ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಮಕ್ಕಳಿಗೆ ಬಿಸಿಲಿನಲ್ಲಿಯೇ ಪಾಠ!

Last Updated 5 ಫೆಬ್ರುವರಿ 2011, 7:45 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಕಾಲೇಜು ವಿದ್ಯಾರ್ಥಿಗಳಿಗೆ ಪಾಠ ಕೇಳಲು ಕೊಠಡಿಗಳಿಗೆ ಅವಕಾಶ ಮಾಡಿಕೊಟ್ಟಿರುವ ಪರಿಣಾಮ ಇಲ್ಲಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಬಯಲಿನಲ್ಲಿ ಸುಡುಬಿಸಿಲು ಲೆಕ್ಕಿಸದೇ ಕುಳಿತು ಪಾಠ ಕೇಳುವಂಥ ದಯನೀಯ ಸ್ಥಿತಿ ನಿರ್ಮಾಣವಾಗಿದೆ.

2007-08ನೇ ಸಾಲಿನಲ್ಲಿ ಇಲ್ಲಿಗೆ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರಾಯಿತು. ಪ್ರತ್ಯೇಕ ಕೊಠಡಿ ವ್ಯವಸ್ಥೆ ಇಲ್ಲದ ಪರಿಣಾಮ ತಾತ್ಕಾಲಿಕವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮೀಸಲಾದ ಕೊಠಡಿ ಬಿಟ್ಟುಕೊಡಲಾಯಿತು. ಪ್ರೌಢಶಾಲಾ ವಿಭಾಗದಲ್ಲಿ 600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಷಯ ವಿಭಾಗವಿದ್ದು, 164 ವಿದ್ಯಾರ್ಥಿಗಳಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳಿಗೆ ಹಾಲಿ ಇರುವ ಕೇವಲ 10 ಕೊಠಡಿಗಳು ಸಾಕಾಗುತ್ತಿಲ್ಲ. ಪಾಳಿ ಪದ್ಧತಿಯಲ್ಲಿ ಸಂಯುಕ್ತವಾಗಿ ಕಾಲೇಜು ಮತ್ತು ಪ್ರೌಢಶಾಲೆಯ ತರಗತಿ ನಡೆಯುತ್ತವೆ.

ಕಾಲೇಜು ಮುಗಿಯುವವರೆಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಯಲೇ ಗಟ್ಟಿಯಾಗಿದೆ. ವಿಧಿ ಇಲ್ಲದೇ ಬಿಸಿಲಿನಲ್ಲಿಯೇ ಪಾಠ ಕೇಳಬೇಕಿದೆ. ಈ ಶಿಕ್ಷೆಯನ್ನು ಶಿಕ್ಷಕರು ಕೂಡ ಅನುಭವಿಸುವಂತಾಗಿದೆ. ಜತೆಗೆ, ಶಾಲೆಯ ಪಕ್ಕದಲ್ಲಿ ರಸ್ತೆಯಿದೆ. ವಾಹನಗಳ ಶಬ್ದದಿಂದ ವಿದ್ಯಾರ್ಥಿಗಳು ನಿತ್ಯವೂ ಕಿರಿಕಿರಿ ಅನುಭವಿಸುತ್ತಿದ್ದಾರೆ. ದೂಳು ಮಕ್ಕಳ ಮೇಲೆ ಬೀಳುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನಹರಿಸಿಲ್ಲ.

ಕಳೆದ ಒಂದು ವರ್ಷದ ಹಿಂದೆ ಸಂಸದರು ಹಾಗೂ ಶಾಸಕರು ಶಾಲೆಯ ಪಕ್ಕದಲ್ಲೇ ಕಾಲೇಜಿಗೆ ಪ್ರತ್ಯೇಕ ಕೊಠಡಿ ನಿರ್ಮಾಣ ಮಾಡಲು ಗುದ್ದಲಿಪೂಜೆ ನೆರವೇರಿಸಿದರು. ಆದರೆ, ಕಾಮಗಾರಿ ಮಾತ್ರ ಆರಂಭವಾಗಲಿಲ್ಲ. ಹಣ ಮಾತ್ರ ಬಿಡುಗಡೆಯಾಗಿದೆ. ಕೊಠಡಿ ನಿರ್ಮಾಣ ಮಾಡದ ಪರಿಣಾಮ ಅನುದಾನ ವಾಪಸ್ ಹೋಗುವ ಹಂತದಲ್ಲಿದೆ ಎಂಬುದು ಪೋಷಕರ ಆತಂಕ.

ತಾಲ್ಲೂಕು ಪಂಚಾಯಿತಿ ಆಡಳಿತ ಮತ್ತು ಕಂದಾಯ ಇಲಾಖೆಯ ನಡುವಿನ ಸಾಮರಸ್ಯದ ಕೊರತೆಯಿಂದ ಇಂದಿಗೂ ಕಾಲೇಜು ಶಿಕ್ಷಣ ಇಲಾಖೆಗೆ ಭೂಮಿ ವರ್ಗಾವಣೆಯಾಗಿಲ್ಲ. ಇದರ ಪರಿಣಾಮ ಕೊಠಡಿ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಪೋಷಕರು ಆರೋಪಿಸುತ್ತಾರೆ.ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತೊಂದರೆಗೆ ಸಿಲುಕಿದ್ದಾರೆ. ಕೂಡಲೇ, ನೆನೆಗುದಿಗೆ ಬಿದ್ದಿರುವ ಕಾಲೇಜಿನ ಕೊಠಡಿ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT