ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷ ಜಿಲ್ಲೆಯ ಪಿಡಿಒಗಳಿಗೆ ಲ್ಯಾಪ್‌ಟಾಪ್

Last Updated 24 ಜುಲೈ 2012, 5:35 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಕೊನೆಗೂ `ಲ್ಯಾಪ್‌ಟಾಪ್~ ನೀಡಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಕಳೆದ ವರ್ಷದಿಂದ ಜಾರಿಯಾಗಿರುವ ಈ ಯೋಜನೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅನುಷ್ಠಾನವಾಗಿದ್ದರೂ ರಾಮನಗರದಲ್ಲಿ ಇನ್ನೂ ಜಾರಿಗೆ ಬಂದಿರಲಿಲ್ಲ. ವರ್ಷ ತಡವಾಗಿಯಾದರೂ `ಲ್ಯಾಪ್‌ಟಾಪ್~ಗಳು ಬರುತ್ತಿವೆಯಲ್ಲ ಎಂದು ಪಿಡಿಒಗಳು ಈಗ ನಿಟ್ಟುಸಿರು ಬಿಡುವಂತಾಗಿದೆ.

ಕೇಂದ್ರದ ಮಹತ್ವಾಕಾಂಕ್ಷೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ `ಲ್ಯಾಪ್‌ಟಾಪ್~ ಒದಗಿಸಲು ಸರ್ಕಾರ ಈ ಮೂಲಕ ಮುಂದಾಗಿದೆ.

ಪಿಡಿಒಗಳಿಗೆ ಇಲ್ಲಿಯವರೆಗೆ `ಲ್ಯಾಪ್‌ಟಾಪ್~ಗಳನ್ನು ಒದಗಿಸದ ಜಿಲ್ಲಾ ಪಂಚಾಯಿತಿಗಳು ತ್ವರಿತವಾಗಿ ಅವರಿಗೆ ಲ್ಯಾಪ್‌ಟಾಪ್ ಒದಗಿಸುವ ಕೆಲಸಕ್ಕೆ ಚಾಲನೆ ನೀಡಬೇಕು ಎಂದು ಕಳೆದ 9ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖಡಕ್ ಆಗಿ ನಿರ್ದೇಶನ ಪತ್ರವನ್ನು ರವಾನಿಸಿದ್ದಾರೆ.

ಇದರ ಹಿನ್ನೆಲೆಯಲ್ಲಿ ರಾಮನಗರ ಜಿ.ಪಂ. ಈಗಾಗಲೇ ಲ್ಯಾಪ್‌ಟಾಪ್ ಖರೀದಿಗೆ ಸಂಬಂಧಿಸಿದಂತೆ ಟೆಂಡರ್ ಆಹ್ವಾನಿಸಲಾಗಿದೆ.

`ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಲ್ಯಾಪ್‌ಟಾಪ್ ವಿತರಿಸಲಾಗಿದೆ. ರಾಮನಗರ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಇನ್ನೂ ವಿತರಣೆಯಾಗಿಲ್ಲ. ಈ ಬಾರಿ ಜಿಲ್ಲೆಯ 130 ಗ್ರಾಮ ಪಂಚಾಯಿತಿಯ ಪಿಡಿಒಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗುವುದು~ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಸ್.ವೆಂಕಟೇಶಪ್ಪ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.

`ಆಡಳಿತದಲ್ಲಿ ಕಾಗದ ಬಳಕೆಮ ಕಡಿಮೆ ಮಾಡುವುದು, ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ, ಉತ್ತರದಾಯತ್ವ ಕಾಯ್ದುಕೊಳ್ಳುವುದಕ್ಕೆ ಈ ಯೋಜನೆ ಉಪಕಾರಿಯಾದುದು~ ಎಂದು ಅವರು ಅಭಿಪ್ರಾಯಪಟ್ಟರು.

`ವಿವಿಧ ಕಡತಗಳನ್ನು ಇಟ್ಟುಕೊಂಡು ಸುತ್ತುವ ಬದಲಿಗೆ ಎಲ್ಲ ಮಾಹಿತಿಗಳನ್ನು ಹೊಂದಿರುವ ಲ್ಯಾಪ್‌ಟಾಪ್‌ಗಳನ್ನು ತೆಗೆದುಕೊಂಡು ಸಂಚರಿಸುವುದು ಉಪಯುಕ್ತ. ಇದರಿಂದ ಸಾರ್ವಜನಿಕರಿಗೆ ಅಗತ್ಯ ಸಂದರ್ಭದಲ್ಲಿ ಅಗತ್ಯ ಮಾಹಿತಿ ದೊರೆಯುತ್ತದೆ. ಮೇಲಾಧಿಕಾರಿಗಳು ಕೇಳಿದ ಕೂಡಲೇ ಸಂಬಂಧಿಸಿದ ಯೋಜನೆಗಳ ಸೂಕ್ತ ಅಂಕಿ ಅಂಶಗಳನ್ನು ಖಚಿತವಾಗಿ ಹೇಳಲು ಪಿಡಿಒಗಳಿಗೆ ಲ್ಯಾಪ್‌ಟಾಪ್ ನೆರವಿಗೆ ಬರುತ್ತವೆ~ ಎಂದು ಅವರು ವಿವರಿಸಿದರು.

`ಗ್ರಾ.ಪಂ, ತಾ.ಪಂ ಮತ್ತು ಜಿ.ಪಂ ಸಭೆಗಳಿಗೆ ಪಿಡಿಒಗಳು ಲ್ಯಾಪ್‌ಟಾಪ್‌ನೊಂದಿಗೆ ಬಂದರೆ ಸಾಕು. ಅದರಲ್ಲಿಯೇ ಅಗತ್ಯ ಅಂಕಿ ಅಂಶಗಳ ಮಾಹಿತಿ ದಾಖಲೆ ಇರುತ್ತದೆ. ಸಭೆಯಲ್ಲಿ ಸದಸ್ಯರಿಗೆ ಬೇಕಾದ ಮಾಹಿತಿ ಕ್ಷಣಾರ್ಧದಲ್ಲಿ ದೊರೆಯುತ್ತದೆ~ ಎಂದು ಅವರು ಹೇಳಿದರು.

`ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸುವ ಸುತ್ತೋಲೆ, ಆದೇಶ, ವಿವಿಧ ಕಾರ್ಯಕ್ರಮಗಳ ವಿವರಗಳು ಪಿಡಿಒಗಳಿಗೆ ಸುಲಭವಾಗಿ ದೊರೆಯಲು ಸಾಧ್ಯವಾಗುತ್ತದೆ. ವಿವಿಧ ಯೋಜನೆಗಳ ಫಲಾನುಭವಿಗಳ ಪಟ್ಟಿಯಲ್ಲಿ ನಿಗದಿತ ಸ್ಥಳದಲ್ಲಿಯೇ ಭರ್ತಿ ಮಾಡಲು ಅನುವಾಗುತ್ತದೆ. ಕ್ಷೇತ್ರಕಾರ್ಯ ಮಾಡಲು ಹೆಚ್ಚು ಅನುಕೂಲವಾಗುತ್ತದೆ~ ಎಂದು ಹರೀಸಂದ್ರ ಗ್ರಾಮ ಪಂಚಾಯಿತಿ ಪಿಡಿಒ ಶಿವಲಿಂಗಯ್ಯ ಅಭಿಪ್ರಾಯಪಡುತ್ತಾರೆ.

`ವಿದ್ಯುತ್ ಸಮಸ್ಯೆ, ಯುಪಿಎಸ್ ತೊಂದರೆಯಿಂದ ದಾಖಲೆಗಳನ್ನು ಇಂಟರ್‌ನೆಟ್‌ನಲ್ಲಿ ಅಳವಡಿಸಲು ಆಗಿಲ್ಲ ಎಂಬ ನೆಪಗಳಿಗೆ ಇನ್ನು ಮುಂದೆ ಕಡಿವಾಣ ಬೀಳುತ್ತದೆ. `ಪಂಚತಂತ್ರ~ ನಿರಂತರವಾಗಿ `ಅಪ್‌ಡೇಟ್~ ಆಗಲು ಸಾಧ್ಯವಾಗುತ್ತದೆ. ನರೇಗಾ ಕಾರ್ಯಗಳು, ಜಾಬ್‌ಕಾರ್ಡ್ ಹೊಂದಿರುವವರು, ಪಡಿತರ ಚೀಟಿ ಪಡೆದಿರುವವರ ಸರಿಯಾದ ಮಾಹಿತಿ, ಕರ ವಸೂಲಾತಿ ವಿವರವನ್ನು ಸೂಕ್ತ ಸಂದರ್ಭದಲ್ಲಿ ದಾಖಲಿಸಲು `ಲ್ಯಾಪ್‌ಟಾಪ್~ ನೆರವಿಗೆ ಬರುತ್ತದೆ. ಅನಗತ್ಯ ವಿಳಂಬಕ್ಕೆ ಇದು ಆಸ್ಪದ ನೀಡುವುದಿಲ್ಲ~ ಎಂದು ಜಿ.ಪಂ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

ಕಳೆದ ವರ್ಷವೇ 13ನೇ ಹಣಕಾಸು ಯೋಜನೆಯಡಿ ಲ್ಯಾಪ್‌ಟಾಪ್ ಖರೀದಿಸಲು ರಾಜ್ಯ ಸರ್ಕಾರ ಸೂಚಿಸಿತ್ತು. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ಹಿಂದಿನ ವರ್ಷ ಅದು ಸಾಧ್ಯವಾಗಿರಲಿಲ್ಲ ಎಂದು ಅವರು ಮಾಹಿತಿ ನೀಡಿದರು. ಅಂದಾಜು 40ರಿಂದ 45 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ವರ್ಷ 130 ಪಿಡಿಒಗಳಿಗೆ ಲ್ಯಾಪ್‌ಟಾಪ್ ನೀಡುವ ಯೋಜನೆ ಇದಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT