ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ ಮಾಜಿ ಪ್ರಧಾನಿ ಏರಿಯಲ್‌ ಶರೋನ್‌ ನಿಧನ

Last Updated 11 ಜನವರಿ 2014, 19:30 IST
ಅಕ್ಷರ ಗಾತ್ರ

ಜೆರುಸಲೇಂ (ಪಿಟಿಐ): ಇಸ್ರೇಲ್‌ನ ಮಾಜಿ ಪ್ರಧಾನಿ ಏರಿಯಲ್‌ ಶರೋನ್‌ (85) ಶನಿವಾರ ನಿಧನರಾದರು.

ಪಾರ್ಶ್ವವಾಯುವಿಗೆ ತುತ್ತಾಗಿದ್ದ ಅವರು ಎಂಟು ವರ್ಷ­ಗಳಿಂದ ಟೆಲ್‌ ಅವೀವ್‌ ನಗರ ಬಳಿಯ ಆಸ್ಪತ್ರೆಯೊಂದ­ರಲ್ಲಿ ಕೋಮಾ ಸ್ಥಿತಿಯಲ್ಲಿದ್ದರು. ಇಸ್ರೇಲ್‌ನ 11ನೇ ಪ್ರಧಾನಿ ಆಗಿದ್ದ ಶರೋನ್‌ ಕೊನೆಯು­ಸಿರೆಳೆ­ಯುವಾಗ ಅವರ ಕುಟುಂಬದ ಸದಸ್ಯರು ಆಸ್ಪತ್ರೆ­ಯಲ್ಲಿ­ದ್ದರು. ಜ. 1ರಿಂದ ಅವರ ಆರೋಗ್ಯ ಬಿಗಡಾಯಿಸಿದ ನಂತರ  ಪುತ್ರ­ರಾದ ಒಮ್ರಿ ಮತ್ತು ಗಿಲಾಡ್‌ ಶರೋನ್‌ ಜತೆಗಿದ್ದರು ಎಂದು ‘ಜೆರುಸಲೇಂ ಪೋಸ್ಟ್‌’ ವರದಿ ಮಾಡಿದೆ.

ಇಸ್ರೇಲ್‌ನ ಪ್ರಧಾನಿ ಕಚೇರಿಯು ಶೆರೋನ್‌ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲಿದೆ. ಜಗತ್ತಿನ ಈಗಿನ ಹಾಗೂ ಮಾಜಿ ನಾಯ­ಕರು ಅಂತ್ಯಸಂಸ್ಕಾರದಲ್ಲಿ ಭಾಗಿ­ಯಾಗುವ ನಿರೀಕ್ಷೆ ಇದೆ. ಶೆರೋನ್‌ ಅವರ ಅಂತ್ಯ­ಕ್ರಿಯೆ ದಕ್ಷಿಣ ಇಸ್ರೇಲ್‌ನ ನೆಗೆವ್‌ನಲ್ಲಿ ನಡೆಯಲಿದೆ. 2000ರಲ್ಲಿ ಮೃತಪಟ್ಟಿದ್ದ ಅವರ ಪತ್ನಿಯ ಸಮಾಧಿ ಬಳಿಯಲ್ಲಿಯೇ ಅಂತ್ಯ­ಸಂಸ್ಕಾರ ನಡೆಯಲಿದೆ.

ಇಸ್ರೇಲ್‌ ಸ್ವಾತಂತ್ರ್ಯ ಪಡೆದ ನಂತರ  ನಡೆದ ಯುದ್ಧಗಳಿಗೆ ಶೆರೋನ್‌ ನೀಡಿದ ಕೊಡುಗೆಗಳಿಂದ ಅವರು ದೇಶದಲ್ಲಿ  ‘ಮಿ. ಸೆಕ್ಯೂರಿಟಿ’ ಎಂದೇ ಗುರುತಿಸಿ­ಕೊಳ್ಳು­ತ್ತಿದ್ದರು. ಆದರೆ, ಅರಬ್‌ ಜಗತ್ತು ಅವರನ್ನು  ‘ಸಾಬ್ರಾ ಮತ್ತು ಷಟಿಲಾದ ಕಟುಕ’ ಎಂದು ಸಂಭೋದಿಸುತ್ತಿತ್ತು. 1982ರಲ್ಲಿ ಶರೋನ್‌ ರಕ್ಷಣಾ ಸಚಿವರಾಗಿದ್ದಾಗ ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ ನಡೆಸಿತ್ತು. ಈ ದಾಳಿಯ ರೂವಾರಿ ಶೆರೋನ್‌ ಆಗಿ­ದ್ದರು. ಈ ಆಕ್ರಮಣದ ಸಂದರ್ಭ­ದಲ್ಲಿ ಬೈರೂತ್‌ನ ಎರಡು ನಿರಾಶ್ರಿತ ಶಿಬಿರ­ಗಳಾದ ಸಾಬ್ರಾ, ಷಟಿಲಾ­ಗಳಲ್ಲಿದ್ದ ನೂರಾರು ಪ್ಯಾಲೆಸ್ಟ್ಯೆನಿ­ಯ­ರನ್ನು ಲೆಬನಾನಿನ ಕ್ರಿಶ್ಚಿಯನ್‌ ಭಯೋ­ತ್ಪಾದಕರ ನೆರವಿನೊಂದಿಗೆ ಇಸ್ರೇಲ್‌ ಹತ್ಯೆ ಮಾಡಿತ್ತು.

18 ವರ್ಷಗಳ ನಂತರ ಶರೋನ್‌ ದೇಶದ ಪ್ರಧಾನಿಯಾಗಿ ಆಯ್ಕೆ­ಯಾ­ದರು. ‘ಭದ್ರತೆ ಮತ್ತು ನಿಜವಾದ ಶಾಂತಿ’ ಸ್ಥಾಪಿಸುವ ಪ್ರಮಾಣ ಕೈಗೊಂಡಿದ್ದ ಅವರು ಎರಡನೇ ಬಾರಿ ಪಾರ್ಶ್ವವಾಯುವಿಗೆ ತುತ್ತಾಗುವವರೆಗೆ  ಅಧಿಕಾರದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT