ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸಂಜೆ ಯಾಕಾಗಿದೆ

Last Updated 29 ಜನವರಿ 2011, 18:30 IST
ಅಕ್ಷರ ಗಾತ್ರ

ಕಥೆಯ ಬಗ್ಗೆ ಹತೋಟಿಯಿಲ್ಲದೆ, ತಾತ್ವಿಕ ಗಟ್ಟಿತನವಿಲ್ಲದೆ ನಿರ್ದೇಶಕರ ಕೈಯಲ್ಲಿ ಸೊರಗಿರುವ ಚಿತ್ರ ‘ಈ ಸಂಜೆ’. ಈ ಚಿತ್ರದ ಕಥೆಯಲ್ಲಿ ಎರಡು ಆಯಾಮಗಳಿವೆ. ಮೊದಲನೆಯದು ನಾಯಕನ ಪ್ರೇಮಕ್ಕೆ ಸಂಬಂಧಿಸಿದ್ದು. ಎರಡನೆಯದು ಭ್ರಷ್ಟ ವ್ಯವಸ್ಥೆಯನ್ನು ಬದಲಿಸಲು ಹಿಂಸೆಯೇ ಮದ್ದು ಎಂದು ನಂಬಿರುವ ಭಯೋತ್ಪಾದಕರದ್ದು. ಈ ಎರಡು ಕಥೆಗಳನ್ನು ಏಕಸೂತ್ರದಲ್ಲಿ ಬೆಸೆಯುವ ನಿರ್ದೇಶಕರ ಪ್ರಯತ್ನ ಯಶಸ್ವಿಯಾಗಿಲ್ಲ.

ನಿರ್ದೇಶಕ ಶ್ರೀ ನಡೆಸಿರಬಹುದಾದ ಸಿದ್ಧತೆಯ ಕೆಲವು ಕುರುಹುಗಳು ಅಲ್ಲಲ್ಲಿ ಕಾಣಿಸಿದರೂ, ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನ- ಹೀಗೆ ಬಹುಭಾರವನ್ನು ತಮ್ಮ ಮೇಲೆ ಹೇರಿಕೊಂಡಿರುವ ಅವರು ಯಾವುದಕ್ಕೂ ಪೂರ್ಣ ನ್ಯಾಯ ಸಲ್ಲಿಸಲು ಸಾಧ್ಯವಾಗಿಲ್ಲ.

ಚಿತ್ರಕಥೆಯಲ್ಲಿ ಟೊಳ್ಳು ಸಾಕಷ್ಟಿದೆ. ಪುರಾಣದಲ್ಲಿ, ಆನೆಯ ಸೊಂಡಿಲನ್ನು ಕತ್ತರಿಸಿ ಗಣಪತಿಗೆ ಅಂಟಿಸಿದಷ್ಟೇ ಸಲೀಸಾಗಿ, ಆಸ್ಪತ್ರೆಗೆ ದಾಖಲಾದ ನಾಯಕನ ತಾಯಿಯ ಮೂತ್ರಪಿಂಡವನ್ನು ಕಳವು ಮಾಡುವ ವೈದ್ಯರು ಅದನ್ನು ಸಚಿವರೊಬ್ಬರ ಪತ್ನಿಗೆ ಕಸಿ ಮಾಡುತ್ತಾರೆ! ನಾಯಕ ತನ್ನ ತಾಯಿಯನ್ನು ದೇವರೆಂದು ಪ್ರೀತಿಸುತ್ತಾನೆ. ಆದರೆ, ಆತನ ದುಃಖ ಸ್ಮಶಾನಕ್ಕಷ್ಟೇ ಸೀಮಿತವಾಗುತ್ತದೆ.

ಸೂತಕದ ಯಾವ ಛಾಯೆಯೂ ಇಲ್ಲದೆ ‘ಪ್ರೀತ್ಸೆ ಪ್ರೀತ್ಸೆ’ ಎಂದು ಹುಡುಗಿಯೊಬ್ಬಳ ಹಿಂದೆ ಬೀಳುತ್ತಾನೆ. ಉಗ್ರರ ತಂಡದ ಸಂಭಾಷಣೆಗಳೆಲ್ಲ ಹಿಂದಿಯಲ್ಲೇ ನಡೆಯುತ್ತದೆ. ಆಗ ಉಪಶೀರ್ಷಿಕೆ ನೀಡುವ ಗೋಜಿಗೆ ಹೋಗದ ನಿರ್ದೇಶಕರು, ಉಗ್ರನೊಬ್ಬ ಸುಳಿದಾಡುವ ಫೈಓವರ್‌ಗೆ ‘ಹೆಬ್ಬಾಳ ಫ್ಲೈಓವರ್’ ಎನ್ನುವ ಉಪಶೀರ್ಷಿಕೆ ತೋರಿಸುತ್ತಾರೆ. ಇದನ್ನು ಏನೆಂದು ಅರ್ಥೈಸುವುದು?

ಅಭಿರುಚಿಯ ದೃಷ್ಟಿಯಿಂದಲೂ ‘ಶ್ರೀ ಸಂಜೆ’ ಹಿಂದುಳಿಯುತ್ತದೆ. ‘ಇಷ್ಟ ಆದ್ರೆ ಇಟ್ಕೊತೀನಿ, ಇಲ್ಲದಿದ್ರೆ ಬಿಟ್ಕೊಡ್ತೀನಿ’ ಎಂದು ಯುವತಿಯೊಬ್ಬಳ ಬಗ್ಗೆ ನಾಯಕ ಎಗ್ಗಿಲ್ಲದೆ ಹೇಳುತ್ತಾನೆ. ನಿತ್ಯನಶೆಯಲ್ಲಿರುವ ಪಾತ್ರವೊಂದು (ರಂಗಾಯಣ ರಘು) ಉಬ್ಬುಹಲ್ಲಿನ ಹುಡುಗಿಯೊಬ್ಬಳನ್ನು ನಿರಂತರವಾಗಿ ಲೇವಡಿ ಮಾಡುತ್ತದೆ. ಅನಾಥ ಮಕ್ಕಳ ಸೇವೆಗೆ ನಿಂತ ಸಾಧು ಅಪಶಬ್ದಗಳನ್ನೇ ನುಡಿಯುತ್ತಾನೆ.
 
ಇದೆಲ್ಲಕ್ಕೂ ಮಿಗಿಲಾಗಿ, ಚಿತ್ರದ ಕಥೆಗೆ ತಾತ್ವಿಕ ಚೌಕಟ್ಟೇ ಇಲ್ಲ. ಮುಗಿದ ನಂತರವೂ ಈ ಸಿನಿಮಾ ಪ್ರತಿಪಾದಿಸುವುದು ಪ್ರಜಾಪ್ರಭುತ್ವದ ಆದರ್ಶಗಳನ್ನೋ ಅಥವಾ ಭಯೋತ್ಪಾದನೆಯನ್ನೋ ಎನ್ನುವುದು ನಿಗೂಢವಾಗಿಯೇ ಉಳಿಯುತ್ತದೆ. ಎಲ್ಲವನ್ನೂ ರೋಚಕಗೊಳಿಸುವ ನಿರ್ದೇಶಕರ ಪ್ರಯತ್ನಕ್ಕೆ ಸಿನಿಮಾ ಮಿಕವಾದಂತಿದೆ.

ಅಸಂಬದ್ಧಗಳ ಕಥನದಲ್ಲಿ ಮಾನವೀಯ ಪ್ರಸಂಗವೂ ಒಂದಿದೆ. ಅನಾಥ ಮಕ್ಕಳ ನಡುವೆ ಏಕಾಕಿತನ ಅನುಭವಿಸುವ ಎಚ್‌ಐವಿ ಪೀಡಿತ ಬಾಲಕಿಯೊಬ್ಬಳ ಉಪಕಥೆ ಗಮನಸೆಳೆಯುತ್ತದೆ.

ಚಿತ್ರಕಥೆಯ ಮೇಲೆ ಹತೋಟಿ ಸಾಧಿಸಲಾಗದ ನಿರ್ದೇಶಕರಿಗೆ ಚಿತ್ರದ ಅಂತ್ಯಕ್ಕೂ ತಾರ್ಕಿಕ ನ್ಯಾಯ ಸಲ್ಲಿಸಲು ಸಾಧ್ಯವಾಗಿಲ್ಲ. ಇಂಥ ಸಿನಿಮಾದಲ್ಲಿ ಸಂಜನಾ ಅವರಿಗೆ ನಟನೆಗೆ ಹೆಚ್ಚು ಅವಕಾಶವಿರುವ ಪಾತ್ರ ದೊರಕಿದೆ. ನಾಯಕನಾಗಿ ಬಡ್ತಿ ಪಡೆದಿರುವ ಆರ್ಯ ಅವರಿಗೂ ನಟನೆಗೆ ಅವಕಾಶವಿದೆ. ಆದರೆ, ಇಬ್ಬರೂ ಪೇಲವವಾಗಿ ಕಾಣಿಸುತ್ತಾರೆ. ಮುಖ್ಯಪಾತ್ರಗಳಿಗಿಂತ ಹೆಚ್ಚಾಗಿ ಪೋಷಕ ಪಾತ್ರಗಳಾದ ರಂಗಾಯಣ ರಘು, ನೀನಾಸಂ ಅಶ್ವತ್ಥ್ ಅವರೇ ಎದ್ದುಕಾಣುತ್ತಾರೆ. ಸಂಕಲನ ದೋಷಗಳು ಎದ್ದುಕಾಣುವ ಚಿತ್ರದಲ್ಲಿ ಸಂಗೀತ, ಛಾಯಾಗ್ರಹಣವೂ ಗಮನಸೆಳೆಯುವಂತಿಲ್ಲ.

‘ಈ ಸಂಜೆ ಯಾಕಾಗಿದೆ...’ ಎನ್ನುವುದು ‘ಗೆಳೆಯ’ ಚಿತ್ರದ ಜನಪ್ರಿಯ ಗೀತೆ. ಈ ರಮ್ಯಗೀತೆಯನ್ನು ವಿಷಾದ ಭಾವದಲ್ಲಿ ಹಾಡಿದರೆ ‘ಈ ಸಂಜೆ’ ಚಿತ್ರ ಎನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT