ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ದುರ್ವರ್ತನೆ ನಾಚಿಕೆಗೇಡು

Last Updated 11 ಡಿಸೆಂಬರ್ 2012, 19:39 IST
ಅಕ್ಷರ ಗಾತ್ರ

ಬೆಂಗಳೂರಿನ ನಡು ರಸ್ತೆಯಲ್ಲಿ, ಮಣಿಪುರಿ ನಾಟಕಗಳ ಲೇಖಕಿ ವಿರುದ್ಧ ನಡೆದಂತಹ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ತೀವ್ರ ಮಾತುಗಳಲ್ಲಿ ಖಂಡನಾರ್ಹ. ಅದೂ ಪೊಲೀಸ್ ಕಾನ್‌ಸ್ಟೆಬಲ್ ಎದುರಿಗೇ ಲೈಂಗಿಕ ವಿಕೃತಿಯ ಕಿರುಕುಳಗಳನ್ನು ಸಾರ್ವಜನಿಕರ ಗುಂಪು ನೀಡಿರುವಂತಹದ್ದು ಆಘಾತಕಾರಿ.

ಗುಂಪನ್ನು ನಿಯಂತ್ರಿಸುವ ಬದಲಿಗೆ, ಗುಂಪಿನಿಂದ ಅವಮಾನಕ್ಕೀಡಾಗುತ್ತಿದ್ದ ಮಹಿಳೆಯನ್ನೇ ಪೊಲೀಸ್ ಕಾನ್‌ಸ್ಟೆಬಲ್ ಸಹ ತಿವಿದು, ಎಳೆದಾಡಿರುವುದು ಪೊಲೀಸ್ ವ್ಯವಸ್ಥೆಯೊಳಗಿನ ಅಸೂಕ್ಷ್ಮತೆಗೆ ಸಾಕ್ಷಿ. `ಉತ್ತಮ ಗುಣಮಟ್ಟದ ಜೀವನ ನಡೆಸಲು ಬೆಂಗಳೂರು ಅತ್ಯುತ್ತಮ ನಗರ' ಎಂಬಂತಹ ಹೆಗ್ಗಳಿಕೆಯನ್ನು ಇತ್ತೀಚೆಗಷ್ಟೇ ಸಮೀಕ್ಷೆಯೊಂದು ವ್ಯಕ್ತಪಡಿಸಿದ ಬೆನ್ನಿಗೇ ಈ ಘಟನೆ ನಡೆದಿರುವುದು ನಾಚಿಕೆಗೇಡು.

ಬೆಂಗಳೂರಿನ ರಸ್ತೆಗಳಲ್ಲಿನ ಸಂಚಾರ ದಟ್ಟಣೆ, ಇತ್ತೀಚಿನ ವರ್ಷಗಳಲ್ಲಿ ರಸ್ತೆ ರೊಚ್ಚಿನ (ರೋಡ್ ರೆಜ್) ಪ್ರಕರಣಗಳನ್ನು ಸೃಷ್ಟಿಸುತ್ತಿರುವುದು ಮಾಮೂಲು. ಅನೇಕ ಸಂದರ್ಭಗಳಲ್ಲಿ ಇದು ಹಿಂಸಾತ್ಮಕವಾಗುವುದೂ ಉಂಟು. ಇಂತಹ ಪ್ರಕರಣಗಳನ್ನು ನಿಭಾಯಿಸುವ ಚಾಕಚಕ್ಯತೆ ಕೆಳ ಹಂತದ ಪೊಲೀಸ್ ಸಿಬ್ಬಂದಿಗೆ ಇರುವುದು ಅತ್ಯವಶ್ಯ.

ಮಣಿಪುರದ ಮಹಿಳೆ ಚಾಲನೆ ಮಾಡುತ್ತಿದ್ದ ಕಾರಿಗೆ ಹಿಂದಿನಿಂದ ದ್ವಿಚಕ್ರವಾಹನವೊಂದು ಡಿಕ್ಕಿ ಹೊಡೆದದ್ದು ಈ ಅಹಿತಕರ ಘಟನೆಗೆ ಪ್ರೇರಕ ಎನ್ನಲಾಗಿದೆ. ಈ ಘಟನೆ, ನಿಂದನೆ ಹಾಗೂ ಮಹಿಳೆ ಮೇಲಿನ ಲೈಂಗಿಕ ದುರ್ವರ್ತನೆಗಳಾಗಿ ಪರಿವರ್ತಿತವಾದದ್ದು ಅಕ್ಷಮ್ಯ. ಮಹಿಳೆ ನೆರವಿಗೆ ಧಾವಿಸುವ ಬದಲು ದ್ವಿಚಕ್ರವಾಹನ ಸವಾರ ತಪ್ಪಿಸಿಕೊಳ್ಳಲು ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ನೆರವು ನೀಡಿದರು ಎಂದು ಈ ಮಹಿಳೆ ಆರೋಪಿಸಿರುವಂತಹದ್ದು ಗಂಭೀರವಾದದ್ದು.

ಮಹಿಳೆ ಮೇಲಿನ ಹಿಂಸಾಚಾರ ಪ್ರಕರಣಗಳು ಮನೆ ಒಳಗೆ ಮಾತ್ರವಲ್ಲ ಸಾರ್ವಜನಿಕ ಸ್ಥಳಗಳ್ಲ್ಲಲೂ ಈಚಿನ ದಿನಗಳಲ್ಲಿ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ಇಂತಹ ಹಿಂಸೆ ಅಥವಾ ದುರ್ವರ್ತನೆಗಳಿಗೆ ಬಲಿಯಾಗುವ ಮಹಿಳೆಯರನ್ನೇ ದೂಷಿಸುವ ಅಥವಾ ಹಗುರವಾಗಿ ಕಾಣುವಂತಹ ಮನೋಭಾವ ಸಮಾಜದಲ್ಲಿ ಅಂತರ್ಗತವಾಗಿರುವುದು ವಿಷಾದನೀಯ.

ಸಾರ್ವಜನಿಕ ಸ್ಥಳಗಳಲ್ಲಿನ ಕೀಟಲೆಗಳು, ಲೈಂಗಿಕ ದುರ್ವರ್ತನೆಗಳಿಂದ ಮಹಿಳೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ ಎಂಬುದು ಕಟು ವಾಸ್ತವ. ಈ ನಿಟ್ಟಿನಲ್ಲಿ, ಈ ಪಿಡುಗು ನಿವಾರಣೆಗಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಇತ್ತೀಚೆಗಷ್ಟೇ ನಿರ್ದೇಶನ ನೀಡಿರುವ ಸುಪ್ರೀಂಕೋರ್ಟ್, ಮಾರ್ಗದರ್ಶಿ ಸೂತ್ರಗಳನ್ನೂ ಪ್ರಕಟಿಸಿರುವುದು ಸಕಾರಾತ್ಮಕ ಹೆಜ್ಜೆ.

ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸುವವರಷ್ಟೇ ಅಲ್ಲ, ಸ್ವಂತ ಕಾರು ಅಥವಾ ದ್ವಿಚಕ್ರ ವಾಹನಗಳನ್ನು ಚಲಾಯಿಸುವ ಮಹಿಳೆಯರೂ ಹಲವು ಬಗೆಯ ಚುಡಾಯಿಸುವಿಕೆ, ಕೀಟಲೆ ಅಥವಾ ಕಿರುಕುಳಗಳಿಗೆ ಒಳಗಾಗುವಂತಹ ಅನುಭವಗಳು ಮಾಮೂಲು ಎನ್ನುವಂತಾಗಿವೆ.

ಈ ಘಟನೆಯ ಕುರಿತಂತೆ ನ್ಯಾಯ ಒದಗಿಸಬೇಕೆಂದು ಸಿಪಿಎಂ ಹಿರಿಯ ನಾಯಕಿ ಬೃಂದಾ ಕಾರಟ್ ನೇತೃತ್ವದ ನಿಯೋಗ ಪೊಲೀಸ್ ಮಹಾನಿರ್ದೇಶಕರಿಗೆ ಮನವಿಯನ್ನೂ ಸಲ್ಲಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ನಿರ್ಭೀತ ವಾತಾವರಣ ಸೃಷ್ಟಿಗೆ ಕಾನೂನಿನ ಸದ್ಬಳಕೆಯಷ್ಟೇ ಅ್ಲ್ಲಲ, ಸಮಾಜದಲ್ಲಿನ ಮನೋಭಾವಗಳೂ ಬದಲಾಗಬೇಕಾದುದು ಅತ್ಯವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT