ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಬೇಡ ಆ ಮೂರು ದಿನ

Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

‘ಡಾಕ್ಟ್ರೇ ಮುಂದಿನ ವಾರವೇ ಮದುವೆ ನಿಶ್ಚಯವಾಯಿತು. ಮದುವೆ ದಿನವೇ ನನ್ನ ಮೆನ್ಸಸ್ ಡೇಟ್ ಇದೆ. ಇವತ್ತೇ ಮುಟ್ಟಾಗುವ ಹಾಗೆ ಏನಾದ್ರು ಮಾಡಿ ಪ್ಲೀಸ್. ಆಮೇಲೆ ತೊಂದರೆ ಆಗುತ್ತಲ್ವೇ ಮೇಡಂ. ಇನ್ನು ಮೂರು ದಿನದಲ್ಲಿ ಮಗುವಿಗೆ ಕೂದಲು ತೆಗೆಯಲು ಹೋಗುತ್ತೇವೆ. ಈಗಾಗಲೇ ಮುಟ್ಟಾಗಿ ಸ್ನಾನ ಆಗಬೇಕಿತ್ತು. ಅಲ್ಲಿ ಹೋದಾಗ ಆದರೆ ಏನು ಮಾಡಲಿ, ಹೋದ್ಸಾರಿ ನೀವು ಪೋಸ್ಟ್ ಪೋನ್ ಮಾತ್ರೆ ಕೊಟ್ಟರೂ ಆಗ್ಬಿಟ್ಟಿದ್ದೆ ಏನ್ ಮಾಡ್ಬೇಕೋ ಗೊತ್ತಾಗ್ತಾ ಇಲ್ಲ. ನಾಡಿದ್ದು ಮನೆಯಲ್ಲಿ ಪೂಜೆ ಹೋಮ ಎಲ್ಲಾ ಇಟ್ಕೊಂಡಿದ್ದೀವಿ, ೪ ದಿನದ ಹಿಂದೆಯೇ ಆಗಿ ಸ್ನಾನ ಆಗಬೇಕಿತ್ತು. ಫೋನಲ್ಲೇ ಮಾತ್ರೆ ಹೇಳ್ತೀರಾ?

ಡಾಕ್ಟ್ರೇ ೧೫ ದಿನ ಉತ್ತರ ಭಾರತ ಪ್ರವಾಸ ಹೊರಟಿದ್ದೇವೆ. ಅಲ್ಲಿ ದೇವಸ್ಥಾನಗಳಿಗೆ ಭೇಟಿ ಕೊಡಬೇಕಾಗಿದೆ. ಮರಳಿ ಬರುವ ವರೆಗೆ ಮುಟ್ಟಾಗದೇ ಇರಲು ಏನು ಮಾಡಲಿ ಡಾಕ್ಟ್ರೇ

ಹೀಗೆ ದೀಪಾವಳಿ, ಸಂಕ್ರಾಂತಿ, ನಾಮಕರಣ, ಮದುವೆ, ಮುಂಜಿ ಇತ್ಯಾದಿ ಕಾರಣಗಳಿಂದ ಸಹಜ ಋತು ಚಕ್ರವನ್ನು ಹಿಂದೆ ಮುಂದೆ ಮಾಡಿ ಎಂದು ವೈದ್ಯರ ಹತ್ತಿರ ಒತ್ತಡ ಹಾಕುವುದು ಸಾಮಾನ್ಯ ಸಂಗತಿ. ಅದು ಸರಿಯಾಗದಿದ್ದಾಗ ವೈದ್ಯರ ಮೇಲೆ ಗೂಬೆ ಕೂರಿಸುವುದು ಸಹಜ. ಸ್ವಯಂ ಮಾತ್ರೆ ನುಂಗುವುದು ಎಷ್ಟೋ ಜನರಿಗೆ ರೂಢಿಯಾಗಿಬಿಟ್ಟಿದೆ. ಏಕೆಂದರೆ ಸಂಪ್ರದಾಯಸ್ಥ ಸಾಮಾಜಿಕ ಕಟ್ಟುಪಾಡಿನಲ್ಲಿ ಎಷ್ಟೇ ವೈಜ್ಞಾನಿಕವಾದ ಚಿಂತನೆಯನ್ನು ರೂಢಿಸಿಕೊಂಡಿದ್ದರೂ ಹೆಚ್ಚಿನ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಪ್ರೀ ಅಥವಾ ಪೋಸ್ಟ್ ಪೋನ್ ಮಾತ್ರೆಗಳನ್ನು ಒಂದಲ್ಲಾ ಒಂದು ಸಂದರ್ಭಗಳಲ್ಲಿ ಬಳಸುತ್ತಾರೆ. ಸಂಪ್ರದಾಯ ಇರಬಹುದು ಅಥವಾ ಋತು ಚಕ್ರದ ಸಮಯದಲ್ಲಿ ಆಗುವ ಹೊಟ್ಟೆ ನೋವು, ಸೊಂಟ ನೋವು, ಕೈ ಕಾಲು ಸೆಳೆತ, ಪದೇ ಪದೇ ಪ್ಯಾಡ್ ಬದಲಿಸುವ ಕಿರಿ ಕಿರಿ ಎಲ್ಲವನ್ನೂ ಆ ಮೂರು ದಿನಗಳಲ್ಲಿ ಮಹಿಳೆ ಸಹಿಸಿಕೊಳ್ಳಬೇಕು ಎನ್ನುವುದಕ್ಕೋ ಹೆಚ್ಚಿನವರು ಮಾತ್ರೆಗಳ ಮೊರೆಹೋಗುತ್ತಾರೆ. ಆದರೆ ಹೆಚ್ಚಿನವರಿಗೆ ಮಾತ್ರೆಗಳ ಕಾರ್ಯವೈಖರಿಯ ಬಗ್ಗೆ ತಿಳಿದಿರುವುದಿಲ್ಲ. ಹೆಚ್ಚಿನವರು ಪೋಸ್ಟ್ ಪೋನ್ ಮಾತ್ರೆ ಕೊಟ್ಟುಬಿಡಿ ಎಂದು ಕೇಳಿದರೆ ಕೆಲವರು  ಪೋಸ್ಟ್ ಪೋನ್ ಮಾತ್ರೆ ಬೇಡ, ಪ್ರೀ ಪೋನ್ ಮಾತ್ರೆ ಕೊಟ್ಟುಬಿಡಿ ಡಾಕ್ಟ್ರೇ ಎಂದು ಕೇಳುತ್ತಾರೆ. ಎರಡು ಮಾತ್ರೆಗಳು ಒಂದೇ ತರಹದ್ದು. ಕೊಡುವ ಸಮಯದಲ್ಲಿ ವ್ಯತ್ಯಾಸವಷ್ಠೇ ಎಂದು ಅದರ ಕಾರ್ಯ ವೈಖರಿಯ ಬಗ್ಗೆ ಹೇಳುವುದೇ ವೈದ್ಯರಿಗೆ ಒಂದು ದೊಡ್ಡ ಸಾಹಸ ಮಾಡಿದಂತಾಗುತ್ತದೆ. ಈ ಮಾತ್ರೆಗಳು ಕೃತಕ ಹಾರ್ಮೋನುಗಳು ಅಷ್ಟೇ. ಅವುಗಳ ಕಾರ್ಯನಿರ್ವಹಣೆಯ ಬಗ್ಗೆ ಗೊತ್ತಾಗಬೇಕಾದರೆ ಸಹಜ ಋತುಚಕ್ರ ಹೇಗಾಗುವುದೆಂದು ಪ್ರತಿ ಮಹಿಳೆಯು ತಿಳಿದಿರಬೇಕಾದ ವಿಷಯವೇ.

ಋತು ಚಕ್ರ ಒಂದು ಸಂಕೀರ್ಣ ಕ್ರಿಯೆಯಾಗಿದ್ದು ಸಂಪೂರ್ಣವಾಗಿ ಹಾರ್ಮೋನುಗಳ ನಿಯಂತ್ರಣದಲ್ಲಿರುತ್ತದೆ. ೪ ದಿನಗಳ ಮುಟ್ಟಿನ ಸ್ರಾವದ ನಂತರ ಮೆದುಳಿನಲ್ಲಿರುವ ಹೈಪೋತಲಾಮಸ್‌ಗೆ ಈಸ್ಟ್ರೋಜನ್ ಹಾರ್ಮೋನುಗಳ ಮಟ್ಟ ಕಡಿಮೆಯಾಗುವ ಮಾಹಿತಿ ರವಾನೆಯಾಗಿ ಅದರಿಂದ ಉತ್ಪದನಾ ಹಾರ್ಮೋನುಗಳು ಪಿಟ್ಯುಟರಿ ಗ್ರಂಥಿಯನ್ನು ಪ್ರಚೋದಿಸಿ ತನ್ಮೂಲಕ ಅಂಡಾಶಯದಿಂದ ಅಂಡಾಣು ಉತ್ಪತ್ತಿಯಾಗುವಂತೆ ಪ್ರಚೋದಿಸು­ತ್ತವೆ. ಅಂಡಾಣು ಉತ್ಪಾದನೆ ಈಸ್ಟ್ರೋಜನ್ ಹೆಚ್ಚಳವನ್ನು ಮಾಡುತ್ತದೆ. ಮತ್ತು ನಂತರ ಪ್ರೊಜೆಸ್ಟ್ರಾನ್ ಹಾರ್ಮೋನು ಕೂಡ ಹೆಚ್ಚಾಗಿ ಈ ಎರಡು ಹಾರ್ಮೋನಿನ ಹೆಚ್ಚಳವನ್ನು ಹೈಪೋತಲಮಸ್ ಗುರುತಿಸಿ ಉತ್ಪಾದನಾ ಹಾರ್ಮೋನುಗಳನ್ನು ಬಿಡುಗಡೆ ಮಾಡುವುದಿಲ್ಲ. ಆದ್ದರಿಂದ ಹಾರ್ಮೋನುಗಳ ಮಟ್ಟ ಕಡಿಮೆಯಾಗುತ್ತದೆ. ಈ ಮಧ್ಯ ಗರ್ಭಕೋಶದಲ್ಲಿ ಒಳಪದರ ಬೆಳೆಯುತ್ತಿದ್ದು ಹಾರ್ಮೋನುಗಳ ಪ್ರಮಾಣ ಕಡಿಮೆಯಾದಾಗ ಒಳಪದರ ಕಳಚಿ ಅದೇ ಋತು ಸ್ರಾವ ಅಥವಾ ಮುಟ್ಟು ಕಾಣಿಸುವುದು ಎನಿಸಿಕೊಳ್ಳುತ್ತದೆ. ಅಕಸ್ಮಾತ್ ಈ ಋತು ಚಕ್ರದಲ್ಲಿ ಗಂಡು ಹೆಣ್ಣಿನ ಮಿಲನವಾಗಿ ಅಂಡಾಣು ವೀರ್ಯಾಣುಗಳು ಸೇರಿ ಫಲಿತವಾದರೆ ಗರ್ಭವನ್ನು ಪೋಷಿಸುವ ಹಾರ್ಮೋನುಗಳ ಮಟ್ಟ ಏರುತ್ತಾ ಹೋಗಿ ಮುಟ್ಟಾಗುವುದೇ ಇಲ್ಲ. ಇದು ಸಹಜ ಋತು ಚಕ್ರದ ಬಗ್ಗೆ ಪ್ರತಿಯೊಬ್ಬ ಮಹಿಳೆಯರು ತಿಳಿದಿರಬೇಕಾದ ಸತ್ಯ.

ಇನ್ನೂ ಈ ಪ್ರೀ ಪೋನ್, ಪೋಸ್ಟ್ ಪೋನ್‌ನಲ್ಲಿ ವೈದ್ಯರು ಕೃತಕವಾಗಿ ಈಸ್ಟ್ರೋಜನ್ ಅಥವಾ ಪ್ರೊಜೆಸ್ಟ್ರಾನ್ ಮಾತ್ರೆಗಳನ್ನು ಕೊಟ್ಟಾಗ ಹೈಪೋತಲಾಮಸ್ ಮುಟ್ಟಾಗದಂತೆ ತಡೆಯುತ್ತದೆ. ನಿಗದಿತ ಋತು ಚಕ್ರದ ೫ ದಿನಮೊದಲೇ ಮುಟ್ಟು ಮುಂದೂಡುವಿಕೆಯ ಮಾತ್ರೆಯನ್ನು ವೈದ್ಯರ ಸಲಹೆಯಮೇರೆಗೆ ಪ್ರಾರಂಭಿಸಬೇಕು. ಪ್ರೀ ಪೋನ್‌ನಲ್ಲಿಯೂ ಇದೇ ಮಾತ್ರೆಗಳನ್ನು ಮೊದಲೇ ೫ ದಿನ ಕೊಟ್ಟು ಮಾತ್ರೆಗಳನ್ನು ಬಿಟ್ಟ ಮೇಲೆ ಒಂದು ವಾರದ ನಂತರ ಋತುಚಕ್ರವಾಗುತ್ತದೆ. ಈ ಸಂಕೀರ್ಣ, ಸಹಜ ಪ್ರಕ್ರಿಯೆಯನ್ನು ಏಕಾ-ಏಕಿ ಹಿಂದೆ ಮುಂದೆ ಮಾಡಲು ವೈದ್ಯರಿಗೂ ಸಾದ್ಯವಾಗುವುದಿಲ್ಲ. ಅದು ವೈಜ್ಞಾನಿಕವಾಗಿ ಹಾರ್ಮೋನುಗಳ ಏರಿಳಿತ ಲೆಕ್ಕಾಚಾರ ಹಾಕಿಯೇ ಮಾಡಬೇಕು. ಮುಟ್ಟಾಗಲು ಕನಿಷ್ಠ ೪–-೫ ದಿನ ಇದ್ದಾಗಲೇ ಕೃತಕ ಹಾರ್ಮೋ­ನನ್ನು ಕೊಡುತ್ತಾ ಹೋದಾಗ ಹೈಪೋತಲಾಮಸ್‌ಗೆ ಈ ಮಾಹಿತಿ ತಿಳಿದು ಅದು ಋತುಚಕ್ರ ಬರದ ಹಾಗೆ ಮಾತ್ರೆ ತೆಗೆದುಕೊಳ್ಳುವವರೆಗೆ ಸಂದೇಶ ರವಾನಿಸುತ್ತದೆ. ಮಾತ್ರೆ ಬಿಟ್ಟ ಮೇಲೆ ಹಾರ್ಮೋನು ಮಟ್ಟ ಕಡಿಮೆಯಾಗಿ ಮೆದುಳಿನ ಸಂದೇಶ ನಿಂತುಹೋಗುತ್ತದೆ. ಋತುಚಕ್ರ ಆರಂಭವಾಗುತ್ತದೆ.

ಸಂತಾನ ನಿರೋಧಕ ಮಾತ್ರೆಗಳಲ್ಲೂ ಇದೇ ತತ್ವವನ್ನು ಅಳವಡಿಸಿಕೊಳ್ಳಲಾಗಿದೆ. ಇದು ಪ್ರತಿಯೊಬ್ಬ ಸ್ತ್ರೀಯು ತಿಳಿದಿರಬೇಕಾದ ವೈಜ್ಞಾನಿಕ ಸತ್ಯ.
ಮಹಿಳೆ ಎಷ್ಟೆ ವಿದ್ಯವಂತೆಯಾಗಿದ್ದರು ಋತುಚಕ್ರದ ಆ ಮೂರು ದಿನಗಳಲ್ಲಿ ಮಡಿ ಮೈಲಿಗೆಯಂಬ ಭಾವನೆಗಳು ಸಹಜ. ವೈಜ್ಞಾನಿಕ ಅಥವಾ ತಿಳಿದುಕೊಂಡ ೧) ಮೇಲೆ ಅತಿ ಅವಶ್ಯವಿದ್ದರೆ ಮಾತ್ರ ಈ  ಹಾರ್ಮೋನುಗಳ ಮಾತ್ರೆಗಳನ್ನು ತೆಗೆದುಕೊಳ್ಳಬಹುದು. ದಿನವೂ ನಿಗದಿತ ಸಮಯದಲ್ಲೆ ತೆಗೆದುಕೊಳ್ಳಿ. ಹೆಚ್ಚೆಂದರೆ ೨ ವಾರಗಳು ಮಾತ್ರ ತೆಗೆದುಕೊಳ್ಳಬಹುದು. ಆದರೆ ಅದನ್ನು 5 ದಿನಗಳ ಮೊಲದು ಆರಂಭಿಸಬೇಕು ಎನ್ನುವುದು ನೆನಪಿರಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT