ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ಲಾಮಿಕ್ ಸಂಪ್ರದಾಯದಂತೆ ಗಡಾಫಿ ಅಂತ್ಯಕ್ರಿಯೆ..

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಿಸ್ರತ್, ಲಿಬಿಯಾ (ಎಪಿ/ಪಿಟಿಐ/ಎಎಫ್‌ಪಿ): ಹತ್ಯೆಗೀಡಾಗಿರುವ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯ ಅಂತ್ಯಸಂಸ್ಕಾರವನ್ನು ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ ನಡೆಸಲಾಗುತ್ತದೆ ಎಂದು ದೇಶದ ಹೊಸ ನಾಯಕರು ಶುಕ್ರವಾರ ಇಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಸಂಧಿಕಾಲ ಮಂಡಳಿ (ಎನ್‌ಟಿಸಿ), ನ್ಯಾಟೊ ಹಾಗೂ ಅಮೆರಿಕ ಮಿತ್ರ ಪಡೆಗಳ ಯೋಧರು ಜಂಟಿಯಾಗಿ ಗಡಾಫಿ ಪಡೆಗಳ ಮೇಲೆ ಗುರುವಾರ ದಾಳಿ ನಡೆಸುತ್ತಾ, ತನ್ನ ತವರು ಪಟ್ಟಣ ಸಿದ್ರಾದ ರಸ್ತೆ ಅಡಿಯ ಸಿಮೆಂಟ್ ಕೊಳವೆಯೊಳಗೆ ಅಡಗಿ ಕುಳಿತಿದ್ದ ಈ ಪದಚ್ಯುತ ನಾಯಕನನ್ನು ಹಿಡಿದು ಹತ್ಯೆ ಮಾಡಿದ್ದು, ಈ ಸಂದರ್ಭದಲ್ಲಿ ಜೀವ ರಕ್ಷಣೆಗಾಗಿ ಅಂಗಲಾಚಿದ್ದ.

ವಿಮೋಚನೆ ಘೋಷಣೆ: ಸುಮಾರು 42 ವರ್ಷಗಳ ಕಾಲ ದೇಶವನ್ನಾಳಿದ ಗಡಾಫಿ ಹತ್ಯೆಯ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆಯಷ್ಟೇ ಸ್ಥಾಪನೆಯಾದ ಲಿಬಿಯಾದ ಮಧ್ಯಂತರ ನಾಯಕ ಮುಸ್ತಾಫಾ ಅಬ್ದುಲ್ ಜಲೀಲ್ ಶನಿವಾರ ಔಪಚಾರಿಕವಾಗಿ ವಿಮೋಚನೆಯ (ಸ್ವಾತಂತ್ರ್ಯ) ಘೋಷಣೆ ಮಾಡಲಿದ್ದಾರೆ.

ಗಡಾಫಿ ಆಡಳಿತದ ವಿರುದ್ಧ ಕಳೆದ ಫೆಬ್ರುವರಿಯಲ್ಲಿ ಕ್ರಾಂತಿ ಆರಂಭವಾದ ಬೆಂಘಾಝಿಯಲ್ಲಿ ಈ ಘೋಷಣೆ ಮೊಳಗಲಿದೆ. ಗಡಾಫಿ ವಿಮೋಚನೆ ನಂತರದ ಒಂದು ತಿಂಗಳಲ್ಲೇ ಮಧ್ಯಂತರ ಸರ್ಕಾರ ರಚಿಸಿ, ಎಂಟು ತಿಂಗಳಲ್ಲಿ ಚುನಾವಣೆ ನಡೆಸುವುದಾಗಿ ಆಡಳಿತಾರೂಢ   ಎನ್‌ಟಿಸಿ ತಿಳಿಸಿದೆ.
 
ಟ್ರಿಪೋಲಿ ವರದಿ: ಗಡಾಫಿ ಸಾವನ್ನು ಖಚಿತಪಡಿಸಿದ್ದ ಹಂಗಾಮಿ ಪ್ರಧಾನಿ ಮಹಮದ್ ಜಿಬ್ರಿಲ್, ತೈಲ ಶ್ರೀಮಂತಿಕೆಯ ಈ ಉತ್ತರ ಆಫ್ರಿಕಾ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಮಾದರಿ ಚುನಾವಣೆ ನಡೆದು ಆಯ್ಕೆಯಾಗುವ ಹೊಸ ನಾಯಕನಿಗೆ ಹಾದಿ ಮಾಡಿಕೊಡಲು ತಾನು ಪದವಿತ್ಯಾಗ ಮಾಡಿ ಮಾರ್ಗದರ್ಶನ ನೀಡುವುದಾಗಿ ಹೇಳಿದ್ದಾರೆ. ಹೊಸ ಸರ್ಕಾರ ರಚನೆ ಎನ್‌ಟಿಸಿಯ ಹೊಣೆಯಾಗಿದ್ದು, ದೇಶದ ಐಕ್ಯತೆಗಾಗಿ ಎಲ್ಲರೂ ಭಿನ್ನಮತ ತ್ಯಜಿಸಬೇಕೆಂದು ಕರೆ ನೀಡಿದ್ದಾರೆ.

ಲಿಯಾನ್ ವರದಿ: ಜಾಗತಿಕ ಪೊಲೀಸ್ ಸಂಸ್ಥೆ ಇಂಟರ್‌ಪೋಲ್ ಮತ್ತು ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯ (ಐಸಿಸಿ) ಗಡಾಫಿಯ ಪುತ್ರ ಸೈಫ್ ಅಲ್-ಇಸ್ಲಾಂಗೆ ತಕ್ಷಣ ಹೋರಾಟ ನಿಲ್ಲಿಸಿ, ಶರಣಾಗತನಾಗಿ, ನ್ಯಾಯಾಂಗವನ್ನು ಎದುರಿಸುವಂತೆ ಮನವಿ ಮಾಡಿವೆ.

ತಾನು ಅಡಗಿರುವ ರಾಷ್ಟ್ರದ ಆಡಳಿತಕ್ಕೆ ನೆದರ್‌ಲೆಂಡ್‌ನಲ್ಲಿ ನ್ಯಾಯಾಂಗವನ್ನು ಎದುರಿಸಲು ತನ್ನನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲು ಕೋರುವಂತೆ ಪ್ರತ್ಯೇಕ ಹೇಳಿಕೆಗಳಲ್ಲಿ ಇಂಟರ್‌ಪೋಲ್ ಮಹಾಪ್ರಧಾನ ನಿರ್ದೇಶಕ ರೊನಾಲ್ಡ್ ನೋಬಲ್ ಮತ್ತು ಐಸಿಸಿ ನ್ಯಾಯಾಧೀಶ ಲೂಯಿಸ್ ಮೊರೆನೊ-ಒಕಾಂಪೊ ಸೂಚಿಸಿದ್ದಾರೆ.

ಪ್ಯಾರಿಸ್ ವರದಿ: ಗಡಾಫಿಯ ಹತ್ಯೆಗೂ ಮುನ್ನ ಅವರ ಬೆಂಗಾವಲು ವಾಹನಗಳ ಮೇಲೆ ಫ್ರಾನ್ಸ್ ವಾಯುಪಡೆ ದಾಳಿ ನಡೆಸಿ ತಡೆದುದರಿಂದ ಕಾರ್ಯಾಚರಣೆ ಯಶಸ್ವಿಯಾಗಿರುವುದಾಗಿ ಫ್ರಾನ್ಸ್ ರಕ್ಷಣಾ ಸಚಿವ ಗೆರಾಲ್ಡ್ ಲಾಂಗ್ವೆಟ್ ತಿಳಿಸಿದ್ದಾರೆ.

ವಿಶ್ವಸಂಸ್ಥೆ ವರದಿ: ಗಡಾಫಿಯವರ ಶಸ್ತ್ರಾಸ್ತ್ರ ಸಂಗ್ರಹ ದೀರ್ಘಾವಧಿಯವರೆಗೆ ಬೆದರಿಕೆಯಾಗಿ ಉಳಿಯಲಿದ್ದು, ಇದು ಡಾರ್ಫರ್ ಬಂಡುಕೋರರು, ಅಲ್‌ಖೈದಾ ಮತ್ತಿತರ ಉಗ್ರಗಾಮಿ ಸಂಘಟನೆಗಳ ಕೈಸೇರುವ ಅಪಾಯವಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

ಈ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಲಿಬಿಯಾದ ಗಡಿ ದಾಟಿ ನೆರೆಯ ರಾಷ್ಟ್ರಗಳನ್ನು ಪ್ರವೇಶಿಸುವ ಅಪಾಯವೂ ಇದೆ ಎಂದು ಲಿಬಿಯಾದಲ್ಲಿ ವಿಶ್ವಸಂಸ್ಥೆಯ ಪ್ರತಿನಿಧಿಯಾಗಿರುವ ಇಯಾನ್ ಮಾರ್ಟಿನ್ ತಿಳಿಸಿದ್ದಾರೆ. ಇದೇ ಭಯವನ್ನು ಆಫ್ರಿಕಾ ರಾಷ್ಟ್ರಗಳು ಸಹ ವ್ಯಕ್ತಪಡಿಸಿವೆ.

ಬೀಜಿಂಗ್ ವರದಿ: ಲಿಬಿಯಾದಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಹೊಸ ರಾಜಕೀಯ ಪ್ರಕ್ರಿಯೆ ಆರಂಭಿಸಬೇಕೆಂದು ಚೀನಾ ಕರೆಯಿತ್ತಿದೆ. ರಾಷ್ಟ್ರೀಯ ಸಮಗ್ರತೆ, ಏಕತೆ ಹಾಗೂ ಸಾಮಾಜಿಕ ಸ್ಥಿರತೆಯನ್ನು ಗ್ರಹಿಸಿ ಆದಷ್ಟು ಬೇಗ ಈ ಪ್ರಕ್ರಿಯೆ ನಡೆಯಬೇಕು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಜಿಯಾಂಗ್ ಯೂ ನುಡಿದಿದ್ದಾರೆ.

ವಾಷಿಂಗ್ಟನ್ ವರದಿ: ಲಿಬಿಯಾದಲ್ಲಿ ಅಂತರರಾಷ್ಟ್ರೀಯ ಸೇನಾ ಕಾರ್ಯಾಚರಣೆ ಯಶಸ್ವಿಯಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಇದೊಂದು ಗೌರವದ ಸಂದರ್ಭ ಎಂದಿದ್ದಾರೆ. ಗಡಾಫಿ ಹತ್ಯೆ ನಂತರ ಪ್ರತಿಕ್ರಿಯೆ ನೀಡಿರುವ ಅವರು `ಹಿಂದೆ ನಾವು ಮಾಡುತ್ತೇವೆ ಎಂದಿದ್ದನ್ನು ಈಗ ನಿಜವಾಗಿ ಮಾಡಿ ತೋರಿಸಿದ್ದೇವೆ~ ಎಂದಿದ್ದಾರೆ.

ಈ ಮಧ್ಯೆ, ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಕಾಂಡೊಲೀಸಾ ರೈಸ್ ಪ್ರತಿಕ್ರಿಯಿಸಿ, ತಮ್ಮನ್ನು `ಆಫ್ರಿಕಾದ ರಾಜಕುಮಾರಿ~ ಎಂದು ಗಡಾಫಿ ಕರೆದಿದ್ದನ್ನು ಸ್ಮರಿಸಿದ್ದಾರೆ. 2008ರ ಸೆಪ್ಟೆಂಬರ್‌ನಲ್ಲಿ ಲಿಬಿಯಾಕ್ಕೆ ಭೇಟಿ ನೀಡಿ, ದಶಕಗಳಿಂದ ನಿಂತುಹೋಗಿದ್ದ ಅಮೆರಿಕದೊಂದಿಗಿನ ರಾಜತಾಂತ್ರಿಕ ಸಂಬಂಧ ಮರಳುವಂತಹ ಒಪ್ಪಂದಕ್ಕೆ ರೈಸ್ ಸಹಿ ಹಾಕಿದ್ದರು.

ಇಸ್ಲಾಮಾಬಾದ್ ವರದಿ: ಗಡಾಫಿ ಸಾವಿನಿಂದಾಗಿ ಗಲಭೆಪೀಡಿತ ಲಿಬಿಯಾ ಅಭಿವೃದ್ಧಿಯತ್ತ ಸಾಗಲಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ನುಡಿದಿದ್ದಾರೆ. ಲಿಬಿಯಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಮತ್ತು ಬದಲಿ ಸರ್ಕಾರ ರಚನೆ ಸಂಬಂಧ ಮಂಗಳವಾರಷ್ಟೇ ಭೇಟಿ ನೀಡಿದ್ದ ಅವರು, ಆ ದೇಶಕ್ಕೆ ಅಮೆರಿಕದ ನೆರವನ್ನೂ ಘೋಷಿಸಿದ್ದರು.

ಗಡಾಫಿ ಸಾವು: ನ್ಯಾಟೊ ಪಡೆಗೆ ಅಚ್ಚರಿ
ಮಿಸ್ರತ್, ಲಿಬಿಯಾ (ಎಪಿ/ಎಎಫ್‌ಪಿ): ಲಿಬಿಯಾದಲ್ಲಿ 42 ವರ್ಷಗಳ ಕಾಲ ಸರ್ವಾಧಿಕಾರ ನಡೆಸಿದ್ದ ಮುಅಮ್ಮರ್ ಗಡಾಫಿ ತನ್ನನ್ನು ನ್ಯಾಟೊ ಪಡೆಗಳು ಬೆನ್ನಟ್ಟಿದ್ದಾಗ, ಬೆಂಗಾವಲು ವಾಹನದಲ್ಲಿಯೇ ಪರಾರಿಯಾಗುತ್ತಿದ್ದ ಅಂಶ ನ್ಯಾಟೊ ಪಡೆಗಳಿಗೇ ಅಚ್ಚರಿ ತಂದಿದೆ.

ಗಡಾಫಿ ವಾಹನದಲ್ಲಿ ಇದ್ದಾನೆ ಎನ್ನುವ ಅರಿವು ಇಲ್ಲದ ನ್ಯಾಟೊ ಕಮಾಂಡರ್ ಬೆಂಗಾವಲು ವಾಹನದತ್ತ ಬಾಂಬ್ ಹಾಕುತ್ತಾರೆ. ವಿರೋಧಿಗಳು ತನ್ನನ್ನು ಬೆನ್ನಟ್ಟಿರುವುದು ತಿಳಿಯುತ್ತಲೇ 42 ವರ್ಷ ಹುಲಿಯಂತೆ ಅಧಿಕಾರ ನಡೆಸಿದ್ದ ಗಡಾಫಿ ಜೀವ ಭಯದಿಂದ ಇಲಿಯಂತೆ ರಸ್ತೆ ಅಡಿಯ ಸಿಮೆಂಟ್ ಕೊಳವೆಯಲ್ಲಿ ಆಶ್ರಯ ಪಡೆಯುತ್ತಾನೆ.

ಸಿದ್ರಾದ ಬಳಿ ರಸ್ತೆ ಅಡಿಯ ಸಿಮೆಂಟ್ ಕೊಳವೆಯಲ್ಲಿ ಅವಿತುಕೊಂಡಿದ್ದ 69 ವರ್ಷದ ಸರ್ವಾಧಿಕಾರಿಯನ್ನು ವಿರೋಧಿ ಪಡೆಗಳು ಸುತ್ತುವರೆದು ದಾಳಿ ಮಾಡಿದಾಗ, ಜೀವ ಉಳಿಸಿಕೊಳ್ಳಲು, ದೈನ್ಯದಿಂದ ಜೀವಭಿಕ್ಷೆ ಯಾಚಿಸುತ್ತಾನೆ.

ಈ ದೃಶ್ಯ ನೋಡಿದವರಿಗೆ ವಿರೋಧಿಗಳಿಗೆ `ಈತನೇ ಸರ್ವಾಧಿಕಾರಿಯಾ~ ಎನ್ನುವ ಅನುಮಾನ ಕಾಡುತ್ತದೆ. ಆದರೆ ರೋಷದಿಂದ ಕುದಿಯುತ್ತಿದ್ದ ರಾಷ್ಟ್ರೀಯ ಸಂಧಿಕಾಲ ಮಂಡಳಿ (ಎನ್‌ಟಿಸಿ) ಯೋಧರು ಗುಂಡಿನ ಚಕಮಕಿ ನಡೆಸುತ್ತಾರೆ.

ತೀವ್ರವಾಗಿ ಗಾಯಗೊಂಡ ಗಡಾಫಿಯನ್ನು ಯೋಧರು ನೆಲದಲ್ಲಿ ಉರುಳಾಡಿಸುತ್ತಾರೆ. ತನ್ನ ತಲೆಯಿಂದ ಸುರಿಯುತ್ತಿದ್ದ ರಕ್ತವನ್ನು ನೋಡಿಕೊಂಡು ಇನ್ನೂ ಭಯಭೀತನಾಗುತ್ತಾನೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ ಗಡಾಫಿಯನ್ನು ಅಲ್ಲಿಂದ ಕರೆದೊಯ್ಯುವ ಸಂದರ್ಭದಲ್ಲಿ ಸಾವನ್ನಪ್ಪುತ್ತಾನೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT