ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಶೈಕ್ಷಣಿಕ ಅವಧಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ :ಸಕಾಲಕ್ಕಿಲ್ಲದ ಸಮವಸ್ತ್ರ, ಬೈಸಿಕಲ್, ಪಠ್ಯಪುಸ್ತಕ

Last Updated 23 ಮೇ 2012, 6:25 IST
ಅಕ್ಷರ ಗಾತ್ರ

ಶಿವಮೊಗ್ಗ: ಮಕ್ಕಳ ಶಾಲೆಯ ಆರಂಭದ ದಿನಗಳು ಸಮೀಪಿಸುತ್ತಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬೈಸಿಕಲ್, ಪಠ್ಯಪುಸ್ತಕಗಳು ಸೂಕ್ತ ಸಮಯಕ್ಕೆ ವಿತರಣೆಯಾಗುವ ಲಕ್ಷಣಗಳು ಕಾಣಬರುತ್ತಿಲ್ಲ.

ಶಾಲೆಯ ಆರಂಭದ ದಿನಗಳಿಂದಲೇ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ, ಪಠ್ಯಪುಸ್ತಕ ತೆಗೆದುಕೊಂಡು, ಬೈಸಿಕಲ್ ಏರಿ ತೆರಳಬೇಕಿದ್ದಲ್ಲಿ ಇಷ್ಟು ಹೊತ್ತಿಗೆ ಈ ಎಲ್ಲವೂ ಶಾಲೆಗಳಲ್ಲಿರಬೇಕಿತ್ತು. ಶಾಲೆ ಆರಂಭಕ್ಕೆ ಕೇವಲ ಎಂಟು ದಿವಸ ಬಾಕಿ ಇದ್ದರೂ ಶೇ 80ರಷ್ಟು ಪಠ್ಯಪುಸ್ತಕ ಕೆಲವು ತಾಲ್ಲೂಕಿಗೆ ಬಂದಿದ್ದು ಬಿಟ್ಟರೆ ಉಳಿದ ಪರಿಕರಗಳ ಸುಳಿವಿಲ್ಲ.

ಪ್ರಸ್ತುತ ವರ್ಷದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಸಮವಸ್ತ್ರ ಬೇಡಿಕೆ ಕುರಿತಂತೆ ಆಯಾ ತಾಲ್ಲೂಕಿನ ಬಿಇಒ ಅಧಿಕಾರಿಗಳು ನೇರವಾಗಿ ಆಯುಕ್ತರ ಕಚೇರಿಗೆ ಮಾಹಿತಿ ನೀಡಿರುತ್ತಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೇಳುತ್ತದೆ ವಿನಹಃ ಯಾವುದೇ ಕಚೇರಿಯಲ್ಲಿ ಅಂದಾಜಿನ ಪಟ್ಟಿ ತಯಾರಿಸಿಲ್ಲ.

ಕಳೆದ ವರ್ಷ ಒಟ್ಟು 1,73,840 ವಿದ್ಯಾರ್ಥಿಗಳ ಸಮವಸ್ತ್ರಗಳ ಪಟ್ಟಿಯಲ್ಲಿ 1,66,914ರಷ್ಟು ವಿತರಣೆಯಾಗಿ ಬಾಕಿ 6,926ರಷ್ಟನ್ನು ರಾಯಚೂರು ಜಿಲ್ಲೆಗೆ ಸರಬರಾಜು ಮಾಡಲಾಗಿದೆ ಎಂದು ಇಲಾಖೆ ದಾಖಲೆಗಳು ಹೇಳುತ್ತವೆ.

ಇನ್ನು ಬೈಸಿಕಲ್‌ಗಳ ಕಥೆ ಇದಕ್ಕಿಂತ ಹೊರತಾಗಿಲ್ಲ. ಪ್ರಸ್ತುತ ವರ್ಷದಲ್ಲಿ ಮಕ್ಕಳ ಶಾಲಾ ದಾಖಲಾತಿಗಳಿಗೆ ಅನುಸಾರವಾಗಿ ಅವಶ್ಯಕ ಬೈಸಿಕಲ್‌ಗಳ ಪಟ್ಟಿ ತಯಾರಿಸಲಾಗುವುದು ಎನ್ನುತ್ತದೆ ಇಲಾಖೆ. ಕಳೆದ ವರ್ಷದಲ್ಲಿ ಟೆಂಡರ್ ಪ್ರಕ್ರಿಯೆ ವಿಳಂಬದ ಕಾರಣದಿಂದ ಬೈಸಿಕಲ್ ವಿತರಣೆ ತಡವಾಗಿತ್ತು.

ಪಠ್ಯಪುಸ್ತಕಗಳ ಬೇಡಿಕೆ ಕುರಿತಂತೆ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಉಚಿತ ಪ್ರತಿಗಳು - 7,61,960 ಮತ್ತು ಮಾರಾಟಕ್ಕೆ - 2,74,807. ಒಟ್ಟು 10,36,787ರಷ್ಟನ್ನು ಶಾಲೆಗಳಿಗೆ ಒದಗಿಸುವ ಕಾರ್ಯ ಆರಂಭವಾಗಿರುತ್ತದೆ.

ಕೊರತೆ ಬಿದ್ದಲ್ಲಿ ಕಳೆದ ಸಾಲಿನಲ್ಲಿ ಉಳಿಕೆಯಾಗಿರುವ ಪಠ್ಯಪುಸ್ತಕಗಳನ್ನು ನೀಡಲಾಗುವುದು. ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ ಮತ್ತು ಸಾಗರಗಳಲ್ಲಿ ಈಗಾಗಲೇ ಶೇ 80ರಷ್ಟು ವಿತರಣಾ ಕಾರ್ಯ ಪೂರ್ಣಗೊಂಡಿದೆ. ಇನ್ನೊಂದು ವಾರದ ಒಳಗಾಗಿ ಜಿಲ್ಲೆಯಾದ್ಯಂತ ನೂರಕ್ಕೆ ನೂರರಷ್ಟು ಪೂರೈಕೆ ಆಗಲಿದೆ ಎನ್ನುತ್ತಾರೆ ನೋಡೆಲ್ ಅಧಿಕಾರಿ ಎನ್. ರವೀಂದ್ರ.

ಸಮವಸ್ತ್ರ ವಿತರಣೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. 2012-13ನೇ ಸಾಲಿಗೆ `ವಿದ್ಯಾವಿಕಾಸ~ ಯೋಜನೆ ಅಡಿಯಲ್ಲಿ ಬೆಂಗಳೂರು ಮತ್ತು ಗುಲ್ಬರ್ಗ ವಿಭಾಗದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ಒಂದು ಜತೆ ಉಚಿತ ಸಮವಸ್ತ್ರ ಒದಗಿಸಲು ಕಳೆದ ನವೆಂಬರ್‌ನಲ್ಲಿಯೇ ಸರ್ಕಾರ ಅನುಮತಿ ನೀಡಿದೆ.

ಇದರ ಜವಾಬ್ದಾರಿಯನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಬೆಂಗಳೂರು ಇವರಿಗೆ ವಹಿಸಿದೆ. ಇನ್ನೂ ಕಾಲಾವಕಾಶವಿದ್ದು ಸೂಕ್ತ ಸಮಯಕ್ಕೆ ಸಮವಸ್ತ್ರ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಡಿಡಿಪಿಐ ಜಿ.ಎಸ್. ಪರಮಶಿವಯ್ಯ.

ಮಕ್ಕಳ ಶಾಲಾ ದಾಖಲಾತಿಗೆ ಅನುಗುಣವಾಗಿ ಬೈಸಿಕಲ್ ಪಟ್ಟಿಯನ್ನು ತಯಾರಿಸಲಾಗುವುದು. ಪಠ್ಯಪುಸ್ತಕಗಳ ಬೇಡಿಕೆಯನ್ನು ಪೂರೈಸುವ ಕಾರ್ಯಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳ ಅವಶ್ಯಕತೆಯನ್ನು ಪೂರೈಸುವಲ್ಲಿ ಸಂಬಂಧಪಟ್ಟ ಶಿಕ್ಷಣ ಇಲಾಖೆಗಳಲ್ಲಿ ಪೂರ್ವ ತಯಾರಿಗಳಿಲ್ಲದಿರುವುದು ಆರಂಭದಲ್ಲೇ ಮಕ್ಕಳು ಪರದಾಡಬೇಕಾದ ಸ್ಥಿತಿ ತಂದೊಡ್ಡಿದೆ. ಮುಖ್ಯಮಂತ್ರಿ ಅವರ ಉಸ್ತುವಾರಿ ಜಿಲ್ಲೆಯಲ್ಲೇ ಇಂತಹ ಅವಸ್ಥೆ ಇದ್ದು, ಉಳಿದ ಜಿಲ್ಲೆಗಳ ಪಾಡೇನು ಎಂಬುದು ಊಹೆಗೆ ಬಿಟ್ಟಿದ್ದು ಎನ್ನುತ್ತಾರೆ ಪೋಷಕರು.

ಕುತೂಹಲ...!
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 5 ಮತ್ತು 8ನೇ ತರಗತಿಯ ಎಲ್ಲಾ ವಿಷಯಗಳ ಪಠ್ಯಪುಸ್ತಕಗಳು ಹೊಸದಾಗಿ ಮುದ್ರಣಗೊಂಡಿವೆ. ಈ ಪಠ್ಯಪುಸ್ತಕಗಳು ಈಗಾಗಲೇ ಶಿವಮೊಗ್ಗ ಪುಸ್ತಕ ಉಗ್ರಾಣದಲ್ಲಿ ಶೇಖರಣೆಗೊಂಡಿದ್ದು, ಇವುಗಳ ವಿತರಣೆಗೂ ಸೂಕ್ತ ಕ್ರಮಕೈಗೊಳ್ಳಲಾಗುವುದು. ಪಠ್ಯಪುಸ್ತಕಗಳಲ್ಲಿ ಕೇಸರೀಕರಣದ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಹೊಸ ಮುದ್ರಣ ಕುರಿತಂತೆ ಕುತೂಹಲಗಳು ಮೂಡಿವೆ.

ಮುಖ್ಯಾಂಶಗಳು
*  ಸಮವಸ್ತ್ರ, ಬೈಸಿಕಲ್    ಇನ್ನೂ ಇಲ್ಲ

*  ಶೇ 80ರಷ್ಟು ಪುಠ್ಯಪುಸ್ತಕ  ಆಗಮನ

*  ಹೊಸ ಪಠ್ಯದ ಬಗ್ಗೆ    ಕುತೂಹಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT