ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ `ನಗರ ಆರೋಗ್ಯ ಅಭಿಯಾನ'

Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ: ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ಗ್ರಾಮೀಣ ಆರೋಗ್ಯ ಅಭಿಯಾನ ಕಾರ್ಯಕ್ರಮ ಜಾರಿಗೊಳಿಸಿರುವ ಕೇಂದ್ರ ಸರ್ಕಾರ, ಮುಂದಿನ ವರ್ಷದಿಂದ `ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ (ಎನ್‌ಯುಎಚ್‌ಎಂ) ಅನುಷ್ಠಾನಕ್ಕೆ ಯೋಜನೆ ರೂಪಿಸಿದೆ.

ಬಡವರು, ಗ್ರಾಮೀಣ ಪ್ರದೇಶದವರು ಹಾಗೂ ಮಧ್ಯಮ ವರ್ಗದವರಿಗೆ ಉತ್ತಮ ಹಾಗೂ ಉಚಿತ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ `ರಾಷ್ಟ್ರೀಯ ಆರೋಗ್ಯ ಅಭಿಯಾನ' ರೂಪಿಸಿದೆ. ಇದರ ಅಡಿ ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಕ್ರಮ ಜಾರಿಯಾಗಿದೆ. ತಾಯಿ ಮತ್ತು ಶಿಶು ಮರಣ ತಡೆಯುವ ನಿಟ್ಟಿನಲ್ಲಿ ಯೋಜನೆ ಅನುಷ್ಠಾನದಿಂದ ಸಾಕಷ್ಟು ಅನುಕೂಲವಾಗಿದೆ. ಅಲ್ಲಲ್ಲಿ ವಾರದ ಏಳೂ ದಿನಗಳಲ್ಲೂ ಕಾರ್ಯ ನಿರ್ವಹಿಸುವ ಆಸ್ಪತ್ರೆಗಳನ್ನು ಕೂಡ ಸ್ಥಾಪಿಸಲಾಗಿದೆ. ಈಗ ಇದೇ ಮಾದರಿಯಲ್ಲಿ ನಗರ ಪ್ರದೇಶಗಳಿಗೂ ಸೌಲಭ್ಯ ಕಲ್ಪಿಸಲು ಹಾಗೂ ಯೋಜನೆ ವಿಸ್ತರಿಸಲು ನಿರ್ಧರಿಸಲಾಗಿದೆ.

ಯೋಜನೆಯಡಿ, ನಗರ ಹಾಗೂ ಪಟ್ಟಣ ಪ್ರದೇಶದ ಪ್ರತಿ 50ರಿಂದ 60 ಸಾವಿರ ಜನಸಂಖ್ಯೆಗೆ ಒಂದರಂತೆ ನಗರ-ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ (ಯು-ಪಿಎಚ್‌ಸಿ), ದೊಡ್ಡ ನಗರಗಳಲ್ಲಿ ಐದರಿಂದ ಆರು ಯು-ಪಿಎಚ್‌ಸಿಗಳಿಗೆ ಒಂದು ನಗರ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸುವುದು, ಜನಸಂಖ್ಯೆಗೆ ತಕ್ಕಂತೆ ನರ್ಸಿಂಗ್ ಸಿಬ್ಬಂದಿಯನ್ನು ಒದಗಿಸುವುದು, 200ರಿಂದ 500 ಮನೆಗಳಿಗೆ ಒಬ್ಬರಂತೆ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿಕೊಳ್ಳಲಾಗುವುದು.

ಐದು ವರ್ಷಗಳ ಅವಧಿಯ ಈ ಯೋಜನೆಗೆ ಅಂದಾಜು  ರೂ22,507 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಇದರಲ್ಲಿ ಕೇಂದ್ರದ ಪಾಲು ರೂ16,955 ಕೋಟಿ. ಶೇ 25ರಷ್ಟು ಹಣವನ್ನು ರಾಜ್ಯ ಸರ್ಕಾರಗಳು ಭರಿಸಬೇಕಾಗುತ್ತದೆ ಎಂದು ಯೋಜನೆಯಲ್ಲಿ ಹೇಳಲಾಗಿದೆ.

ನಗರ ಪ್ರದೇಶದ ಬಡವರ ಆರೋಗ್ಯ ಸುಧಾರಣೆ ಯೋಜನೆಯ ಪ್ರಮುಖ ಧ್ಯೇಯವಾಗಿದ್ದು, ದೇಶದ 779 ನಗರ ಹಾಗೂ ಪಟ್ಟಣಗಳ ಒಟ್ಟು 7.75 ಕೋಟಿ ಜನರಿಗೆ ಅನುಕೂಲ ಕಲ್ಪಿಸಲು ಯೋಜಿಸಲಾಗಿದೆ ಎಂದು ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.

ನವಜಾತ ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡುವುದು, ನಗರ ಪ್ರದೇಶದ ಆರೋಗ್ಯ ಸೇವಾ ವ್ಯವಸ್ಥೆ ಬಲಪಡಿಸುವುದು, ನಗರ ಹಾಗೂ ಪಟ್ಟಣ ಪ್ರದೇಶಗಳ ಮಕ್ಕಳಲ್ಲಿ ಪೌಷ್ಟಿಕಾಂಶ ಪ್ರಮಾಣ ವೃದ್ಧಿಸುವುದು ಯೋಜನೆಯ ಮುಖ್ಯ ಧ್ಯೇಯವಾಗಿದೆ. ಪಟ್ಟಣ ಮತ್ತು ಸ್ಥಳೀಯ ಸಂಸ್ಥೆಗಳು ಯೋಜನೆಯ ಅನುಷ್ಠಾನದಲ್ಲಿ ಸಂಪೂರ್ಣ ಕೈಜೋಡಿಸಲಿವೆ.

ರಾಜ್ಯದ ಬೆಂಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಆಗಸ್ಟ್ 15ರಿಂದ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿತ್ತು. ಇದನ್ನು ಕೈಬಿಟ್ಟು ದೇಶದಾದ್ಯಂತ ನಗರ ಹಾಗೂ ಪಟ್ಟಣಗಳನ್ನು ಆಯ್ಕೆ ಮಾಡಿ 2013-14ನೇ ಸಾಲಿನಿಂದ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.

ಪ್ರಮುಖವಾಗಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿರುವ ಕೊಳೆಗೇರಿಗಳಲ್ಲಿ ವಾಸಿಸುವವರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು, ತಾಯಿ ಮತ್ತು ಶಿಶುಮರಣ ಪ್ರಮಾಣ ಇಳಿಕೆ ಮಾಡುವುದು. ಅಲ್ಲಲ್ಲಿ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುವ ಆಸ್ಪತ್ರೆಗಳನ್ನು ಸ್ಥಾಪಿಸುವುದು, ಕೊಳೆಗೇರಿಗಳಲ್ಲಿ ನಿರಂತರ ಆರೋಗ್ಯ ಶಿಕ್ಷಣ, ಅರಿವು ಕಾರ್ಯಕ್ರಮ ಕೈಗೊಳ್ಳುವುದು ಯೋಜನೆಯ ಉದ್ದೇಶವಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT