ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ‘ತಿಪ್ಪೆಗುಂಡಿ’ಗೆ ಮುಕ್ತಿ ಕೊಡಿಸ್ತೀರಾ?

ನಾಡಿನ ದೊರೆಗೆ ಗುಮ್ಮಟ ನಗರಿ ಜನತೆಯ ಮೊರೆ
Last Updated 10 ಡಿಸೆಂಬರ್ 2013, 4:48 IST
ಅಕ್ಷರ ಗಾತ್ರ

ವಿಜಾಪುರ: ಸ್ವಾಮಿ, ನಮ್ಮೂರು ಐತಿಹಾಸಿಕನಗರ ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ. ‘ನಿಮ್ಮೂರು ತಿಪ್ಪೆಗುಂಡಿಯಂತಿದೆ’ ಎಂದು ಪರ ಊರಿ ನವರು, ಪ್ರವಾಸಿಗರು ಹೀಯಾಳಿಸುತಿದ್ದಾರೆ. ಎಲ್ಲಿ ನೋಡಿದರೂ ಹೊಸಲು–ಕೊಳಚೆ–ಕಸದ ರಾಶಿ. ಮಂದಿಗಿಂತ ಹಂದಿ–ನಾಯಿಗಳೇ ಹೆಚ್ಚು. ಇನ್ನು ಬಿಡಾಡಿ ದನಗಳ ಕಾಟವಂತೂ ವಿಪ ರೀತ. ರಸ್ತೆಗಳು ಎಲ್ಲಿವೆ ಎಂದು ಹುಡುಕ ಬೇಕು. ಚರಂಡಿಗಳಂತೂ ಇಲ್ಲವೇ ಇಲ್ಲ. ಒಳಚರಂಡಿಗಾಗಿ ಅಲ್ಲಲ್ಲಿ ಅಗೆದು ಬಿಟ್ಟಿರುವ ತಗ್ಗುಗಳು ನರಬಲಿಯನ್ನೂ ಪಡೆದಿವೆ. ಇದರಿಂದ ಮುಕ್ತಿ ಕೊಡಿ ಸುತ್ತೀರಾ?

ಅಹವಾಲು ಆಸಲಿಸಲು ತಮ್ಮೂರಿಗೆ ಆಗಮಿಸುತ್ತಿರುವ ನಾಡಿನ ದೊರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಜಾಪುರ ನಗರದ ಜನತೆ ಕೇಳುತ್ತಿರುವ ಪ್ರಶ್ನೆ ಇದು.

ವಿಜಾಪುರದ ಜನಸಂಖ್ಯೆ 3.25 ಲಕ್ಷ. ನಗರಸಭೆಯನ್ನು ಮಹಾನಗರ ಪಾಲಿಕೆ ಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ನಿರ್ಧರಿಸಿದೆ. ಐತಿಹಾಸಿಕ ನಗರದ ಅಭಿವೃದ್ಧಿಗೆ ಸರ್ಕಾರ ನಗರೋತ್ಥಾನ ಯೋಜನೆಯಡಿ ₨100 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಎರಡನೇ ಕಂತಿನ ₨100 ಕೋಟಿಗೂ ಮಂಜೂರಾತಿ ಕೊಟ್ಟಿದೆ.

‘ಅಧಿಕಾರಿಗಳು–ಜನ ಪ್ರತಿನಿಧಿಗಳು ಸರ್ಕಾರದಿಂದ ಕೋಟಿ ಕೋಟಿ ಅನುದಾನ ತಂದಿದ್ದೇವೆ ಎಂದು ಹೇಳುತ್ತಿ ದ್ದಾರೆ. ಆದರೆ, ಆ ಅನುದಾನವನ್ನು ಯಾವ ಕಾಮಗಾರಿಗೆ ವಿನಿಯೋಗಿಸಿ ದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ’ ಎಂದು ಬಹುಪಾಲು ಜನರು ದೂರುತ್ತಿದ್ದಾರೆ.

‘ವಿಜಾಪುರ ನಗರದಲ್ಲಿ ಒಳಚರಂಡಿ ಕಾಮಗಾರಿ ಆರಂಭಗೊಂಡಿದೆ. ಇಷ್ಟೊತ್ತಿಗಾಗಲೇ ಅದು ಪೂರ್ಣಗೊಳ್ಳ ಬೇಕಿತ್ತು. ಮೂರು ವರ್ಷ ಕಳೆದರೂ ಈ ವರೆಗೆ ಶೇ.30ರಷ್ಟು ಕಾಮಗಾರಿಯೂ ಆಗಿಲ್ಲ. ಎಲ್ಲೆಂದರಲ್ಲಿ ಅವರು ರಸ್ತೆಗಳನ್ನು ಅಗೆದು ಗುಂಡಿಗಳನ್ನು ಹಾಗೇ ಬಿಟ್ಟಿದ್ದಾರೆ. ದಿನದ 24 ಗಂಟೆಗಳ ನೀರು ಪೂರೈಕೆ ಇನ್ನೂ ಕನಸಾಗಿಯೇ ಉಳಿದಿದೆ. ನಗರಸಭೆ ಆಡಳಿತದಲ್ಲಿ ಪಾರದರ್ಶಕತೆ ಎನ್ನುವುದಿಲ್ಲ. ಜನತೆಯ ಸಮಸ್ಯೆಗಳಿಗೆ ಸ್ಪಂದನೆಯೂ ದೊರೆಯುತ್ತಿಲ್ಲ. ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸದಿದ್ದರೆ ಸಾವಿರ ಕೋಟಿ ಅನುದಾನ ನೀಡಿದರೂ ನಗರದ ಉದ್ಧಾರ ಆಗುವುದಿಲ್ಲ’ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಒಲ್ಲದ ನಗರಸಭೆಯ ಸದಸ್ಯರೊಬ್ಬರು.

‘ನಗರ ಶಾಸಕರ ಕಚೇರಿ ಪಕ್ಕವೇ ತಿಪ್ಪೆಗುಂಡಿ ಇದೆ. ಎರಡು ವರ್ಷದಿಂದ ಇದು ಹೀಗೇ ಇತ್ತು. ಯಾವುದೇ ಅಧಿಕಾರಿಗಳು–ಜನಪ್ರತಿನಿಧಿಗಳು ಇತ್ತ ಬಂದಿರಲಿಲ್ಲ. ಮುಖ್ಯಮಂತ್ರಿಗಳು ಈ ಮಾರ್ಗವಾಗಿ ಸಂಚರಿಸಲಿದ್ದಾರೆ  ಎಂಬ ಕಾರಣಕ್ಕೆ ಈಗ ಸ್ವಚ್ಛ ಮಾಡುತ್ತಿದ್ದಾರೆ’ ಎಂದು ನವಭಾಗದ ನಿವಾಸಿ ಸಾಗರ ಭೋಸಲೆ ದೂರಿದರು.

‘ತಾಜ್‌ಬಾವಡಿ ಎದುರು ನೀರಿನ ಕೊಳವೆ ಒಡೆದು ಒಂದು ವರ್ಷ ಆಯಿತು. ನಳ ಬಂದಾಗ ಇಲ್ಲಿ ನೀರು ಹರಿದು ಪೋಲಾಗುತ್ತದೆ. ಜಲ ಮಂಡಳಿಗೆ ಸಾಕಷ್ಟು ಬಾರಿ ಮನವಿ ಮಾಡಿ ದರೂ ಒಡೆದ ಕೊಳವೆ ರಿಪೇರಿ ಮಾಡಿಲ್ಲ.  ನಗರಸಭೆಯವರು ಇಲ್ಲಿ ಕಸದ ತೊಟ್ಟಿಯನ್ನೂ ಇಟ್ಟಿಲ್ಲ’ ಎಂದು ತಾಜ್‌ಬಾವಡಿ ಹತ್ತಿರದ ನಿವಾಸಿ ಮಲ್ಲಿಕಾರ್ಜುನ ತಾಳಿಕೋಟೆ, ಬಾಬು ತಾಳಿಕೋಟೆ ಆಪಾದಿಸಿದರು.

‘ರೈತರಿಗೆ ಬಡ್ಡಿ ರಹಿತ ಸಾಲ ನೀಡಿ’
ಜಮೀನು ಸರ್ವೇ ಶುಲ್ಕ ಹೆಚ್ಚಿಸಿದ್ದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಹಿಂದೆ ಎಷ್ಟೇ ಜಮೀನು ಅಳತೆ ಮಾಡಿದರೂ ₨600 ಪಡೆಯಲಾಗುತ್ತಿತ್ತು. ಈಗ ಎರಡು ಎಕರೆ ಜಮೀನಿಗೆ ₨1500 ಮತ್ತು ಅದಕ್ಕಿಂತ ಹೆಚ್ಚಿನ ಜಮೀನಿಗೆ ಪ್ರತಿ ಎಕರೆಗೆ ₨200 ಶುಲ್ಕ ಪಡೆಯಲಾಗುತ್ತಿದೆ. ಈ ಶುಲ್ಕ ಹೆಚ್ಚಳ ಕೈಬಿಡಬೇಕು.

ಹತ್ತಿ, ಸೂರ್ಯಕಾಂತಿ, ಕಡಲೆ, ತೊಗರಿ, ಗೋಧಿ, ಮೆಕ್ಕೆಜೋಳ, ಶೇಂಗಾ, ಬಿಳಿಜೋಳ ಮತ್ತಿತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಅವುಗಳ ಖರೀದಿ ಕೇಂದ್ರ ಆರಂಭಿಸಬೇಕು.

ಉದ್ಯೋಗ ಖಾತ್ರಿಯಲ್ಲಿ ದೊಡ್ಡಮಟ್ಟದ ಅವ್ಯಹಾರ ನಡೆಯುತ್ತಿದೆ. ಸಕ್ಕರೆ ಕಾರ್ಖಾನೆಗಳಿಗೆ ₨7200 ಕೋಟಿ ನೆರವು ಘೋಷಿಸಿರುವ ಸರ್ಕಾರ, ರೈತರಿಗೆ ಬಡ್ಡಿ ರಹಿತ ಸಾಲ ನೀಡಬೇಕು.  ಕಬ್ಬಿನ ಬಾಕಿ ಹಣ ಕೊಡಿಸಬೇಕು. ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸಿ ನೀರಾವರಿ ಸೌಲಭ್ಯ ಕಲ್ಪಿಸಬೇಕು.

ಸಿದ್ರಾಮಪ್ಪ ರಂಜಣಗಿ, ಅರವಿಂದ ಕುಲಕರ್ಣಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT