ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ಮೇಲ್‌ ಮೂಲಕ ಪುಸ್ತಕ ರೂಪುಗೊಂಡ ಬಗೆ

ಗೋಷ್ಠಿ 13: ವಿದ್ಯುನ್ಮಾನ ಮಾಧ್ಯಮ ಮತ್ತು ಸಾಹಿತ್ಯ
Last Updated 19 ಜನವರಿ 2014, 19:30 IST
ಅಕ್ಷರ ಗಾತ್ರ

ಧಾರವಾಡ: ಪುಸ್ತಕದ ತಿರುಳು ಚೀನಾದ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು, ಮುಖಪುಟಕ್ಕೆ ಬಳಸಿ­ಕೊಂಡ ಚಿತ್ರವನ್ನು ತೆಗೆದವರು ಫ್ರಾನ್ಸ್‌ನವರು, ಹಿಂಬದಿಯ ಚಿತ್ರ ತೆಗೆದವರು ಇಂಗ್ಲೆಂಡ್‌ನವರು. ಕನ್ನಡಕ್ಕೆ ಅನುವಾದಿಸಿದ್ದು ಸಿಂಗಪುರದಲ್ಲಿರುವ ಜಯಶ್ರೀ ಭಟ್, ಅದನ್ನು ಟೈಪ್‌ ಮಾಡಿದವರು ರಾಜಸ್ತಾನ ಮೂಲದ, ಪ್ರಸ್ತುತ ಗುಲ್ಬರ್ಗ­ದಲ್ಲಿರುವ ಪ್ರೀತಿ, ಕರಡು ತಿದ್ದಿದವರು ಮಣಿ­ಪಾಲ್‌­­ದವರು, ಅದು ಛಂದ ಪುಸ್ತಕ ಪ್ರಕಾಶನ­ದಿಂದ ಈಚೆಗೆ ಬೆಂಗಳೂರಿನಲ್ಲಿ ಬಿಡುಗಡೆ­ಯಾಯಿತು.

‘ಮಾವೊನ ಕೊನೆಯ ನರ್ತಕ’ ಎಂಬ ಕೃತಿ ಪ್ರಕಟಣೆಯ ಕಾರ್ಯದಲ್ಲಿ ಭಾಗಿಯಾದ ಯಾರೊ­ಬ್ಬರೂ ಪುಸ್ತಕ ಬಿಡುಗಡೆ­ಯಾಗು­ವ­ವರೆಗೂ ಪರಸ್ಪರ ಮುಖವನ್ನೂ ನೋಡಿರಲಿಲ್ಲ. ಇದೆಲ್ಲ ಹೇಗಾಯಿತು ಎಂಬುದಕ್ಕೆ ಉತ್ತರವಾಗಿ ‘ಛಂದ ಪುಸ್ತಕ’ದ ಪ್ರಕಾಶಕ ವಸುಧೇಂದ್ರ ಎಲ್ಲವೂ ಇ– ಮೇಲ್‌ನಲ್ಲಿ ಎಂದರು!
‘ಧಾರವಾಡ ಸಾಹಿತ್ಯ ಸಂಭ್ರಮ’ದ ಕೊನೆಯ ದಿನವಾದ ಭಾನುವಾರ ‘ವಿದ್ಯುನ್ಮಾನ ಮಾಧ್ಯಮ ಮತ್ತು ಸಾಹಿತ್ಯ’ ಗೋಷ್ಠಿಯ ನಿರ್ವಹಣೆ ಮಾಡಿದ ಅವರು, ‘ಇ–ಮೇಲ್‌ ಮೂಲಕವೇ ಕೃತಿಯ ಅನು­ವಾದ, ವಿನ್ಯಾಸ, ಕರಡು ತಿದ್ದುವಿಕೆ ಸಾಧ್ಯವಾ­ಯಿತು. ಕರಡು ತಿದ್ದಲು ಒಂದು ಚಿಕ್ಕ ಹಾಳೆ­ಯನ್ನೂ ಬಳಸಲಿಲ್ಲ’ ಎಂದು ಹೇಳುವ ಮೂಲಕ ವಿದ್ಯುನ್ಮಾನ ಮಾಧ್ಯಮದ ಒಂದು ಪ್ರಮುಖ ಸಾಧ್ಯತೆಯನ್ನು ತೆರೆದಿಟ್ಟರು.

ಪ್ರೇಕ್ಷಕರಿಂದ ಪ್ರಶ್ನೆಗಳನ್ನು ತರಿಸಿ­ಕೊಂಡ ಮಾದರಿಯೂ ಇತರ ಗೋಷ್ಠಿ­ಗಳಿಗಿಂತ ಭಿನ್ನ­ವಾಗಿತ್ತು. ಬೇರೆ ಗೋಷ್ಠಿಗಳಲ್ಲಿ ಪ್ರೇಕ್ಷಕರು ಕಾಗದ­ದಲ್ಲಿ ಬರೆದು ಸ್ವಯಂ ಸೇವಕರೊಬ್ಬರ ಮೂಲಕ ಗೋಷ್ಠಿಯ ನಿರ್ವಾಹಕರಿಗೆ ಪ್ರಶ್ನೆ ತಲುಪಿಸು­ತ್ತಿ­ದ್ದರು. ಆದರೆ, ಆ ತಾಪತ್ರಯ ಬೇಡ ಎಂಬ ನಿಲುವಿನ ವಸುಧೇಂದ್ರ ತಮ್ಮ ಮೊಬೈಲ್‌ ನಂಬರ್‌ ಕೊಟ್ಟು, ಅದಕ್ಕೇ ಪ್ರೇಕ್ಷಕರು ಪ್ರಶ್ನೆಗಳನ್ನು ಎಸ್‌ಎಂಎಸ್‌ ಮಾಡಬಹುದು ಎಂದರು. ಕೆಲವೇ ನಿಮಿಷಗಳಲ್ಲಿ ನೂರಕ್ಕೂ ಅಧಿಕ ಸಂದೇಶಗಳು ಅವರ ‘ಇನ್‌ಬಾಕ್ಸ್‌’ ತುಂಬಿದ್ದವು.

ಯೂನಿಕೋಡ್‌ ತಂತ್ರಾಂಶವನ್ನು  ಜಾರಿಗೆ ತರಲು ಕರ್ನಾಟಕ ಸರ್ಕಾರ ‘ಉದ್ದೇಶಪೂರ್ವಕ’­-ವಾಗಿಯೇ ವಿಳಂಬ ಮಾಡುತ್ತಿದೆ ಎಂಬ ಅಸಮಾಧಾನ­ವನ್ನು ಗೋಷ್ಠಿಯಲ್ಲಿ ಭಾಗವಹಿಸಿದ್ದ ‘ಪ್ರಜಾವಾಣಿ’ ಮುಖ್ಯ ಉಪ ಸಂಪಾದಕ ಎನ್‌.ಎ.ಎಂ.ಇಸ್ಮಾಯಿಲ್ ಹೊರಹಾ­ಕಿದರು. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸರ್ಕಾರ ಯೂನಿ­ಕೋಡ್‌ ಜಾರಿಗೊಳಿಸಲು ತೋರಿದ ನಿರ್ಲಕ್ಷ್ಯ ಧೋರಣೆಯನ್ನು ಟೀಕಿಸಿ ‘ಪ್ರಜಾವಾಣಿ’ ವಿಸ್ತೃತ ವರದಿ ಮಾಡಿದ್ದನ್ನೂ ಅವರು ಸಭೆಯ ಗಮನಕ್ಕೆ ತಂದರು.

ಯುವ ಪೀಳಿಗೆ ಪತ್ರ ಬರೆಯುವುದಿಲ್ಲ ಎಂದು ಹಿರಿಯರು ಟೀಕಿಸುತ್ತಾರೆ. ಆದರೆ, ನಿತ್ಯವೂ ಯುವಕ–ಯುವತಿ­ಯರ ಮೊಬೈಲ್‌ಗಳಿಂದ ನಿತ್ಯ ಹತ್ತಾರು ಸಂದೇಶಗಳು ಹರದಾಡುತ್ತವೆ. ಪತ್ರ ಬರೆಯುವ ಪ್ರಕ್ರಿಯೆ ವಿದ್ಯುನ್ಮಾನ ಮಾಧ್ಯಮಕ್ಕೆ ಪರಿವರ್ತನೆಗೊಂಡಿದೆ. ಅಲ್ಲದೇ, ಜಗತ್ತಿನ ಮೂರನೇ ಅತಿದೊಡ್ಡ ಫೇಸ್‌ಬುಕ್‌ ಬಳಕೆದಾರರು ಭಾರತದಲ್ಲಿದ್ದಾರೆ. 1.5 ಕೋಟಿ ಕುಟುಂಬಗಳು ಲ್ಯಾಂಡ್‌ಲೈನ್‌ ಫೋನ್‌ಗಳನ್ನು ಹಾಕಿಸಿಕೊಳ್ಳಲು 10 ವರ್ಷ ಬೇಕಾಯಿತು. ಆದರೆ, ನಾಲ್ಕು ವರ್ಷಗಳಲ್ಲಿ ಮೊಬೈಲ್‌ 3ಜಿ ಬಳಕೆದಾರರ ಸಂಖ್ಯೆ 2.2. ಕೋಟಿಗೆ ಏರಿದೆ ಎಂದರು.

ಯೂನಿಕೋಡ್‌ ಸೇರಿದಂತೆ ಮಾಹಿತಿ ತಂತ್ರಜ್ಞಾನ ಸಂಬಂಧಿ ಸೌಲಭ್ಯಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ಆಸಕ್ತಿ ಇಲ್ಲ. ಉಚಿತವಾಗಿ ಆಗುವ ಕೆಲಸಕ್ಕೂ ನೂರಾರು ಕೋಟಿ ಹಣ ವ್ಯಯ ಮಾಡುತ್ತಿದೆ ಎಂದು ವಸುಧೇಂದ್ರ ಮೆದು ಮಾತಿನ ಮೂಲಕ ತಿವಿದರು.

ಕನ್ನಡ ಮನಸ್ಸುಳ್ಳ ಗೆಳೆಯರು ಬೇಕು’
‘ವಚನ ಸಂಚಯ’  ಅಂತರ್ಜಾಲ ಪುಟವನ್ನು ರೂಪಿಸಿದ ಓ.ಎಲ್‌.­ನಾಗಭೂಷಣ ಸ್ವಾಮಿ, ‘ಯಾವುದೇ ರೀತಿಯ ಸಂಭಾವನೆಯನ್ನು ಪಡೆಯದೇ ಹಲವು ಕನ್ನಡ ಮನಸ್ಸುಳ್ಳ ಗೆಳೆಯರು, ಪದವೊಂದನ್ನು ಟೈಪಿಸಿದರೆ, ಅದನ್ನು ಯಾವ ಯಾವ ವಚನಕಾರರು ಬಳಸಿದ್ದಾರೆ ಎಂಬ ವಿವರ ಬರುವಂತಹ ಅಂತರ್ಜಾಲ  ತಾಣ ರೂಪಿಸಿದ್ದಾರೆ. ಈಗಾಗಲೇ ವಚನ ಸಂಚಯದಲ್ಲಿ 25 ಸಾವಿರ ವಚನಗಳ ಎರಡು ಲಕ್ಷ ಪದಗಳನ್ನು ಸೇರಿಸಿದ್ದಾರೆ. ಕನ್ನಡದ ಬಗ್ಗೆ ಕಳಕಳಿ ಇರುವ ಇಂತಹ ಗೆಳೆಯರು ಜೊತೆಗಿದ್ದರೆ, ಹಲವು ಜನಸ್ನೇಹಿ ಸಾಫ್ಟ್‌ವೇರ್‌ಗಳನ್ನು ರೂಪಿಸಬಹುದು’ ಎಂದರು.

‘40 ವರ್ಷಗಳ ಹಿಂದೆಯೇ ಕಂಪ್ಯೂಟರ್‌ನಲ್ಲಿ ಕನ್ನಡ ಬಳಕೆಯ ಬಗ್ಗೆ ಶ್ರೀನಿವಾಸ ಹಾವನೂರ ಚಿಂತನೆ ಮಾಡಿದ್ದಾರೆ. ಅವರನ್ನೂ ಈ ಸಂದರ್ಭದಲ್ಲಿ ಸ್ಮರಿಸಬೇಕು’ ಎಂದು ಜಯಂತ ಕಾಯ್ಕಿಣಿ ತಮ್ಮ ಮಾತು ಸೇರಿಸಿದರು.

ತಮ್ಮಲ್ಲಿಯೇ ಇರಲಿ ಎಂದ ಸಿರಿಗೆರೆ ಶ್ರೀಗಳು
‘ವಚನ ಸಂಚಯ ಅಂತರ್ಜಾಲ ತಾಣ ವಿನ್ಯಾಸವಾಗುವುದಕ್ಕೆ ಮುನ್ನವೇ ಸಿರಿಗೆರೆ ಮಠದ ಸ್ವಾಮಿಗಳು ವಚನಗಳನ್ನು ವೆಬ್‌ಸೈಟ್‌ನಲ್ಲಿ ಹಾಕಿಸುವ ಯೋಜನೆಯೊಂದನ್ನು ರೂಪಿಸಿದ್ದರು. ಆ ಬಗ್ಗೆ ನನ್ನೊಂದಿಗೆ ಚರ್ಚಿಸಿದ್ದರು. ಆದರೆ, ಯೋಜನೆ ಪ್ರಗತಿ ಹೊಂದಿದಂತೆಲ್ಲ ಅದು ಮಠದ ಬಳಿಯೇ ಇರಬೇಕು ಎಂಬ ನಿಲುವು ತಾಳಿದರು. ಜನರ ಬಳಿಗೆ ಈ ಯೋಜನೆ ಕೊಂಡೊಯ್ಯಬೇಕೆಂದು ಬಯಸಿದ್ದ ನನಗೆ ಶ್ರೀಗಳ ನಿಲುವು ಸರಿಬರಲಿಲ್ಲ’ ಎಂದು ಹಿರಿಯ ಸಂಶೋಧಕ ಡಾ.ಷ.ಶೆಟ್ಟರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT