ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸುದ್ದಿ ಕನಸಿನಂತೆ ಕಂಡಿತು: ವೃಂದಾ

Last Updated 26 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಪ್ರತಿಷ್ಠಿತ ರೋಡ್ಸ್ ವಿದ್ಯಾರ್ಥಿ ವೇತನಕ್ಕೆ ನಾನು ಆಯ್ಕೆಯಾಗಿರುವ ವಿಚಾರವನ್ನು ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಅವರು ಘೋಷಿಸಿದ್ದನ್ನು ನನ್ನಿಂದ ನಂಬಲೇ ಆಗಲಿಲ್ಲ. ಕೆಲವು ಕ್ಷಣ ಇದೊಂದು ಕನಸಿನಂತೆ ಕಂಡಿತು. ಕನಸಲ್ಲ ಎಂದು ಸ್ಪಷ್ಟವಾದ ನಂತರ, ನಾನು ಟಾಟಾ ಅವರ ಧ್ವನಿಯನ್ನು ಸರಿಯಾಗಿ ಕೇಳಿಸಿಕೊಂಡಿದ್ದೇನಾ ಎಂಬ ಅನುಮಾನವೂ ಮೂಡಿತು!~

- ಬೆಂಗಳೂರಿನ `ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ~ಯ ಅಂತಿಮ ವರ್ಷದ ವಿದ್ಯಾರ್ಥಿನಿ ವೃಂದಾ ಭಂಡಾರಿ ತಾವು ರೋಡ್ಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುವ ಸುದ್ದಿ ತಿಳಿದಾಗ ಆಡಿದ ಮಾತು ಇದು! ಈ ವಿದ್ಯಾರ್ಥಿ ವೇತನದಡಿ ವೃಂದಾ ಲಂಡನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಕಾನೂನು ವ್ಯಾಸಂಗ ಮಾಡಲಿದ್ದಾರೆ.

ದೇಶದ ಕಾನೂನು ಕ್ಷೇತ್ರದ ವಿದ್ಯಮಾನಗಳ ಕುರಿತು ವರದಿ ಮಾಡುವ `ಬಾರ್ ಅಂಡ್ ಬೆಂಚ್~ ಅಂತರ್ಜಾಲ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ವೃಂದಾ, `ಅನ್ಯಾಯ, ಅಸಮಾನತೆಯಂಥ ಸಮಸ್ಯೆಗಳನ್ನು ನನಗೆ ಅರ್ಥಮಾಡಿಸಿದ್ದು ಕಾನೂನಿನ ವ್ಯಾಸಂಗ. ದೇಶದ ನ್ಯಾಯಾಂಗವು ಎಲ್ಲರಿಗೂ ಎಟಕುವಂತೆ ಮಾಡುವ ಬಗ್ಗೆ ನಾನು ಶ್ರಮಿಸುತ್ತೇನೆ~ ಎಂದು ಹೇಳಿದ್ದಾರೆ.

`ಭೋಪಾಲದಲ್ಲಿರುವ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯಲ್ಲಿ ನಾನು ಇಂಟರ್ನ್‌ಷಿಪ್ ಮಾಡುತ್ತಿದ್ದಾಗ ಪ್ರೊ. ಮೃಣಾಲ್ ಸತೀಶ್ ಅವರ ಪರಿಚಯವಾಯಿತು. ನಂತರ ಅವರು ನಮ್ಮ ವಿ.ವಿ.ಗೆ ಅಪರಾಧ ಕಾನೂನು ಕುರಿತು ಅಧ್ಯಾಪನ ಮಾಡಲು ಬಂದರು. ನಾನು ರೋಡ್ಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವರೇ ಸ್ಫೂರ್ತಿ~ ಎಂದು ವೃಂದಾ ತಮ್ಮ ಗುರುಗಳನ್ನು ನೆನಪಿಸಿಕೊಂಡಿದ್ದಾರೆ.

`ಅಂತಿಮ ಹಂತಕ್ಕೆ ಆಯ್ಕೆಯಾಗಿದ್ದ 16 ವಿದ್ಯಾರ್ಥಿಗಳನ್ನು ಮುಂಬೈನ ತಾಜ್ ಹೋಟೆಲ್‌ನಲ್ಲಿ ಸಂದರ್ಶನಕ್ಕೆ ಕರೆದಿದ್ದರು. ರತನ್ ಟಾಟಾ, ಪ್ರೊ. ವೀರ್ ಚೌಹಾಣ್, ನಂದನ್ ಕಾಮತ್, ಮಧುರಾ ಸ್ವಾಮಿನಾಥನ್ ಅವರಂತಹ ಹಿರಿಯರು ಸಂದರ್ಶಕರಾಗಿದ್ದರು. ನಾನು ಅಲ್ಲಿಯವರೆಗೆ ಮಾಡಿದ್ದ ಕೆಲಸಗಳು, ಪ್ರಕಟಿಸಿದ ಸಂಶೋಧನಾ ಲೇಖನ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡ ಕುರಿತು ಪ್ರಶ್ನಿಸಿದ್ದರು~ ಎಂದು ವೃಂದಾ ತಿಳಿಸಿದ್ದಾರೆ.

`ಆಕ್ಸ್‌ಫರ್ಡ್ ವಿ.ವಿ.ಯಲ್ಲಿ ವ್ಯಾಸಂಗ ಮುಗಿದ ನಂತರ ಭಾರತಕ್ಕೆ ಮರಳಿ ಸಂಶೋಧನೆ ಮತ್ತು ಅಧ್ಯಾಪನ ವೃತ್ತಿಯಲ್ಲಿ ತೊಡಗಿಕೊಳ್ಳುವುದು ನನ್ನ ಆಸೆ~ ಎಂದೂ ಹೇಳಿದ್ದಾರೆ. ಓದಿನ ಜೊತೆಗೆ, `ಸೋಷಿಯೊ-ಲೀಗಲ್ ರಿವ್ಯೆ~ದ ಮುಖ್ಯ ಸಂಪಾದಕಿಯಾಗಿ ಹಾಗೂ `ಇಂಡಿಯನ್ ಜರ್ನಲ್ ಫಾರ್ ಆಲ್ಟರ್‌ನೇಟ್ ಡಿಸ್ಪ್ಯೂಟ್ ರೆಸಲ್ಯೂಷನ್~ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಾಸ್ಕೆಟ್‌ಬಾಲ್ ಅವರ ನೆಚ್ಚಿನ ಆಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT