ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಊರಿಗೆ ಮೂಲಸೌಕರ್ಯ ಬಲು ದೂರ

Last Updated 17 ಸೆಪ್ಟೆಂಬರ್ 2013, 8:30 IST
ಅಕ್ಷರ ಗಾತ್ರ

ಸುರಪುರ: ಗ್ರಾಮದ ತುಂಬೆಲ್ಲ ಹೊಲಸು, ಚರಂಡಿ, ಅಸಮರ್ಪಕ ರಸ್ತೆ ಗಳು, ಎಲ್ಲಿ ನೋಡಿದರಲ್ಲಿ ರೋಗ ಹರಡುವ ತಿಪ್ಪೆಗುಂಡಿಗಳು. ವರ್ಷ­ಗಳಿಂದ ಗುಂಡಿಗಳಲ್ಲಿ ನಿಂತಿರುವ ನೀರು, ಬಯಲು ಶೌಚಾಲಯ ಆಶ್ರಯಿಸಿದ ಮಹಿಳೆಯರು.

ಇದು ತಾಲ್ಲೂಕಿನ ತಳವಾರಗೇರಿ ಗ್ರಾಮದ ದುಃಸ್ಥಿತಿ. ವಾಗಣಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಳವಾರಗೇರಿ ಗ್ರಾಮ  ಸುರಪುರ ಪೇಠಅಮ್ಮಾಪುರ ಮುಖ್ಯರಸ್ತೆಗೆ ಹೊಂದಿಕೊಂಡಿದ್ದರೂ ಸೌಕರ್ಯಗಳಿಂದ ಸಂಪೂರ್ಣ ವಂಚಿತವಾಗಿದೆ. 2500 ಜನಸಂಖ್ಯೆ ಹೊಂದಿದೆ. ಸುಮಾರು 300 ಮನೆಗಳು ಇವೆ. ಅನಕ್ಷರತೆ ಜಾಸ್ತಿ.

ಬಸವ ವಸತಿ ಮನೆಗಳು ಮಂಜೂರಾಗಿದ್ದರೂ ಅಲ್ಲಲ್ಲಿ ಗುಡಿಸಲುಗಳು ಕಾಣುತ್ತವೆ. ಭಾಗಶಃ ಬಿದ್ದ ಮನೆಗಳಲ್ಲಿಯೇ ಜನ ವಾಸಿಸುತ್ತಾರೆ.
ಗ್ರಾಮದಲ್ಲಿ ಗೊಲ್ಲ ಮತು್ತ ಪರಿಶಿಷ್ಟ ಜಾತಿಯ ಜನ ಹೆಚ್ಚಾಗಿದ್ದಾರೆ. ಬಡತನ ಮನೆ ಮಾಡಿದೆ. ಬಹುತೇಕ ಜನರಿಗೆ ಒಂದು, ಎರಡು ಎಕರೆ ಮಾತ್ರ ಜಮೀನು ಇದೆ. ಇದ್ದ ಜಮೀನನ್ನು ದಶಕಗಳ ಹಿಂದೆ ಆಂಧ್ರ  ವಲಸಿಗರಿಗೆ ಪರಭಾರೆ ಮಾಡಿರುವ ಇಲ್ಲಿನ ರೈತರು ಈಗ ಅದೇ ಜಮೀನಿನಲ್ಲಿ ಕೂಲಿಗೆ ಹೋಗುತ್ತಿದ್ದಾರೆ.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಆದರೆ ಶಾಲಾ ಕಟ್ಟಡ ಬಿರುಕು ಬಿಟ್ಟಿದೆ. ಬಾಗಿಲುಗಳು ಒಡೆದಿವೆ. ಶಾಲೆಯ ಮುಂದೆ ಎಲ್ಲೆಂದರಲ್ಲಿ ತ್ಯಾಜ್ಯದ  ರಾಶಿ. ಅಂಗನವಾಡಿ ಮುಂದೆ ಸಾಕಷ್ಟು ಚರಂಡಿ ನೀರು ನಿಂತಿದ್ದು, ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈಗಲೂ ಶತಮಾನದ ಹಿಂದೆ ನಿರ್ಮಿಸಿರುವ ಗಿರಕಿ ಬಾವಿಯಿಂದ ನೀರು ಸರಬರಾಜು ಯೋಜನೆ ವ್ಯವಸ್ಥೆ ಮಾಡಲಾಗಿದೆ.

ಅಸರ್ಮಪಕ ವಿದ್ಯುತ್ ಪೂರೈಕೆ­ಯಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಗ್ರಾಮ ಸಂಪೂರ್ಣ ನೀರಾವರಿಗೆ ಒಳಪಟ್ಟಿರುವುದರಿಂದ ಹಾವು, ಚೇಳುಗಳ ಕಾಟ ಅಧಿಕವಿದೆ. ಬಸ್ ತಂಗುದಾಣ ಇಲ್ಲ. ಹಳೆಯ ತಂಗುದಾಣ ಶಿಥಿಲಗೊಂಡಿದೆ. ಸಾರ್ವಜನಿಕ ಆಸ್ಪತ್ರೆ ಇಲ್ಲ. ಪಶು ಆಸ್ಪತ್ರೆ ಇಲ್ಲ. ರೋಗಿಗಳು, ಪರದಾಡು­ವಂತಾಗಿದೆ. ಸ್ಮಶಾನಕ್ಕೂ  ಸ್ಥಳವಿಲ್ಲದೆ ಜನರು ತೊಂದರೆಪಡುವಂತಾಗಿದೆ.

ಗ್ರಾಮದಲ್ಲಿ ಪುರಾತನ ವೀರಭದ್ರೇಶ್ವರ ದೇವಸ್ಥಾನ ಮತ್ತು ಚನ್ನವೀರಶಿವಾಚಾರ್ಯರ ಹೂಟಗಿ ಬ್ರಹನ್ಮಠ ಇವೆ. ಬ್ರಹನ್ಮಠದವರು ಆರನೇ ತರಗತಿಯಿಂದ ಹತ್ತನೇ ತರಗತಿವರೆಗೆ ಶಾಲೆ ತೆರೆದಿದ್ದು ನಿಸ್ವಾರ್ಥ ಸೇವೆ ಸಲ್ಲಿಸುತಿ್ತದ್ದಾರೆ. ಆದರೆ ಶಾಲೆಗೆ ಹೋಗುವವರೂ ಕಡಿಮೆ.

ಪಟ್ಟಣದಿಂದ ಕೇವಲ 8 ಕಿ.ಮೀ ಅಂತರದಲ್ಲಿದ್ದರೂ, ಸಾಕಷ್ಟು ಸಾರಿಗೆ ಸೌಲಭ್ಯ ಹೊಂದಿದ್ದರೂ ಈ ಗ್ರಾಮ ಅಭಿವೃದ್ಧಿ ಕಂಡಿಲ್ಲ. ‘ಜನಪ್ರತಿನಿಧಿಗಳು ತಳವಾರಗೇರಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು. ಸಾಕಷ್ಟು ಯೋಜನೆಗಳು ಇದ್ದರೂ ಪ್ರಾಮಾಣಿಕ ಅನುಷ್ಠಾನ ಆಗದಿ­ರುವುದು ಅಭಿವೃದ್ಧಿ ಆಗದಿರುವುದಕ್ಕೆ ಕಾರಣ. ಕನಿಷ್ಟ ಮಹಿಳಾ ಶೌಚಾಲಯ ಇಲ್ಲದಿರುವುದು ನಮ್ಮ ದೌರ್ಭಾಗ್ಯ’ ಎನ್ನುತ್ತಾರೆ ಗ್ರಾಮದ ಪ್ರಕಾಶ ಪತ್ತಾರ.

‘17ನೇ ಶತಮಾನದಲ್ಲಿದ್ದೇವೆ’
ಸರ್ಕಾರ ಸುವರ್ಣ ಗ್ರಾಮ, ನರೇಗಾದಂತಹ ವಿವಿಧ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದರೂ ನಮ್ಮ ಗ್ರಾಮಕ್ಕೆ ಯಾವುದು ಬಂದಿಲ್ಲ. ಅನುದಾನ ಸಾಕಷ್ಟಿದ್ದರೂ ಅದು ಪೋಲಾಗುತ್ತಿದೆ.
ಗ್ರಾಮಗಳ ಅಭಿವೃದ್ಧಿ ಮಂತ್ರ ಜಪಿಸುವ ಜನಪ್ರತಿನಿಧಿಗಳು ನಮ್ಮ ಗ್ರಾಮಕ್ಕೆ ಭೇಟಿ ಕೊಡಿ. ನಾವಿನ್ನೂ 17ನೇ ಶತಮಾನದಲ್ಲಿದ್ದೇವೆ ಎಂಬುದು ನಿಮಗೆ ಅರಿವಾಗುತ್ತದೆ.
–ಬಸನಗೌಡ ಪೊ.ಪಾಟೀಲ. ಗ್ರಾಮಸ್ಥ.

‘ಅಧಿಕಾರ ತಪ್ಪಿದ್ದು ಕಾರಣ’
ರಾಜೂಗೌಡ ಶಾಸಕರಾಗಿದ್ದಾಗ ಗ್ರಾಮಕ್ಕೆ ಸಾಕಷ್ಟು ಅನುದಾನ ಒದಗಿಸಿದ್ದರು. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಲಕ್ಷಾಂತರ ಅನುದಾನದ ಕಾಮಗಾರಿಗೆ ಚಾಲನೆ ನೀಡುವವರಿದ್ದರು. ಆದರೆ ಈ ಬಾರಿ ಅಧಿಕಾರ ಇಲ್ಲದ ಕಾರಣ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ. ಸಾಕಷ್ಟು ಮನೆಗಳನ್ನು ಒದಗಿಸಿ ಗುಡಿಸಲು ರಹಿತ ಗ್ರಾಮ ಮಾಡಿದ್ದಾರೆ.
–ಮಾನಪ್ಪ ಹುಜರತಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT