ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಚಾಯಕ್ಕಡದಲ್ಲಿ ಈಗ ರಾಜಕೀಯ ನಿಷಿದ್ಧ!

Last Updated 7 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಕೋಯಿಕ್ಕೋಡ್ : ಕೇರಳದ ರಸ್ತೆ ಬದಿಯ ಚಾಯಕ್ಕಡ (ಚಹಾ ಅಂಗಡಿ) ಗಳೆಂದರೆ ಅದು ಒಂದು ರೀತಿಯಲ್ಲಿ ರಾಜಕೀಯ ಚರ್ಚೆಯ ಅಡ್ಡೆಗಳಿದ್ದಂತೆ. ಆದರೆ ಈ ಚಾಯಕ್ಕಡ ಹಾಗಲ್ಲ. ಊರಿಗೆಲ್ಲ ಇದು ಚಾಯಕ್ಕಡ ಎಂದೇ ಪರಿಚಿತ. ಆದರೆ ಇದರ ಹೆಸರು ‘ಜೈನ್ಸ್’. ಹಾಗೆಂದು ಇದು ಜೈನರ ಅಂಗಡಿಯೂ ಅಲ್ಲ. ಜೈನಾಬಿ ಎಂಬ ಮುಸ್ಲಿಂ ಮಹಿಳೆ ನಡೆಸುತ್ತಿರುವ ಪುಟ್ಟ ಹೋಟೆಲ್ ಇದು.

ಕೋಯಿಕ್ಕೋಡ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕುಟ್ಟಿಚ್ಚಿರ (ಚಿರ ಅಂದರೆ ಕೊಳ) ಕಾನ್ವೆಂಟ್ ರಸ್ತೆಯ ಪಕ್ಕದಲ್ಲಿರುವ ಈ ಚಾಯಕ್ಕಡದಲ್ಲಿ ಚಹಾ ಬದಲಿಗೆ ಬಿರಿಯಾನಿ, ಸಮೋಸ, ಹಲ್ವಾ, ಮುಟ್ಟಮೊರ (ಮೊಟ್ಟೆ ಕೇಕ್), ಎರ್ಚಿ ಪತ್ತರಿ (ಮಾಂಸದ ದೋಸೆ) ಬಹಳ ಫೇಮಸ್. ಚುನಾವಣೆಯ ಈ ದಿನಗಳಲ್ಲಿ ಅಲ್ಲಿ ಹಬ್ಬದ ವಾತಾವರಣ.

ಗ್ರಾಹಕರ ಸೋಗಿನಲ್ಲಿ ಅಲ್ಲಿ ಕುಳಿತು ‘ಚುನಾವಣೆ ಕಣ ಹೇಗಿದೆ ಇಲ್ಲಿ’ ಎಂದು ಕೇಳಿದರೆ ಜೈನಾಬಿ ತಟ್ಟನೆ ತಲೆ ಮೇಲೆ ಸೆರಗು ಸುತ್ತುತ್ತ ಹೇಳಿಯೇ ಬಿಟ್ಟರು ’ಚುನಾವಣೆ ವಿಚಾರ ಇಲ್ಲಿ ಮಾತನಾಡಬೇಡಿ’ ಎಂದು. ಅವರು ಹೀಗೆ ಹೇಳುವುದಕ್ಕೆ ಬಲವಾದ ಕಾರಣಗಳಿವೆ.

ಕ್ಯಾಲಿಕಟ್ ದಕ್ಷಿಣ ವಿಧಾನಸಭಾ ಕ್ಷೇತ್ರ ತೀವ್ರ ಹಣಾಹಣಿಯ ಕಣ. ಇಲ್ಲಿನ ಇಬ್ಬರು ಪ್ರಮುಖ ಅಭ್ಯರ್ಥಿಗಳೂ ಮುಸ್ಲಿಮರೆ. ಈ ಕ್ಷೇತ್ರದ ಒಂದು ಮೂಲೆ ಕುಟ್ಟಿಚ್ಚಿರ. ಅಲ್ಲೂ ಜಿದ್ದಾಜಿದ್ದಿನ ‘ಕದನ’ ನಡೆಯುತ್ತಿದೆ. ಎಲ್ಲಿ ನೋಡಿದರೂ ಬಾವುಟಗಳು ಹಾರಾಡುತ್ತಿವೆ. ಈ ಕ್ಷೇತ್ರದಲ್ಲಿ ಬಹುಪಾಲು ಮುಸ್ಲಿಮರೇ. ಸ್ವಲ್ಪ ಪ್ರಮಾಣದಲ್ಲಿ ಗುಜರಾತಿಗಳು ಮತ್ತು ಇತರ ಹಿಂದುಗಳಿದ್ದಾರೆ ಅಷ್ಟೆ.

ಎಲ್‌ಡಿಎಫ್ ಅಭ್ಯರ್ಥಿ ಮುಸಾಫರ್ ಅಹ್ಮದ್ ಸ್ಥಳೀಯ ನಗರಪಾಲಿಕೆ ಸದಸ್ಯ. ಡಿವೈಎಫ್‌ಐ ನಾಯಕ. ಎದುರಾಳಿ ಯುಡಿಎಫ್‌ನಿಂದ ಮುಸ್ಲಿಂ ಲೀಗ್ ಅಭ್ಯರ್ಥಿ ಎಂ.ಕೆ.ಮುನೀರ್. ಮಾಜಿ ಮುಖ್ಯಮಂತ್ರಿ ಸಿ.ಎಚ್. ಮುಹಮ್ಮದ್ ಕೋಯಾ ಅವರ ಮಗ. ಮಾಜಿ ಸಚಿವರೂ ಹೌದು.

ಇವರು ಗೆದ್ದರೆ, ಯುಡಿಎಫ್ ಅಧಿಕಾರಕ್ಕೆ ಬಂದರೆ ಮಂತ್ರಿಸ್ಥಾನ ಖಚಿತ ಅಂತೆ. ಹೀಗಾಗಿ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಇದೆ. ಜನಸಮೂಹದ ಮಧ್ಯೆ ಇಬ್ಬರಿಗೂ ಒಳ್ಳೆಯ ಹೆಸರಿದೆ ಎನ್ನುತ್ತಾರೆ ಕುಟ್ಟಿಚ್ಚಿರ ತರವಾಡು ಮನೆಯ ನಾಸರ್.

ಕಳೆದ ಬಾರಿ ಇಲ್ಲಿ ಎಲ್‌ಡಿಎಫ್ ಅಭ್ಯರ್ಥಿ (ಐಎನ್‌ಎಲ್‌ನ ಪಿ.ಕೆ.ಸಲಾಂ) ಗೆದ್ದಿದಾರೆ. ಮತದಾರರು ಈ ಸಲ ಯಾರಿಗೆ ಹೆಚ್ಚಿನ ಬೆಂಬಲ ಸೂಚಿಸುತ್ತಾರೆ ಎಂಬ ಕುತೂಹಲ ಕ್ಷೇತ್ರದಾದ್ಯಂತ ಇದೆ. ಆದರೆ ಬಾಯಿ ಬಿಟ್ಟು ಯಾರೂ ಹೇಳಿಕೊಳ್ಳುತ್ತಿಲ್ಲ. ಅದಕ್ಕೇ ಈ ಚಾಯಕ್ಕಡವೂ ಮೌನವಾಗಿದೆ. ಕದನ ಕಣ ಮಾತ್ರ ಕಾವೇರುತ್ತಿದೆ.

ಮೀನುಗಾರರ ಬವಣೆ, ತೀರದ ರೋಷ
ಕೇರಳದ 14 ಜಿಲ್ಲೆಗಳ ಪೈಕಿ 10 ಜಿಲ್ಲೆಗಳೂ ಕಡಲ ತೀರದಲ್ಲಿವೆ. ಅಂದರೆ ಮೀನುಗಾರರು ಇಲ್ಲಿನ ಪ್ರಮುಖ ವರ್ಗ. ಈ ವರ್ಗದ ಬವಣೆ ಮಾತ್ರ ತೀರದ ದಾಹದಂತೆ. ಚುನಾವಣೆ ಸಂದರ್ಭದಲ್ಲಿ ಅದು ಅಲ್ಲಲ್ಲಿ ಸ್ಫೋಟಿಸುತ್ತಿದೆ.

ಕ್ಯಾಲಿಕಟ್ ಉತ್ತರ ಕ್ಷೇತ್ರದ ಕಾಂಬುರಂ ಬೀಚ್ ಬಳಿ ಕಾಲಿಟ್ಟಾಗ ಮೀನುಗಾರರ ರೋಷ ಉಕ್ಕಿತು. ‘ಚುನಾವಣೆ ಮೂಡ್ ಹೇಗಿದೆ’ ಎಂದು ಕೇಳಿದ್ದೇ ತಡ, ವೇಲಾಯುಧನ್, ಸುರೇಶ್‌ಬಾಬು ಸೇರಿದಂತೆ ಅಲ್ಲಿದ್ದ ಎಂಟು-ಹತ್ತು ಮಂದಿಯ ಗುಂಪು ಸಿಡಿದೆದ್ದಿತು. ಸಿಪಿಎಂ, ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣಾ ಕಚೇರಿಗಳು ಇಲ್ಲಿ ಅಕ್ಕಪಕ್ಕದಲ್ಲೇ ಇವೆ.

‘300 ರೂಪಾಯಿ ವೃದ್ಧಾಪ್ಯ ವೇತನ ಕೊಡುತ್ತಾರೆ. ಅದನ್ನು 400 ರೂಪಾಯಿ ಮಾಡಿದ್ದಾರೆ. ಆ 300 ರೂಪಾಯಿ ಹಣವೇ ಮೂರು ತಿಂಗಳಿಂದ ಬಂದಿಲ್ಲ. ವಿಷು ಹಬ್ಬಕ್ಕಾದರೂ ಸಿಕ್ಕೀತು ಎಂದು ಕಾದರೆ ಇನ್ನೂ ಬಂದಿಲ್ಲ’ ಎಂದು ವೇಲಾಯುಧನ್ ದೂರಿದರು. ‘ಸಿಪಿಎಂ ಕಾರ್ಯಕರ್ತರಿಗಾದ್ರೆ ಕಾರ್ಡ್ ಇಲ್ಲದೆಯೇ ಎಲ್ಲ ಬಂದುಬಿಡುತ್ತದೆ’ ಎಂದು ಪಕ್ಕದಲ್ಲಿದ್ದ ಯುವಕ ಮಾತು ಸೇರಿಸಿದ.

‘ಮೀನುಗಾರ ಕಾರ್ಮಿಕರು ಪಡೆದಿರುವ ಸಾಲ ಮನ್ನಾ ಮಾಡುತ್ತೇವೆ. ಸಾಲದ ಹಣ ಮರುಪಾವತಿ ಮಾಡಬೇಕಾದ್ದಿಲ್ಲ ಎಂದು ಕಲಕ್ಟರೇಟ್ ಕಚೇರಿಯಲ್ಲಿ ಈ ಹಿಂದೆ ರಾಜಕೀಯ ನಾಯಕರು ಬರೆದು ಕೊಟ್ಟಿದ್ದರು. ಆದರೆ ಈಗ ನೋಡಿದರೆ ಮನೆ ಜಪ್ತಿಗೆ ನೋಟಿಸ್ ಬಂದಿದೆ. ರೆವಿನ್ಯೂ ಇಲಾಖೆಯವರೂ ಪೀಡಿಸುತ್ತಿದ್ದಾರೆ’ ಎಂದು ಸುರೇಶ್‌ಬಾಬು ದೂರಿದರು.

‘ನಮಗೆ ಇಲ್ಲಿ ಮೀನು ಹಿಡಿಯುವ ಬಲೆ, ಸಾಮಗ್ರಿಗಳನ್ನು ಜೋಪಾನವಾಗಿ ಇಟ್ಟುಕೊಳ್ಳಲು ಸರಿಯಾದ ಶೆಡ್, ಜಾಗ ಇಲ್ಲ. ಕಟ್ಟಡ ನಿರ್ಮಿಸಲು ಬಿಡುತ್ತಿಲ್ಲ. ಆದರೆ, ರಸ್ತೆ ಪಕ್ಕದಲ್ಲೇ ಎಷ್ಟು ಬಹುಮಹಡಿ ವಸತಿ ಕಟ್ಟಡಗಳು ತಲೆ ಎತ್ತುತ್ತಿವೆ ನೋಡಿ. ಅದು ಹೇಗೆ? ಅವರಿಗೆ ಕಾನೂನು (ಕರಾವಳಿ ನಿಯಂತ್ರಣ ಕಾಯ್ದೆ) ಅನ್ವಯ ಆಗುವುದಿಲ್ಲವೇ?’ ಎಂದು ಅವರೆಲ್ಲರೂ ಕೇಳಿದರು. ‘ನಾವು ಕೇಸ್ ಹಾಕಿದ್ದೇವೆ. ಆದರೆ ಅಂತಹ ಪ್ರಭಾವಿಗಳ ಮುಂದೆ ನಮಗೆ ನ್ಯಾಯ ಸಿಗುವುದೇ’ ಎಂಬ ಸಂದೇಹವನ್ನೂ ವ್ಯಕ್ತಪಡಿಸಿದರು. ಈ ಬಹುಮಹಡಿ ಕಟ್ಟಡಗಳಿಗಾಗಿ ಹಲವಾರು ಮೀನುಗಾರರು ತಮ್ಮ ಗುಡಿಸಲುಗಳನ್ನು ಕಡಿಮೆ ಮೊತ್ತಕ್ಕೆ ಮಾರಿ ಹೋಗಿದ್ದಾರೆ ಎಂದರು.

‘ಎಡ-ಬಲ, ಇಲ್ಲಿ ಯಾವ ಸರ್ಕಾರ ಬಂದರೂ ಅಷ್ಟೆ. ಮೀನುಗಾರರ ಗೋಳು ಕೇಳುವವರಿಲ್ಲ. ನಮ್ಮ ಕಥೆ ಇಷ್ಟೆ. ಕಡಲನ್ನೇ ನಂಬಿ ಬದುಕಬೇಕು. ಇವರನ್ನಲ್ಲ’ ಎಂದು ರಾಜಕೀಯದವರ ಮೇಲಿನ ಸಿಟ್ಟನ್ನು ತೋಡಿಕೊಂಡರು.

‘ಕರ್ನಾಟಕದಲ್ಲಿ ಮೀನುಗಾರರಿಗೆ ಬೋಟ್‌ಗಳಿಗೆ ಸಬ್ಸಿಡಿ, ಸೀಮೆ ಎಣ್ಣೆಗೆ ಸಬ್ಸಿಡಿ, ವೇತನ ಎಲ್ಲ ಕೊಡುತ್ತಾರೆ. ಇಲ್ಲಿ ಬರೀ ಘೋಷಣೆ ಮಾತ್ರ. ಈಗ ಅಚ್ಚುತಾನಂದನ್ ಕ್ಷೇಮ ನಿಧಿ ಪಿಂಚಣಿಯನ್ನು ಸಾವಿರ ರೂಪಾಯಿಗೆ ಏರಿಸುವ ಭರವಸೆ ಕೊಟ್ಟಿದ್ದಾರೆ. ಕಾದು ನೋಡಬೇಕು’ ಎಂದು ಗೋಪಿ ಮಾತು ಸೇರಿಸಿದರು. ಇವರೆಲ್ಲರೂ ಬಿಜೆಪಿ ಕಚೇರಿ ಪಕ್ಕದಲ್ಲೇ ಕುಳಿತಿದ್ದರು!.

ಇದು ನ್ಯಾಯವೇ?
ಕ್ಯಾಲಿಕಟ್ ದಕ್ಷಿಣ ದಾಟಿ ಉತ್ತರದ ಕ್ಷೇತ್ರಕ್ಕೆ ಹೋದರೆ ಅಲ್ಲಿ ಇನ್ನೂ ವಿಶೇಷ. ಪಿಡಿಪಿ ನಾಯಕ ಅಬ್ದುಲ್ ನಾಸರ್ ಮದನಿಯನ್ನು ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ತಳ್ಳಿರುವ, ಸಂಕೋಲೆ ಹಾಕಿದ ಚಿತ್ರ ಬರೆದು ‘ಇದು ನ್ಯಾಯವೇ?’ ಎಂಬ ಘೋಷಣೆ ಬರೆದಿರುವ ಫಲಕಗಳು ಹಲವೆಡೆ ಕಂಡುಬರುತ್ತಿವೆ. ಪಕ್ಕದಲ್ಲೇ ಎಲ್‌ಡಿಎಫ್ ಅಭ್ಯರ್ಥಿ ಸಿಪಿಎಂನ ಪ್ರದೀಪ್‌ಕುಮಾರ್ ಅವರ ಭಾವಚಿತ್ರ ಇರುವ ಫಲಕವೂ ಇದೆ.

ಕಡಲ ತೀರದ ಈ ಕ್ಷೇತ್ರದಲ್ಲೂ ತುರುಸಿನ ಸ್ಫರ್ಧೆ ಕಂಡುಬರುತ್ತಿದೆ. ಮಾತೃಭೂಮಿ ಸಂಸ್ಥೆಯ ನಿರ್ದೇಶಕರಾದ ಪಿ.ವಿ.ಗಂಗಾಧರನ್ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಪಿ. ರಘುನಾಥ್ ಬಿಜೆಪಿ ಅಭ್ಯರ್ಥಿ. ಕಡಲ ತೀರದಲ್ಲಿ ಉರಿಯುವ ಬಿಸಿಲ ಬೇಗೆಯ ನಡುವೆಯೂ ಬೆವರಿಳಿಸುತ್ತ ಅಭ್ಯರ್ಥಿಗಳು ಮತಯಾಚನೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT