ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ಮಾತು ಉಳಿಸಿಕೊಳ್ಳುವರೇ?

Last Updated 23 ಜನವರಿ 2011, 19:35 IST
ಅಕ್ಷರ ಗಾತ್ರ

ಆ ಮಾತು ಇನ್ನೂ ಚೆನ್ನಾಗಿ ನೆನಪಿದೆ...!
‘ಇದೊಂದು ಅತ್ಯುತ್ತಮ ತಂಡ. ಸಮತೋಲನದಿಂದ ಕೂಡಿದೆ. ಯಾವುದೇ ತಂಡವನ್ನು ಸೋಲಿಸುವ ತಾಕತ್ತು ರಾಹುಲ್ ದ್ರಾವಿಡ್ ಪಡೆಗಿದೆ. ಉಳಿದ ತಂಡಗಳಿಗಿಂತ ತುಂಬಾ ಎತ್ತರದಲ್ಲಿದೆ. 1983ರ ಸಂಭ್ರಮ ವನ್ನು ಪುನರಾವರ್ತಿಸುವ ತಾಕತ್ತು ಈ ತಂಡಕ್ಕಿದೆ’ 2007ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ನಡೆದ 9ನೇ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್‌ಗೆ ಭಾರತ ತಂಡ ಆಯ್ಕೆ ಮಾಡಿದ್ದ ಅಂದಿನ ಆಯ್ಕೆ ಸಮಿತಿ ಅಧ್ಯಕ್ಷ ದಿಲೀಪ್ ವೆಂಗ್‌ಸರ್ಕರ್ ಈ ರೀತಿ ನುಡಿದಿದ್ದರು.

ಆದರೆ ಆದದ್ದೇನು? ಮೊದಲ ಸುತ್ತಿನಲ್ಲಿಯೇ ಚಾಂಪಿಯನ್‌ಷಿಪ್‌ನಿಂದ ಹೊರಬಿದ್ದ ಆಟಗಾ ರರು ಉಗುರು ಕಚ್ಚುತ್ತಾ ತಲೆತಗ್ಗಿಸಿ ಕುಳಿತ ಚಿತ್ರಗಳು ಇನ್ನೂ ತಾಜಾವಾಗಿವೆ. ಚಾಂಪಿ ಯನ್ ಆಗುವ ತಂಡ ಎಂದು ಹೇಳಿದ್ದ ವೆಂಗ್‌ಸರ್ಕರ್ ಬಾಂಗ್ಲಾದೇಶ ವಿರುದ್ಧ ಸೋಲುವುದನ್ನು ಸಂಕಟದಿಂದ ವೀಕ್ಷಿಸಬೇಕಾ ಯಿತು. ವಿಶೇಷವೆಂದರೆ ಅವತ್ತು ತಂಡ ಆಯ್ಕೆ ಮಾಡಿದ್ದ ವೆಂಗ್‌ಸರ್ಕರ್ 1983ರ ವಿಶ್ವಕಪ್ ಗೆದ್ದ ತಂಡದಲ್ಲಿದ್ದವರು.
 ******

‘ಈ ತಂಡಕ್ಕೆ ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿದೆ. ಎಂ.ಎಸ್.ದೋನಿ ಪಡೆ ಸಮತೋಲನದಿಂದ ಕೂಡಿದೆ. ತುಂಬಾ ಚರ್ಚೆ ಮಾಡಿ ತಂಡ ಆಯ್ಕೆ ಮಾಡಿದ್ದೇವೆ. ಸ್ವದೇಶದ  ಪ್ರೇಕ್ಷಕರ ಮುಂದೆ ವಿಶ್ವಕಪ್ ಗೆದ್ದು ಕೊಡುತ್ತೇವೆ. 28 ವರ್ಷಗಳ ಬರ ನೀಗುವ ವಿಶ್ವಾಸ ಹೊಂದಿದ್ದೇವೆ’ ಉಪಖಂಡದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಜನವರಿ 17ರಂದು ಚೆನ್ನೈನಲ್ಲಿ ತಂಡ ಆಯ್ಕೆ ಮಾಡಿದ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಕೆ.ಶ್ರೀಕಾಂತ್ ಈ ರೀತಿ ಹೇಳಿದ್ದಾರೆ! ಮತ್ತೊಂದು ವಿಶೇಷವೆಂದರೆ ಶ್ರೀಕಾಂತ್ ಕೂಡ 1983ರ ವಿಶ್ವಕಪ್ ಗೆದ್ದ ತಂಡದಲ್ಲಿದ್ದವರು. ಏನಾಗುತ್ತದೆಯೋ ಏನೊ? ಈ ಬಾರಿಯೂ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಎದುರಾಗುತ್ತಿದೆ!
 ******

ಆದರೆ 2007ರ ವಿಶ್ವಕಪ್ ಆಡಿದ್ದ ಏಳು ಮಂದಿ ಈ ಬಾರಿಯೂ ಇದ್ದಾರೆ. ಕೆರಿಬಿಯನ್ ನಾಡಿನಲ್ಲಿ ಮೊದಲ ಸುತ್ತಿನಲ್ಲಿ ಹೊರಬಿದ್ದಾಗ ಸಚಿನ್, ದೋನಿ, ಸೆಹ್ವಾಗ್, ಯುವರಾಜ್, ಜಹೀರ್, ಹರಭಜನ್ ಹಾಗೂ ಮುನಾಫ್ ಇದ್ದರು. 2003ರ ವಿಶ್ವಕಪ್‌ನಲ್ಲಿ ನೆಹ್ರಾ ಆಡಿದ್ದರು. ಗಂಭೀರ್, ಕೊಹ್ಲಿ, ರೈನಾ, ಯೂಸುಫ್, ಪ್ರವೀಣ್, ಚಾವ್ಲಾ, ಅಶ್ವಿನ್ ಇನ್ನೂ ಏಕದಿನ ವಿಶ್ವಕಪ್‌ಗೆ ಪದಾರ್ಪಣೆ ಮಾಡಬೇಕು. ಅದೇನೆ ಇರಲಿ,  ಹೆಚ್ಚಿನವರು ಈ ಬಾರಿ ಭಾರತವೇ ಫೇವರಿಟ್ ಎಂದು ಬೆಟ್ ಕಟ್ಟುತ್ತಿದ್ದಾರೆ. ಉಪಖಂಡದಲ್ಲಿ ನಡೆಯುತ್ತಿರು ವುದು ಅದಕ್ಕೆ ಒಂದು ಕಾರಣ ಇರಬಹುದು. ಜೊತೆಗೆ ಅತ್ಯುತ್ತಮ ಫಾರ್ಮ್‌ನಲ್ಲಿಯೂ ಇದೆ. ಹಾಗಾಗಿಯೇ 10ನೇ ವಿಶ್ವಕಪ್ ಶುರುವಾಗುವ ಫೆಬ್ರುವರಿ 19ರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ನಿಜವಾಗಿಯೂ ಈ ತಂಡಕ್ಕೆ ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಇದೆಯೇ?
 ******

ಅಷ್ಟರಲ್ಲಿಯೇ ಸಣ್ಣ ಅನುಮಾನ ಶುರುವಾಗಿದೆ. ಏಕೆಂದರೆ  ಈ ಬಾರಿ ತಂಡ ಶೇಕಡಾ 100ರಷ್ಟು ಫಿಟ್ ಆಗಿದೆ ಎಂದು ಹೇಳಲು ಯಾರಿಗೂ ತಾಕತ್ತಿಲ್ಲ. ಕಾರಣ ಚಾಂಪಿಯನ್ ಬ್ಯಾಟ್ಸ್‌ಮನ್ ಸಚಿನ್, ಸೆಹ್ವಾಗ್, ಗಂಭೀರ್ ಹಾಗೂ ಪ್ರವೀಣ್ ಕುಮಾರ್ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಅವರಿಗಾಗಿರುವ ಗಾಯ ದೊಡ್ಡ ಪ್ರಮಾಣದ್ದೇನಲ್ಲ. ಆದರೆ ಕೊಂಚ ಎಡವಟ್ಟಾದರೂ ಅಪಾಯ ತಪ್ಪಿದ್ದಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಈ ಬಾರಿ ತಂಡದಲ್ಲಿ ಅಂಥದ್ದೇನೂ ಅಚ್ಚರಿ ಇಲ್ಲ. ಏಳು ಮಂದಿ ಬ್ಯಾಟ್ಸ್‌ಮನ್‌ಗಳನ್ನು ಆಯ್ಕೆ ಮಾಡಲಾಗಿದೆ. ನಿಜ, ಭಾರತದ ಈಗಿನ ಸ್ಟ್ರೆಂಥ್ ಬ್ಯಾಟಿಂಗ್. ಬೌಲಿಂಗ್ ಸದಾ ದುರ್ಬಲ. ಇದೇ ಕಾರಣಕ್ಕಾಗಿ ಬ್ಯಾಟ್ಸ್‌ಮನ್ ಒಬ್ಬರನ್ನು ಕಡಿಮೆ ಮಾಡಿ ಸ್ಪಿನ್ನರ್‌ಗೆ ಅವಕಾಶ ನೀಡಲಾಗಿದೆ. ಆಯ್ಕೆ ಆಗಿರುವ ಬ್ಯಾಟ್ಸ್‌ಮನ್‌ಗಳಲ್ಲಿ ಯುವರಾಜ್ ಫಾರ್ಮ್ ಚಿಂತೆಗೀಡು ಮಾಡಿದೆ. ಮೂರು ವರ್ಷಗಳ ಬಳಿಕ ಸ್ಥಾನ ಪಡೆದಿರುವ ಪಿಯೂಷ್ ಚಾವ್ಲಾ ಆಯ್ಕೆ ಕೊಂಚ ಅಚ್ಚರಿ ಎನಿಸಬಹುದು. ಆದರೆ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಿದಾಗಲೇ ಅದು ಬಹುತೇಕ ಖಚಿತವಾಗಿತ್ತು. ಜೊತೆಗೆ ನಾಯಕ ದೋನಿ ಕೂಡ ಲೆಗ್ ಸ್ಪಿನ್ನರ್ ಚಾವ್ಲಾ ಅವರತ್ತ ಒಲವು ಹೊಂದಿದ್ದರು. ಏಕೆಂದರೆ ಅವರು ಬ್ಯಾಟಿಂಗ್‌ನಲ್ಲೂ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. 14 ಮಂದಿ ಯಾರಿರಬಹುದು ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿದ್ದ ವಿಚಾರ.

ಆದರೆ ಉಳಿದ ಇನ್ನೊಂದು ಸ್ಥಾನಕ್ಕೆ ಶ್ರೀಶಾಂತ್, ರೋಹಿತ್ ಶರ್ಮ ಹಾಗೂ ಚಾವ್ಲಾ ನಡುವೆ ಸ್ಪರ್ಧೆ ಇತ್ತು. ಭಾರತದ ಬಹುತೇಕ ಪಂದ್ಯಗಳು ಸ್ವದೇಶದಲ್ಲಿಯೇ ನಡೆಯಲಿರುವುದರಿಂದ ಮೂರು ಸ್ಪಿನ್ನರ್‌ಗಳ ಮೊರೆ ಹೋಗಿರುವುದು ಅರ್ಥ ಮಾಡಿಕೊಳ್ಳಬೇಕಾದ ಸಂಗತಿ. ನಾಲ್ಕು ಮಂದಿ ವೇಗಿಗಳು ಸೇರಿದಂತೆ ಈಗ ಒಟ್ಟು ಏಳು ಮಂದಿ ಬೌಲರ್‌ಗಳು ಇದ್ದಾರೆ. ಆದರೆ ಎಂದಿನಂತೆ ದೋನಿ ಪ್ರತಿ ಪಂದ್ಯದಲ್ಲಿ ನಾಲ್ಕು ಮಂದಿಗಿಂತ ಹೆಚ್ಚು ಬೌಲರ್‌ಗಳನ್ನು ಕಣಕ್ಕಿಳಿಸಲಾರರು. ಏಕೆಂದರೆ ಯೂಸುಫ್, ಯುವರಾಜ್, ಸೆಹ್ವಾಗ್, ರೈನಾ ಕೂಡ ಒಂದೆರಡು ಓವರ್‌ಗಳ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ವಿಶೇಷವೆಂದರೆ ಈ ಬಾರಿ ರಿಸರ್ವ್ ವಿಕೆಟ್ ಕೀಪರ್ ಇಲ್ಲ. ಅದೇನು ದೊಡ್ಡ ಸಮಸ್ಯೆ ಅಲ್ಲ. ಆದರೆ ದೊಡ್ಡ ಟೂರ್ನಿಗೆ ಸ್ಥಾನ ವಂಚಿತರಾಗಿರುವ ಪ್ರಗ್ಯಾನ್ ಓಜಾ, ರೋಹಿತ್ ಶರ್ಮ, ಶ್ರೀಶಾಂತ್ ಹಾಗೂ ಇಶಾಂತ್ ತುಂಬಾ ನಿರಾಶರಾಗಿರಬಹುದು. ಏನೇ ಇರಲಿ, ಆರನೇ ವಿಶ್ವಕಪ್ ಆಡುತ್ತಿರುವ ಸಚಿನ್ ಈ ಬಾರಿಯಾದರೂ ಯಶಸ್ಸು ಕಾಣುವ ಹಂಬಲದಲ್ಲಿದ್ದಾರೆ. ಜೊತೆಗೆ ವಿಶ್ವಕಪ್ ಉಪಖಂಡದಲ್ಲಿಯೇ ನಡೆಯುತ್ತಿರುವುದರಿಂದ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ. ಎದೆ ಬಡಿತವೂ ಹೆಚ್ಚುತ್ತಿದೆ!   
            

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT