ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ಹುಳಿ ಹುಳಿ

Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೇಸಿಗೆಯಲ್ಲಿ ಹಣ್ಣುಗಳಿಗೇನೂ ಬರವಿಲ್ಲ. ಕಲ್ಲಂಗಡಿ, ಕರಬೂಜಾ, ಕಿತ್ತಳೆ ಬಂದು ತಿಂಗಳುಗಳೇ ಕಳೆದಿವೆ. ಈಗ ಮಾವಿನ ಹಣ್ಣಿನ ಸರದಿ. ಮಾವಿನ ಹಣ್ಣು ಎಂದ ಕೂಡಲೇ ಎಲ್ಲರ ಬಾಯ್ಲ್ಲಲೂ ನೀರೂರುತ್ತದೆ. ಸ್ವಲ್ಪ ಸಿಹಿ, ಸ್ವಲ್ಪ ಹುಳಿ ಎರಡೂ ಬೆರೆತ ರುಚಿಯಾದ ಮಾವು ಎಲ್ಲ ವಯಸ್ಸಿನವರೂ ಇಷ್ಟಪಡುವ ಹಣ್ಣು. ಬೇಸಿಗೆ ಧಗೆಯ ಈ ದಿನಗಳಲ್ಲಿ ಮಾವಿನ ಹಣ್ಣಿನ ಬಗೆಬಗೆ ತಿನಿಸು, ಜ್ಯೂಸ್ ಮಾವುಪ್ರಿಯರ ನಾಲಿಗೆ ರುಚಿಯನ್ನು ಹೆಚ್ಚಿಸುತ್ತದೆ. ಇಂತಹ ಮಾವು ರಾಜ್ಯದ ಪ್ರಮುಖ ಹಣ್ಣಿನ ಮಾರುಕಟ್ಟೆ ಎಂದೇ ಕರೆಸಿಕೊಂಡ ಬೆಂಗಳೂರಿಗೂ ಪ್ರವೇಶಿಸಿದೆ. ಆದರೆ ಈ ಬಾರಿ ಹಣ್ಣನ್ನು ಹೊಟ್ಟೆತುಂಬ ತಿನ್ನುವಂತಿಲ್ಲ. ಕಾರಣ ಕಳೆದ ವರ್ಷ ಕೈಕೊಟ್ಟ ಮಳೆ.

ಆದರೆ ಹಣ್ಣಿನ ಆಕರ್ಷಣೆಗೆ ಒಳಗಾದ ನಗರದ ಗ್ರಾಹಕರು ಬೆಲೆಯ ಬಗ್ಗೆ ತಲೆಕೆಡಿಸಿಕೊಳ್ಳುವುದು ಕಡಿಮೆಯೇ. ಇದಕ್ಕೆ ಸಾಕ್ಷಿಯಾಗಿ ಈಗಾಗಲೇ ನಗರದ ಹಾಪ್‌ಕಾಮ್ಸ ಮಳಿಗೆ, ಮಾಲ್ ಮತ್ತು ಇನ್ನಿತರ ಹಣ್ಣಿನ ಮಳಿಗೆಗಳಲ್ಲಿ ಮಾವು ಕೊಳ್ಳುವವರನ್ನು ಕಾಣಬಹುದು. `ತಿನ್ನುವ ಆಸೆಗೆ ದರದ ಹಂಗಿಲ್ಲ' ಎಂಬುದು ಈ ಹೊತ್ತಿನ ಗಾದೆ.

ಈಗಾಗಲೇ ಮಾರುಕಟ್ಟೆಗಳಲ್ಲಿ ಬಾದಾಮಿ, ಮಲಗೋವಾ, ಸಿಂಧೂರ, ರಸಪೂರಿ, ಬಾಗೇನ್‌ಪಲ್ಲಿ, ತೋತಾಪುರಿ ಮಾವು ಸಿಗುತ್ತಿದೆ. ಇನ್ನು ಬೆಂಗಳೂರು ಸುತ್ತಮುತ್ತಲಿನಿಂದ ನಾಟಿ ಮಾವುಗಳೂ ಬಂದಿವೆ. ಕಳೆದ ವರ್ಷರೂ. 20ರಿಂದರೂ. 25ಕ್ಕೆ ಸಿಗುತ್ತಿದ್ದ ಎಲ್ಲರ ನೆಚ್ಚಿನ ಬಾದಾಮಿ ಹಣ್ಣಿನ ಹೋಲ್‌ಸೇಲ್ ದರವೇರೂ. 30ರಿಂದ 45ಕ್ಕೆ ಏರಿದೆ. ಇದಕ್ಕೆ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯೂ ಕಾರಣವಾಗಿದೆ.

ಈ ಬಾರಿ ಸ್ವಲ್ಪಕಹಿ
`ಹಾಗೆ ನೋಡಿದರೆ ಇದು ಆನ್ ಸೀಸನ್. ವರ್ಷ ಬಿಟ್ಟು ವರ್ಷ ಹಣ್ಣಿನ ಇಳುವರಿ ಹೆಚ್ಚು ಇರುವುದು ಸಾಮಾನ್ಯ. ಆದರೆ ಈ ನಿಯಮ ಮೀರಿ ಇಳುವರಿ ಕಡಿಮೆಯಾಗಿದೆ. ಕಳೆದ ವರ್ಷ ರಾಜ್ಯದಲ್ಲಿ ಶೇ 80ರಷ್ಟು ಇಳುವರಿ ಕಡಿಮೆಯಾಗಿ, ಏರಿದ್ದ ಮಾವಿನ ಬೆಲೆ ಈ ಬಾರಿ ಇನ್ನಷ್ಟು ಏರಿಕೆ ಕಾಣಲಿದೆ. ಇದಕ್ಕೆ ಕಾರಣ ಮಳೆ ಅಭಾವ. ಈ ವರ್ಷ ಮತ್ತೆ ರಾಜ್ಯದ ಮಾವು ಇಳುವರಿ ಕಳೆದ ಬಾರಿಗಿಂತ ಶೇ 30ರಷ್ಟು ಕುಸಿದಿದೆ. ಕೋಲಾರ ಜಿಲ್ಲೆ ಬಿಟ್ಟರೆ ಅತಿ ಹೆಚ್ಚು ಮಾವು ಬೆಳೆಯುವ ಮೈಸೂರು ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಈ ಬಾರಿ ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ. ಹಾಗಾಗಿ ಹಣ್ಣಿನ ಬೆಲೆ ಕಳೆದ ವರ್ಷಕ್ಕಿಂತ ಶೇ 50ರಷ್ಟು ಹೆಚ್ಚಾಗಲಿದೆ' ಎಂದು ಹಣ್ಣಿನ ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಹೋಲ್‌ಸೇಲ್ ದರ
ಬಾದಾಮಿ ರೂ.30ರಿಂದ 45, ಸಿಂಧೂರಾ ರೂ.12ರಿಂದ 17,ರಸಪೂರಿ ರೂ.20ರಿಂದ 40, ಮಲಗೋವಾ ರೂ.25ರಿಂದ 45, ಬಂಗೇನಪಲ್ಲಿ ರೂ.30ರಿಂದ 50, ತೋತಾಪುರಿ ರೂ.10ರಿಂದ15. ಇದು ಹೋಲ್‌ಸೇಲ್ ದರವಾಗಿದ್ದು ಗ್ರಾಹಕರು ಕೊಳ್ಳುವಾಗ ಇನ್ನೂ ಹೆಚ್ಚು ಬೆಲೆ ತೆರಬೇಕಾಗುತ್ತದೆ. ನಗರಕ್ಕೆ ಅತಿ ಹೆಚ್ಚು ಮಾವು ಪೂರೈಕೆ ಮಾಡುವ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಹಣ್ಣುಗಳು ಬರುವವರೆಗೂ ಇದೇ ಸ್ಥಿತಿ ಮುಂದುವರಿಯಲಿದೆ.

ಹಾಪ್‌ಕಾಮ್ಸ ದರ
ಹಾಪ್‌ಕಾಮ್ಸ ಮಳಿಗೆಯಲ್ಲಿ ಈಗ ಮಾವಿನ ಹಣ್ಣುಗಳನ್ನು ಹುಡುಕಬೇಕಾಗಿದೆ. ರಾಜ್ಯದಲ್ಲಿ ಇಳುವರಿ ಕಡಿಮೆಯಾಗಿರುವ ಪರಿಣಾಮವಾಗಿ ಸ್ವಲ್ಪವೇ ಮಾವು ಪೂರೈಕೆಯಾಗುತ್ತಿದೆ. ಹಾಪ್‌ಕಾಮ್ಸ ದರ ಬಾದಾಮಿ ರೂ.80ರಿಂದ 145, ಸಿಂಧೂರಾ ರೂ.30, ರಸಪೂರಿ ರೂ.50, ಮಲಗೋವಾ ರೂ.74, ಕೇಸರಿ (ಹೊಸ ತಳಿ) ರೂ.65.

ಗೃಹಿಣಿಯರಿಗೆ ನಿರಾಸೆ
ಈ ಬಾರಿ ಉಪ್ಪಿನಕಾಯಿಗೆ ಮಾವಿನಕಾಯಿ ಕೊಳ್ಳುವ ಗೃಹಿಣಿಯರು ಪರದಾಡುವಂತಾಗಿದೆ. ಕೆಲವರು ಮಾವಿನ ಬದಲು ನಿಂಬೆ, ನೆಲ್ಲಿಕಾಯಿ ಉಪ್ಪಿನಕಾಯಿ ತಯಾರಿಸುವ ಮನಸು ಮಾಡಬಹುದು. ಮಾವಿನ ಹಣ್ಣಿನಿಂದ ಬಗೆಬಗೆ ಜ್ಯೂಸ್ ತಯಾರಿಸುವವರು ಜ್ಯೂಸ್‌ಗೆ ನೀರು ಸೇರಿಸಿದರೂ ಅಚ್ಚರಿಯಿಲ್ಲ. ಇನ್ನು ಮಾವಿನ ಹಣ್ಣಿನಿಂದ ಸ್ಕ್ವಾಷ್, ಜಾಮ್, ಹಲ್ವ, ತೊಕ್ಕು ಹೀಗೆ ಬಹುಕಾಲ ಶೇಖರಿಸಿಡಬಹುದಾದ ತಿನಿಸುಗಳನ್ನು ಸಿದ್ಧಪಡಿಸಲು ಸ್ವಲ್ಪ ದಿನ ಕಾಯಲೇಬೇಕು. ಯಾಕೆಂದರೆ ತಮಿಳುನಾಡಿನ ಮಧುರೈ ಮತ್ತು ಗೋಪಾಲ್‌ಪಟ್ಟಿಯಿಂದ ಬೆಂಗಳೂರಿಗೆ ಮೇ ಮೊದಲ ವಾರವಷ್ಟೇ ಮಾವಿನ ಹಣ್ಣಿನ ಪ್ರವೇಶವಾಗಲಿದೆ. ಆದರೂ ಜ್ಯೂಸ್ ಅಂಗಡಿಗಳಲ್ಲಿ ತಾಜಾ ಹಣ್ಣಿನ ತಿರುಳಿನಿಂದ ತಯಾರಿಸಿದ ಜ್ಯೂಸ್‌ಗೆ ಭಾರೀ ಬೇಡಿಕೆ ಬಂದಿದೆ. ಮಾವಿನ ಉಪ ಉತ್ಪನ್ನಗಳ ಬೆಲೆಯೂ ಏರುವ ಸಾಧ್ಯತೆ ಇದೆ.


ಕೊರತೆ
`ಹಾಪ್‌ಕಾಮ್ಸ ಮುಖ್ಯವಾಗಿ ರಾಜ್ಯದ ಬೆಳೆಯನ್ನೇ ನಂಬಿರುವುದರಿಂದ ಹಣ್ಣಿನ ಕೊರತೆ ಎದುರಿಸುತ್ತಿದೆ. ಆದರೂ ಮೇ ಎರಡನೇ ವಾರದ ನಂತರ ಸ್ವಲ್ಪ ಚೇತರಿಕೆ ಕಾಣುವ ನಿರೀಕ್ಷೆ ಇದೆ. ಈಗ ಹಾಪ್‌ಕಾಮ್ಸ ಮಳಿಗೆಯಲ್ಲಿ ನಿಗದಿಪಡಿಸಿದ ದರ ಕಡಿಮೆಯೇ. ಪೂರೈಕೆ ಹೆಚ್ಚಾದಾಗ ದರ ಇಳಿಯಲಿದೆ' ಎಂಬುದು ಹಾಪ್‌ಕಾಮ್ಸ ಜನರಲ್ ಮ್ಯಾನೇಜರ್ ದೊಡ್ಡಗೆಂಡೇಗೌಡ ಅವರ ಅಭಿಪ್ರಾಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT