ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಅಂತರಾಷ್ಟ್ರೀಯ ಕೊಳದಲ್ಲೇ ಈಜು!

Last Updated 17 ಸೆಪ್ಟೆಂಬರ್ 2011, 6:45 IST
ಅಕ್ಷರ ಗಾತ್ರ

ಬೀದರ್: ಈಗ ಬೀದರ್ ಜನರಿಗೂ ಅಂತರರಾಷ್ಟ್ರೀಯ ಮಟ್ಟದ ಕೊಳದಲ್ಲಿ ಈಜಾಡುವ ಸೌಭಾಗ್ಯ ಸಿಗಲಿದೆ.
ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ಬಾಲಭವನದಲ್ಲಿ ನಿರ್ಮಿಸಲಾಗಿರುವ ಅಂತರರಾಷ್ಟ್ರೀಯ ಮಟ್ಟದ ಈಜು ಕೊಳ ಶನಿವಾರ (ಸೆಪ್ಟೆಂಬರ್ 7) ವಿಧ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದ್ದು, ಈಜು ಪ್ರಿಯರು `ಎಂಜಾಯ್~ ಮಾಡಬಹುದಾಗಿದೆ.

ಬೆಳಿಗ್ಗೆ 11.15ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ ಈಜುಕೊಳವನ್ನು ಸಾರ್ವಜನಿಕರಿಗೆ ಸಮರ್ಪಿಸಲಿದ್ದಾರೆ.

ಈಜು ಕೊಳದ ಉದ್ಘಾಟನೆ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಜು ಕೊಳಕ್ಕೆ ಅಂತಿಮ ಸ್ಪರ್ಶ ನೀಡುವ ಕೆಲಸ ಶುಕ್ರವಾರ ಭರದಿಂದ ನಡೆಯಿತು.

ಒಲಂಪಿಕ್ ಮಾದರಿಯಲ್ಲಿ ನಿರ್ಮಿಸಲಾಗಿರುವ ಈಜುಕೊಳ 20 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರ ಪಕ್ಕದಲ್ಲಿಯೇ ಚಿಣ್ಣರಿಗಾಗಿ ಪುಟ್ಟ ಈಜುಕೊಳ ಕೂಡ ನಿರ್ಮಿಸಿರುವುದು ವಿಶೇಷ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸ್ನಾನಗೃಹದ ಸೌಲಭ್ಯ ಕಲ್ಪಿಸಲಾಗಿದ್ದು, ಈಜು ಉಡುಗೆ ಧರಿಸುವುದು ಕಡ್ಡಾಯವಾಗಿದೆ. 

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಡಿಯಲ್ಲಿ ನಿರ್ಮಿತಿ ಕೇಂದ್ರ ಈಜುಕೊಳವನ್ನು ನಿರ್ಮಿಸಿದೆ. ಈಜುಕೊಳದಲ್ಲಿ ಮೂರು ಮಂದಿ ಕೋಚ್ ಸೇರಿದಂತೆ ಅಗತ್ಯ ಸಿಬ್ಬಂದಿ ಇರಲಿದ್ದಾರೆ. ವ್ಯವಸ್ಥಾಪಕ, ಜೀವ ರಕ್ಷಕ ಸಿಬ್ಬಂದಿ, ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಕ ಮಾಡಲಾಗುತ್ತಿದೆ ಎಂದು ತಿಳಿಸುತ್ತಾರೆ ಅಧಿಕಾರಿಗಳು.

ಈಜುಕೊಳದ ನಿರ್ವಹಣೆಗೆ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿ ವೆಚ್ಚ ತಗಲುವ ಅಂದಾಜು ಮಾಡಲಾಗಿದೆ. ಸದಸ್ಯತ್ವ ಶುಲ್ಕ ನಿಗದಿಪಡಿಸಲಾಗಿದೆ. ನಗರದ ನೆಹರು ಕ್ರೀಡಾಂಗಣ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಡಿಯುಡಿಸಿಯಲ್ಲಿ ಸದಸ್ಯತ್ವ ಅರ್ಜಿ ಪಡೆಯಬಹುದಾಗಿದೆ ಎಂದು ಹೇಳುತ್ತಾರೆ.

ಸದಸ್ಯರು ಮಾತ್ರ ಈಜುಕೊಳವನ್ನು ಬಳಸಬಹುದಾಗಿದೆ. ಅಜೀವ ಸದಸ್ಯತ್ವಕ್ಕೆ ಒಂದು ಕುಟುಂಬದ ಇಬ್ಬರಿಗೆ ಒಂದು ಲಕ್ಷ ರೂಪಾಯಿ, 10 ವರ್ಷದ ಸದಸ್ಯತ್ವಕ್ಕೆ (ಒಬ್ಬರಿಗೆ) 25 ಸಾವಿರ ರೂಪಾಯಿ, ವಾರ್ಷಿಕ ಸದಸ್ಯತ್ವಕ್ಕೆ 6 ಸಾವಿರ ರೂಪಾಯಿ, ಹಾಗೂ 600 ರೂಪಾಯಿ ಮಾಸಿಕ ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿ ಗಂಟೆಗೆ 50 ರೂಪಾಯಿ ಹಾಗೂ ರಜಾ ದಿನಗಳಲ್ಲಿ ಪ್ರತಿ ಗಂಟೆಗೆ 75 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.

ಸದಸ್ಯರ ಸಂಖ್ಯೆ ಮಿತಿಗೊಳಿಸಲಾಗಿದ್ದು, ಅಜೀವ ಸದಸ್ಯತ್ವ 100 ಮಂದಿಗೆ, 10 ವರ್ಷದ ಸದಸ್ಯತ್ವ 150 ಮಂದಿಗೆ ಹಾಗೂ ವಾರ್ಷಿಕ ಸದಸ್ಯತ್ವ 200 ಮಂದಿಗೆ ನಿಗದಿಪಡಿಸಲಾಗಿದೆ. ಸದಸ್ಯರಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಅಜೀವ ಸದಸ್ಯತ್ವ ಹಾಗೂ 10 ವರ್ಷದ ಸದಸ್ಯತ್ವ ಹೊಂದಿರುವವರು ಮಾತ್ರ ಅವರ ಇಚ್ಚೆಯ ಅವಧಿಯಲ್ಲಿ ಈಜುಕೊಳ ಬಳಸಬಹುದು. ಉಳಿದವರಿಗೆ ಸ್ಥಳಾವಕಾಶ ಗಮನಿಸಿ ಈಜಲು ಅನುಮತಿ ನೀಡಲಾಗುತ್ತದೆ ಎಂದು ತಿಳಿಸುತ್ತಾರೆ.

ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ತಲಾ ಐದು ಅವಧಿಗಳನ್ನು ನಿಗದಿಪಡಿಸಲಾಗಿದೆ. ಬೆಳಿಗ್ಗೆ 5.30 ರಿಂದ 6.30 ರವರೆಗೆ, 6.30 ರಿಂದ 7.30 ರ ವರೆಗೆ, 7.30ರಿಂದ 8.30 ರವರೆಗೆ, 8.30 ರಿಂದ 9.30 ರವರೆಗೆ, 9.30 ರಿಂದ 10.30 ರವರೆಗೆ ಹಾಗೂ ಸಾಯಂಕಾಲ 4 ರಿಂದ 5 ರವರೆಗೆ, 5 ರಿಂದ 6 ರವರೆಗೆ, 6 ರಿಂದ 7 ರವರೆಗೆ, 7 ರಿಂದ 8 ರವರೆಗೆ, 8 ರಿಂದ 9 ರವರೆಗೆ ಸಮಯ ನಿಗದಿಪಡಿಸಲಾಗಿದೆ. ಮಹಿಳೆಯರಿಗೆ 4.30 ರಿಂದ 5.30ರ ವರೆಗಿನ ಅವಧಿ ನಿಗದಿ ಮಾಡಲಾಗಿದೆ ಎಂದು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT