ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಹತ್ಯೆಗೆ ಕೊನೆಯಿಲ್ಲವೇ?

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕಳೆದ ಹತ್ತು ವರ್ಷಗಳಲ್ಲಿ ನಮ್ಮ ದೇಶದಲ್ಲಿ 2294 ಚಿರತೆಗಳನ್ನು ನಿಷ್ಕರುಣೆಯಿಂದ ಕೊಲ್ಲಲಾಗಿದೆ. ಅಂದರೆ ವಾರಕ್ಕೆ ಸರಾಸರಿ ನಾಲ್ಕು ಚಿರತೆಗಳು ಹಂತಕರಿಗೆ ಬಲಿಯಾಗಿವೆ. ಇವುಗಳ ಹತ್ಯೆ ಹೆಚ್ಚಾಗಲು ಎರಡು ಕಾರಣಗಳಿವೆ. ಮೊದಲನೆಯದು ಇವುಗಳ ಚರ್ಮ, ಉಗುರು ಸೇರಿದಂತೆ ದೇಹದ ವಿವಿಧ ಅಂಗಾಂಗಗಳನ್ನು ಮಾರಿ ಹಣ ಮಾಡುವ ಬೇಟೆಗಾರರದು, ಎರಡನೆಯದು ಇವುಗಳ ಬಗ್ಗೆ ಅತಿಯಾದ ಭಯದಿಂದ ಕೊಲ್ಲುವವರದು. ಇನ್ನೊಂದು ಆಘಾತಕಾರಿ ಅಂಶ ಎಂದರೆ ದಕ್ಷಿಣ ಭಾರತ ರಾಜ್ಯಗಳ ಪೈಕಿ ಚಿರತೆಗಳನ್ನು ಕೊಲ್ಲುವ ಕೃತ್ಯ ಅತಿ ಹೆಚ್ಚಾಗಿ ನಡೆಯುತ್ತಿರುವುದು ಕರ್ನಾಟಕದಲ್ಲಿ.
 
ಇನ್ನುಳಿದಂತೆ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳು ಈ ಪ್ರಾಣಿಗಳ ಪಾಲಿಗೆ ಅತ್ಯಂತ ಅಪಾಯಕಾರಿ ರಾಜ್ಯಗಳಾಗಿವೆ. ಚಿರತೆ ಚರ್ಮ, ಉಗುರು ಮುಂತಾದವಕ್ಕೆ ದೆಹಲಿ ಅತಿದೊಡ್ಡ ಮಾರುಕಟ್ಟೆ. ಕೈತುಂಬ ಹಣ ಸಿಗುತ್ತದೆ ಎಂಬ ಏಕೈಕ ಹಪಾಹಪಿಯಿಂದ ಬೇಟೆಗಾರರು ಇವನ್ನು ಬೇಟೆಯಾಡುತ್ತಿದ್ದಾರೆ ಮತ್ತು ಈ ಮೂಲಕ ನಿಸರ್ಗದಲ್ಲಿ ಅತ್ಯಂತ ಅಪಾಯಕಾರಿ ಅಸಮತೋಲನಕ್ಕೆ ದಾರಿಮಾಡಿ ಕೊಡುತ್ತಿದ್ದಾರೆ. ಕಾಡಿನ ಸ್ವಾಭಾವಿಕ ಜೀವ ವೈವಿಧ್ಯ ವ್ಯವಸ್ಥೆಯಲ್ಲಿ ಚಿರತೆಯಂಥ ಮಾಂಸಾಹಾರಿ ಪ್ರಾಣಿಯೂ ಅನಿವಾರ್ಯ ಎಂಬ ಮೂಲಭೂತ ಅಂಶವನ್ನೇ ಮರೆಯುತ್ತಿದ್ದಾರೆ.

ಆದರೆ ಹತ್ಯೆ ಸಂಖ್ಯೆ ಹೆಚ್ಚುವಲ್ಲಿ ಚಿರತೆಗಳದೂ ಒಂದಿಷ್ಟು ಪಾಲಿದೆ. ಏಕೆಂದರೆ ನಾನಾ ಕಾರಣಗಳಿಂದ ಕಾಡಿನ ವಿಸ್ತಾರ ಕಡಿಮೆಯಾಗುತ್ತಿದೆ. ಅಲ್ಲಿ ಇವುಗಳ ಆಹಾರಕ್ಕೆ ಬೇಕಾದ ಪ್ರಾಣಿಗಳ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಹೀಗಾಗಿ ಇವು ಕಾಡಿನ ಪಕ್ಕದ ಹಳ್ಳಿಗಳಿಗೆ ನುಗ್ಗುತ್ತವೆ, ದನ, ಕುರಿಯಂಥ ಸಾಕುಪ್ರಾಣಿಯನ್ನೂ ಬಿಡದೆ ಎಳೆದೊಯ್ದು ಹಸಿವೆ ನೀಗಿಸಿಕೊಳ್ಳುತ್ತವೆ.

ಅಲ್ಲೊಮ್ಮೆ ಇಲ್ಲೊಮ್ಮೆ ಪಟ್ಟಣ ಪ್ರದೇಶಗಳಿಗೂ ನುಗ್ಗಿ ಬಂದ ಉದಾಹರಣೆಗಳೂ ಇವೆ. ಆಗಾಗ ಭಯ ಅಥವಾ ಪ್ರಚೋದನೆಯಿಂದ ಮನುಷ್ಯರ ಮೇಲೂ ಎರಗುತ್ತವೆ. ಅದಕ್ಕಾಗಿಯೇ ಕಾಡಂಚಿನ ಗ್ರಾಮಸ್ಥರು ಆತ್ಮರಕ್ಷಣೆಗಾಗಿ ಚಿರತೆ ಕಂಡರೆ ಕೊಲ್ಲುವ ಮಟ್ಟಕ್ಕೆ ಇಳಿದಿದ್ದಾರೆ. ಇದರಿಂದಾಗಿಯೇ ಎಲ್ಲಿಯಾದರೂ ಜನವಸತಿ ಪ್ರದೇಶದಲ್ಲಿ ಚಿರತೆಯೇನಾದರೂ ಅಪ್ಪಿತಪ್ಪಿ ಮನುಷ್ಯರ ಕೈಗೆ ಸಿಕ್ಕಿದರೆ ಅದು ಬದುಕಿ ಉಳಿಯುವ ಸಾಧ್ಯತೆಯೇ ವಿರಳ ಎನ್ನುವ ಸ್ಥಿತಿಯಿದೆ. ಇದರ ಜತೆಗೆ ಸರ್ಕಾರದ ತಾರತಮ್ಯ ಕೂಡ ಈ ಜೀವಿಗಳ ಅಸ್ತಿತ್ವಕ್ಕೆ ಸಂಚಕಾರ ತಂದೊಡ್ಡಿದೆ. ಏಕೆಂದರೆ ಹುಲಿ ಸಂರಕ್ಷಣೆಗೆ ನೀಡುತ್ತಿರುವ ಪ್ರಾಮುಖ್ಯತೆ ಚಿರತೆ ಮತ್ತಿತರ ಪ್ರಾಣಿಗಳಿಗೆ ಸಿಗುತ್ತಿಲ್ಲ. ಇವನ್ನು ಕೊಂದವರಿಗೆ ಶಿಕ್ಷೆಯಾದ ಪ್ರಕರಣಗಳಂತೂ ತೀರಾ ವಿರಳ.
 
ಹಿಂಸಪ್ರಾಣಿಗಳು ಮಾತ್ರವಲ್ಲದೆ ಘೇಂಡಾಮೃಗದಂಥ ಸಸ್ಯಹಾರಿ ಪ್ರಾಣಿಗಳು ಕೂಡ ಬೇಟೆಗಾರರ ಕಾಕದೃಷ್ಟಿಗೆ ಬಲಿಯಾಗುತ್ತಿವೆ. ಕಾಜಿರಂಗದಲ್ಲಿ ಕಳೆದ 10 ತಿಂಗಳಲ್ಲಿ 40 ಘೇಂಡಾಮೃಗಗಳನ್ನು ಕೊಲ್ಲಲಾಗಿದೆ. ಅವುಗಳ ಕೊಂಬು ಅವುಗಳಿಗೆ ಮುಳುವಾಗುತ್ತಿದೆ. ಈ ಎಲ್ಲ ವಿದ್ಯಮಾನಗಳನ್ನು ನೋಡಿದಾಗ ಕಾಡಿನ ಎಲ್ಲ ಜೀವಿಗಳ ರಕ್ಷಣೆಗೆ ಇಡೀ ಮನುಷ್ಯ ಕುಲ ಟೊಂಕಕಟ್ಟಿ ನಿಲ್ಲುವ ಅಗತ್ಯವಿದೆ. ಇಲ್ಲದಿದ್ದರೆ ಕಾಡಿನ ಅಸಮತೋಲನಕ್ಕೆ ದುಬಾರಿ ಬೆಲೆ ತೆರಬೇಕಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT