ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಊರುಗಳು ಎಲ್ಲಿವೆ? ಹುಡುಕಿಕೊಡಿ

Last Updated 1 ಜೂನ್ 2011, 4:30 IST
ಅಕ್ಷರ ಗಾತ್ರ

ತಾಳಿಕೋಟೆ: ವೆಜಾಮಠ, ಎಜಾಮಾರ, ವಿಜಾಮರ ಯುತ್ತೆಬಿರಾಳ, ಇವು ಜಗತ್ತಿನಲ್ಲಿ ಎಲ್ಲಿವೆ ಎಂದು ತೋರಿಸಿಕೊಟ್ಟವರಿಗೆ  ಒಂದು ಕೋಟಿ ರೂಪಾಯಿ ಬಹುಮಾನ ಘೋಷಣೆಯಾಗಿದೆ.

ನಿಲ್ಲಿ! ಖುಷಿಯಿಂದ ಪ್ರಪಂಚದ ನಕ್ಷೆ ಹಿಡಿದು ಹುಡುಕಲು ಹೊರಟಿರಾ, ಇಲ್ಲಾ ಗೂಗಲ್ ಮ್ಯಾಪ್‌ನಲ್ಲಿ ಪ್ರಯತ್ನಿಸಬೇಕೆಂದಿರಾ?

ನಿಮಗೆ ಸಾಧ್ಯವಿಲ್ಲ! ಇವು ಬ್ರಹ್ಮಾಂಡದಲ್ಲಿ ಎಲ್ಲಿಯೂ ಇಲ್ಲ. ಹೀಗಾಗಿ ನಿಮಗೆ ನಿರಾಶೆ ಖಂಡಿತ. ಬಹುಮಾನಕ್ಕೂ ಕೊಕ್ಕೆ.

ಏಕೆಂದರೆ ಇವು ಕನ್ನಡದ ಬರವಣಿಗೆಯಲ್ಲಿ ನಡೆದ ಕಗ್ಗೊಲೆಯಿಂದ ಆದ ಸ್ಥಿತಿ. ಹೀಗಾಗಿ ನಾವು ಇದನ್ನು ಕನ್ನಡ ಕನ್ನಡ  ಹಾ(ಸ್ಯವೀ)ಸವಿಗನ್ನಡ, ಕನ್ನಡದಲಿ ಕ(ಪಿ)ವಿ ಬರೆಯುವನು” ಎಂದು ರಾಷ್ಟ್ರಕವಿ ಕುವೆಂಪು ಅವರಲ್ಲಿ ಕ್ಷಮೆ ಕೋರಿ ಹಾಡುವಂತಾಗಿದೆ.

ಪ್ರಧಾನ  ಮಂತ್ರಿ ಗ್ರಾಮ ಸಡಕ ಯೋಜನೆಯಡಿ ವಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಹಡಗಿನಾಳ ರಸ್ತೆ  ನಿರ್ಮಾಣ ಕುರಿತು ಹಾಕಿರುವ ಎರಡು ಫಲಕಗಳಲ್ಲಿ ಇಷ್ಟು ದೊಡ್ಡ ತಪ್ಪುಗಳನ್ನು ಮಾಡಲಾಗಿದೆ.

ವಿಜಾಪುರ ಜಿಲ್ಲೆಯನ್ನು `ವೆಜಾಮಠ, ಎಜಾಮಾರ, ವಿಜಾಮರ~ಗಳೆಂದು ಬದಲಾಗಿದ್ದರೆ,  ಮುದ್ದೇಬಿಹಾಳ ತಾಲ್ಲೂಕು `ಯುತ್ತೆಬಿರಾಳ~ ಆಗಿದೆ. ಹಡಗಿನಾಳ ಗ್ರಾಮ `ಹವಗಿನಾಳ ಹಾಗೂ ತಾಡಗಿನಾಳ~ ಎಂದು ಕರೆಸಿಕೊಂಡಿವೆ.

ಒಂದು ಫಲಕದಲ್ಲಿ  ಪ್ರಾರಂಭದಿಂದಲೇ ಕನ್ನಡ ನುಡಿಯ ಕೊಲೆ ಆಗಿದೆ. ಇಲ್ಲಿ ಕಂಸದಲ್ಲಿ ಸರಿಯಾದ ಪದವನ್ನು ಬರೆದಿದೆ. ವ್ರಧಾನ (ಪ್ರಧಾನ), ಸಡಕ (ಸಡಕ್), ಯೋಜನ (ಯೋಜನೆ)
ಕಲಸದ (ಕೆಲಸದ),  ಎಜಾಮಾರ (ವಿಜಾಪುರ), ಯುತ್ತೆಬಿರಾಳ (ಮುದ್ದೇಬಿಹಾಳ), ತಾಊಕಿನ (ತಾಲೂಕಿನ), ಹವಗಿನಾಳ (ಹಡಗಿನಾಳ), ದಿಂದಟೆ-01ವರಗೆಗೊಂಡ (ಇದು ಏನೆಂದು ನಮಗೂ ಅರ್ಥವಾಗಿಲ್ಲ), ಸುದಾರಣೆ (ಸುಧಾರಣೆ), ವ್ಯಾಕೇಜ(ಪ್ಯಾಕೇಜ್), ಇನ್ (ಎನ್), ರಸೆಯ (ರಸ್ತೆಯ), ಪೋಲಿಸ್‌ಪಾಟಿಲ (ಪೊಲೀಸ್‌ಪಾಟೀಲ), ಎಲಾಖೆ (ಇಲಾಖೆ), ನೆರ್ವಾಹಕ (ನಿರ್ವಾಹಕ), ವಿಬಾಗ (ವಿಭಾಗ), ವಿಜಾಮಾರ (ವಿಜಾಪುರ) ಎಂದು ಬರೆಯಲಾಗಿದೆ.

ಇನ್ನು ಇನ್ನೊಂದು ಫಲಕದಲ್ಲಿ ವೆಜಾಮಠ (ವಿಜಾಪುರ), ಹಸರು (ಹೆಸರು), ತಾಡಗಿನಾಳ (ಹಡಗಿನಾಳ), ತರಗೆ (ವರೆಗೆ), ಅಂಡಜು (ಅಂದಾಜು). ಎಂದು ಮುದ್ರಿಸಲಾಗಿದೆ.

ಕರ್ನಾಟಕದಲ್ಲಿ ಕನ್ನಡದ ಬಗ್ಗೆ ಸರ್ಕಾರದ ಇಲಾಖೆಗಳಿಂದಲೇ ತಪ್ಪು-ತಪ್ಪಾಗಿ ಮುದ್ರಿಸಿದರೆ ಹೇಗೆ ಯಾರಿಗೆ ದೂರುವುದು. ಮುಂದಾದರೂ ಹೀಗಾಗದಂತೆ ಮುಂಜಾಗ್ರತೆ ವಹಿಸಬೇಕು. ಪ್ರಸ್ತುತ  ಕಾಗುಣಿತ ದೋಷವಿಲ್ಲದ ಫಲಕ  ಹಾಕಿ ಎಂಬುದು ಕನ್ನಡ ಪ್ರೇಮಿಗಳ ಬೇಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT