ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಮೌನ ಏಕೆ ?

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಕಠಿಣ ಪರಿಸ್ಥಿತಿ ಎದುರಾದಾಗ ಅದರಿಂದ ನುಣುಚಿಕೊಳ್ಳುವುದು ಮಹೇಂದ್ರ ಸಿಂಗ್ ದೋನಿ ಜಾಯಮಾನವಲ್ಲ. ಸವಾಲನ್ನು ಇಷ್ಟ ಪಡುವ ಅವರು ಹೊಂದಿರುವಂತಹ ಛಲ ಅಪಾರ. ವೃತ್ತಿ ಜೀವನದಲ್ಲಿ ಇದುವರೆಗೆ ತೋರಿದ ಕೆಲವು ಸುಂದರ ಇನಿಂಗ್ಸ್‌ಗಳೇ ಅದಕ್ಕೆ ಅತ್ಯುತ್ತಮ ಉದಾಹರಣೆ.

2011ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವನ್ನೊಮ್ಮೆ ನೆನಪಿಸಿಕೊಳ್ಳಿ. ಶ್ರೀಲಂಕಾ ವಿರುದ್ಧದ ಹೋರಾಟದಲ್ಲಿ ತಂಡ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡಾಗ ದೋನಿ ಸವಾಲನ್ನು ಸ್ವೀಕರಿಸಿ ಕ್ರೀಸ್‌ಗೆ ತೆರಳಿದ್ದರು. ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದು ಬಂದಿದ್ದ ಅವರು ತಂಡವನ್ನು ಕಪ್‌ನತ್ತ ಮುನ್ನಡೆಸಿದ ಬಳಿಕವೇ ಪೆವಿಲಿಯನ್‌ಗೆ ಹಿಂದಿರುಗಿದ್ದರು.

ಅಂದು ಎಲ್ಲಾದರೂ ದೋನಿ ಬೇಗನೇ ಔಟಾಗಿ ಭಾರತ ಸೋಲು ಅನುಭವಿಸಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು? ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ತಂದದ್ದೇ ಭಾರತದ ಸೋಲಿಗೆ ಕಾರಣ ಎಂದು ಟೀಕಾಕಾರರು ದೋನಿಯ ಮೇಲೆ ಎರಗಿ ಬೀಳುತ್ತಿದ್ದರು. ಇವೆಲ್ಲವನ್ನು ಅರಿತಿದ್ದರೂ ದೋನಿ ಮೇಲಿನ ಕ್ರಮಾಂಕದಲ್ಲಿ ಆಡುವ ಧೈರ್ಯ ತೋರಿದ್ದರು.

ಹೋದ ವರ್ಷ ಇಂಗ್ಲೆಂಡ್ ಎದುರು ಭಾರತ ತಂಡ ತವರು ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಸೋಲು ಅನುಭವಿಸಿದಾಗ ದೋನಿ ನಾಯಕ ಸ್ಥಾನ ತ್ಯಜಿಸಬೇಕೆಂಬ ಒತ್ತಡ ಹೆಚ್ಚಿತ್ತು. `ನಾಯಕತ್ವದಿಂದ ಕೆಳಗಿಳಿದು ಜವಾಬ್ದಾರಿಯಿಂದ ನುಣುಚಿಕೊಳ್ಳುವುದಿಲ್ಲ' ಎಂದು ದೋನಿ ಮಾಧ್ಯಮಗಳ ಮುಂದೆ ಸಾರಿದ್ದರು.

ಇವೆಲ್ಲ ದೋನಿ ಹೊಂದಿರುವ ಛಲ, ಸಾಮರ್ಥ್ಯ ಹಾಗೂ ಧೈರ್ಯಕ್ಕೆ ಕೆಲವು ಉದಾಹರಣೆಗಳು ಮಾತ್ರ. ಆದರೆ ದೋನಿ ಅವರ ಧೈರ್ಯ ಈಗ ಎಲ್ಲೋ ಹೊರಟು ಹೋದಂತೆ ಕಾಣುತ್ತಿದೆ. ಐಪಿಎಲ್‌ನಲ್ಲಿ ನಡೆದಿರುವ `ಸ್ಪಾಟ್ ಫಿಕ್ಸಿಂಗ್' ಮತ್ತು ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ವಿವಾದದ ಬಗ್ಗೆ ಪ್ರತಿಕ್ರಿಯಿಸಲು ದೋನಿಗೆ ಹಲವು ಅವಕಾಶಗಳು ಲಭಿಸಿದ್ದವು. ಐಪಿಎಲ್ ಟೂರ್ನಿಯ ಫೈನಲ್‌ಗೆ ಮುನ್ನ ಹಾಗೂ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಅವರಿಗೆ ತಮ್ಮ ಅಭಿಪ್ರಾಯ ತಿಳಿಸಬಹುದಿತ್ತು. ಆದರೆ ದೋನಿ ಎರಡೂ ಸುದ್ದಿಗೋಷ್ಠಿಗಳನ್ನು `ತಪ್ಪಿಸಿ'ಕೊಂಡಿದ್ದರು. ಆ ಬಳಿಕ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡ್‌ಗೆ ತೆರಳುವ ಮುನ್ನ ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಮುಂದೆ ಹಾಜರಾಗಿದ್ದರು. ಆದರೆ ಐಪಿಎಲ್‌ಗೆ ಸಂಬಂಧಿಸಿದ ಪ್ರಶ್ನೆಗಳು ಎದುರಾದಾಗ ತುಟಿಬಿಚ್ಚಲಿಲ್ಲ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಹೆದರಿ ದೋನಿ ಬಾಯಿ ಮುಚ್ಚಿ ಕುಳಿತುಕೊಂಡಿರುವುದು ಸ್ಪಷ್ಟ. ಐಪಿಎಲ್ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಬಾರದು ಎಂದು ಬಿಸಿಸಿಐ ದೋನಿಗೆ ತಿಳಿಸಿರುವ ಸಾಧ್ಯತೆಯಿದೆ.

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸದಿದ್ದರೂ, ಪ್ರಕಟಣೆಯೊಂದನ್ನು ಮೊದಲೇ ಸಿದ್ಧಪಡಿಸಿ ಅದನ್ನು ಮಾಧ್ಯಮದವರ ಮುಂದೆ ಓದಬಹುದಿತ್ತು.ಆಗ ಎಲ್ಲರೂ ಅಲ್ಪ ನಿಟ್ಟುಸಿರುಬಿಡುತ್ತಿದ್ದರು. ಆದರೆ ದೋನಿ ಹಾಗೆ ಮಾಡಲಿಲ್ಲ. ಬಿಸಿಸಿಐ ಅದಕ್ಕೂ ಅವಕಾಶ ನೀಡಲಿಲ್ಲವೇ?

ಐಪಿಎಲ್‌ನಲ್ಲಿ ನಡೆದಿರುವ ವಿವಾದದಿಂದಾಗಿ ಹಲವರು ಕ್ರಿಕೆಟ್ ಕ್ರೀಡೆ ಹಾಗೂ ಆಟಗಾರರ ಮೇಲಿಟ್ಟಿದ್ದ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಅವರಿಗೆ ಕ್ರಿಕೆಟ್ ಮೇಲೆ ಮತ್ತೆ ನಂಬಿಕೆ ಬರಬೇಕಾದರೆ, ದೋನಿ ದೇಶದ ಜನರನ್ನುದ್ದೇಶಿಸಿ ಮಾತನಾಡುವುದು ಅಗತ್ಯ. `ಈಗ ನಡೆದಿರುವ ಬೆಳವಣಿಗೆಗಳು ದುರದೃಷ್ಟಕರ. ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಮೂಲಕ ಜನರ ವಿಶ್ವಾಸವನ್ನು ಮರಳಿ ಪಡೆಯಲು ಪ್ರಯತ್ನಿಸುವೆವು' ಎಂಬ ಒಂದು ವಾಕ್ಯವನ್ನು ದೋನಿ ಹೇಳಿದ್ದರೂ, ಜನರಿಗೆ ಕ್ರಿಕೆಟ್ ಮೇಲೆ ಮತ್ತೆ ನಂಬಿಕೆ ಹುಟ್ಟುವ ಸಾಧ್ಯತೆಯಿತ್ತು.

ಇಂಗ್ಲೆಂಡ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಕೆಲವು ಪತ್ರಕರ್ತರು ಸುತ್ತಿ ಬಳಸಿ ಪ್ರಶ್ನೆಗಳನ್ನು ಕೇಳುವ ಮೂಲಕ ದೋನಿ ಅವರಿಂದ ಐಪಿಎಲ್ ವಿವಾದದ ಬಗ್ಗೆ ಏನಾದರೂ ಉತ್ತರ ದೊರೆಯುವುದೇ ಎಂದು ಪ್ರಯತ್ನಿಸಿದ್ದರು. ಐಪಿಎಲ್ ವಿವಾದದ ಕುರಿತು ಪ್ರತಿಕ್ರಿಯೆ ನೀಡಲು ದೋನಿ ಉತ್ಸುಕರಾಗಿರುವುದು ನಿಜ. ಏಕೆಂದರೆ ಇಂಗ್ಲೆಂಡ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎದುರಾದ ಕೆಲವು ಪ್ರಶ್ನೆಗಳಿಗೆ ಅವರು ನೀಡಿರುವ ಉತ್ತರವೇ ಇದಕ್ಕೆ ಸಾಕ್ಷಿ. `ತಂಡದ ಕೆಲವು ಆಟಗಾರರು ಇತರ ಆಟಗಾರರಿಗಿಂತ ಮಾನಸಿಕವಾಗಿ ಅಲ್ಪ ಕುಗ್ಗಿದ್ದಾರೆ. ಇದನ್ನು ಮತ್ತಷ್ಟು ವಿವರಿಸಲು ಹೇಳಲು ನಾನು ಇಷ್ಟಪಡುತ್ತೇನೆ. ಆದರೆ ಈಗ ಅಲ್ಲ. ಸೂಕ್ತ ಸಮಯ ಬರಲಿ' ಎಂದು ಹೇಳಿದ್ದರು.

ಚಾಂಪಿಯನ್ಸ್ ಟ್ರೋಫಿ ಟೂರ್ನಿ ಕೊನೆಗೊಳ್ಳುವವರೆಗೂ ಐಪಿಎಲ್‌ಗೆ ಸಂಬಂಧಿಸಿದ ಪ್ರಶ್ನೆಗಳು ದೋನಿಗೆ ಮತ್ತೆ ಮತ್ತೆ ಎದುರಾಗುವುದು ಖಚಿತ. ಭಾರತ ತಂಡ ಎಲ್ಲಾದರೂ ಕಳಪೆ ಪ್ರದರ್ಶನ ನೀಡಿದರಂತೂ ಪತ್ರಿಕಾಗೋಷ್ಠಿಯಲ್ಲಿ ಕಿವಿಗಳನ್ನು ಮುಚ್ಚಿಕೊಂಡೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ದೋನಿ ಎದುರಾಗಬಹುದು.

ಭಾರತ ತಂಡದ ಸೋಲಿಗೆ ಐಪಿಎಲ್‌ನಲ್ಲಿ ಉಂಟಾದ ವಿವಾದಗಳು ಕಾರಣವೇ? ಈ ವಿವಾದದಿಂದ ಆಟಗಾರರ ಆತ್ಮಸ್ಥೈರ್ಯ ಕುಗ್ಗಿತೇ? ಮುಂತಾದ ವಿವಿಧ ರೀತಿಯ ಪ್ರಶ್ನೆಗಳು ಬಾಣದಂತೆ ತೂರಿಬರುವುದರಲ್ಲಿ ಅನುಮಾನವಿಲ್ಲ.

ಐಪಿಎಲ್ ಬೆಟ್ಟಿಂಗ್‌ನಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ವಿಂದು ರಾಂಧವ ಅವರು ದೋನಿ ಪತ್ನಿ ಸಾಕ್ಷಿ ಜೊತೆ ಕುಳಿತುಕೊಂಡು ಕೆಲವು ಪಂದ್ಯಗಳನ್ನು ವೀಕ್ಷಿಸಿದ್ದರು. ಇದು ಸಾಕಷ್ಟು ಚರ್ಚೆಗೆ ಹಾದಿಯೊದಗಿಸಿತ್ತು. ದೋನಿ ಪತ್ನಿಯಿಂದಲೂ ವಿಂದು ಏನಾದರೂ ಮಾಹಿತಿ ಪಡೆಯುತ್ತಿದ್ದರೇ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ.

ದೋನಿ ಮಾತ್ರವಲ್ಲ, ಹೆಚ್ಚಿನ ಮಾಜಿ ಹಾಗೂ ಹಾಲಿ ಕ್ರಿಕೆಟ್ ಆಟಗಾರರು ಐಪಿಎಲ್ ವಿವಾದದ ಬಗ್ಗೆ ಮಾತನಾಡುವ ಧೈರ್ಯ ತೋರಿಲ್ಲ. ಮೊದಲು ಮಾತನಾಡಿದ್ದು ರಾಹುಲ್ ದ್ರಾವಿಡ್. ರಾಜಸ್ತಾನ ರಾಯಲ್ಸ್ ತಂಡದ ಮೂವರು ಆಟಗಾರರು ಸಿಕ್ಕಿಬಿದ್ದ ಕಾರಣ ಅವರಿಗೆ ಮಾತನಾಡದೆ ಬೇರೆ ಮಾರ್ಗವಿರಲಿಲ್ಲ. ಸಚಿನ್ ತೆಂಡೂಲ್ಕರ್ ಹೋದ ಶುಕ್ರವಾರವಷ್ಟೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು. `ಇತ್ತೀಚೆಗಿನ ಬೆಳವಣಿಗೆ ಆಘಾತಕಾರಿ ಹಾಗೂ ನಿರಾಸೆ ಉಂಟುಮಾಡುವಂತಹದ್ದು' ಎಂದಿದ್ದರು.

ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್‌ಗೆ ಹೆದರಿ ದೋನಿ ಸುಮ್ಮನಿದ್ದಾರೆಯೇ? ಐಪಿಎಲ್ ವಿವಾದದ ಕುರಿತು ಮಾತನಾಡಬಾರದು ಎಂಬ `ಆಜ್ಞೆ'ಯನ್ನು ದೋನಿಗೆ ನೀಡಿಲ್ಲ ಎಂದು ಶ್ರೀನಿವಾಸನ್ ಅವರೇ ಹೇಳಿದ್ದಾರೆ. ಇದು ನಿಜವೇ ಆಗಿದ್ದರೆ `ಮಹಿ' ಸುಮ್ಮನಿರುವುದು ಏಕೆ?

ಭಾರತ ತಂಡ ಕಳೆದ ಒಂದೆರಡು ವರ್ಷಗಳಲ್ಲಿ ವಿದೇಶಿ ನೆಲದಲ್ಲಿ ಸತತ ಎಂಟು ಟೆಸ್ಟ್ ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಅದೇ ರೀತಿ ಇಂಗ್ಲೆಂಡ್ ಎದುರು ತವರು ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಮುಗ್ಗರಿಸಿತ್ತು. ಈ ವೇಳೆ ದೋನಿ ನಾಯಕತ್ವ ತ್ಯಜಿಸಲಿ ಎಂಬ ಕೂಗು ಬಲವಾಗಿ ಕೇಳಿಬಂದಿತ್ತು.

ಈ ಸಂದರ್ಭ ಶ್ರೀನಿವಾಸನ್ ಮಾತ್ರ ದೋನಿ ಬೆಂಬಲಕ್ಕೆ ನಿಂತಿದ್ದರು. ರಾಷ್ಟ್ರೀಯ ಆಯ್ಕೆ ಸಮಿತಿಯು ನಾಯಕನನ್ನು ಬದಲಿಸಲು ಮುಂದಾಗಿತ್ತು. ಆದರೆ ಶ್ರೀನಿವಾಸನ್ ಅದನ್ನು ತಡೆದಿದ್ದರು ಎಂಬುದು ರಹಸ್ಯವಾಗಿ ಉಳಿದಿಲ್ಲ. ಬಿಸಿಸಿಐ ಅಧ್ಯಕ್ಷರು ಅಂದು ಮಾಡಿದ್ದ `ಉಪಕಾರ'ಕ್ಕೆ ದೋನಿ ಇದೀಗ ಮೌನವಹಿಸುವ ಮೂಲಕ `ಕೃತಜ್ಞತೆ' ಸಲ್ಲಿಸುತ್ತಿದ್ದಾರೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT