ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿಯೂ ನಡೆದಿದೆ ತಾಳಿಭಾಗ್ಯಕ್ಕೆ ನಂಟು

Last Updated 4 ಡಿಸೆಂಬರ್ 2013, 20:17 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಗೆಜೆಟೆಡ್‌ ಅಧಿಕಾರಿಗಳ ನೇಮಕಾತಿಗೂ, ‘ತಾಳಿ­ಭಾಗ್ಯ’ಕ್ಕೂ ಅನೇಕ ದಶಕಗಳ ನಂಟಿದೆ. ಹಣ ಕೊಟ್ಟು ನೌಕರಿ ಗಿಟ್ಟಿಸಲು ಸಾಧ್ಯ­ವಾಗದೇ ಇದ್ದರೆ ಕೆಪಿಎಸ್‌ಸಿ ಅಧ್ಯಕ್ಷರ, ಸದಸ್ಯರ, ಏಜೆಂಟರ ಮಗಳಂದಿರನ್ನು ಮದುವೆ-ಯಾಗಿ ತಮ್ಮ ಆಸೆ ಈಡೇರಿ­ಸಿಕೊಂಡ ಉದಾಹರಣೆ ಇದೆ.

2011ರ ಗೆಜೆಟೆಡ್ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿಯೂ ಇಂತಹ ‘ತಾಳಿಭಾಗ್ಯ’  ಅನುಷ್ಠಾನಗೊಂಡಿದೆ. ತಾಳಿಭಾಗ್ಯ ಕೊಡುಗೆ ಬಗ್ಗೆ ಅನೇಕ ಅಭ್ಯರ್ಥಿಗಳು ಸಿಐಡಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ನಡೆ­ಸಿದ ಸಿಐಡಿಗೆ ಕೆಲವು ಮಾಹಿತಿ ಲಭ್ಯ­ವಾಗಿದೆ. ನಿಶ್ಚಿತಾರ್ಥ ನಡೆದಿರುವ ಸ್ಥಳ, ದಿನಾಂಕ ಮತ್ತು ವ್ಯಕ್ತಿಗಳ ಹೆಸರನ್ನು ಅದು ವರದಿಯಲ್ಲಿ ದಾಖಲಿಸಿದೆ.

‘ಗೋನಾಳ ಭೀಮಪ್ಪ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರ ಏಜೆಂಟ್ ಒಬ್ಬರ ಪುತ್ರಿಯ ನಿಶ್ಚಿತಾರ್ಥ  ಆಗ ಸಂದರ್ಶನಕ್ಕೆ ಹಾಜರಾಗಿ ಸಂಭಾವ್ಯ ನೇಮ­ಕಾತಿ ಪಟ್ಟಿಯಲ್ಲಿ ಉಪ ವಿಭಾಗಾ­ಧಿಕಾರಿಯಾಗಿ ಆಯ್ಕೆಯಾದ ಅಭ್ಯರ್ಥಿ­ಯೊಬ್ಬರ ಜೊತೆ ಬೆಂಗಳೂರಿನ ಲಿ ಮೆರಿ­ಡಿಯನ್ ಹೋಟೆಲ್‌ನಲ್ಲಿ  ನಡೆ­ದಿತ್ತು’ ಎಂದು ಸಿಐಡಿ ಉಲ್ಲೇಖಿಸಿದೆ. ತಾಳಿ­ಭಾಗ್ಯ ಫಲಾನುಭವಿಗಳ ಬಗ್ಗೆ ನೇರ ದಾಖ­ಲೆಗಳು ಸಿಗಲಿಲ್ಲವಾದರೂ ಈ ದಿಸೆಯಲ್ಲಿ ಇನ್ನಷ್ಟು ತನಿಖೆ ಅಗತ್ಯವಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

ನಿತಿನ್‌ ಚಕ್ಕಿ ಎಂಬ ಅಭ್ಯರ್ಥಿ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆ­ಯಲ್ಲಿ ಸಿಐಡಿ ಪೊಲೀಸರು ತನಿಖೆ ನಡೆಸಿ­ದ್ದಾರೆ. ನಿತಿನ್‌ ಬಳಸುತ್ತಿದ್ದ ದೂರವಾಣಿ ಅವರ ತಂದೆಯ ಹೆಸರಿನಲ್ಲಿದೆ. ಇದರ ಮೂಲಕ ಅವರು ಕೆಪಿಎಸ್‌ಸಿ ಅಧ್ಯಕ್ಷರು, ಸದಸ್ಯರು ಹಾಗೂ ಇತರ ಸಿಬ್ಬಂದಿಯನ್ನು ಸಂಪರ್ಕಿಸಿದ್ದರು ಎನ್ನುವುದು ಪತ್ತೆಯಾಗಿದೆ.

ನಿತಿನ್‌ಗೆ ಮುಖ್ಯ ಪರೀಕ್ಷೆಯಲ್ಲಿ 1067 ಅಂಕ ಬಂದಿದೆ. ಸಂದರ್ಶನದಲ್ಲಿ 150 ಅಂಕ ಬಂದಿದೆ. ಅವರು ಕೆಪಿ­ಎಸ್‌ಸಿಯ ಆಗಿನ ಅಧ್ಯಕ್ಷ ಗೋನಾಳ ಭೀಮಪ್ಪ ಅವರ ಸಹಾಯಕ ಅನಿಲ್‌ ಅವರಿಗೆ 20 ಬಾರಿ ದೂರವಾಣಿ ಕರೆ ಮಾಡಿ­ದ್ದರು. ಸದಸ್ಯ ದಯಾಶಂಕರ್‌ ಅವರ ಆಪ್ತಸಹಾಯಕ ರಘುನಾಥ್‌ಗೆ 4 ಬಾರಿ ಕರೆ ಮಾಡಿದ್ದರು. ಸದಸ್ಯ ಎಚ್‌.ಡಿ.ಪಾಟೀಲರಿಗೆ 3 ಬಾರಿ ಹಾಗೂ ಗೋನಾಳ ಭೀಮಪ್ಪ ಅವರ ಆಪ್ತ ಸಹಾ­ಯಕ ಗೋಪಿಕೃಷ್ಣ ಅವರಿಗೆ ಒಂದು ಬಾರಿ ಕರೆ ಮಾಡಿದ್ದರು.

ನಿತಿನ್‌ ಚಕ್ಕಿ ಅವರ ತಂದೆ ತಾಯಿ ಇಬ್ಬರೂ ನಿವೃತ್ತ ವೈದ್ಯರಾಗಿದ್ದರೂ  ಕೆಪಿ­ಎಸ್‌ಸಿಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಮ್ಮ ಕುಟುಂಬದ ವಾರ್ಷಿಕ ಆದಾಯ ₨ 1.20 ಲಕ್ಷ  ಎಂದು ತಿಳಿಸಿದ್ದಾರೆ. ಈ ಬಗ್ಗೆ ಇನ್ನೂ ತನಿಖೆ ಅಗತ್ಯವಿದೆ ಎಂದು ಸಿಐಡಿ ಮಧ್ಯಂತರ ವರದಿ ಹೇಳಿದೆ. 

ಆರೋಪ ಸುಳ್ಳು: ವಂದನಾ ಭಟ್‌, ಭಾವನಾ ಭಟ್‌, ಎ.ಆರ್‌.ಸೂರಜ್‌, ಎ.ಆರ್‌.­ಸುಮೀತ್‌ ಎಂಬ ಒಂದೇ ಕುಟುಂಬದ ನಾಲ್ಕೂ ಮಂದಿ ಒಂದೇ ಕೊಠಡಿಯಲ್ಲಿ ಕುಳಿತು ಮುಖ್ಯ ಪರೀಕ್ಷೆ ಬರೆದಿದ್ದರು. ಅಲ್ಲದೆ ಈ ನಾಲ್ಕೂ ಮಂದಿ ಸಂಭಾವ್ಯ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೆಪಿಎಸ್‌ಸಿ ಅಧ್ಯಕ್ಷ ಮತ್ತು ಸದಸ್ಯರೊಂದಿಗೆ ಒಳ ಒಪ್ಪಂದ ಮಾಡಿ­ಕೊಂಡಿದ್ದರು ಎಂಬ ಆರೋಪವಿತ್ತು.

ಈ ಬಗ್ಗೆ ತನಿಖೆ ನಡೆಸಿದ ಸಿಐಡಿ ಪೊಲೀಸರು, ‘ಈ ನಾಲ್ವರೂ ಒಂದೇ ಕೋಣೆ­ಯಲ್ಲಿ ಕುಳಿತು ಮುಖ್ಯ ಪರೀಕ್ಷೆ ಬರೆದಿದ್ದರು ಎನ್ನುವುದು ಸುಳ್ಳು’ ಎಂದು ಪತ್ತೆ ಮಾಡಿದೆ. ಎಲ್ಲರೂ ಬೇರೆ ಬೇರೆ ಕೋಣೆಯಲ್ಲಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಈ ಅಭ್ಯರ್ಥಿಗಳು ಹಿಂದೆಯೂ ಅನೇಕ ಸಲ ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾಗಿದ್ದರು. ಭಾವನಾ ಭಟ್‌ ಅವರು 2009ರಲ್ಲಿ ಯುಪಿ­ಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸಾ­ಗಿದ್ದರು. ಆದರೆ ಮುಖ್ಯ ಪರೀಕ್ಷೆ­ಯಲ್ಲಿ ಫೇಲ್‌ ಆಗಿದ್ದರು.

2010ರ ಯುಪಿ­ಎಸ್‌ಸಿ ಪರೀಕ್ಷೆ ತೆಗೆದುಕೊಂ­ಡಿ­ದ್ದರೂ ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸಾ­ಗಿ­ರಲಿಲ್ಲ. 2006ರಲ್ಲಿಯೇ ಅವರು ಕೆಪಿ­ಎಸ್‌ಸಿ ಪರೀಕ್ಷೆ ತೆಗೆದು­ಕೊಂಡಿ­ದ್ದರು. ಆದರೆ ಪೂರ್ವಭಾವಿ ಪರೀಕ್ಷೆ ಪಾಸಾಗಿ­ರಲಿಲ್ಲ. 2008ರಲ್ಲಿ ಮತ್ತೆ ಕೆಪಿಎಸ್‌ಸಿ ಪರೀಕ್ಷೆಗೆ ಹಾಜ­ರಾದರು. ಪೂರ್ವಭಾವಿ ಪರೀಕ್ಷೆಯ­ಲ್ಲಿಯೂ ಪಾಸಾದರು. ಆದರೆ ಮುಂದೆ ಸಾಗಲಿಲ್ಲ.

2010ರಲ್ಲಿ ಪೂರ್ವ­ಭಾವಿ, ಮುಖ್ಯ ಪರೀಕ್ಷೆ, ಸಂದರ್ಶನ ಎಲ್ಲದ­ರಲ್ಲಿಯೂ ಪಾಸಾಗಿ ಗ್ರೂಪ್‌ ಬಿ ಹುದ್ದೆ ಪಡೆದರು. 2011ರಲ್ಲಿ ಎಲ್ಲ ಪರೀಕ್ಷೆ ಪಾಸಾಗಿ ಸಂಭಾವ್ಯ ನೇಮ­ಕಾತಿ ಪಟ್ಟಿ­ಯಲ್ಲಿ ಸ್ಥಾನ ಪಡೆದಿದ್ದಾರೆ. ವಂದನಾ ಭಟ್‌ ಕೂಡ 2010ರಲ್ಲಿ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡರು. ಆದರೆ ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸಾಗಲಿಲ್ಲ. 2011ರಲ್ಲಿ ಯುಪಿ­ಎಸ್‌ಸಿ ಪೂರ್ವಭಾವಿ ಪರೀಕ್ಷೆ ಪಾಸು ಮಾಡಿ­ದರು.

ಮುಖ್ಯ ಪರೀಕ್ಷೆಯಲ್ಲಿ ವಿಫಲ­ರಾದರು. 2008ರಲ್ಲಿ ಕೆಪಿ­ಎಸ್‌ಸಿಯ ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸಾಗ­ಲಿಲ್ಲ. 2010ರಲ್ಲಿ ಕೆಎಎಸ್‌ ಪರೀಕ್ಷೆ ಪಾಸು ಮಾಡಿ ವಾಣಿಜ್ಯ ತೆರಿಗೆ ಅಧಿಕಾರಿ ಆದರು. 2011ರಲ್ಲಿಯೂ ಕೆಎಎಸ್‌ ಪರೀಕ್ಷೆ ಪಾಸಾಗಿ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಎ.ಆರ್‌.ಸೂರಜ್‌ ಅವರು 2006­ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ವಿಫಲ­ರಾದರು.

2008ರಲ್ಲಿ ಯುಪಿಎಸ್‌ಸಿ ಪೂರ್ವ­ಭಾವಿ, ಮುಖ್ಯ ಪರೀಕ್ಷೆಯಲ್ಲಿ ಪಾಸಾದರು. ಆದರೆ ನೇಮಕಾತಿ ಆಗ­ಲಿಲ್ಲ. 2010ರಲ್ಲಿ ಯುಪಿಎಸ್‌ಸಿಗೆ ಪ್ರಯ­ತ್ನಿಸಿ ವಿಫಲರಾದರು. 2006ರಲ್ಲಿ ಕೆಪಿಎಸ್‌ಸಿ ಪೂರ್ವಭಾವಿ, ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದರೂ ನೇಮ­ಕಾತಿ ಸಿಗಲಿಲ್ಲ. 2010ರಲ್ಲಿಯೂ ಹೀಗೆಯೇ ಆಯಿತು. ಆದರೆ  2011­ರಲ್ಲಿ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಎ.ಆರ್‌.ಸುಮೀತ್‌ ಅವರು 2011­ರಲ್ಲಿ ಯುಪಿಎಸ್‌ಸಿ ಮತ್ತು 2010ರ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಸಫಲರಾಗ­ಲಿಲ್ಲ. ಆದರೆ 2011ರ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಎಲ್ಲ ಹಂತಗಳನ್ನೂ ದಾಟಿ ಸಂಭಾವ್ಯ ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸುಮೀತ್‌ ಹಾಗೂ ಸೂರಜ್‌ ಅವರು ಕೆಪಿಎಸ್‌ಸಿ ಸದಸ್ಯೆ ಡಾ.ಮಂಗಳಾ ಶ್ರೀಧರ್‌ ಅವರ ಆಪ್ತಸಹಾಯಕ ಅಶೋಕ್‌­­ಕುಮಾರ್‌ ಜೊತೆ ಸಂಪರ್ಕ­ದಲ್ಲಿದ್ದರು.  ಸುಮೀತ್‌ ಅವರು ನೇಮಕಾ­ತಿಗೆ ಸಂಬಂಧಿ­ಸಿದಂತೆ 133 ಕರೆ ಮಾಡಿ­ದ್ದಾರೆ.

ಗೋನಾಳ ಭೀಮಪ್ಪ ಅವರ ಏಜೆಂಟ್‌ ಎನ್ನಲಾಗುವ ಅಮರನಾಥ್‌ ಅವರಿಗೆ 27 ಬಾರಿ ಕರೆ ಮಾಡಿದ್ದಾರೆ. ಸೂರಜ್‌ ಅವರು ಮಂಗಳಾ ಶ್ರೀಧರ್‌ ಅವರ ಆಪ್ತ ಸಹಾಯಕ ಅಶೋಕ್‌­ಕುಮಾರ್‌ ಅವರನ್ನು 4 ಬಾರಿ ಸಂಪರ್ಕಿಸಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ಸಿಐಡಿ ಹೇಳಿದೆ.
(ಮೌಲ್ಯಮಾಪನದ ಇನ್ನಷ್ಟು ಎಡವಟ್ಟುಗಳು: ನಾಳಿನ ಸಂಚಿಕೆಯಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT