ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷ ಬೆಳೆ ಸಾಲ ರೂ 15,700 ಕೋಟಿ

Last Updated 20 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ರೂ 15,700 ಕೋಟಿ ಬೆಳೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಸೋಮವಾರ ಇಲ್ಲಿ ತಿಳಿಸಿದರು.

ವಿಧಾನಸೌಧದಲ್ಲಿ ನಡೆದ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿಯ 117ನೇ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ವರ್ಷ ಕೃಷಿ ವಲಯಕ್ಕೆ ರೂ 16,600 ಕೋಟಿ ಸಾಲ ನೀಡಲಾಗಿತ್ತು. ಕೃಷಿಗೆ ನೀಡುವ ಸಾಲದ ಪ್ರಮಾಣ ಜಾಸ್ತಿ ಆಗಬೇಕೇ ಹೊರತು ಕಡಿಮೆ ಆಗಬಾರದು. ಕೃಷಿಗೆ ಹೆಚ್ಚಿನ ಸಾಲ ನೀಡದ ಹೊರತು ಆ ಕ್ಷೇತ್ರದ ಬೆಳವಣಿಗೆ ಸಾಧ್ಯವಿಲ್ಲ ಎಂದರು.

`ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ವರದಿ ಸಲ್ಲಿಸಬೇಕು. ಶಿಕ್ಷಣ ಕ್ಷೇತ್ರಕ್ಕೂ ಸಾಲ ಸೌಲಭ್ಯಗಳನ್ನು ನೀಡಬೇಕು. ಸರ್ಕಾರ ನಿಮ್ಮಂದಿಗೆ ಇದೆ. ಏನಾದರೂ ಸಮಸ್ಯೆ ಇದ್ದರೆ ನಮ್ಮ ಗಮನಕ್ಕೆ ತಂದು ಬಗೆಹರಿಸಿಕೊಳ್ಳಿ. ಸಮಸ್ಯೆ ಇದೆ ಎಂದು ಸಾಲದ ಪ್ರಮಾಣವನ್ನು ಕಡಿಮೆ ಮಾಡುವುದು ಸರಿಯಲ್ಲ~ ಎಂದು ಕಿವಿಮಾತು ಹೇಳಿದರು.

ಠೇವಣಿ ಸಂಗ್ರಹ, ಸಾಲ ಮರುಪಾವತಿ ಮತ್ತಿತರ ವಿಷಯಗಳಲ್ಲಿ ಗುಲ್ಬರ್ಗ, ಯಾದಗಿರಿ ಸೇರಿದಂತೆ ನಾಲ್ಕು ಜಿಲ್ಲೆಗಳು ಹಿಂದೆ ಬಿದ್ದಿವೆ. ಚಾಮರಾಜನಗರ, ಮಂಡ್ಯ, ಧಾರವಾಡ ಜಿಲ್ಲೆಗಳ ಸಾಧನೆ ಉತ್ತಮವಾಗಿದೆ ಎಂದು ಅವರು ನುಡಿದರು. ಗ್ರಾಮೀಣ ಹಂತದ ಬ್ಯಾಂಕ್ ಸಿಬ್ಬಂದಿಯಲ್ಲಿ ದಕ್ಷತೆ ಕಡಿಮೆ ಇದೆ. ಅವರನ್ನು ಚುರುಕುಗೊಳಿಸಲು ತರಬೇತಿ ನೀಡಬೇಕು ಎಂದು ಹೆಚ್ಚುವರಿ ಮುಖ್ಯ  ಕಾರ್ಯದರ್ಶಿ ಮೀರಾ ಸಕ್ಸೇನಾ ಅಭಿಪ್ರಾಯಪಟ್ಟರು.

ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ ಅಧ್ಯಕ್ಷ ಬಸಂತ ಸೇಠ್ ಮಾತನಾಡಿ, ರಾಜ್ಯದಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆವುಳ್ಳ 3395 ಬ್ಯಾಂಕುರಹಿತ ಗ್ರಾಮಗಳನ್ನು ಗುರುತಿಸಿ, ಕಳೆದ ಮಾರ್ಚ್‌ವರೆಗೆ 1571 ಗ್ರಾಮಗಳಲ್ಲಿ ಬ್ಯಾಂಕ್ ಶಾಖೆಗಳನ್ನು ಆರಂಭಿಸಲಾಗಿದೆ. 2012ರ ಮಾರ್ಚ್ ಒಳಗೆ ಶೇ 100ರಷ್ಟು ಪ್ರಗತಿ ಸಾಧಿಸಲಾಗುವುದು ಎಂದರು.

ಸಾವಿರದಿಂದ ಎರಡು ಸಾವಿರ ಜನಸಂಖ್ಯೆಯುಳ್ಳ ಬ್ಯಾಂಕ್‌ರಹಿತ ಗ್ರಾಮಗಳಲ್ಲೂ ಮುಂದಿನ ದಿನಗಳಲ್ಲಿ ಬ್ಯಾಂಕ್ ಶಾಖೆಗಳನ್ನು ಆರಂಭಿಸಲಾಗುವುದು. 2011ರ ಮಾರ್ಚ್ ಅಂತ್ಯಕ್ಕೆ ಬ್ಯಾಂಕುಗಳು ರೂ 336682 ಕೋಟಿ ಠೇವಣಿ ಮತ್ತು ರೂ 255983 ಕೋಟಿ ಸಾಲ ಹೊಂದಿದ್ದವು ಎಂಬುದಾಗಿ ಅವರು ಹೇಳಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮ, ಗಿರಿಜನ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಯೋಜನೆಗಳು, ಕಿಸಾನ್ ಕ್ರೆಡಿಟ್ ಕಾರ್ಡ್, ಸ್ತ್ರೀಶಕ್ತಿ ಮತ್ತಿತರ ಸಾಲ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚಿಸಲಾಯಿತು.
 
ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ನಿರ್ದೇಶಕ ಪಿ.ವಿಜಯಭಾಸ್ಕರ್, ನಬಾರ್ಡ್‌ನ ಮುಖ್ಯ ಮಹಾಪ್ರಬಂಧಕ ಡಾ.ವೆಂಕಟೇಶ್ ತಗತ್, ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕ ಜಿ.ರಾಮನಾಥನ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT