ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ದಾರಿಯ ದುರಸ್ತಿ ಯಾರ ಜವಾಬ್ದಾರಿ?

Last Updated 27 ಅಕ್ಟೋಬರ್ 2011, 10:10 IST
ಅಕ್ಷರ ಗಾತ್ರ

ಆಲಮಟ್ಟಿ: ಆಲಮಟ್ಟಿಯಿಂದ ನಿಡಗುಂದಿ ಹುಲ್ಲೂರ ಮಾರ್ಗವಾಗಿ ಮುದ್ದೇಬಿಹಾಳಕ್ಕೆ  ಪಟ್ಟಣಕ್ಕೆ ಹೋಗುವ 27 ಕಿಮೀ ರಸ್ತೆ ಮತ್ತೆ ತಗ್ಗು ಗುಂಡಿಗಳಿಂದ ಆವರಿಸಿದೆ. ಇದರಿಂದಾಗಿ ರಸ್ತೆ ಸಂಚಾರ ದುಸ್ತರವಾಗಿದೆ.

ಆಲಮಟ್ಟಿಯಿಂದ ಮುದ್ದೇಬಿಹಾಳಕ್ಕೆ ಹೋಗಲು ಅರ್ಧ ಗಂಟೆ ಪ್ರಯಾಣ ಸಾಕು. ಆದರೆ ಹದಗೆಟ್ಟಿರುವ ರಸ್ತೆಯಿಂದ ಒಂದು ಗಂಟೆಗೂ ಅಧಿಕ ಸಮಯ ತಗಲುತ್ತಿದೆ. ಎಲ್ಲೆಡೆಯೂ ತಗ್ಗುಗಳು ಸ್ವಾಗತಿಸುತ್ತಿವೆ. ಅಲ್ಲಲ್ಲಿ ಬಿದ್ದಿರುವ ತಗ್ಗುಗಳಿಂದ ಸಂಚಾರ ಕಷ್ಟಕರವಾಗಿದೆ. ರಸ್ತೆಯಲ್ಲಿ ಎದ್ದಿರುವ ಕಲ್ಲುಗಳು, ಕಿತ್ತು ಹೋಗಿರುವ ಡಾಂಬರು, ಇತ್ತೀಚೆಗಷ್ಟೇ ತೇಪೆ ಹಾಕಿದ್ದ ಗರಸು ಮಣ್ಣು ಅರ್ಧಂಬರ್ದ ಡಾಂಬರೀಕರಣ ಕಂಡಿದ್ದ ರಸ್ತೆ ಕಿತ್ತು ಹೋಗಿದ್ದು ಮತ್ತೆ ರಸ್ತೆಗಳು ಯಥಾಸ್ಥಿತಿಗೆ ಮರಳಿವೆ.

ಕೆಲವು ತಿಂಗಳುಗಳ ಹಿಂದೆ ಮುದ್ದೇಬಿಹಾಳ ಕ್ಷೇತ್ರದ ಶಾಸಕರಾದ ಸಿ. ಎಸ್. ನಾಡಗೌಡ್ರ ಸೇರಿದಂತೆ ಇಡೀ ಮುದ್ದೇಬಿಹಾಳ ಪಟ್ಟಣದ ನಾಗರಿಕರು ಕೆಬಿಜೆಎನ್‌ಎಲ್ ವ್ಯಾಪ್ತಿಗೆ ಒಳಪಡುವ ಆಲಮಟ್ಟಿ- ಮುದ್ದೇಬಿಹಾಳ, ಮುದ್ದೇಬಿಹಾಳ- ತಂಗಡಗಿ, ಮುದ್ದೇಬಿಹಾಳ- ನಾರಾಯಣಪುರ ರಸ್ತೆಗಳ ದುರಸ್ತಿಗೆ ಸಮರ್ಪಕ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬೀದಿಗೆ ಇಳಿದಿದ್ದರು.

ಆಗ ಕೃಷ್ಣಾ ಜಲ ಭಾಗ್ಯ ನಿಗಮ ಬರಿಯ ಗುಂಡಿ ಮುಚ್ಚಲು ಇಡೀ ಮೂರು ರಸ್ತೆಗೆ ಕೇವಲ 50 ಲಕ್ಷ ರೂ ಬಿಡುಗಡೆ ಮಾಡಿತ್ತು. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿತ್ತು. ಆ ಅನುದಾನವನ್ನು ರಸ್ತೆಗಳಲ್ಲಿ ಬಿದ್ದಿದ್ದ ಭಾರೀ ತಗ್ಗು, ಗುಂಡಿಗಳನ್ನು ಮುಚ್ಚಲು ಬಳಸಲಾಗಿದೆ ಎಂಬುದು  ಅಧಿಕಾರಿಗಳ ಸಮಜಾಯಿಷಿ.
 
ಆದರೆ ದುರಸ್ತಿಯಾದ ಕೆಲವೇ ದಿನಗಳಲ್ಲಿ ಮೊದಲಿನ ಸ್ಥಿತಿಗೆ ಮರಳಿರುವ ರಸ್ತೆಗಳು ಮತ್ತಷ್ಟು ಹದಗೆಟ್ಟಿವೆ. ಆದರೆ ಇದನ್ನು ಕಂಡು ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳಿಗೆ ರಸ್ತೆಗೆ ಏನೂ ಆಗಿಯೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ.

ಮುದ್ದೇಬಿಹಾಳಕ್ಕೆ ದಿನನಿತ್ಯ ವಿದ್ಯಾರ್ಥಿಗಳು ನೌಕರರು ವ್ಯಾಪಾರಿಗಳು ಬರುತ್ತಾರೆ. ದೂರದ ಆಲಮಟ್ಟಿಯಿಂದ ಮುದ್ದೇಬಿಹಾಳ ಪಟ್ಟಣಕ್ಕೆ ರಸ್ತೆ ಪ್ರಯಾಣದ ಮೂಲಕ ಬರುವುದೆಂದರೆ ದೊಡ್ಡ ಸಾಹಸ ಮಾಡಿದಂತೆ.

ಟೆಂಡರ್ ಪ್ರಕ್ರಿಯೆ ರದ್ದು
ಆಲಮಟ್ಟಿ- ಮುದ್ದೇಬಿಹಾಳ, ಮುದ್ದೇಬಿಹಾಳ- ನಾರಾಯಣಪುರ, ಮುದ್ದೇಬಿಹಾಳ- ತಂಗಡಗಿ ಈ ಮೂರು ರಸ್ತೆಗಳ ದುರಸ್ತಿಗೆ (ಮರು ಡಾಂಬರೀಕರಣ ಅಲ್ಲ) ಎರಡೂವರೆ ಕೋಟಿ ರೂಪಾಯಿ ಅಂದಾಜು ವೆಚ್ಚದ ಟೆಂಡರ್ ಕರೆಯಲಾಗಿತ್ತು.  ಅಷ್ಟು ಹಣದಲ್ಲಿ ಕಾಮಗಾರಿ ಮಾಡಲು ಆಗುವುದಿಲ್ಲ ಎಂದು ನೆಪವೊಡ್ಡಿ ಯಾವುದೇ ಗುತ್ತಿಗೆದಾರರು ಕಾಮಗಾರಿ ಮಾಡಲು ಮುಂದೆ ಬರಲಿಲ್ಲ. ಹೀಗಾಗಿ ಟೆಂಡರ್ ಮತ್ತೆ ರದ್ದಾಯಿತು.

ಮತ್ತೆ ಈ ಮೂರು ರಸ್ತೆಗಳ ಸಂಪೂರ್ಣ ಮರು ಡಾಂಬರೀಕರಣಕ್ಕಾಗಿ 9 ಕೋಟಿ ರೂಪಾಯಿ ವೆಚ್ಚದಲ್ಲಿ ಅಂದಾಜು ಪತ್ರಿಕೆ ತಯಾರಿಸಿ ಅನುಮತಿಗಾಗಿ ಬೆಂಗಳೂರಿನ ಕಚೇರಿಗೆ ಕಳುಹಿಸಲಾಗಿತ್ತು. ಆದರೆ ಅದು ಮಂಜೂರಾಗುವ ಮೊದಲೇ ಆಲಮಟ್ಟಿ- ಮುದ್ದೇಬಿಹಾಳ ರಸ್ತೆಯಲ್ಲಿ ಬಹಳಷ್ಟು ವಾಹನಗಳು ಚಲಿಸುತ್ತವೆ ಎಂಬ ಕಾರಣದಿಂದ ಅದನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಮೇಲ್ದರ್ಜೇಗೇರಿಸಬೇಕಾದರೆ ಈ ರಸ್ತೆಯನ್ನು  ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸಬೇಕಾಗುತ್ತದೆ. ಅದಕ್ಕಾಗಿ ಕೆಬಿಜೆಎನ್‌ಎಲ್ ಅಧಿಕಾರಿಗಳು ಪತ್ರ ಸಮರ ನಡೆಸಿದ್ದಾರೆ.  ಜನಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಾಳಿದ್ದರ ಫಲವಾಗಿ ಹಾಗೂ ಕೆಲವು ಕಾಣದ ಕೈಗಳು ಕೆಲಸ ಮಾಡಿದ್ದರ ಫಲವಾಗಿ ಈ ರಸ್ತೆ ಹಸ್ತಾಂತರ ಪ್ರಕ್ರಿಯೆಯೂ ತಡವಾಗುತ್ತಿದೆ. ಇದರಿಂದಾಗಿ ರಸ್ತೆ ಇನ್ನಷ್ಟು ಹದಗೆಟ್ಟು ಹೋಗುತ್ತಿದೆ. 

ಈ ರಸ್ತೆ ಬಿಟ್ಟು ಇನ್ನುಳಿದ ಮುದ್ದೇಬಿಹಾಳ- ತಂಗಡಗಿ, ಮುದ್ದೇಬಿಹಾಳ- ನಾರಾಯಣಪುರ ರಸ್ತೆ ನಿರ್ಮಾಣಕ್ಕೂ ಇನ್ನೂ ಅಂದಾಜು ಪತ್ರಿಕೆಯೇ ತಯಾರಾಗಿಲ್ಲ. ಅದಕ್ಕೆ ಒತ್ತಡ ಹೇರುವವರು ಯಾರೂ ಇಲ್ಲ. ಹೀಗಾಗಿ ಆಲಮಟ್ಟಿ- ಮುದ್ದೇಬಿಹಾಳ ರಸ್ತೆ ಇತ್ತ ಕೆಬಿಜೆಎನ್‌ಎಲ್‌ಕ್ಕೆ,  ಇನ್ನೊಂದೆಡೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೂ ಒಳಪಡದೇ ಅತಂತ್ರವಾಗಿದೆ.

ಈ ರಸ್ತೆಯ ಜವಾಬ್ದಾರಿ ಮೂವರು ಶಾಸಕರಿಗೆ ಆಲಮಟ್ಟಿ- ಮುದ್ದೇಬಿಹಾಳ ಬಹು ವಾಹನಗಳು ಚಲಿಸುವ ಈ ರಸ್ತೆಯ ಅಧೀನ ಬಸವನಬಾಗೇವಾಡಿ ಶಾಸಕ ಎಸ್‌ಕೆ ಬೆಳ್ಳುಬ್ಬಿ, ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ, ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರ ವ್ಯಾಪ್ತಿಯಲ್ಲಿ ಬರುತ್ತಿದೆ. ಆದರೆ ಹೆಚ್ಚಿನ ಭಾಗ ನಾಡಗೌಡ ಅವರ ಮತಕ್ಷೇತ್ರದಲ್ಲಿ ಬರುತ್ತಿದೆ. ಅವರೂ ಸೇರಿದಂತೆ ಯಾವುದೇ ಪ್ರತಿನಿಧಿಗಳು ಈ ರಸ್ತೆಯ ದುರಸ್ತಿಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ. 

ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರು ಮುಂದೆ ನಿಂತು ಆಲಮಟ್ಟಿ- ಬಾಗಲಕೋಟೆ ರಸ್ತೆ ಅಭಿವೃದ್ಧಿ ಮಾಡಿಸಿದ ಹಾಗೆ ಯಾರೂ ಪ್ರಯತ್ನ ಪಡುತ್ತಿಲ್ಲ ಎಂದು ನಾಗರಿಕರು ಆರೋಪಿಸುತ್ತಾರೆ.

ಕೇವಲ ನೆಪಕ್ಕೆಂಬಂತೆ ಹೋರಾಟ ನಡೆದಾಗ ಜನಪ್ರತಿನಿಧಿಗಳು ಮುಂದೆ ಬಂದು ಭಾಷಣ ಮಾಡುತ್ತಾರೆ. ಆಗ ಅಧಿಕಾರಿಗಳು ಆಗಮಿಸಿ ಭರವಸೆಯಲ್ಲಿಯೇ ಕಾಲ ಕಳೆಯುತ್ತಾರೆ. ನಂತರ ಇದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ.

ಇನ್ನೊಂದು ವಿಶೇಷವೆಂದರೆ ರಸ್ತೆ ಬಗ್ಗೆ ಆಗಲೀ, ಒಡೆದ ಕಾಲುವೆ ಬಗ್ಗೆ ಆಗಲೀ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡರೆ  ತಮ್ಮ ಇಲಾಖೆಯ ಬಗ್ಗೆ ಏನೇ ಬಂದರೂ ಕೆಬಿಜೆಎನ್‌ಎಲ್ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೇ ಮೌನವಾಗಿರುವುದು ಮಾತ್ರ ವಿಪರ್ಯಾಸ.

ಕೆಬಿಜೆಎನ್‌ಎಲ್ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿರುವ ರಸ್ತೆಗಳ ಸ್ಥಿತಿಗತಿ ಹೇಗಿದೆ? ಎಂಬ ಬಗ್ಗೆ ಸರ್ಕಾರಕ್ಕೆ ವರದಿ ನೀಡಬೇಕು, ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯಗಳಿಗೆ ದಿನನಿತ್ಯ ತಿರುಗಾಡುವ ಇಲಾಖೆಯ ಎಂಜಿನಿಯರ್‌ಗಳು ತಾವು ತಿರುಗಾಡುವ ರಸ್ತೆ ಹೇಗಿದೆ? ಎಂದು ಮೇಲಧಿಕಾರಿಗಳಿಗೆ ಒಂದಿಷ್ಟೂ ಹೇಳುವುದಿಲ್ಲವೆಂಬ ಆರೋಪ ಸದಾ ಕೇಳಿ ಬರುತ್ತಿದೆ.

ಜನಪ್ರತಿನಿಧಿಗಳೋ ಈ ರಸ್ತೆಯ ಹೋರಾಟದಲ್ಲಿಯೂ ರಾಜಕೀಯ ಪ್ರದರ್ಶನ ಮಾಡುತ್ತಾರೆಂಬ ಆರೋಪಗಳಿವೆ. ಅನುದಾನ ಬಿಡುಗಡೆಯಾದರೆ ಹೋರಾಟದ ಹೆಸರು ಅವರಿಗೆ ದಕ್ಕೀತೆಂಬ ಕೆಟ್ಟ ಪ್ರಚಾರ ಪ್ರಿಯತೆಯ ಗುಣದಿಂದ ಪಕ್ಷಾತೀತ ಹೋರಾಟ ಯಾರಿಗೂ ಇಷ್ಟವಿಲ್ಲ.

ರಸ್ತೆಯಲ್ಲಿ ಎರಡೆರಡು ಅಡಿ ಆಳವಾದ ತಗ್ಗುಗಳು ಬಿದ್ದರೂ ಯಾರು ಗಮನಿಸದಂತಾಗಿದೆ. ಪ್ರಯಾಣಿಕರು ಗಮನಿಸಿದರೂ ಸಂಬಂಧಿಸಿದವರಿಗೆ ಹಿಡಿ ಶಾಪ ಹಾಕುತ್ತ ಹಾಗೇ ಮುಂದೆ ಸಾಗುವುದು ಸಾಮಾನ್ಯವಾಗಿಬಿಟ್ಟಿದೆ.
ಏನೇ ಆಗಲಿ ಒಟ್ಟಾರೆ ಈ ಮೂರು ಪ್ರಮುಖ ರಸ್ತೆಗಳು ದುರಸ್ತಿಯಾಗಲಿ. ಇಲ್ಲವೇ ಶೀಘ್ರವೇ ಲೋಕೋಪಯೋಗಿ ಇಲಾಖೆಗಾದರೂ ಹಸ್ತಾಂತರಗೊಳ್ಳಲಿ ಎನ್ನುವುದೇ ಎಲ್ಲರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT