ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಊರಿಗೆ ನೆಂಟರು ಬರಲು ಹೆದರುತ್ತಾರೆ!

Last Updated 12 ಜುಲೈ 2012, 10:25 IST
ಅಕ್ಷರ ಗಾತ್ರ

ಶಿರಸಿ: ಮಳೆಗಾಲ ಬಂತೆಂದರೆ ಈ ಊರಿಗೆ ನೆಂಟರು ಬರಲು ಹೆದರುತ್ತಾರೆ. ಕಿಸೆ ಗಟ್ಟಿ ಇದ್ದವರು ನೂರಾರು ರೂಪಾಯಿ ತೆತ್ತು ಹೋಗಬೇಕಾದ ನೆಲೆ ತಲುಪಬೇಕು ಇಲ್ಲವಾದರೆ ಕಾಲು ಗಟ್ಟಿ ಮಾಡಿಕೊಂಡು ಎಂಟು ಕಿಮೀ ನಡೆಯಬೇಕು! ಇದು ದಶಕಗಳಿಂದ ತಾಲ್ಲೂಕಿನ ಹತ್ತಾರು ಹಳ್ಳಿಗರು ಪ್ರತಿ ಮಳೆಗಾಲದಲ್ಲಿ ಮೌನವಾಗಿ ಅನುಭವಿಸುತ್ತ ಬಂದಿರುವ ಗೋಳು.

ಪಟ್ಟಣಗಳಲ್ಲಿ ಕಾಂಕ್ರೀಟ್ ರಸ್ತೆಗಳು ಮಿಂಚುವಾಗ ವಾನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಷ್ಕಿ ಮತ್ತು ಶಿರಗಣಿ ಗ್ರಾಮಗಳ ಸುತ್ತಲಿನ ಹೊಸಗದ್ದೆ, ಬಾರಗದ್ದೆ, ಗೌಡನಕೇರಿ, ಚಾವಡಿ, ಬಾರಗದ್ದೆ, ಮೂಲೆಮನೆ, ಚಳ್ಳಗದ್ದೆ ಹಳ್ಳಿಗರು ಕೆಸರು ಗದ್ದೆಯಂತಿರುವ ಮಣ್ಣು ರಸ್ತೆಯಲ್ಲಿ ಹರಸಾಹಸ ಪಟ್ಟು ನಿತ್ಯ ಸಂಚರಿಸುತ್ತಾರೆ.

ವಿಸ್ತಾರವಾಗಿರುವ ವಾನಳ್ಳಿ ಗ್ರಾ.ಪಂ. ತಾಲ್ಲೂಕಿನ ಮೂಲೆಯ ಪ್ರದೇಶ. ನಗರದಿಂದ 40ಕಿಮೀ ದೂರದ ಈ ಪ್ರದೇಶಗಳಲ್ಲಿ ಅದೆಷ್ಟೋ ಹಳ್ಳಿಗಳು ಅಭಿವೃದ್ಧಿ ವಂಚಿತವಾಗಿವೆ. ಮುಷ್ಕಿ, ಶಿರಗಣಿ ಗ್ರಾಮಗಳು ಸಹ ಇದಕ್ಕೆ ಹೊರತಾಗಿಲ್ಲ.
 
ಎರಡು ದಶಕಗಳ ಹಿಂದೆ ಈ ಊರಿಗೆ ಸಾರಿಗೆ ಬಸ್ ಸಂಚಾರ ಪ್ರಾರಂಭವಾಗಿದೆ. ಆದರೆ ಇಲ್ಲಿ ಬಸ್ ಬರುವದು ವರ್ಷದಲ್ಲಿ ನಾಲ್ಕು ತಿಂಗಳು ಮಾತ್ರ. ಶಿರಸಿಯಿಂದ ವಾನಳ್ಳಿ-ಕಕ್ಕಳ್ಳಿ ಮಾರ್ಗವಾಗಿ ಮುಷ್ಕಿ, ಶಿರಗಣಿ ತಲುಪಬೇಕು.
 
ಆದರೆ ಕಕ್ಕಳ್ಳಿಯಿಂದ ಕೇವಲ ಒಂದೂವರೆ ಕಿಮೀ ಮಾತ್ರ ಡಾಂಬರ್ ರಸ್ತೆ ನಿರ್ಮಾಣವಾಗಿದೆ. ಇನ್ನುಳಿದ 7.5ಕಿಮೀ ಮಣ್ಣು ರಸ್ತೆ ತೀರಾ ದುಸ್ಥಿತಿಯಲ್ಲಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಕಡಿದಾದ ಮಾರ್ಗದಲ್ಲಿ ಅಲ್ಲಲ್ಲಿ ರಸ್ತೆ ಕೆಸರು ಗದ್ದೆಯಂತಾಗಿದೆ.
 
ಹೀಗಾಗಿ ಮಳೆಗಾಲದಲ್ಲಿ ಈ ಭಾಗದಲ್ಲಿ ಬಸ್ ಸಂಚಾರ ಸ್ಥಗಿತಗೊಳ್ಳುತ್ತದೆ. ಹಳ್ಳಿಗರು ಪಟ್ಟಣಕ್ಕೆ ಬರಲು ಒಂಬತ್ತು ಕಿಮೀ ಕಾಲ್ನಡಿಗೆಯಲ್ಲಿ ಬರಬೇಕು ಅಥವಾ ಬಾಡಿಗೆ ಬೈಕ್, ಜೀಪ್‌ಗೆ ದುಪ್ಪಟು ಹಣ ತೆತ್ತು ಕಕ್ಕಳ್ಳಿ ತನಕ ಬಂದು ಬಸ್ ಹಿಡಿಯಬೇಕು. ವಿಪರೀತ ಮಳೆ ಬೀಳುತ್ತಿದ್ದರೆ ಖಾಸಗಿ ವಾಹನ ಸಂಚಾರವೂ ಕಷ್ಟವಾಗುವ ಸ್ಥಿತಿ ಇದೆ. ಅನಾರೋಗ್ಯ ಉಂಟಾದರೆ 16ಕಿಮೀ ದೂರದ ವಾನಳ್ಳಿಗೆ ಹೋಗಬೇಕು. ಕಕ್ಕಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೂ ವೈದ್ಯರಿಲ್ಲ.

ಕಿವುಡಾದ ಜನಪ್ರತಿನಿಧಿಗಳು: ಮುಷ್ಕಿ, ಶಿರಗಣಿ ಗ್ರಾಮದ ಸಿದ್ದಿ, ಕರೆಒಕ್ಕಲಿಗರು, ನಾಮಧಾರಿಗಳು, ಶೆಟ್ಟರು, ಬ್ರಾಹ್ಮಣ ಸಮುದಾಯದ ಸುಮಾರು 150 ಮನೆಗಳು ಅನೇಕ ವರ್ಷಗಳಿಂದ ಈ ಸಮಸ್ಯೆ ಎದುರಿಸುತ್ತಿವೆ.

ಶಾಲೆಗೆ ಹೋಗುವ ಮಕ್ಕಳ ಸಹ ನಿತ್ಯ ನಾಲ್ಕಾರು ಕಿಮೀ ನಡೆಯಬೇಕು. ಜನಪ್ರತಿನಿಧಿಗಳಿಗೆ ಈ ಎಲ್ಲ ಸಮಸ್ಯೆಗಳ ಸ್ಪಷ್ಟ ಕಲ್ಪನೆ ಇದೆ. ಚುನಾವಣೆ ಬಂದಾಗ ನೀಡುವ ಭರವಸೆಗಳು ನಂತರ ಕರಗಿ ಹೋಗುತ್ತವೆ.

`ಆಡಳಿತ ಪಕ್ಷದ ಜನಪ್ರತಿನಿಧಿಗಳು ಈ ಭಾಗದಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಅಧಿಕಾರ ದೊರೆತರೆ ಬೇಡಿಕೆ ಈಡೇರಿಸುವುದಾಗಿ ಹೇಳಿದರು.

ಈಗ ಅಧಿಕಾರವೂ ಸಿಕ್ಕಿದೆ ಮಂತ್ರಿಯೂ ಆಗಿದ್ದಾರೆ. ಆದರೆ ರಸ್ತೆ ಮಾತ್ರ ನಮಗೆ ಕನಸಾಗಿ ಉಳಿದಿದೆ. ಸಂಸದ ಅನಂತಕುಮಾರ ಹೆಗಡೆ ಅವರಿಗೂ ನಮ್ಮ ಅಳಲು ಹೇಳಿಕೊಂಡಿದ್ದೇವೆ~ ಎನ್ನುತ್ತಾರೆ ಊರಿನ ಪ್ರಮುಖರಾದ ವಿ.ಎಸ್.ಭಟ್ಟ, ಅನಂತ ಭಟ್ಟ, ಲಕ್ಷ್ಮೀನಾರಾಯಣ ಹೆಗಡೆ, ಶಂಕರನಾರಾಯಣ ಭಟ್ಟ, ಕೃಷ್ಣಮೂರ್ತಿ ಮತ್ತಿತರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT