ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಯುಕ್ತಿ ಈ ಕುಯುಕ್ತಿ ಈ ಸಂಶೋಧನೆ ಯಾಕಾಗಿ?

Last Updated 28 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಈ ಯುಕ್ತಿ ಈ ಕುಯುಕ್ತಿ ಈ ಸಂಶೋಧನೆ ಯಾಕಾಗಿ? `ನಿಮ್ಮ ತಾಯಿ ಬಂಜೆ' ಅಂದರೆ ಏನು ತಾನೇ ಹೇಳಲು ಸಾಧ್ಯ? `ನಿಮಗೆ ತಲೆ ಕೆಟ್ಟಿದೆಯಾ' ಎಂದು ನಾವು ಪ್ರಶ್ನಿಸಬಹುದು ಅಷ್ಟೇ. ಅದಕ್ಕೆ ಅವರು ಆತ್ಮವಿಶ್ವಾಸದಿಂದ ಹೇಳುತ್ತಾರೆ, `ನಾವು ಸಂಶೋಧನೆ ಮಾಡಿದ್ದೇವೆ' ಅಂತ. `ಏನಪ್ಪಾ ಅಂಥ ಸಂಶೋಧನೆ?' ಅಂದರೆ `ನೀವು ಹುಟ್ಟಿದಾಗಲಿಂದ ಇಷ್ಟು ಕೋಟಿ, ಇಷ್ಟು ಲಕ್ಷ, ಇಷ್ಟು ಸಾವಿರ ಪದಗಳನ್ನು ಉಚ್ಚಾರ ಮಾಡಿರುತ್ತೀರಿ. ಅದರಲ್ಲಿ ಶೇಕಡಾ ಒಂದರಷ್ಟು ತಾಯಿ ಅಥವಾ ಅವ್ವ ಪದ ನಿಮ್ಮ ಬಾಯಿಂದ ಬಂದಿರುವುದಿಲ್ಲ.

ಹಾಗಾಗಿ ನಿಮ್ಮ ತಾಯಿ ಬಂಜೆ ಅಲ್ಲವೇ?' ಎಂದು ದಿಗ್ವಿಜಯ ಸಾಧಿಸಿದವರಂತೆ ಎದೆ ತಟ್ಟಿ ಹೇಳುತ್ತಾರೆ. ಡಂಕಿನ್ ಝಳಕಿಯವರ  ತಳಪಾಯವೇ ಅಲ್ಲಾಡುತ್ತಿದೆ. ಅದರ ಮೇಲೆ ಸಂಶೋಧನಾ ಸೌಧ ಕಟ್ಟಲು ಹೊರಡುತ್ತಾರೆ. ಪ್ರಾಥಮಿಕ ಶಾಲಾ ಮಕ್ಕಳು ಸೂಟುಬೂಟು ಹ್ಯಾಟು ಟೈ ಹಾಕಿಕೊಂಡು ತಲೆಗೆ ಬಿಳಿ ವಿಗ್ ಕಣ್ಣಿಗೆ ಸೋಡಾಗ್ಲಾಸಿನ ಕನ್ನಡಕ ಧರಿಸಿ ಇದನ್ನು ಒಂದು `ಸಂಶೋಧನಾ ಪ್ರಹಸನ'ದಂತೆ ಪ್ರದರ್ಶಿಸಿದ್ದರೆ ಈ ಬಾಲಗುಂಪಿನ ಚಾತುರ್ಯಕ್ಕೆ ನಾವೂ ಸಂತಸಪಡಬಹುದಿತ್ತು.

ಆದರೆ ಇದು ಹಾಗಲ್ಲ. ಸಂತೆಗೆ ಮಾರಲು ಆಡು ಹಿಡಿದುಕೊಂಡು ಹೋಗುವ ಬಡವನೊಬ್ಬನಿಗೆ ನಾಕಾರು ಕಳ್ಳರು ಮೈಲಿಗೊಬ್ಬರಂತೆ ನಿಂತು `ನಾಯಿ ಹಿಡಿದುಕೊಂಡು ಎಲ್ಲಿಗೆ ಹೊರಟೆ?' ಎಂದು ಅಪಹಾಸ್ಯ ಮಾಡುತ್ತಾ ಬಡವನಿಗೆ ಮಂಕು ಕವಿಸಿ ಅವನೂ ಭ್ರಮೆಗೆ ಒಳಗಾಗಿ ತನ್ನ ಆಡನ್ನು ನಾಯಿ ಎಂದೇ ತಾನೂ ಭ್ರಮಿಸಿ ಅಲ್ಲೇ ಬಿಟ್ಟು ಹೋದಮೇಲೆ ಆಗ ಮಾತ್ರವೇ ಆ ಆಡನ್ನು ಕದಿಯುವ ಚತುರ ಚೋರರ ಸಂಚಿನ ಜಾಲದಂತೆ ಈ ಬಾಲಗುಂಪಿನ ಕೃತ್ಯ ಗೋಚರಿಸುತ್ತದೆ. ಆ ನಾಲ್ವರು ಕಳ್ಳರು ಆ ಬಡವನಿಂದ ಆಡನ್ನು ಬಲಾತ್ಕಾರದಿಂದ ಕಿತ್ತುಕೊಂಡೇ ಹೋಗಬಹುದಿತ್ತು. ಆದರೆ ಅವರು ಇಲ್ಲಿ ಮಾಡಿದ್ದು ಅಭಿಪ್ರಾಯ ರೂಪಿಸುತ್ತ ಮಾಡುವ ಮರೆಮೋಸದ ಕಳ್ಳತನ. ಅವರೂ ಸಂಶೋಧಕರೇ ಇರಬಹುದು. ಇಂದು ಕಾರ್ಪೊರೆಟ್ ಸೆಕ್ಟರ್‌ಗಳು ಅಭಿಪ್ರಾಯ ರೂಪಿಸಿ ಕಳ್ಳತನ ಮಾಡುವ ವಂಚನಾ ಕಲೆಯ ಕೌಶಲದಂತೆ ಈ ಸಂಶೋಧನೆ ಎಂಬುದೂ ಈ ಮಾರ್ಗ ಹಿಡಿಯುತ್ತಿದೆ.

ಇಲ್ಲೇನು ಕಳ್ಳತನ? ಅಥವಾ ಇದು ಯಾಕಾಗಿ? `ಸಾಮಾಜಿಕ ನ್ಯಾಯ, ಮೀಸಲಾತಿ, ಸರ್ವರಿಗೂ ಶಿಕ್ಷಣ, ಪ್ರಜಾಪ್ರಭುತ್ವ, ಸೆಕ್ಯುಲರಿಸಂ ಇಂಥವುಗಳೆಲ್ಲ ಪಾಶ್ಚಿಮಾತ್ಯ ವಸಾಹತುಶಾಹಿ ಪ್ರಭಾವದಿಂದ ಕಟ್ಟಲ್ಪಟ್ಟವು, ಇಂಥವುಗಳು ಭಾರತೀಯ ಅಲ್ಲ' ಎಂದು ಇವರು ಸಂಶೋಧನೆ ಜರುಗಿಸುತ್ತಿದ್ದಾರೆ. ಇಂಥವು ಇಲ್ಲಿಯವು ಅಲ್ಲ ಅಂತ ಇವುಗಳನ್ನು ಬುಡಸಮೇತ ಕಿತ್ತುಹಾಕುವ ಹುನ್ನಾರ ಇಲ್ಲಿದೆ. ಅದಕ್ಕಾಗಿ ಜಾತಿ, ಧರ್ಮ, ಅಧ್ಯಾತ್ಮ ಹಿಡಿದುಕೊಂಡು ಇದರ ಸುತ್ತಲೇ ಸುತ್ತುತ್ತಿದ್ದಾರೆ, ಬಲಿಪಶುವಿನ ಸುತ್ತಾ ಸುತ್ತುವ ಆಚರಣೆಯ ಪ್ರದರ್ಶನಕಾರರಂತೆ, ವೈದಿಕಶಾಹಿಯ ಯಾವುದೋ ಪಳೆಯುಳಿಕೆಯಂತೆ.

ಹೀಗೆ ಇವರ ಸಂಶೋಧನೆ `ಜಾತಿಗಳು ಇವೆ. ಆದರೆ ಜಾತಿವ್ಯವಸ್ಥೆ ಎಂಬುದು ಇಲ್ಲ' ಎಂದು  ಹೇಳುತ್ತದೆ. ನನಗೆ ತಲೆಕೆಟ್ಟು ಹೋಗಿ ಪಿಯುಸಿ ಓದಿ, ಗಾರೆ ಕೆಲಸ ಮಾಡುವ ಹುಡುಗನೊಬ್ಬನಿಗೆ `ಏನಪ್ಪಾ ಹೀಗೆ ಅಂದರೆ' ಎಂದು ಕೇಳಿದೆ. ಅದಕ್ಕೆ ಅವ `ಇದು ಯಾವ್ತರಪ್ಪಾ ಅಂದ್ರೆ... ಹುಟ್ಟುಸ್ದೇ ಹೆರದೇ ಮಕ್ಳಾಯ್ತು ಅನ್ನೋತರ ಆಯ್ತದಲ್ಲಾ ಸಾರ್!' ಅಂದ! ಈ ಸಂಶೋಧಕರು ಬೆಟ್ಟ ಅಗೆದು ಇಲಿ ಹಿಡಿಯುತ್ತಿದ್ದಾರೆ ಅನಿಸುತ್ತೆ. ಇದರೊಡನೆ ಜಾತಿಗಳ ನಡುವೆ ಮೇಲು ಕೀಳು ಇಲ್ಲ ಅಂತ ತೋರಿಸಲು ದಣಿವರಿಯದ ಸಂಶೋಧನೆ ನಡೆಸುತ್ತಿದ್ದಾರೆ. ಜಾತಿವ್ಯವಸ್ಥೆ, ಜಾತಿಗಳ ನಡುವೆ ಮೇಲು ಕೀಳು ಇದ್ದರೆ ತಾನೇ ಸಾಮಾಜಿಕ ನ್ಯಾಯ, ಮೀಸಲಾತಿ ಇತ್ಯಾದಿಗಳಿಗೆ ಅರ್ಥ. ಅದೇ ಇಲ್ಲ ಎಂದು ಭ್ರಮಿಸುವಂತೆ ಮಾಡಿಬಿಟ್ಟರೆ? ಮೀಸಲಾತಿ, ಸಾಮಾಜಿಕ ನ್ಯಾಯ ಇತ್ಯಾದಿಗಳನ್ನು ಕದಿಯುವುದಲ್ಲದೆ ಇದು ಮತ್ತೇನು? ಅದಕ್ಕಾಗಿ ಭಾರತದಲ್ಲಿ ಜಾತಿವ್ಯವಸ್ಥೆಯನ್ನು ಹುಟ್ಟು ಹಾಕಿದ್ದೇ ಬ್ರಿಟಿಷ್ ವಸಾಹತುಶಾಹಿ ಅಂತ `ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ' ಎಂಬಂತೆ ಮಾಡುತ್ತಿದ್ದಾರೆ. ಕಣ್ಣೆದುರು ಕಾಣುವುದನ್ನು ಮರೆಮಾಚಿ ತಮಗೆ ಬೇಕಾದ್ದನ್ನು ವಿಜೃಂಭಿಸಿ ವಾದಿಸುವ ವಕೀಲರಂತಾಗಿಬಿಟ್ಟಿದ್ದಾರೆ.

ಮುಂದುವರೆದಂತೆ ಇವರು ಜಾತಿಯನ್ನು ಜಾತಿಯಷ್ಟಕ್ಕೇ ಉಳಿಯಗೊಡಲೂ ಬಿಡುವುದಿಲ್ಲ. ಇವರ ಚಿಂತನಾ ಲಹರಿ ಹೀಗಿದೆ: “ಜಾತಿಗಣತಿಯು ಸಮಾಜದಲ್ಲಿ ಬದುಕುತ್ತಿರುವ ಜನರ  ಸ್ವ-ಅನುಭವವನ್ನು ಗ್ರಹಿಸುವಂತಿರಬೇಕು. ಲಿಂಗಾಯತ ಎಂಬುದನ್ನು (ಒಂದು) ಜಾತಿಯನ್ನಾಗಿ ಗುರುತಿಸದೆ ಸಾದರು, ಬಣಜಿಗ, ಪಂಚಾಚಾರ್ಯ ಮುಂತಾದ ಸಮಾಜದ ಹತ್ತು ಹಲವು ವಾಸ್ತವ ಗುಂಪುಗಳನ್ನು ಜಾತಿ ಎಂದು ಗುರುತಿಸಬೇಕಾಗುತ್ತದೆ. ಅಂತೆಯೆ ಕುರುಬರನ್ನು ಒಂದು ಜಾತಿಯಾಗಿಸದೆ ಅದರಲ್ಲಿನ ಕಾಡುಕುರುಬ, ಊರುಕುರುಬ, ಹತ್ತಿ ಕಂಕಣ, ಉಣ್ಣೆ ಕಂಕಣ ಎಂಬ `ಸಾಮಾಜಿಕವಾಗಿ ಗುರುತಿಸುವಿಕೆಯುಳ್ಳ' ಜಾತಿಗಳನ್ನು ಗುರುತಿಸಬೇಕಾಗಿದೆ. ಹೀಗೆ ಜನರ ಅನುಭವಕ್ಕೆ ಪೂರಕವಾಗಿಯೇ ಗುರುತಿಸಬೇಕಾಗುತ್ತದೆ”. ಇದು ಈ ಗುಂಪಿನ ವಾದ.  ಇದರ ಜೊತೆಗೆ,  ಭಾರತೀಯತೆ ಎಂದರೆ ಅದು ಆಚರಣೆ ಮತ್ತು ಸಂಪ್ರದಾಯ ಎಂದು ಈ ಸಂಶೋಧಕರು ವಾದಿಸುತ್ತಾರೆ. ಭಾರತದಲ್ಲಿ ಆಚರಣೆ ಮತ್ತು ಸಂಪ್ರದಾಯ ಅಂದರೆ ಏನು? ಇದನ್ನು ಕಣ್ಣು ಮುಚ್ಚಿಕೊಂಡು ಆಚರಣೆ ಉರುಫ್ ಉಪಜಾತಿ ಎಂದುಬಿಡಬಹುದಲ್ಲವೇ? ಅಂದರೆ ಈ ಸಂಶೋಧಕರು ಉಪಜಾತಿಗಳನ್ನು ಉಳಿಸಿಕೊಳ್ಳಲು ಉರುಳುಸೇವೆ ಮಾಡುತ್ತಿದ್ದಾರೆ. ಇವರಿಗೆ ಉಪಜಾತಿಗಳೆಲ್ಲವೂ ಸೇರಿ ಜಾತಿಯಾಗುವುದೂ ಬೇಕಿಲ್ಲ. ಆ ಜಾತಿ ಈ ಜಾತಿ ಬೆರೆತು ಒಂದು ಧರ್ಮವಾಗುವುದೂ ಬೇಕಿಲ್ಲ. ಒಟ್ಟಿನಲ್ಲಿ ಭಾರತೀಯರು ತಂತಮ್ಮ ಉಪಜಾತಿ ಬಚ್ಚಲೊಳಗೆ ಹುಳಗಳಂತಿರಬೇಕು. ಇದನ್ನೆ ಇವರು ಭಾರತೀಯತೆ ಅಂತಾರೆ. ಈ ಹಿಂದೆ ಬ್ರಿಟಿಷರು ಆಳ್ವಿಕೆ ನಡೆಸಲು ಭಾರತವನ್ನು ಜಾತಿಗಳಾಗಿ ಒಡೆದರು ಎಂದು ವಾದಿಸುವ ಇವರು ಈಗ ಯಾರು ಆಳ್ವಿಕೆ ನಡೆಸಲಿ ಎಂದು ಉಪಜಾತಿಗಳನ್ನು ಉಲ್ಬಣಿಸುತ್ತಿದ್ದಾರೆ? ದುಡಿಯುವ ವರ್ಗ ಎಂದೂ ಒಂದಾಗಬಾರದು ಎಂಬ ಈ ಆಶಯದೊಳಗೆ ಏನೇನಿದೆ? ಇಂದು ಕಾರ್ಪೊರೆಟ್ ಸೆಕ್ಟರ್ ಕೃಪಾಪೋಷಿತರಾದ ಕೆಲವು ಎನ್.ಜಿ.ಓ.ಗಳು ಭಾರತದಲ್ಲಿ ಇರುವ ಸಮಸ್ಯೆ, ಪ್ರತ್ಯೇಕತೆಗಳನ್ನು ಉಲ್ಬಣಿಸಿ ದುಡಿಯುವ ವರ್ಗ ಒಂದಾಗದಂತೆ ಕಾಯುವ ಕೆಲಸ ಮಾಡುತ್ತಾ ಸಮುದಾಯ ಆಂದೋಲನಕ್ಕೆ (mass movement) ತೊಡರುಗಾಲು ಹಾಕುತ್ತಿರುವಂತೆಯೇ ಈ ಬಾಲುಗುಂಪೂ ಕೂಡ ಭಾರತದ ಸಾಮಾಜಿಕ ಛಿದ್ರತೆಗಳನ್ನು ಮತ್ತೂ ಛಿದ್ರಗೊಳಿಸುವ ಕೃತ್ಯದಲ್ಲಿ ತೊಡಗಿರಬಹುದಾ? ಭಾರತವು ಉಪಜಾತಿಗಳಾಗಿ ಛಿದ್ರಾತಿಛಿದ್ರವಾದರೆ ಅಮೆರಿಕಾ ಅಥವಾ ಐರೋಪ್ಯ ವಸಾಹತುಶಾಹಿಗೆ ಭಾರತವನ್ನೇ ಆಹಾರವಾಗಿಸಿ ಉಣಬಡಿಸಿದಂತಾಗುವುದಿಲ್ಲವೇ? ದುಡಿಯುವ ವರ್ಗ ಒಂದಾಗದಂತೆ ಮಾಡುವ ಈ ಸಂಶೋಧನೆಯು ಯೂರೋ ಲಿಂಕ್ ಸಂಚಿನ ಫಲವೇ? ಗುಮಾನಿ ಹುಟ್ಟುತ್ತಿದೆ. ಇವರ ಚಲನವಲನಗಳ ಮೇಲೆ ಕಣ್ಣಿಡಬೇಕಾಗಿದೆ.

ಹಾಗೆ ಇವರು ಜಾತಿಗಳನ್ನು ಉಳಿಸಿಕೊಂಡು ಜಾತಿವ್ಯವಸ್ಥೆ ಇಲ್ಲ ಎನ್ನುವುದರಲ್ಲಿ ಮತ್ತೊಂದು ಒಳಮರ್ಮವೂ ಇದ್ದಿರಬಹುದೇ? ಈ ಭ್ರಮಾಧೀನ ಬಾಲಸಂಶೋಧಕರಿಗೆ, ಜಾತಿ ಹುಟ್ಟುಹಾಕಿದ ಪಿತೃಗಳು ಮೋಕ್ಷ ಕಾಣದೆ ಭೂಮಿ ಮೇಲೆ ಅಲೆದಾಡುತ್ತಿರುವಂತೆ ಆಗಾಗ ಗೋಚರಿಸುತ್ತಾ, ಅದನ್ನು ಮರೆಮಾಚುವ ಹತಾಶ ಪ್ರಯತ್ನ ಇಲ್ಲಿರಬಹುದೇ? ಜಾತಿ ವ್ಯವಸ್ಥೆಯೇ ಇಲ್ಲ ಎಂದು ವಾದ ಕಟ್ಟಿಬಿಟ್ಟರೆ(Fabricated), ಆಗ ಜಾತಿಗಳ ಹುಟ್ಟಿಗೆ ಕಾರಣರು ಯಾರೂ ಅಲ್ಲ ಅಂತಾಗಿ ಬಿಟ್ಟರೆ, ಆಗ ಯಾವ ತಪ್ಪಿನ ಭಾವನೆಯೂ ಇಲ್ಲದೆ ನೆಮ್ಮದಿಯಿಂದ ಇರಬಹುದಲ್ಲ ಎಂದು ಇವರು ಹೊರಟಿದ್ದಾರೆಯೆ?  ಹಾಗಾದರೆ ನೆನಪಿರಲಿ, ಈ ಮರೆಮಾಚಿ ಬರುವ ನೆಮ್ಮದಿಯು- ಆತ್ಮ ಎಂಬುದು ಇದ್ದರೆ ಅದನ್ನೇ ಕೊಂದುಬಿಡುತ್ತದೆ, ಸತ್ಯಕ್ಕೆ ಮುಖಾಮುಖಿಯಾಗುವುದನ್ನು ತಪ್ಪಿಸಿಬಿಡುತ್ತದೆ; ಸಂವೇದನಾಶೀಲ ಸೃಷ್ಟಿಶೀಲ ಮನಸ್ಸಿಗೆ ಎಳ್ಳು ನೀರು ಬಿಟ್ಟಂತೂ ಆಗುತ್ತದೆ. ಇಂಥದೇನಾದರೂ ಇದ್ದಲ್ಲಿ ಈ ಸಂಶೋಧಕರು ಅದನ್ನು ನಿವಾರಿಸಿಕೊಂಡರೆ ಅವರಿಗೇ ಕ್ಷೇಮ. ಹಾಗೂ ಸುತ್ತಲಿನ ಸಮಾಜಕ್ಕೂ ಒಳ್ಳೆಯದು.

ಈ ಜಾತಿಯಾದ ಮೇಲೆ ಈ ಸಂಶೋಧಕರು ಮುಂದೆ ಭಾರತದ ಧರ್ಮಗಳ ಕತ್ತು ಹಿಸುಕಲು ಹೊರಡುತ್ತಾರೆ. ಅದಕ್ಕಾಗಿ ಈ ಸಂಶೋಧಕರು, ಕ್ರಿಶ್ಚಿಯನ್ ಥಿಯಾಲಜಿ ಪರಿಭಾಷೆಯಲ್ಲಿ ಭಾರತವನ್ನು ನೋಡಿದ ದೃಷ್ಟಿಕೋನದಿಂದಾಗಿ ಇಲ್ಲಿ ರಿಲಿಜನ್ ಪರಿಕಲ್ಪನೆ ಬಂತೆಂದೂ ಈ ದೃಷ್ಟಿಕೋನದ ಕಾರಣವಾಗೆ ಬುದ್ಧ ಅಲ್ಲಮ ಬಸವಣ್ಣ ಮುಂತಾದವರನ್ನು ಪ್ರೊಟೆಸ್ಟೆಂಟ್ ಸುಧಾರಕರಂತೆ ಭಾವಿಸಲು ಕಾರಣವಾಯಿತು ಎಂದೂ ವಾದಿಸುತ್ತಾರೆ. ಭಾರತದ ದೇವಸ್ಥಾನಗಳನ್ನು, ಮಸೀದಿಗಳನ್ನು ಅಗೆಯುತ್ತ ಆಳಕ್ಕೆ ಹೋದರೆ ಬೌದ್ಧ,ಜೈನ, ಲಿಂಗಾಯತ ಎಲ್ಲವೂ ಒಂದರೊಳಗೊಂದು ಸಿಕ್ಕುವುವು. ಕ್ರಿಸ್ತ ಹುಟ್ಟುವ ಮೊದಲು ಇಲ್ಲಿ ಮತಾಂತರ ಜರುಗಿದೆ. ಕೇವಲ ಸಂಪ್ರದಾಯ ಆಚರಣೆಗಳೇ ಭಾರತವಾಗಿದ್ದರೆ ಇದೆಲ್ಲ ಹೇಗಾಗುತ್ತಿತ್ತು? ಇವರ ಉದ್ದಿಶ್ಯ ಇಷ್ಟೆ ಅನ್ಸುತ್ತೆ: ಭಾರತದಲ್ಲಿ ಯಾವುದೇ ಧರ್ಮಗಳು ಇರಬಾರದು. ಜಾತಿಗಳೂ ಇರಬಾರದು. ಉಪಜಾತಿಗಳು ಮಾತ್ರ ಇದ್ದು ಇದು ಭಾರತವಾಗಿರಬೇಕು. ಇದು ಭಾರತ ಇವರಿಗೆ.

ಜೊತೆಗೆ, ಈ ಸಂಶೋಧಕರು ಭಾರತವನ್ನು ತಮಗೆ ಬೇಕಾದಂತೆ ಗ್ರಹಿಸುತ್ತಾರೆ ಎಂಬುದಕ್ಕೆ ಉದಾಹರಣೆ- ವಚನಗಳನ್ನು ಕುರಿತು ಇವರು ಆಡುತ್ತಿರುವ ಮಾತು. ವಚನಗಳು ಇಡೀ ಕರ್ನಾಟಕವನ್ನು ಉದ್ದೇಶಿಸಿ ಮಾತಾಡುತ್ತಿದ್ದರೂ, ಈ ವಚನಗಳು ತನ್ನ ಮಾರ್ಗದ ಸಾಧಕರ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತವೆ ಎನ್ನುವ ಇವರು ತಾವು ಮಾತ್ರ ಇಡೀ ಭಾರತವನ್ನೇ ತಮ್ಮದು ಎನ್ನುವಂತೆ ಮಾತಾಡುತ್ತಾರೆ. ಹಾಗೇ ಬಾಲಗಂಗಾಧರರು ಅಧ್ಯಾತ್ಮದ ಬಗ್ಗೆ ಬರೆಯತ್ತಾ `ಪಾಶ್ಚಾತ್ಯರ ಆನಂದದ ಕಲ್ಪನೆಯಲ್ಲಿ ಈ ಪ್ರಪಂಚವನ್ನೇ ಬದಲಾಯಿಸುವ ಕಾರ್ಯಕ್ರಮ ಮೂಲಭೂತವಾಗಿರುತ್ತದೆ. ಆದರೆ ಭಾರತೀಯರ ಅಧ್ಯಾತ್ಮವು ಕಂಡುಕೊಂಡ ಉತ್ತರವೆಂದರೆ ಪ್ರಪಂಚವು ಈಗಿರುವಂತೆಯೇ ಮನುಷ್ಯನು ಯಾವುದೇ ಅವಸ್ಥೆಯಲ್ಲೂ ಆ ಆನಂದವನ್ನು ಹೊಂದುವುದು ಸಾಧ್ಯ. ಈ ಸ್ಥಿತಿಯನ್ನು ತಲುಪಲಿಕ್ಕೆ ಪ್ರಪಂಚವನ್ನು ಬದಲಿಸುವುದರ ಬದಲಾಗಿ ಒಬ್ಬನು ತನ್ನ ಪ್ರಾಪಂಚಿಕ ಅನುಭವದಿಂದಲೇ ಮುಕ್ತನಾಗಬೇಕು' ಎನ್ನುತ್ತಾರೆ. ತನ್ನ ಸುತ್ತಲಿನ ಸಮಾಜದ ಬಿಡುಗಡೆಯೊಳಗೇ ತನ್ನ ಬಿಡುಗಡೆಯೂ ಇದೆ ಎಂಬ ಆಶಯದ ಮಹಾಯಾನ, ವಚನಧರ್ಮ ಮುಂತಾದವು ಇವರ ಕಣ್ಣಿಗೆ ಕಾಣುತ್ತಿಲ್ಲ. ಕಂಡರೂ ಭೂಗತಮಾಡುತ್ತಿದ್ದಾರೆ. ವೈದಿಕದ `ಅಹಂ'ಕಾರವು ವೈದಿಕ `ಶಾಹಿ'ಯಾಗಿ  ಭಾರತದಲ್ಲಿ ತಾನು ಮಾತ್ರವೇ  ವ್ಯವಸ್ಥೆ,  ತಾನು ಮಾತ್ರವೇ ಆಳ್ವಿಕೆ ಎಂಬ `ಶಾಹೀ' ಕುಬುದ್ಧಿ ಕುತಂತ್ರವನ್ನು ಬಿಟ್ಟು `ವೈದಿಕ'ವಾಗಿ ತನ್ನಷ್ಟಕ್ಕೆ ತಾನೇ ಇದ್ದರೆ ಅದಕ್ಕೂ ಕ್ಷೇಮ. `ವೈದಿಕ'ದ ಹಿತವೂ ಇಲ್ಲಿದೆ. ಯಾಕೆಂದರೆ, ಈಗ ಇವರು ಆರಂಭಿಸಿರುವ ಕ್ರಿಶ್ಚಿಯನ್ ವಸಾಹತುಶಾಹಿ ಮುಗಿದು, ಮುಂದೆ ಈ ಸಂಶೋಧಕರು ಇಸ್ಲಾಂ ವಸಾಹತುಶಾಹಿಗೆ ಬಂದು ಅಬ್ಬರಿಸಿ, ಈ ಪರಿಪಾಠ ಮುಂದುವರೆದರೆ ಅದು ಎಲ್ಲಿಗೆ ತಲುಪುತ್ತದೆ? ಈ ನವಗೋಸುಂಬೆ ವೈದಿಕಶಾಹಿಯ ಕುತ್ತಿಗೆಗೆ ಕವೆಗೋಲು ಬೀಳುವಲ್ಲಿಗೆ ಬಂದು ನಿಲ್ಲುತ್ತದೆ.

ವೈದಿಕಶಾಹಿಯ ಇತಿಹಾಸ ಪುರಾಣವು ಈ ಸಂಶೋಧಕರ ಇಂಥದೇ ಪಟ್ಟುಗಳನ್ನು  ಹಾಕಿಕೊಂಡು ಲಾಗಾಯ್ತಿನಿಂದ ಬರುತ್ತ- ಇಲ್ಲಿನ ಧರ್ಮಗಳನ್ನು ಜಾತಿಯನ್ನಾಗಿ ಉಳಿಸಿಕೊಂಡು ನೀಚಗೊಳಿಸಿದೆ. ಉದಾ: ಜೈನ, ಲಿಂಗಾಯತ. ಆದರೆ ಜಾತಿಯಾಗಿ ಬಗ್ಗದ ಧರ್ಮಗಳನ್ನು ಇದೇ ವೈದಿಕಶಾಹಿಯು ಭಾರತದ ಆಚೆಗೆ ಪಲಾಯನ ಮಾಡುವಂತೆ ಮಾಡಿದೆ. ಉದಾ-ಬೌದ್ಧ. ಈಗ ಬೌದ್ಧವು ತನ್ನ ಮನೆಗೆ ಅಂದರೆ ಭಾರತಕ್ಕೆ ಮರಳುತ್ತಿದೆ. ಹಾಲಿ ಜಾತಿಯಾಗಿಬಿಟ್ಟಿರುವ ವಚನಧರ್ಮವೂ ತನ್ನೊಳಗಿನ ವಚನಗಳೊಳಗಿನ ಅಂತಃಸತ್ವದಿಂದಲೇ ಮುಂದೊಂದು ದಿನ ಜಾತಿ ಬಚ್ಚಲಿನಿಂದ ಹೊರಬಂದು ಧರ್ಮವೂ ಆಗಿಬಿಡುವ ಸಾಧ್ಯತೆಯನ್ನು ಒಳಗೊಂಡಿದೆ. ಇದಾದರಂತೂ ಕರ್ನಾಟಕದ ನೆಲದ ಫಸಲಾದ ವಚನಧರ್ಮವು ಇಡೀ ಜಗತ್ತಿನ ದುಡಿಯುವ ವರ್ಗದ ಧರ್ಮವಾಗುವ ಸಾಧ್ಯತೆಯೂ ಅದರೊಳಗೇ ಇದೆ. ಇದೆಲ್ಲದರ ವಾಸನೆ ಹಿಡಿದ ವೈದಿಕಶಾಹಿಗೆ ನಿದ್ದೆ ಬರುತ್ತಿಲ್ಲ. ಅದಕ್ಕಾಗಿ ಈ ಉಪಜಾತಿ ಸಿದ್ಧಾಂತಿಗಳು ಈ ಸಂಶೋಧನೆಯ ಮಡೆಮಡೆಸ್ನಾನದ ಉರುಳುಸೇವೆ ಮಾಡುತ್ತಿದ್ದಾರೆ. ಬೌದ್ಧ, ವಚನ ಇತ್ಯಾದಿ ಸತ್ವಶಾಲಿ ಧರ್ಮಗಳನ್ನು ಹಿಡಿದು ಹಿಡಾಹೊಡೆದು ಅವುಗಳನ್ನು ಜಾತಿ ಉಪಜಾತಿಗಳಾಗಿಸಲು ಬ್ಯುಸಿಯಾಗಿದ್ದಾರೆ. ಇವರ ಪ್ರಕಾರ, ಧರ್ಮಗಳು ಭಾರತದಲ್ಲಿ ಬದುಕುಳಿಯಲೇಬೇಕಾದರೆ ಅವು ಜಾತಿ ಉಪಜಾತಿಯಾಗಿ, ಅಂದರೆ ಸಂಪ್ರದಾಯ ಆಚರಣೆಗಳಾಗಿ ಜೀವಚ್ಛವಗಳಂತೆ ನೀಚವಾಗಿ ಉಳಿಯಬೇಕು- ಇದಕ್ಕಾಗಿ ನಡೆಯುತ್ತಿರುವ ಬೌದ್ಧಿಕ ಕಸರತ್ತಲ್ಲದೆ ಇದು ಮತ್ತೇನು? ಯಾವುದೋ ಕಾಲದಲ್ಲಿ ಕಟ್ಟಲ್ಪಟ್ಟ ಸಂಪ್ರದಾಯ,ಆಚರಣೆಗಳೂ ಅವು ಕಟ್ಟಲ್ಪಟ್ಟ ಕಾಲದಲ್ಲಿ ಆಹಾರವಾಗಿರಲೂಬಹುದು. ಆದರೆ ಅದೇ ಆಹಾರ ಕಾಲಾನಂತರ ಮಲವಾಗಿ ಪರಿಣಮಿಸಿಬಿಟ್ಟಿರುತ್ತದೆ. ಈ ಮಲದೇವತಾ ಅರ್ಚಕರಿಗೆ ಏನೆನ್ನಬೇಕು?

ಇವರಿಗೆ ಹೇಗೆ ಹೇಳಲಿ? ಏನು ಹೇಳಲಿ?

ಭಾರತದಲ್ಲಿ ಆಚರಣೆ, ಸಂಪ್ರದಾಯಗಳು ಆಳ್ವಿಕೆ ನಡೆಸುವುದಾದರೆ ಏನೇನು ದೃಶ್ಯಾವಳಿಗಳನ್ನು ನಾವು ಕಾಣಬೇಕಾಗಿಬರಬಹುದು: ಕುದುರೆ ಮೇಲೆ ಓರ್ವ ಮಹಿಳೆ ಅಲಂಕೃತಳಾಗಿ ಒಂದು ಕೈಲಿ ಕನ್ನಡಿ ಇನ್ನೊಂದು ಕೈಲಿ ನಿಂಬೆಹಣ್ಣು ಹಿಡಿದು ಹಸನ್ಮುಖಳೋ ಉನ್ಮತ್ತಳೋ ಆಗಿ ಪಯಣಿಸುತ್ತಿರುತ್ತಾಳೆ. ಸುತ್ತ ಜನ ಜೈಕಾರ ಹಾಕುತ್ತಾ ಸಾಗುತ್ತಾ ಗಂಡನ ಹೆಣದೊಡನೆ ಚಿತೆಗೆ ಆಹುತಿಯಾಗುತ್ತಾಳೆ. ಅವಳೇನಾದರು ಬೆದರಿ ಓಡಿದರೆ ಸುತ್ತ ಆವರಿಸಿಕೊಂಡವರು ಹಿಡಿದು ತಂದು ಅವಳನ್ನು ಆ ಚಿತೆಗೆ ಎಸೆಯುತ್ತಾರೆ. ಆಗ ಸತಿ ಸಹಗಮನ ಪೂರ್ಣಗೊಂಡು ಮಾಸ್ತಿಕಲ್ಲು ಅಲ್ಲಿ ನಿಲ್ಲುತ್ತದೆ. ಇನ್ನೊಂದು ಕಡೆ  ಪುಟ್ಟ ಬಾಲೆಯೊಬ್ಬಳಿಂದ ವಯಸ್ಕನಿಗೆ ಮಾಲೆ ಹಾಕಿಸುತ್ತಾರೆ, ಅವ ಸತ್ತರೆ ಈ ಕಂದಮ್ಮಗೆ ತಲೆ ಬೋಳಿಸಿ ವಿಧವೆ ಪಟ್ಟ ಕಟ್ಟಿ ಯಾಕಾದರೂ ಬದುಕಿದೆನೊ ಎನ್ನಿಸಿಬಿಡುತ್ತಾರೆ. ಅಸ್ಪೃಶ್ಯ, ತಳಸಮುದಾಯ, ಮಹಿಳೆ, ಶೂದ್ರರನ್ನು ಶಿಕ್ಷಣ, ಸಾಮಾಜಿಕ ನ್ಯಾಯ ಎಲ್ಲಾ ಕ್ಷೇತ್ರದಲ್ಲೂ ವಂಚಿತರನ್ನಾಗಿಸಿ ಸಮಾನತೆ, ಸಾಮಾಜಿಕ ನ್ಯಾಯದಿಂದ ಮತ್ತೂ ದೂರದೂರವಾಗಿಸುತ್ತಾರೆ- ಇತ್ಯಾದಿ ಇತ್ಯಾದಿಯಾಗಿ ಈ ಸಂಪ್ರದಾಯ, ಆಚರಣೆಗಳು ಹೆಚ್ಚಾದಂತೆ ಇದು ಕೊನೆಗೆ ನರಬಲಿ ಕೇಳುತ್ತದೆ. ಈ ಸಂಶೋಧಕರ ಪ್ರಕಾರ ಇದೆಲ್ಲಾ ಆಚರಣೆ ಪ್ರಧಾನ ಜ್ಞಾನದ (Performative Knowled-ge) ಭಾರತೀಯತೆ ಆಗುತ್ತದೆ!

ಇವರಿಗೆ ಹೇಗೆ ಹೇಳಲಿ? ಏನು ಹೇಳಲಿ?

`ಲೋಕದ ಡೊಂಕ ನೀವೇಕೆ ತಿದ್ದುವಿರಯ್ಯ' ಎಂಬ ಬಸವಣ್ಣನ ವಚನ ಉದ್ಧರಿಸಿ `ಇಂಥ ವಚನಗಳನ್ನು ಸಾಮಾಜಿಕ ಹೋರಾಟಗಾರರು ರಚಿಸಲು ಸಾಧ್ಯವಿಲ್ಲ' ಎನ್ನುವ ಈ ಸಂಶೋಧಕರಿಗೆ- ಅಯ್ಯೊ, ಲೋಕದ ಡೊಂಕಿನ ಭಾಗವಾಗಿಯೇ ನಿನ್ನೊಳಗೂ ಡೊಂಕಿರುತ್ತದೆ, ಈ ಡೊಂಕನ್ನು ನೀನೂ ತಿದ್ದಿಕೊಂಡರೆ ಅಷ್ಟರ ಮಟ್ಟಿಗೆ ಲೋಕದ ಡೊಂಕೂ ಸರಿಯಾಗುತ್ತದೆ ಎಂಬ ಅಂತರಂಗ ಬಹಿರಂಗ ಶುದ್ಧಿಯ ಧ್ವನಿ ತಿಳಿಯದವರಿಗೆ ಹೇಗೆ ಹೇಳಲಿ?

ಗಾಂಧಿ ತಾನೊಬ್ಬ ಹಿಂದೂ, ಹಿಂದೂ ಎಂದು ಬಾಯಿ ತೆರೆದಾಗಲೆಲ್ಲಾ ಜಪಿಸಿದರೂ `ಸತ್ಯವೇ ನನ್ನ ಧರ್ಮ, ನಿತ್ಯ ಪ್ರಾರ್ಥನೆಯ ಮೂಲಕ ನಾನು ಸತ್ಯದ ಸಾಮೀಪ್ಯವನ್ನು ಬಯಸುತ್ತೇನೆ. ಎಲ್ಲಾ ಜೀವಿಗಳ ಸೇವೆಗಾಗಿ ನಿರಂತರ ತನ್ನನ್ನು ವ್ಯಯಿಸುವುದು ಧರ್ಮ' ಎಂದು ಹೇಳುವ ಗಾಂಧಿಯೊಳಗೆ ಏಸುಕ್ರಿಸ್ತ  ಕುಳಿತಿರುವುದನ್ನು ಕಾಣದ, ಈ ಒಳಗಣ್ಣು ಇಲ್ಲದವರಿಗೆ ಏನು ತಾನೆ ಹೇಳುವುದು?

ಊರಾಚೆ ಎಸೆಯಲ್ಪಟ್ಟ ಅಸ್ಪೃಶ್ಯ ಕುಟುಂಬವೊಂದಕ್ಕೆ ಊರ ನಡುವೆ ವಸತಿ ಕಲ್ಪಿಸಿಕೊಟ್ಟಲ್ಲಿ ಆಗ, ಸುಮ್ಮನಿದ್ದಂತೆ ಇದ್ದ ಜಾತಿಗಳು ತಾವೇ ಒಂದು ವ್ಯವಸ್ಥೆಯಾಗಿ ರೂಪು ತಳೆದು ಭುಗಿಲೇಳುವುದನ್ನು ಕಾಣಲಾಗದ ಪರದೇಶಿಗಳಿಗೆ ಹೇಗೆ ಹೇಳುವುದು? ಹೇಗೆ ತಿಳಿಸುವುದು?

ಈ ಎಸ್.ಎನ್.ಬಾಲಗಂಗಾಧರ ಮತ್ತವರ ಸಂಶೋಧನಾ ತಂಡದ ರೋಗಿಷ್ಟ ಸಂಶೋಧನಾ ವಿಚಾರಗಳು `ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೇ?' ಎಂಬ ಡಂಕಿನ್ ಝಳಕಿ ಸಂಪಾದಿಸಿ ನಿರೂಪಿಸಿದ ಪುಸ್ತಕದಲ್ಲಿ ಹೇಗಿವೆ ಅಂದರೆ, (ರಾಜೇಂದ್ರ ಚೆನ್ನಿಯವರು ಪ್ರಸ್ತಾಪಿಸಿರುವ) ಈ ಪುಸ್ತಕದ ಪುಟ 123ರಲ್ಲಿ “ಒಟ್ಟೂ ಜನಸಂಖ್ಯೆಯಲ್ಲಿ ಸುಮಾರು 24 ಪ್ರತಿಶತ ದಲಿತರೇ (1999-2000ದಲ್ಲಿ) ಇರುವಾಗ ಕೇವಲ 38 (ದಲಿತರ) ಕೊಲೆಗಳಿಂದ ಭಾರತದಲ್ಲಿ ಜಾತಿಯ ತಾರತಮ್ಯ ಇದೆಯೆಂದು ನಿರ್ಣಯಕ್ಕೆ ಬರಲು ಹೇಗೆ ಸಾಧ್ಯ?' ಎಂದು ಈ ಸಂಶೋಧಕರು ಪ್ರಶ್ನಿಸುತ್ತಾರೆ. ಭಾರತದಲ್ಲಿ ಜಾತಿಯ ತಾರತಮ್ಯ ಇದೆಯೆಂದು ತೋರಿಸಲು ಹೆಚ್ಚು ದಲಿತರ ಕೊಲೆಗಳ ದಾಖಲಾತಿ ಕೇಳುವ ಈ ಸಂಶೋಧಕರು ಮನುಷ್ಯರಾ ಎಂದು ಮೊದಲು ಸಂಶೋಧಿಸಬೇಕಾಗಿದೆ. ಮನುಧರ್ಮಶಾಸ್ತ್ರದ ಹೆಣದೊಳಗಿಂದ ಉತ್ಪತ್ತಿಯಾದ ಹುಳುಗಳಂತಾಡುತ್ತಿರುವ ಈ ಬಾಲೂಗ್ಯಾಂಗ್ ಅನ್ನು ಯಾರು ಕಾಪಾಡಬೇಕೋ ತಿಳಿಯದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT