ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊ ವಿಜ್ಞಾನಿ ಸೋಗು: ಬಂಧನ

Last Updated 3 ಏಪ್ರಿಲ್ 2013, 19:58 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೊ) ವಿಜ್ಞಾನಿ ಎಂದು ನಕಲಿ ಗುರುತಿನ ಚೀಟಿ ಹಾಗೂ ದಾಖಲೆಪತ್ರ ಸೃಷ್ಟಿಸಿ ವಂಚಿಸುತ್ತಿದ್ದ ಆರೋಪದ ಮೇಲೆ ಜಾರ್ಖಂಡ್ ಮೂಲದ ಮರ್ಷಿದ್ ಅಕ್ಮಲ್ (23) ಎಂಬಾತನನ್ನು ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಇಸ್ರೊದ ನಕಲಿ ಗುರುತಿನ ಚೀಟಿ, ಕಾರು, ಕೃತ್ಯಕ್ಕೆ ಬಳಸಿದ್ದ ಲ್ಯಾಪ್‌ಟಾಪ್, ಮೊಬೈಲ್, ಬ್ಯಾಂಕ್ ಚೆಕ್ ಮತ್ತಿತರ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

`ಮರ್ಷಿದ್, ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಪಾಖಿಝಾ ಎಂಬ ಹುಡುಗಿಯನ್ನು ಪರಿಚಯಿಸಿಕೊಂಡಿದ್ದ. ಆಕೆ ಏಳನೇ ತರಗತಿವರೆಗೆ ಆತನ ಸಹಪಾಠಿಯಾಗಿದ್ದಳು. ನಂತರ ಆಕೆ ದೆಹಲಿಗೆ ಹೋಗಿದ್ದರಿಂದ ಮರ್ಷಿದ್‌ನ ಸಂಪರ್ಕದಲ್ಲಿ ಇರಲಿಲ್ಲ. ಪರಸ್ಪರರು ಇತ್ತೀಚೆಗೆ ಫೇಸ್‌ಬುಕ್ ಮೂಲಕ ಪುನಃ ಪರಿಚಿತರಾಗಿದ್ದರು. ನಾಲ್ಕೈದು ತಿಂಗಳ ಹಿಂದೆ ದೆಹಲಿಗೆ ಹೋಗಿದ್ದ ಆರೋಪಿ, ಪಾಖಿಝಾ ಅವರನ್ನು ಭೇಟಿಯಾಗಿ ತಾನು ಇಸ್ರೊದಲ್ಲಿ ವಿಜ್ಞಾನಿಯಾಗಿದ್ದೇನೆ ಎಂದು ಸುಳ್ಳು ಹೇಳಿ ನಂಬಿಸಿದ್ದ' ಎಂದು ತಿಳಿಸಿದ್ದಾರೆ.

ದೆಹಲಿಯ ಖಾಸಗಿ ಕಾಲೇಜಿನಲ್ಲಿ ಬಿ.ಇ ಓದುತ್ತಿರುವ ಪಾಖಿಝಾ, ಜನವರಿಯಲ್ಲಿ ನಗರಕ್ಕೆ ಬಂದು ಇಂದಿರಾನಗರದ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ತರಬೇತಿಗೆ ಸೇರಿದ್ದರು. ಈ ಕಾರಣಕ್ಕಾಗಿ ಆರೋಪಿ ಸಹ ಜ.13ರಂದು ನಗರಕ್ಕೆ ಬಂದು ಸಂಜಯನಗರದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದ.

ಈ ನಡುವೆ ಪರಸ್ಪರರ ಮಧ್ಯೆ ಪ್ರೇಮಾಂಕುರವಾಗಿತ್ತು. ಪಾಖಿಝಾ ಮತ್ತು ಅವರ ಪೋಷಕರ ಮನಸೆಳೆಯುವ ಉದ್ದೇಶದಿಂದ ಆರೋಪಿಯು ಭಾರತಿನಗರದ ಅಕ್ಬರ್ ಬಾಷಾ ಎಂಬುವರಿಂದ ಕಾರೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದ. ಆ ಕಾರಿನ ಮೇಲೆ ಭಾರತ ಸರ್ಕಾರ ಮತ್ತು ಇಸ್ರೊ ಎಂದು ಸ್ಟಿಕ್ಕರ್ ಅಂಟಿಸಿಕೊಂಡು ನಗರದೆಲ್ಲೆಡೆ ಸುತ್ತಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

`ಇಸ್ರೊ ವೆಬ್‌ಸೈಟ್ ಹಾಗೂ ಇಂಟರ್‌ನೆಟ್‌ನಲ್ಲಿನ ಮಾಹಿತಿ ಆಧರಿಸಿ ಆತ ಲ್ಯಾಪ್‌ಟಾಪ್‌ನ ನೆರವಿನಿಂದ ನಕಲಿ ಗುರುತಿನ ಚೀಟಿ ಸೃಷ್ಟಿಸಿದ್ದ. ಆ ಗುರುತಿನ ಚೀಟಿಯಲ್ಲಿ ವೈಯಕ್ತಿಕ ವಿವರಗಳನ್ನು ನಮೂದಿಸಿ, ಮೆಮೊರಿ ಚಿಪ್ ಮತ್ತು ಭಾವಚಿತ್ರ ಸಹ ಅಂಟಿಸಿದ್ದ. ಫೆಬ್ರುವರಿಯಲ್ಲಿ ನಗರಕ್ಕೆ ಬಂದಿದ್ದ ಪಾಖಿಝಾ ಅವರ ತಂದೆಗೆ ಆ ಗುರುತಿನ ಚೀಟಿ ತೋರಿಸಿ ತಾನು ಇಸ್ರೊದಲ್ಲಿ ವಿಜ್ಞಾನಿ ಎಂದು ನಂಬಿಸಿದ್ದ' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಗರದ ಪೂರ್ವ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಸ್.ಮುರುಗನ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಎಸ್.ವೈ.ಗುಳೇದ್, ಇನ್‌ಸ್ಪೆಕ್ಟರ್ ಎಂ.ಎಸ್.ಸತ್ಯನಾರಾಯಣ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ?: `ಮರ್ಷಿದ್ ತನ್ನ ಗೆಳತಿ ಪಾಖಿಝಾ ಗಮನಕ್ಕೆ ಬಾರದಂತೆ ಅವರ ಬ್ಯಾಂಕ್ ಚೆಕ್‌ಗಳನ್ನು ಕಳವು ಮಾಡಿದ್ದ. ಆ ಚೆಕ್‌ಗಳನ್ನು ಕಾರಿನ ಮಾಲೀಕ ಅಕ್ಬರ್ ಬಾಷಾ ಮತ್ತು ಮನೆ ಮಾಲೀಕರಿಗೆ ಕೊಟ್ಟಿದ್ದ. ಆದರೆ, ಆ ಚೆಕ್‌ಗಳು ಬೌನ್ಸ್ ಆಗಿದ್ದವು. ಈ ಸಂಬಂಧ ಅಕ್ಬರ್ ಬಾಷಾ ಮತ್ತು ಮನೆ ಮಾಲೀಕರು ನೀಡಿದ ದೂರು ಆಧರಿಸಿ ತನಿಖೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದ' ಎಂದು ತನಿಖಾಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

`ಮರ್ಷಿದ್, 12ನೇ ತರಗತಿವರೆಗೆ ಓದಿದ್ದಾನೆ. ಪಾಖಿಝಾ ಅವರ ಮನಸೆಳೆದು ಮದುವೆಯಾಗುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾಗಿ ಆತ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ಆರೋಪಿಯು ಇಸ್ರೊ ಆವರಣ ಪ್ರವೇಶಿಸಲು ನಾಲ್ಕೈದು ಬಾರಿ ಪ್ರಯತ್ನ ನಡೆಸಿದ್ದ ಎಂದು ತನಿಖೆಯಿಂದ ಗೊತ್ತಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಹೆಚ್ಚಿನ ತನಿಖೆಗಾಗಿ ಆತನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ' ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT