ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವು ಬರಿ ಕಲ್ಲಲ್ಲವೋ ಅಣ್ಣಾ...!

Last Updated 19 ಅಕ್ಟೋಬರ್ 2012, 8:25 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ದಸರಾ ಎಂದರೆ ಥಟ್ಟನೆ ನೆನಪಿಗೆ ಬರುವುದು ಜಂಬೂ ಸವಾರಿ, ಜಾನಪದ ಕಲಾಮೇಳ, ಮಹಾರಾಜರ ದರ್ಬಾರ್, ಕವಾಯತು ಇತ್ಯಾದಿ ಇತ್ಯಾದಿ.

ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದ್ದ ದಸರಾ ಆಚರಣೆಯ ಸಂದರ್ಭದಲ್ಲಿ ಗರುಡ ಭೇಟೆ, ಟಗರು ಕಾಳಗ, ಕತ್ತಿ ವರಸೆ ಅದಕ್ಕಿಂತ ಮಿಗಿಲಾಗಿ ಜಟ್ಟಿಗಳ ಕಾಳಗ ಜನಮನ ರಂಜಿಸುತ್ತಿದ್ದವು. ಶ್ರೀಮನ್ಮಹಾರಾಜರ ಸಮ್ಮುಖದಲ್ಲಿ ನಾಡು, ಹೊರನಾಡಿನ ಜಟ್ಟಿಗಳು ಕೆಮ್ಮಣ್ಣು ಮಟ್ಟಿಯ ಮೇಲೆ ಮದ್ದಾನೆಗಳಂತೆ ಕಾದಾಡುತ್ತಿದ್ದರು. ಗೆದ್ದವರಿಗೆ ಕೈತುಂಬ ಚಿನ್ನದ ವರಾಹ, ಕಿರೀಟ ತೊಡಿಸಲಾಗುತ್ತಿತ್ತು. ಜಟ್ಟಿ ಕಾಳಗದಂತೆ ಗುಂಡು ಎತ್ತುವ ಸ್ಪರ್ಧೆ ಕೂಡ ಮನರಂಜನೆಯ ಒಂದು ಭಾಗವೇ ಆಗಿತ್ತು. 50ರಿಂದ 100 ಕೆಜಿ ತೂಕದ ಗುಂಡು ಎತ್ತುವ ಸ್ಪರ್ಧೆಗೆ ತಂಜಾವೂರು, ಮಲಯಾಳ, ಕಾನಕಾನಹಳ್ಳಿ, ಕೊಡಗು, ತೆಂಕು ಸೀಮೆ ಇತರೆಡೆಗಳಿಂದ ಬಲ ಭೀಮರು ಇಲ್ಲಿಗೆ ಆಗಮಿಸುತ್ತಿದ್ದರು. ಕಠೀರವ ನರಸರಾಜ ಒಡೆಯರ್ ಕಾಲದಲ್ಲಿ ಜಟ್ಟಿ ಕಾಳಗ ಹಾಗೂ ಗುಂಡು ಎತ್ತುವ ಸ್ಪರ್ಧೆಗಳು ಹೆಚ್ಚು ಪ್ರಸಿದ್ಧಿ ಪಡೆದಿದ್ದವು. ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದ ಬಲಕ್ಕಿದ್ದ ಅರಮನೆಯ ಮುಂದಿನ ಪ್ರಾಂಗಣದಲ್ಲಿ ಗುಂಡು ಎತ್ತುವ ಸ್ಪರ್ಧೆ ನಡೆಯುತ್ತಿತ್ತು. ಜಟ್ಟಿ ಕಾಳಗ ಹಾಗೂ ಗುಂಡು ಎತ್ತುವ ಸ್ಪರ್ಧೆಗಾಗಿಯೇ ಆಯ್ದ ಮಂದಿಗೆ ತಿಂಗಳುಗಳ ಕಾಲ ತರಬೇತಿ ನೀಡಲಾಗುತ್ತಿತ್ತು. ಮನ್ನೆಯರು, ಮಾಂಡಳಿಕರ ಸಮ್ಮುಖದಲ್ಲಿ ನಡೆಯುತ್ತಿದ್ದ ಈ ಸ್ಪರ್ಧೆಯನ್ನು ಖುದ್ದು ಮಹಾರಾಜರೇ ಪರಿವಾರ ಸಮೇತರಾಗಿ ವೀಕ್ಷಿಸುತ್ತಿದ್ದರು. ಜಯಶಾಲಿಗಳಿಗೆ ಹಾರ, ತುರಾಯಿ ಹಾಕಿ ಅಭಿನಂದಿಸುತ್ತಿದ್ದರು.

ತಮ್ಮ ಭುಜಬಲ ಪರಾಕ್ರಮದಿಂದ `ರಣಧೀರ~ ಎಂಬ ಬಿರುದು ಪಡೆದಿದ್ದ ಕಂಠೀರವ ನರಸರಾಜ ಒಡೆಯರ್ ಸ್ವತಃ ಕುಸ್ತಿಪಟುವಾಗಿದ್ದರು. ಹಾಗಾಗಿ ಇಂತಹ ಸ್ಪರ್ಧೆಗಳಲ್ಲಿ ಅವರಿಗೆ ಅಪರಿಮಿತ ಆಸಕ್ತಿ ಇತ್ತು. ಒಡೆಯರ್ ವಂಶಸ್ಥರ ರಾಜಧಾನಿಯಾಗಿ ಮೆರೆದ ಶ್ರೀರಂಗಪಟ್ಟಣದ ಕೋಟೆ ಕಾಯುತ್ತಿದ ಸೈನಿಕರು ಶತ್ರು ಸೈನಿಕರ ಮೇಲೆ ಬುರುಜುಗಳ ಮೇಲಿಂದ ಉರುಳಿಸುತ್ತಿದ್ದ ಸುಮಾರು 15ರಿಂದ 20 ಕೆ.ಜಿ ತೂಕದ ಸಹಸ್ರಾರು ಕಲ್ಲು ಗುಂಡುಗಳು ಇಲ್ಲಿ ಪತ್ತೆಯಾಗಿವೆ.

ದಸರೆಯ ಸಂದರ್ಭದಲ್ಲಿ ಮನರಂಜನೆಗಾಗಿ ಬಳಸುತ್ತಿದ್ದ ಕಲ್ಲು ಗುಂಡುಗಳು ಹಾಗೂ ಶತ್ರು ಶಮನ ಗುಂಡುಗಳು ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಮಂದೆ, ನೆಲದಾಳದಲ್ಲಿ ಪತ್ತೆಯಾಗಿವೆ.

ಇವುಗಳನ್ನು ಜಯಚಾಮರಾಜೇಂದ್ರ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಆದರೆ `ಇವು ಬರಿ ಕಲ್ಲು~ ಎಂಬಂತೆ ನೋಡಿಕೊಳ್ಳಲಾಗುತ್ತಿದೆ. ಈ ಗುಂಡುಗಳ ಮಹತ್ವವನ್ನು ಪ್ರವಾಸಿಗರಿಗಾಗಲೀ, ಸ್ಥಳೀಯರಿಗಾಗಲಿ ತಿಳಿಸಿಕೊಡುವ ಪ್ರಯತ್ನ ಆಗುತ್ತಿಲ್ಲ ಎಂಬುದು ವಿಪರ್ಯಾಸದ ಸಂಗತಿ.

ದಸರಾಕ್ಕೆ ಸಾಕ್ಷಿಯಾಗಿದ್ದ ದೊರೆಗಳು
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸ್ವತಂತ್ರವಾಗಿ ಆಳಿದ 13 ಮಂದಿ ಪ್ರಮುಖ ಒಡೆಯರ್ ವಂಶದ ದೊರೆಗಳು ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿ, ಆಚಾರ, ವಿಚಾರವನ್ನು ಮುಂದಿನ ಪೀಳಿಗೆಗೆ ಬರೆಸಿಟ್ಟು ಹೋಗಿದ್ದಾರೆ.

ಅಂತಹ ಪ್ರಸಿದ್ಧ ಅರಸರು ಹಾಗೂ ಅವರ ಕಾಲವನ್ನು ಇಲ್ಲಿ ಕೊಡಲಾಗಿದೆ.

ರಾಜ ಒಡೆಯರ್- ಕ್ರಿ.ಶ 1610- 1617
ಹಿರಿಯ ಬೆಟ್ಟದ ಚಾಮರಾಜ ಒಡೆಯರ್- ಕ್ರಿ.ಶ 1617- 1637
ಇಮ್ಮಡಿ ರಾಜ ಒಡೆಯರ್- ಕ್ರಿ.ಶ 1637- 1638
ಕಂಠೀರವ ನರಸರಾಜ ಒಡೆಯರ್- ಕ್ರಿ.ಶ 1638- 1659
ದೊಡ್ಡ ದೇವರಾಜ ಒಡೆಯರ್- ಕ್ರಿ.ಶ 1659- 1673
ಚಿಕ್ಕ ದೇವರಾಜ ಒಡೆಯರ್- ಕ್ರಿ.ಶ 1673- 1704
2ನೇ ಕಂಠೀರವ ನರಸರಾಜ ಒಡೆಯರ್- ಕ್ರಿ.ಶ 1704-1714
ಕೃಷ್ಣರಾಜ ಒಡೆಯರ್- ಕ್ರಿ.ಶ 1714- 1732
7ನೇ ಚಾಮರಾಜ ಒಡೆಯರ್- ಕ್ರಿ.ಶ 1732- 1734
ಇಮ್ಮಡಿ ಕೃಷ್ಣರಾಜ ಒಡೆಯರ್- ಕ್ರಿ.ಶ 1734-1766
ಹೈದರ್ ಮತ್ತು ಟಿಪ್ಪು ಸುಲ್ತಾನ್ ಕಾಲದ ರಾಜ ಪ್ರತಿನಿಧಿಗಳು:
ನಂಜರಾಜ ಒಡೆಯರ್- ಕ್ರಿ.ಶ 1766- 1770
8ನೇ ಬೆಟ್ಟದ ಚಾಮರಾಜ ಒಡೆಯರ್- ಕ್ರಿ.ಶ 1770-1776
ಖಾಸಾ ಚಾಮರಾಜ ಒಡೆಯರ್- 1776-1796.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT