ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಸವ ದೇವನಲ್ಲ ದಾನವ!

Last Updated 13 ಸೆಪ್ಟೆಂಬರ್ 2011, 5:25 IST
ಅಕ್ಷರ ಗಾತ್ರ

ಧಾರವಾಡ: `ಮಳಿ ಚಾಲು ಆದಾಗಿಂದ ನಮ್ಮ ಹೊಲ್ದಾಗ ಈ ಬಸವನ ಹುಳ ಭಾಳ ಅದಾವ್ ನೋಡ್ರಿ. ಹೊತ್ತು ಮುಳಗಿದ ಮ್ಯಾಲ ದಾರಿ ಮ್ಯಾಲ ಹೆಜ್ಜಿಹೆಜ್ಜಿಗೂ ಕಾಣಸ್ತಾವ್ರಿ. ಅದು ಗುಬುಗುಬು ಬಸವಣ್ಣ ಅಂತ್ಹೇಳಿ ಸುಮ್ನ ಬಿಟ್ಟೇವ್ರಿ. ಬಸವಣ್ಣ ಅಂದ್ರ ದೇವ್ರ ಇದ್ದಂಗ.

ಅದಕ ನಾವ್ ಅದನ್ನು ಏನೂ ಮಾಡಂಗಿಲ್ರಿ. ಆದ್ರ ಹೊಲ್ದಾಗ ಬೆಳೆದಿದ್ದ ಬೆಳೀಗೆ ಅದ್ರಿಂದ ತೊಂದ್ರಿ ಆಕ್ತೈತಿ ಅಂತ ನಮಗ ಗೊತ್ತ ಇದ್ದಿದ್ದಿಲ್ಲ ಬಿಡ್ರಿ~ಹೀಗೆ ಮುಗ್ಧರಾಗಿ ಹೇಳಿದರು ಧಾರವಾಡ ಕೃಷಿ ಮೇಳಕ್ಕೆ ಬಂದಿದ್ದ ರಾಣೆಬೆನ್ನೂರು ತಾಲ್ಲೂಕಿನ ರೈತ ಹನುಮಂತಪ್ಪ.

ಹುಳದ ಹೆಸರಲ್ಲಿ `ಬಸವ~ ಇದ್ದ ಕಾರಣ. ರೈತರ ಪರಮ ಶತ್ರು ಈ ಹುಳ ಹನುಮಂತಪ್ಪ ಅವರ ಕಣ್ಣಿಗೆ ದೇವರಂತೆ ಕಂಡಿದೆ! ಹೌದು ಅದೊಂದು ಕೇವಲ ಪೀಡೆಯಲ್ಲ, ಜಾಗತಿಕ ಪೀಡೆ! ಜಗತ್ತಿನಲ್ಲೆ ಕೃಷಿಗೆ ಹಾನಿ ಮಾಡುವ ನೂರು ಪೀಡೆಗಳಲ್ಲಿ ಇದೂ ಒಂದು. ಸುಮಾರು 500ಕ್ಕೂ ಮಿಕ್ಕಿ ಬೆಳೆಯನ್ನು ತಿಂದು ತೇಗಬಲ್ಲ ರಾಕ್ಷಸ!

ಆಫ್ರಿಕಾ ಮೂಲದ ಈ ದೈತ್ಯ ಬಸವನಹುಳದ ಹಸರೇ `ಆಫ್ರಿಕನ್ ಜೈಂಟ್ ಸ್ನೈಲ್~. `ಅಕಟಿನ ಫುಲಿಕಾ~ ಅದರ ವೈಜ್ಞಾನಿಕ ಹೆಸರು. 1847ರಲ್ಲಿ ಒಬ್ಬ ಬ್ರಿಟಿಷ್ ಪ್ರಜೆ ಶೋಕಿಗಾಗಿ ಆಫ್ರಿಕಾದಿಂದ ತಂದು ಕೋಲ್ಕತ್ತದ ತನ್ನ ಮನೆಯಲ್ಲಿ ಸಾಕಿದ. ಹೀಗೆ ಭಾರತಕ್ಕೆ ಬಂದ ಈ ದೈತ್ಯ ಬಳಿಕ ಉತ್ತರ ಭಾರದಲ್ಲೆಲ್ಲ ಜಾಲಾಡಿ ಈಗ ದಕ್ಷಿಣದ ತುದಿ ಕೇರಳದಲ್ಲಿ ದಾಂಧಲೆ ನಡೆಸುತ್ತಿದೆ.

ಇದು ಕರ್ನಾಟಕಕ್ಕೆ ದಾಳಿ ಇಟ್ಟು ದಶಕವೇ ಕಳೆದಿದೆ. ಹುಬ್ಬಳ್ಳಿ- ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಈ ವರ್ಷ ಇದರ ಕಾಟ ವಿಪರೀತವಾಗಿದೆ. ಅಷ್ಟೇ ಅಲ್ಲ ಬೆಳೆಗಳನ್ನು ತಿಂದು ಧ್ವಂಸ ಮಾಡುತ್ತಿದೆ.

ಹೀಗಾಗಿ ಕೃಷಿ ಮೆಳದಲ್ಲಿ ಧಾರವಾಡ ಕೃಷಿ ಮಹಾವಿದ್ಯಾಲಯದ  ಕೃಷಿ ಕೀಟ ಶಾಸ್ತ್ರದ ಮಳಿಗೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ಈ ಬಸವನಹುಳವನ್ನು ಕಂಡು ಬೆಚ್ಚಿಬಿದ್ದ ಕೆಲವು ರೈತರು `ಅವುಗಳನ್ನು ನಿಯಂತ್ರಣಕ್ಕೆ ತರೋದು ಹೇಗೆ?~ ಅಂತ ದುಂಬಾಲು ಬಿದ್ದರು!

ಶಿವಮೊಗ್ಗದ ಹೊನ್ನಾಳಿ, ಬಾಗಲಕೋಟೆ, ಜಮಖಂಡಿ, ಮುಧೋಳ, ಬೆಳಗಾವಿಯ ಚಿಕ್ಕೋಡಿಯಲ್ಲಿ ಇವುಗಳು ಭಾರಿ ಪ್ರಮಾಣದಲ್ಲಿ ದಾಳಿ ಇಟ್ಟು ರೈತರು ಬೆಳೆಸಿದ ಸೋಯಾಬೀನ್, ಶೇಂಗಾ, ಪೇರಲ, ಅನಾನಸು, ಪಪ್ಪಾಯ, ವೀಳ್ಯದೆಲೆ, ಕಾಡುನುಗ್ಗೆಗಳನ್ನು ತಿಂದು ತೇಗುತ್ತಿವೆ. ಕೆಲವೆಡೆ ಬತ್ತದ ಬೆಳೆಗೂ ದಾಳಿ ಇಟ್ಟಿವೆ.

ವಿವಿಧ ಹಣ್ಣುಗಳ ತೋಟಗಳಿಗೂ ಲಗ್ಗೆ ಇಟ್ಟಿವೆ. ಇದ್ದಕ್ಕಿದ್ದಂತೆ ಕೋಟಿಗಟ್ಟಲೆ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ಈ ಬಸವನಹುಳದ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿ ಇಲ್ಲ. ಅವುಗಳನ್ನು ಹೇಗೆ ನಿಯಂತ್ರಿಸಬೇಕು? ಎಂಬುದು ರೈತರಿಗೆ ತಿಳಿದಿಲ್ಲ.

ಹೀಗಾಗಿ ಬಸವನಹುಳ ಸಮಗ್ರ ನಿಯಂತ್ರಣಕ್ಕಾಗಿ ರೈತರಿಗೆ ಸಾಧ್ಯವಾದಷ್ಟು ಮಾಹಿತಿ ನೀಡುತ್ತಿದ್ದೇವೆ. ಅವುಗಳ ತೀವ್ರತೆ ಮನಗಂಡು ತನ್ನ ವಿದ್ಯಾರ್ಥಿ ಮಲ್ಲಪ್ಪ ಚಂದರಗಿ ಅವರು ಪಿಎಚ್‌ಡಿ ಸಂಶೋಧನೆಯನ್ನೇ ಮಾಡುತ್ತಿದ್ದಾರೆ ಎನ್ನುತ್ತಾರೆ ಕೃಷಿ ಕೀಟ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆರ್.ಆರ್.ಪಾಟೀಲ.
ಈ ಬಸವನಹುಳಕ್ಕೆ ಬಿಸಿಲು ಕಂಡರೆ ಆಗದು.

ಹಾಗಾಗಿ ಹಗಲಿನ ಹೊತ್ತು ಭೂಗತವಾಗಿ ರಾತ್ರಿ ಹೊತ್ತು ಓಡಾಡುವ ನಿಶಾಚರಿ. ದ್ವಿಲಿಂಗಿಯಾದ ಈ ಹುಳ ತೇವ ಇರುವ ಜಾಗದಲ್ಲಿ ಹೆಚ್ಚಾಗಿ ಕಾಣಲು ಸಿಗುತ್ತವೆ. ಕೊಳೆಯುವ ವಸ್ತುಗಳಲ್ಲಿ, ಕಸಕಡ್ಡಿ ಬಿದ್ದಿರುವಲ್ಲಿ ಇವು ಸಾಮಾನ್ಯ.

ಹುಬ್ಬಳ್ಳಿ ತಾಲ್ಲೂಕಿನ ಕಟ್ನೂರ್, ಗಿರಿಯಾಲ್, ಮಾವನೂರ್‌ನಲ್ಲಿ ಇವುಗಳ ಸಂತತಿ ಕೋಟಿಗಟ್ಟಲೆ ಇದೆ. ಅವುಗಳನ್ನು ಹೆಕ್ಕಿ ತುಂಬಲು ಟ್ರಕ್‌ಗಳನ್ನೇ ತರಬೇಕು ಎನ್ನುವಂಥ ಸ್ಥಿತಿ ಇದೆ. ಅವುಗಳ ಸಂಖ್ಯೆ ವಿಪರೀತವಾಗಿ ಈಗ ಮನೆಗಳಿಗೂ ನುಗ್ಗುತ್ತಿವೆ ಎನ್ನುತ್ತಾರೆ ಡಾ. ಪಾಟೀಲ.

ಅವುಗಳು ಕಂಡು ಬಂದರೆ ರಾತ್ರಿ ನೆಲದಲ್ಲಿ ಗೋಣಿ ಚೀಲ ಒದ್ದೆ ಮಾಡಿ ಬಿಡಿಸಬೇಕು. ತೇವ ಇರುವುದರಿಂದ ಹುಳಗಳು ಆಕರ್ಷಣೆಗೊಂಡು ಬೆಳಗ್ಗಿನ ಹೊತ್ತು ಗೋಣಿಯಡಿಯಲ್ಲಿ ಬಂದು ಸೇರುತ್ತವೆ. ಬಳಿಕ ಅವುಗಳನ್ನು ಕೈಯಿಯಿಂದ ಹೆಕ್ಕಿ ರಾಶಿ ಹಾಕಿ ಬ್ಲೀಚಿಂಗ್ ಪೌಡರ್ ಹಾಕಬೇಕು. ಇಲ್ಲವೇ ಉಪ್ಪನ್ನು ಹಾಕಿ ಸಾಯಿಸಬೇಕು.

ಅವುಗಳ ನಿಯಂತ್ರಣಕ್ಕೆ ರೈತರು ಸಾಮೂಹಿಕ ಪ್ರಯತ್ನ ಮಾಡಬೇಕು. ಒಬ್ಬೊಬ್ಬರ ಪ್ರಯತ್ನದಿಂದ ಆ ದೈತ್ಯ ಸಂಖ್ಯೆಯ ನಿಯಂತ್ರಣ ಸಾಧ್ಯವೇ ಇಲ್ಲ. ಅವುಗಳ ನಿಯಂತ್ರಣ ಕುರಿತಂತೆ ಸಂಶೋಧನೆ ನಡೆಯುತ್ತಿದೆ ಎನ್ನುತ್ತಾರೆ ಡಾ. ಪಾಟೀಲ.

ಹೆಚ್ಚಿನ ಮಾಹಿತಿಗೆ ಮೊ. 94488 94084/ 99726 12620

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT