ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಮೇಲ್ಸೇತುವೆ ಜನರಿಗಾಗಿ ಅಲ್ಲ!

Last Updated 19 ಸೆಪ್ಟೆಂಬರ್ 2011, 6:10 IST
ಅಕ್ಷರ ಗಾತ್ರ

ವಿಜಾಪುರ: ಇಲ್ಲಿಯ ಗಾಂಧಿ ಚೌಕ್‌ನಲ್ಲಿ ನಿರ್ಮಿಸಿರುವ ಮೇಲ್ಸೇತುವೆ ಅವ್ಯವಸ್ಥೆಯ ಆಗರವಾಗಿದ್ದು, ಅದರ ವಿನ್ಯಾಸ, ರಾತ್ರಿ ವೇಳೆಯಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದಿರುವುದು ಹಾಗೂ ಬೀದಿ ಕಾಮಣ್ಣರ ಹಾವಳಿಯಿಂದಾಗಿ ಜನ ಅಲ್ಲಿ ಸಂಚರಿಸಲೇ ಹಿಂದೇಟು ಹಾಕುವಂತಾಗಿದೆ.

ವರ್ಷದ ಹಿಂದೆ ಈ ಮೇಲ್ಸೇತುವೆ ನಿರ್ಮಾಣವಾದಾಗ ಜನ ಸ್ವಲ್ಪ ನೆಮ್ಮದಿ ಪಟ್ಟಿದ್ದರು. ಜನನಿಬಿಡ ಗಾಂಧಿ ಚೌಕ್‌ನಲ್ಲಿ ರಸ್ತೆ ಕ್ರಾಸ್ ಮಾಡಲು ಇನ್ನು ಪರದಾಡಬೇಕಿಲ್ಲ. ಸಿಗ್ನಲ್‌ಗಾಗಿ ಕಾಯಬೇಕಾಗಿಯೂ ಇಲ್ಲ. ಈ `ಮೇಲ್ಸೇತುವೆ~ಯ ಮೂಲಕ ಸರಳವಾಗಿ ಸಂಚರಿಸಬಹುದು ಎಂದು ಅವರೆಲ್ಲ ಅಂದುಕೊಂಡಿದ್ದರು.

ವಿಜಾಪುರ ನಗರದಲ್ಲಿ ನಿರ್ಮಾಣವಾಗಿರುವ ಮೊದಲ ಮೇಲ್ಸೇತುವೆ ಇದು. ವಿಜಾಪುರ ರೈಲ್ವೆ ನಿಲ್ದಾಣದಲ್ಲಿ ಇಂಥ ಮೇಲ್ಸೇತುವೆ ಮೇಲೆ ಸಂಚರಿಸಿ ಬಂದವರು ವಿಜಾಪುರದ ಜನನಿಬಿಡ ಕ್ರಾಸ್‌ಗಳಲ್ಲಿಯೂ ಇಂಥ ಮೇಲ್ಸೇತುವೆಗಳನ್ನು ನಿರ್ಮಿಸಿದರೆ ಚೆನ್ನಾಗಿರುತ್ತದೆ ಅಲ್ವೇ ಎಂದು ಅಂದು ಕೊಳ್ಳುತ್ತಿದ್ದರು.

ಗಾಂಧಿ ಚೌಕ್ ಪೊಲೀಸ್ ಠಾಣೆಯ ಮೂಲೆಯಿಂದ ಲಾಲ್‌ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆ ಸಮಿತಿಯ ಗೇಟ್‌ವರೆಗೆ ಇರುವ ಈ ಮೇಲ್ಸೇತುವೆಯನ್ನು ಹುಬ್ಬಳ್ಳಿ ಮೂಲದ ಖಾಸಗಿ ಜಾಹೀರಾತು ಸಂಸ್ಥೆಯವರು ನಿರ್ಮಿಸಿದ್ದಾರೆ.

`ಈ ಮೇಲ್ಸೇತುವೆ ನಿರ್ಮಾಣದ ನಂತರ ಪೊಲೀಸ್ ಇಲಾಖೆಯವರು ಎರಡೂ ಬದಿಗೆ ಸಿಬ್ಬಂದಿ ನಿಯೋಜಿಸಿದ್ದಾರೆ. ಗಾಂಧಿ ಚೌಕ್ ಕ್ರಾಸ್ ಮಾಡಬೇಕಾದರೆ ಈ ಸೇತುವೆಯ ಮೂಲಕವೇ ಸಂಚರಿಸುವಂತೆ ಹೇಳುತ್ತಿರುತ್ತಾರೆ. ಮನಸ್ಸಿಲ್ಲದಿದ್ದರೂ ಪೊಲೀಸರ ಒತ್ತಾಯದ ಮೇರೆಗೆ ನಾವು ಈ ಮೇಲ್ಸೇತುವೆ ಬಳಸಬೇಕಾಗಿದೆ~ ಎನ್ನುತ್ತಾರೆ ಕೆಲ ಸಾರ್ವಜನಿಕರು.

`ಈ ಮೇಲ್ಸೇತುವೆಯ ನಿರ್ಮಾಣದ ವಿನ್ಯಾಸ ಸರಿಯಾಗಿಲ್ಲ. ಅಗಲ ಇಕ್ಕಟ್ಟಾಗಿದೆ. ಕಬ್ಬಿಣದ ಆ್ಯಂಗಲ್‌ಗಳು ಎತ್ತರದ ವ್ಯಕ್ತಿಗಳ ತಲೆಗೆ ತಾಗುವಂತಿವೆ. ಮೇಲಾಗಿ ರಾತ್ರಿಯ ಸಂದರ್ಭದಲ್ಲಿ ಇಲ್ಲಿ ಯಾವುದೇ ವಿದ್ಯುತ್ ದೀಪ ಇರುವುದಿಲ್ಲ. ಕೆಲ ಬೀದಿ ಕಾಮಣ್ಣರು ಇಲ್ಲಿ ನಿಂತು ಹುಡುಗಿಯರನ್ನು ಚುಡಾಯಿಸುತ್ತಿರುತ್ತಾರೆ. ಕೆಲ ಭೀಕ್ಷಕರು ಅಲ್ಲಿಯೇ ಮಲಗಿರುತ್ತಾರೆ. ಪಾನ್-ಗುಟಕಾ ತಿಂದು ಎಲ್ಲೆಂದರಲ್ಲಿ ಉಗುಳಿರುತ್ತಾರೆ~ ಎಂದು ಅವರು ದೂರುಗಳ ಪಟ್ಟಿ ಮಾಡುತ್ತಾರೆ.

`ಈ ಮೇಲ್ಸೇತುವೆಗೂ ನಗರಸಭೆಗೂ ಯಾವುದೇ ಸಂಬಂಧ ಇಲ್ಲ. ಇದರ ಕಾಮಗಾರಿಗೆ ನಗರಸಭೆ ಯಾವುದೇ ಹಣ ವ್ಯಯ ಮಾಡಿಲ್ಲ. ಇಲ್ಲಿ ಪ್ರದರ್ಶನವಾಗುವ ಜಾಹೀರಾತು ಫಲಕದಿಂದ ಯಾವುದೇ ರೀತಿಯ ಆದಾಯ ನಗರಸಭೆಗೆ ಬರುತ್ತಿಲ್ಲ. ನಿರ್ವಹಣೆಗೆ ಹಣವೂ ಖರ್ಚಾಗುತ್ತಿಲ್ಲ. ಲಾಭ-ಹಾನಿ ಹರಿತ ಸೇವೆ ಇದು. ಹುಬ್ಬಳ್ಳಿಯ ಖಾಸಗಿ ಜಾಹೀರಾತು ಸಂಸ್ಥೆಯವರು ಇದನ್ನು ನಿರ್ಮಿಸಿದ್ದಾರೆ~ ಎಂಬುದು ವಿಜಾಪುರ ನಗರಸಭೆ ಅಧಿಕಾರಿಗಳ ವಿವರಣೆ.

ಅಲ್ಲಿಯ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ನಮ್ಮ ಗಮನವನ್ನೂ ಸೆಳೆದಿದ್ದಾರೆ. ಸಂಬಂಧಿಸಿದ ಜಾಹೀರಾತು ಸಂಸ್ಥೆಯವರಿಗೆ ಹೇಳಿ ಅಲ್ಲಿ ದೀಪದ ವ್ಯವಸ್ಥೆ ಮಾಡಿಸುತ್ತೇವೆ ಎಂದೂ ಅವರು ಹೇಳುತ್ತಾರೆ.

`ಗಾಂಧಿ ಚೌಕ್‌ನಲ್ಲಿ ಪಾದಚಾರಿಗಳಿಗಾಗಿ ಪರ್ಯಾ ವ್ಯವಸ್ಥೆ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಈ ವಿಷಯ ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಸಾಕಷ್ಟು ಬಾರಿ ಚರ್ಚೆಯೂ ನಡೆದಿತ್ತು.

ಮೇಲ್ಸೇತುವೆಯ ಬದಲು ಕೆಳ ಸೇತುವೆ (ಸುರಂಗ ಮಾರ್ಗ) ನಿರ್ಮಿಸಿ, ಆ ಸುರಂಗ ಮಾರ್ಗದ ಎರಡೂ ಬದಿಗೆ ಅಂಗಡಿ ನಿರ್ಮಿಸಿದರೆ ನಗರಸಭೆಗೆ ಹೆಚ್ಚಿನ ಆದಾಯ ಬರುತ್ತದೆ ಎಂದು ನಾವೆಲ್ಲ ಅಂದುಕೊಂಡಿದ್ದೆವು. ಆದರೆ, ಈ ಸಲಹೆಗೆ ಯಾರೂ ಸ್ಪಂದಿಸಲಿಲ್ಲ~ ಎನ್ನುತ್ತಾರೆ ನಗರಸಭೆಯ ಮಾಜಿ ಸದಸ್ಯರೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT