುಗಳೇನು? ಎಲ್ಲರಂತಿದ್ದೂ ಎಲ್ಲರಂತಾಗದೇ ತಮ್ಮದೇ ವಿಭಿನ್ನ ನೆಲೆಯ ಬದುಕು ರೂಢಿಸಿಕೊಂಡಿರುವ ಅವರ ಬದುಕಿನ ಕೆಲ ಝಲಕ್‌ಗಳು ಇಲ್ಲಿವೆ...

ಈ ಗ್ಲೌಸು, ಬೂಟು ಬೇಡ...
ಸ್ವಚ್ಛತೆ ಕೆಲಸ ಮಾಡುವಾಗ ಧರಿಸಲು ಮಹಾನಗರ ಪಾಲಿಕೆಯವರು ಪ್ಲಾಸ್ಟಿಕ್ ಗ್ಲೌಸ್, ಬೂಟು ಕೊಟ್ಟಿದ್ದಾರೆ. ಆದರೆ, ಆ ಗ್ಲೌಸಿನಲ್ಲಿ ಕೈ ತೂರಿಸಲಾಗದು. ಮಣಭಾರದ ಬೂಟಿನಲ್ಲಿ ಕಾಲು ಕೂಡಾ ತೂರಿಸಲಾಗದು. ಹೇಗೋ ಗ್ಲೌಸು ಧರಿಸಿ ಕೆಲಸ ಮಾಡಲು ಹೊರಟರೆ ಕೈಬೆರಳು ಹಿಡಿದಂತಾಗುತ್ತವೆ. ಬೆರಳು ಅಲುಗಾಡಿಸಲು ಕಷ್ಟವಾಗುತ್ತೆ. ಇನ್ನು ಬೂಟನ್ನು ಹಾಕ್ಕೊಂಡು ಓಡಾಡೋದು ನಮ್ ಹೆಣ್ಣುಮಕ್ಕಳಿಗೆ ತುಂಬಾನೇ ಕಷ್ಟ.

ಹಾಗಾಗಿ, ಅವುಗಳ ಸಹವಾಸವೇ ಬೇಡ ಅಂತ, ಚೀಲದಲ್ಲಿ ಕಟ್ಟಿಟ್ಟು, ಬರೀ ಕೈನಲ್ಲಿ ಚರಂಡಿ, ರಸ್ತೆ ಎಲ್ಲವನ್ನೂ ಸ್ವಚ್ಛಗೊಳಿಸುತ್ತೇವೆ ಎನ್ನುತ್ತಾರೆ ಮಹಿಳಾ ಪೌರಕಾರ್ಮಿಕರು. ಪುರುಷ ಪೌರಕಾರ್ಮಿಕರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

`ಗ್ಲೌಸ್ ಮತ್ತು ಬೂಟಿನ ಸೌಲಭ್ಯ ನೀಡುವಾಗ ತುಸು ಕಾಳಜಿ ವಹಿಸಿದ್ದರೆ ಅದು ನಮಗೆ ಅನುಕೂಲವಾಗುತ್ತಿತ್ತು. ಅಷ್ಟೊಂದು ಭಾರದ ಬೂಟು ಗಂಡಸರು ಹೇಗೋ ಧರಿಸಬಹುದೇನೋ, ಆದರೆ, ನಮಗಂತೂ ಮುಜುಗರ ಆಗುತ್ತೆ. ಅದನ್ನು ಧರಿಸಿ ಕೆಲಸ ಮಾಡೋದಾದರೂ ಹೇಗೆ? ಮೊದಲೇ ಪೌರಕಾರ್ಮಿಕರಲ್ಲಿ ಅನಕ್ಷರಸ್ಥರೇ ಹೆಚ್ಚು.

ಅದರಲ್ಲೂ ತುಸು ವಯಸ್ಸಾದ ಹೆಣ್ಮಕ್ಕಳು ನಾಚಿಕೆಯಿಂದ ಈ ಗ್ಲೌಸ್, ಬೂಟಿನ ಸಹವಾಸವೇ ಬೇಡ ಅಂತಾರೆ. ನಮ್ಮ ಆರೋಗ್ಯದ ಬಗ್ಗೆನೂ ಕಾಳಜಿ ಮಾಡ್ಬೇಕು ನಿಜ. ಆದರೆ, ಸುಲಭವಾಗಿ ಕೈಬೆರಳು ಆಡಿಸಲಾಗದ ಆ ಗ್ಲೌಸು ಧರಿಸಿ ಏನು ಕೆಲಸ ಮಾಡೋಕೆ ಆಗುತ್ತೆ ಹೇಳಿ?~ ಎಂದು ಮರುಪ್ರಶ್ನಿಸುತ್ತಾರೆ ಹಿರಿಯ ಮಹಿಳಾ ಪೌರಕಾರ್ಮಿಕರು.

ಪಾಲಿಕೆ ವ್ಯಾಪ್ತಿಯಲ್ಲಿ ಸ್ಟೋರ್ ಕೀಪರ್ ಪೌರಕಾರ್ಮಿಕರಿಗೆ ಕಸಗುಡಿಸಲು ಕಸಪೊರಕೆ, ಬರಲುಕಡ್ಡಿ, ಚಲಕೆ, ಬಿದಿರಿನ ಪುಟ್ಟಿ, ಹಾರೆ, ಪಿಕಾಸಿ ಇತ್ಯಾದಿ ಸಲಕರಣೆಗಳನ್ನು ವಿತರಿಸಬೇಕು. ಆದರೆ, ಇವು ಯಾವುದನ್ನೂ ಪಾಲಿಕೆ ವತಿಯಿಂದ ಸಮರ್ಪಕವಾಗಿ ವಿತರಿಸುತ್ತಿಲ್ಲ. ಕೇಳಿದರೆ, ನೀವೇ ತಾನೇ ಕಸ ಗುಡಿಸೋದು ನಿಮ್ಮ ಸ್ವಂತ ಖರ್ಚಿನಲ್ಲಿ ಪೊರಕೆ ಖರೀದಿಸಿ, ಗುಡಿಸಿ ಎನ್ನುತ್ತಾರೆ. ಸರ್ಕಾರ ಅನುದಾನ ಕೊಟ್ಟರೂ ಇವರು ಕೊಡೋದಿಲ್ಲ. ಸ್ವಚ್ಛತಾ ಕಾರ್ಯಕ್ಕೆ ಸಲಕರಣೆಯೇ ನೀಡಿದಿದ್ದಲ್ಲಿ ನಾವು ಕೆಲಸ ಮಾಡೋದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ ಪೌರಕಾರ್ಮಿಕರು.

ಮತ್ತೆ ಕೆಲವರು ತಮ್ಮದೇ ಸ್ವಂತ ಖರ್ಚಿನಲ್ಲಿ ಪೊರಕೆ, ಪುಟ್ಟಿ ಇತ್ಯಾದಿ ಸಲಕರಣೆ ಖರೀದಿಸಿ, ಸ್ವಚ್ಛತಾ ಕಾರ್ಯ ಮಾಡುತ್ತಾರೆ. ಕಸ ತುಂಬಲು ಪಾಲಿಕೆ ಕಾರ್ಮಿಕರು ತಮ್ಮದೇ ವಿಧಾನವನ್ನೂ ಕಂಡುಕೊಂಡಿದ್ದಾರೆ. ಹಳೇ ಪ್ಲಾಸ್ಟಿಕ್ ಚೀಲಗಳೋ ಇಲ್ಲವೇ, ಗೋಣಿ ಚೀಲಗಳನ್ನು ಬಳಸಿ, ಅದರಲ್ಲಿ ಕಸತುಂಬಿ ಎಳೆದುಕೊಂಡು ಹೋಗುವ ವಿಧಾನ ಕಂಡುಕೊಂಡಿದ್ದಾರೆ. 

 ಅವರ ಬದಲಿಗೆ ಇವರು...!
ನಗರ ಪೌರಕಾರ್ಮಿಕರಲ್ಲಿ ಕೆಲ ವಯಸ್ಸಾದ ಇಲ್ಲವೇ ಅನಾರೋಗ್ಯದ ಬಳಲುತ್ತಿರುವವರು ಸ್ವಚ್ಛತಾ ಕೆಲಸಕ್ಕೆ ತಮ್ಮ ಬದಲು ಇತರರನ್ನು ಕಳುಹಿಸುವ ಪರಿಪಾಠವಿಟ್ಟುಕೊಂಡಿದ್ದಾರೆ. ಈ ರೀತಿಯ ಬದಲೀ ಕಾರ್ಮಿಕರಿಗೆ ತಿಂಗಳಿಗೆ ರೂ2ರಿಂದ 3 ಸಾವಿರ ಸಂಬಳವನ್ನೂ ಪೌರಕಾರ್ಮಿಕರು ನೀಡುತ್ತಾರೆ. ಇಷ್ಟು ಕಡಿಮೆ ಸಂಬಳಕ್ಕೆ  ಸರಿಯಾಗಿ ಕೆಲಸ ಮಾಡದೇ ಹಾಗೇ ಬಂದು ಹೀಗೆ ಹೋಗ್ತಾರೆ ಎಂದು ಆರೋಪಿಸುತ್ತಾರೆ ನಾಗರಿಕರು.

ಬದಲೀ ಕಾರ್ಮಿಕರು ತಮ್ಮ ಸ್ವಂತ ರಿಸ್ಕ್ ಮೇಲೆ ಈ ಕೆಲಸಕ್ಕೆ ಬರುತ್ತಾರೆ. ಆರೋಗ್ಯ ಕೈಕೊಟ್ಟಲ್ಲಿ, ಏನಾದರೂ ಸಮಸ್ಯೆ ಆದಲ್ಲಿ ಅವರೇ ಪರಿಹರಿಸಿಕೊಳ್ಳುತ್ತಾರೆ. ಪೌರಕಾರ್ಮಿಕರಂತೆ ಇವರೂ ಯೂನಿಫಾರ್ಮ್ ಧರಿಸುವುದರಿಂದ ವಾರ್ಡ್‌ನ ಜನರಿಗೆ ಇವರೂ ಪೌರಕಾರ್ಮಿಕರೇ ಎಂಬ ಭಾವನೆ ಮೂಡುತ್ತದೆ. ಹಾಗಾಗಿ, ಒಬ್ಬರ ಬದಲು ಮತ್ತೊಬ್ಬರು ಕೆಲಸ ನಿರ್ವಹಿಸುವುದು ಗೊತ್ತೇ ಆಗದು ಎನ್ನುತ್ತವೆ ಮೂಲಗಳು.

ಕಾರ್ಮಿಕರ ದಿನಕ್ಕೂ ರಜೆ ಇಲ್ಲ
ಪೌರಕಾರ್ಮಿಕರಿಗೆ ವರ್ಷಕ್ಕೆ 30 ದಿನಗಳ ರಜೆ ಇದೆ. ಆದರೆ, ಅದರಲ್ಲಿ ದೊರೆಯುವುದು 15 ರಜೆ ಮಾತ್ರ. ಕೆಲವೊಮ್ಮೆ ಹಬ್ಬ- ಹರಿದಿನಗಳಲ್ಲಿ ಸರ್ಕಾರಿ ರಜೆ ಇದ್ದರೂ ಮಹಾನಗರ ಪಾಲಿಕೆ ನಮ್ಮಿಂದ ಕೆಲಸ ಮಾಡಿಸುತ್ತೆ. ಈ ಬಾರಿ ಮೇ 1ರಂದು ಕಾರ್ಮಿಕ ದಿನಾಚರಣೆ ದಿನವೂ ಕೂಡಾ ರಜೆ ನೀಡಿಲ್ಲ. ಅಲ್ಲದೇ, ಈಚೆಗಷ್ಟೇ ರಾಜ್ಯಾದ್ಯಂತ  `ಪೌರಕಾರ್ಮಿಕರ ದಿನಾಚರಣೆ~ ನಡೆಯಿತು.

ಬೆಂಗಳೂರು ಸೇರಿದಂತೆ ಇತರ ಸಣ್ಣ-ಪುಟ್ಟ ನಗರಗಳಲ್ಲೂ ಪೌರ ಕಾರ್ಮಿಕ ದಿನ ಆಚರಿಸಲಾಯಿತು. ಆದರೆ, ನಮ್ಮ ಪಾಲಿಕೆಯಿಂದ ಪೌರಕಾರ್ಮಿಕರ ದಿನಾಚರಣೆ ನಡೆಯಲೇ ಇಲ್ಲ. ಇನ್ನು ಹೆಣ್ಣುಮಕ್ಕಳಿಗೆ ಅದರಲ್ಲೂ ಗುತ್ತಿಗೆ ಮಹಿಳಾ ಪೌರಕಾರ್ಮಿಕರಿಗೆ ಹೆರಿಗೆ ರಜೆಯ ಸೌಲಭ್ಯವೂ ಇಲ್ಲ.  ದಿಢೀರನೆ ಅನಾರೋಗ್ಯಕ್ಕೆ ಈಡಾದರೆ ಸೂಕ್ತ ಚಿಕಿತ್ಸಾ ಸೌಲಭ್ಯವೂ ಇಲ್ಲ ಎನ್ನುತ್ತಾರೆ ಕಾರ್ಮಿಕರು.

ನಮ್ಮನ್ನೂ ಗೌರವದಿಂದ ಬದುಕಲು ಬಿಡಿ...
`ನಾವು ಕಸಗುಡಿಸುವವರೇ ಇರಬಹುದು. ಮಲ-ಮೂತ್ರ, ಚರಂಡಿ, ಕೊಚ್ಚೆಯನ್ನೂ ಶುದ್ಧಮಾಡ್ತೀವಿ. ನಮ್ಮ ಕಾಯಕ ನಮಗೆ ಅನ್ನ ಕೊಡುತ್ತೆ. ಆದರೆ, ಈ ಕಾಯಕ ಮಾಡುವಾಗಲೂ ಕೆಲ ಗಂಡಸರು ನಮ್ಮನ್ನು ತುಚ್ಛವಾಗಿ ಕಾಣ್ತಾರೆ ಮೇಡಂ. ಬಗ್ಗಿ ಕೆಲಸ ಮಾಡುವಾಗ ಸೀರೆಯ ಅಂಚಲ್ಲಿ ತುಸು ಮೈಕಾಣುತ್ತಿದ್ದಲ್ಲಿ, ಮಂಡಿ ತನಕ ಸೀರೆ ಎತ್ತಿ ಕಟ್ಟಿದಾಗ ಕಾಲು ಕಾಣುತ್ತಿದ್ದರೆ ನಮ್ಮನ್ನು ಕೆಟ್ಟದೃಷ್ಟಿಯಿಂದ ದಿಟ್ಟಿಸುತ್ತಾರೆ~

`ಇನ್ನು ಕೆಲವರು ಮನೆಯ ಮೇಲಿಂದ ನಮ್ಮ ಮೈಮೇಲೆ ಮುಸುರೆಯ ನೀರನ್ನೂ ಚೆಲ್ಲಿದ ಪ್ರಸಂಗಗಳಿವೆ. ಯಾಕೆ ನಾವು ಅವರಿಗೆ ಮನುಷ್ಯರ ಥರ ಕಾಣೋದಿಲ್ವಾ? ಹೊಟ್ಟೆಪಾಡಿಗಾಗಿ ಈ ಕೆಲಸಕ್ಕೆ ಬಂದರೆ ಇಲ್ಲೂ ನಮ್ಮ ಮೇಲೆ ಕೆಟ್ಟದೃಷ್ಟಿ ಬೀರ‌್ತಾರೆ. ನಮ್ಮನ್ನೂ ಗೌರವದಿಂದ ಜೀವನ ಮಾಡಲು ಬಿಡಬೇಕು~ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಕೆಲ ಮಹಿಳಾ ಪೌರಕಾರ್ಮಿಕರು.

ಗುತ್ತಿಗೆ ಬೇಡ ದಿನಗೂಲಿ ಮಾಡಿ
ಜಿಲ್ಲಾಧಿಕಾರಿ ಕೆ. ಶಿವರಾಂ ಅವರ ಅವಧಿಯಲ್ಲಿ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಪೌರಕಾರ್ಮಿಕರ ನೇಮಕಕ್ಕೆ ಚಾಲನೆ ನೀಡಲಾಯಿತು. ಆಗ ಎಸ್.ಎಸ್. ಮಲ್ಲಿಕಾರ್ಜುನ್ ಯುವಜನ ಮತ್ತು ಕ್ರೀಡಾ ಖಾತೆ ಸಚಿವರಾಗಿದ್ದರು. ನಾವೆಲ್ಲಾ ಹೋಗಿ ಸಾರ್, ಗುತ್ತಿಗೆ ಬದಲು ದಿನಗೂಲಿ ಆಧಾರದಲ್ಲಿ ನೇಮಕಾತಿ ಮಾಡಿ ಎಂದು ಮಲ್ಲಿಕಾರ್ಜುನ್ ಮತ್ತು ಶಿವರಾಂ ಅವರಿಗೆ ಮನವಿ ಮಾಡಿದ್ದೆವು.

ಆದರೆ, ಅವರು ಇಲ್ಲ ಇದು ತಾತ್ಕಾಲಿಕ. ಒಂದು ತಿಂಗಳು ಪರೀಕ್ಷಾರ್ಥ ಅಷ್ಟೇ. ಗುತ್ತಿಗೆ ನೌಕರರ ನೇಮಕಕ್ಕೆ ಟೆಂಡರ್ ಕರೀತೀವಿ. ಆಮೇಲೆ ಈ ಕಾರ್ಮಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸಿಕೊಡ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಆ ಭರವಸೆ ಹಾಗೇ ಉಳಿದು ಗುತ್ತಿಗೆ ಪದ್ಧತಿ ಮುಂದುವರಿಯಿತು. ಕೋರ್ಟ್ ಯಾವತ್ತೂ ನಮ್ಮ ಪರ ಬರೋದಿಲ್ಲ. ಈಗಲಾದರೂ ಟೆಂಡರ್ ಪದ್ಧತಿ ಬಿಟ್ಟು ಪೌರಕಾರ್ಮಿಕರನ್ನು ದಿನಗೂಲಿ ಆಧಾರದಲ್ಲಿ ನೇಮಿಸಬೇಕು ಎಂದು ಆಗ್ರಹಿಸುತ್ತಾರೆ ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಮತ್ತು `ಡಿ~ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ.

ಸಾವಿನೊಂದಿಗೆ ಹೋರಾಟ!
ಪ್ರತಿದಿನವೂ ಸಾವಿನ ಜತೆ ಹೋರಾಟವಾಗಿದೆ ನಮ್ಮ ಬದುಕು. ಇಂಜೆಕ್ಷನ್-ಸಿರಿಂಜ್, ರಕ್ತದ ಬಟ್ಟೆ, ಹೊಲಸು, ಕೊಳೆತು ನಾರುವ ಪದಾರ್ಥ, ಸತ್ತು ಕೊಳೆತು ನಾರುವ ಹಂದಿ, ಮೈತುಂಬಿ ಹರಿಯುವ ಚರಂಡಿ -ಹೀಗೆ ಒಬ್ಬ ಮನುಷ್ಯ ಅಸಹ್ಯ ಮಾಡುವ ಎಲ್ಲಾ ವಸ್ತುಗಳನ್ನು ನಮ್ಮ ಕೈಯಿಂದಲೇ ತೆಗೆದು ಹಾಕ್ತೀವಿ. ಎಚ್‌ಐವಿ ಪೀಡಿತ ರೋಗಿಯ ಸಿರಿಂಜಿನ ಸಣ್ಣ ಸೂಜಿಯೂ ನಮಗೆ ತಾಕಿದರೆ ನಮಗೆ ಸಾವು ಕಟ್ಟಿಟ್ಟ ಬುತ್ತಿ.

ಇನ್ನು ಮಲೇರಿಯಾ, ಡೆಂಗೆ, ಕಾಲರಾ ಈ ಕಾಯಿಲೆಗಳೇನಾದರೂ ಬಂದಲ್ಲಿ ನಮ್ಮ ಪಾಡು ಯಾರಿಗೂ ಬೇಡ. ಕನಿಷ್ಠ ಆರೋಗ್ಯದ ಸೌಲಭ್ಯವೂ ನಮಗಿಲ್ಲ. ಹೊಲಸು ಬಳಿದು ದುಡಿದು ಸಂಪಾದಿಸಿದ ಹಣ ಖಾಸಗಿ ಆಸ್ಪತ್ರೆಗೆ ಇಟ್ಟು ಬರ್ಬಾದ್ ಆಗಿದ್ದೀವಿ. ಹಿಂದೆ ಪಾಲಿಕೆಯೇ ನಡೆಸುವ ಪೌರಕಾರ್ಮಿಕರ ಆಸ್ಪತ್ರೆ ಇತ್ತು. ಆದರೆ, ಈಗ ಅದನ್ನು ಮುಚ್ಚಲಾಗಿದೆ. ದೊಡ್ಡದೊಡ್ಡ ಆಸ್ಪತ್ರೆಗಳಿಗೆ ಹೋಗುವಷ್ಟು ಶಕ್ತಿ ನಮಗಿಲ್ಲ. ಸಚಿವ ಸುರೇಶ್‌ಕುಮಾರ್ ಅವರಿಗೆ ಬರೀ ಬೆಂಗಳೂರು, ಮೈಸೂರು ಪಾಲಿಕೆಯಷ್ಟೇ ಕಣ್ಣಿಗೆ ಕಾಣಿಸುತ್ತೆ. ನಾವು ಕಾಣೋದಿಲ್ವೇ? ಎಂದು ಆಕ್ರೋಶದಿಂದ ಪ್ರಶ್ನಿಸುತ್ತಾರೆ ಪೌರಕಾರ್ಮಿಕರು.

ಪಾಲಿಕೆಯಲ್ಲಿ ಈಗ 400 ಕಾಯಂ ಪೌರಕಾರ್ಮಿಕರು, 291 ಗುತ್ತಿಗೆ ಪೌರಕಾರ್ಮಿಕರು ಇದ್ದಾರೆ. ಆದರೆ, ಮಾಜಿ ಶಾಸಕ ಐ.ಪಿ.ಡಿ. ಸಾಲಪ್ಪ ಅವರ ವರದಿ ಪ್ರಕಾರ 500 ಜನರಿಗೆ ಒಬ್ಬ ಪೌರಕಾರ್ಮಿಕ ಇರಬೇಕು. ನಗರದ ಜನಸಂಖ್ಯೆ ಈಗ ಹೆಚ್ಚಾಗಿದೆ, ನಗರಸಭೆಯಿಂದ ಪಾಲಿಕೆಗೆ ಮೇಲ್ದರ್ಜೆಗೇರಿದೆ. ಆದರೆ, ಪೌರಕಾರ್ಮಿಕರ ಸಂಖ್ಯೆಯಲ್ಲಿ ಮಾತ್ರ ಯಾವುದೇ ವ್ಯತ್ಯಾಸವಾಗಿಲ್ಲ. ಇನ್ನಾದರೂ ಹೊಸ ಕಾರ್ಮಿಕರ ನೇಮಕಾತಿ ಬಗ್ಗೆ ಗಮನಹರಿಸಬೇಕು ಎನ್ನುತ್ತಾರೆ ಪೌರಕಾರ್ಮಿಕರ ಮುಖಂಡರು.

ಸಕ್ಕಿಂಗ್ ಯಂತ್ರ ಕೊಡಿ
ನಮಗೆ ಇಎಸ್‌ಐ ಕಾರ್ಡ್ ಇಲ್ಲ, ಯಶಸ್ವಿನಿ ಆರೋಗ್ಯ ಕಾರ್ಡ್ ಸೌಲಭ್ಯವೂ ಇಲ್ಲ. ಈಗಲೂ ಮನುಷ್ಯರಿಂದಲೇ ಕೆಲವೆಡೆ ಮಲದ ಗುಂಡಿ ಸ್ವಚ್ಛತೆ ಮಾಡಿಸುತ್ತಿದ್ದಾರೆ. ಇಡೀ ಪಾಲಿಕೆಗೆ ಇರುವುದೇ ಎರಡು ಸಕ್ಕಿಂಗ್ ಯಂತ್ರಗಳು. ಕೆಲವೊಮ್ಮೆ ಇವನ್ನೂ ಕೂಡಾ ಜಿಲ್ಲಾ ಪಂಚಾಯ್ತಿಯವರು ತೆಗೆದುಕೊಂಡು ಹೋಗುತ್ತಾರೆ.

ನಾವು ಕೆಲಸ ಮಾಡುವಾಗಲೇ ಸತ್ತರೂ ನಮ್ಮನ್ನು ಕೇಳುವವರಿಲ್ಲ. ಪಾಲಿಕೆ ಶೇ 22.75ರ ನಿಧಿಯಲ್ಲಿ ಪಾಲಿಕೆ ಆಯುಕ್ತರು ಪೌರಕಾರ್ಮಿಕರಿಗಾಗಿ ಅನುದಾನ ನೀಡಬಹುದು. ಆದರೆ, ಅವರು ಇದುವರೆಗೂ ನಮ್ಮ ಸಮಸ್ಯೆ ಬಗೆಹರಿಸುವುದಿರಲಿ, ಸಮಸ್ಯೆ ಆಲಿಸಿದರೆ ಸಾಕು ಎಂಬಂತಾಗಿದೆ ಎಂದು ಅಳಲುತೋಡಿಕೊಳ್ಳುತ್ತಾರೆ ಈ ಕಾರ್ಮಿಕರು.

ನಮ್ಮಕಂದಮ್ಮಗಳತ್ತ ಇರಲಿ ಕರುಣೆ
ಪೌರಕಾರ್ಮಿಕರ ಮಕ್ಕಳು ಮುಖ್ಯವಾಹಿನಿಗೆ ತರಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಆದರೆ, ಅವುಗಳಲ್ಲಿ ಸರ್ಕಾರ ಒಂದನ್ನೂ ಕಾರ್ಯರೂಪಕ್ಕೆ ತಂದಿಲ್ಲ. ನಮಗೆ ಸಾಲ ಬೇಡ, ನಮ್ಮ ಮಕ್ಕಳಿಗಾಗಿ ತಾಲ್ಲೂಕಿಗೊಂದರಂತೆ ವಸತಿಶಾಲೆ ಕಟ್ಟಿಸಿಕೊಡಲಿ. ಪ್ರತಿವರ್ಷ ಕೇಂದ್ರ ಸರ್ಕಾರ ಪೌರ ಕಾರ್ಮಿಕರಿಗಾಗಿಯೇ ಮೀಸಲಿಟ್ಟಿರುವ ಸುಮಾರು ರೂ300 ಕೋಟಿಯಷ್ಟು ಹಣ ಬಳಸದೇ ರಾಜ್ಯದಿಂದ ವಾಪಸ್ ಹೋಗುತ್ತದೆ.
 
ತುರ್ತು ಮತ್ತು ಅಗತ್ಯ ಸೇವೆಗಳಲ್ಲಿ ಇರುವವರ ನೌಕರಿ ಕಾಯಂ ಮಾಡಬೇಕು ಎಂದು ಪೌರಕಾರ್ಮಿಕ ಕಾಯ್ದೆ ಹೇಳುತ್ತದೆ. ಉದಾಹರಣೆಗೆ ಪೊಲೀಸರು, ಆರೋಗ್ಯ ಇಲಾಖೆಯಲ್ಲಿ ನೌಕರರನ್ನು ದಿನಗೂಲಿ ಆಧಾರದಲ್ಲಿ ನೇಮಿಸಿ ನಂತರ ಕಾಯಂ ಮಾಡಲಾಗಿದೆ. ಆದರೆ, ನಮ್ಮನ್ನು ಟೆಂಡರ್ ಮೂಲಕ ನೇಮಿಸಿಕೊಂಡು ಸೂಕ್ತ ಸಂಬಳವನ್ನೂ ನೀಡದೇ ಸತಾಯಿಸುತ್ತಿದ್ದಾರೆ. ಸರ್ಕಾರ ಇನ್ನಾದರೂ ನಮ್ಮನ್ನು ಕಾಯಂ ಮಾಡಿಕೊಳ್ಳಲಿ.

ಕಾಯಂ ಆಗಿರುವ ಪೌರಕಾರ್ಮಿಕ ಸತ್ತರೆ ಸರ್ಕಾರ ಆತನ ಶವಸಂಸ್ಕಾರಕ್ಕೆ ರೂ7ಸಾವಿರ ನೀಡುತ್ತದೆ. ಆದರೆ, ಗುತ್ತಿಗೆ ಕಾರ್ಮಿಕ ಸತ್ತರೆ ನಾವೇ ನಮ್ಮ ಸಹ್ಯೋದ್ಯೋಗಿಗಳ ಬಳಿ ಹಣ ಚಂದಾ ಎತ್ತಿ ಮಣ್ಣು ಮಾಡಬೇಕು. ಇನ್ನು ಬೆಳಿಗ್ಗೆ 5ರಿಂದ ಮಧ್ಯಾಹ್ನ1ರ ತನಕ ಪೌರಕಾರ್ಮಿಕರು ಮನೆಯಿಂದ ಹೊರಗೇ ದುಡಿಯುವುದರಿಂದ ಮನೆಯಲ್ಲಿ ಗೃಹಕೃತ್ಯಗಳನ್ನು ಸರಿಯಾಗಿ ನಿಭಾಯಿಸಲು ಆಗದು. ಮುಖ್ಯವಾಗಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಆಗುತ್ತಿಲ್ಲ.

ಕೆಲ ರಾಜಕೀಯ ಮುಖಂಡರು ನಮ್ಮ ಮಕ್ಕಳನ್ನು ತಮ್ಮ ಬೆಂಬಲಕ್ಕೆ ಇಟ್ಟುಕೊಂಡು ಅವರ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಮೊದಲೇ ಅಕ್ಷರವಂಚಿತರಾಗಿರುವ ಮಕ್ಕಳು ಬೀದಿಗೆ ಬಿದ್ದು ದಿಕ್ಕು ತಪ್ಪುತ್ತಾರೆ.

ಎಷ್ಟೋ ಬಾರಿ ಅವರದಲ್ಲದ ತಪ್ಪಿಗೆ ಪೊಲೀಸ್ ಠಾಣೆ, ಜೈಲು, ಕೋರ್ಟಿನ ಮೆಟ್ಟಿಲೇರಿ ಜೀವ ಉಳಿದರೆ ಸಾಕು ಎಂದು ಬಂದವರಿದ್ದಾರೆ ಎಂದು ನೊಂದು ನುಡಿಯುತ್ತಾರೆ ಹೆಸರು ಹೇಳಲಿಚ್ಛಿಸದ ಕಾರ್ಮಿಕ ಮಹಿಳೆಯೊಬ್ಬರು. ಒಟ್ಟಿನಲ್ಲಿ ಪೌರಕಾರ್ಮಿಕರು ಮತ್ತು ಅವರ ಮಕ್ಕಳಿಗೆ ಸರ್ಕಾರ, ಪಾಲಿಕೆ ಉತ್ತಮ ಬದುಕು ಕಲ್ಪಿಸಿಕೊಟ್ಟು ಮುಖ್ಯವಾಹಿನಿಗೆ ತರಬೇಕು ಎಂಬುದೇ ಪೌರಕಾರ್ಮಿಕರ ಒಕ್ಕೊರಲ ವಿನಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT