ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಮಳೆ ಬಂದರೂ ಪ್ರಯೋಜನವಿಲ್ಲ

Last Updated 11 ಅಕ್ಟೋಬರ್ 2011, 5:15 IST
ಅಕ್ಷರ ಗಾತ್ರ

ಅರಸೀಕೆರೆ: `ಇನ್ನು ಮಳೆ ಬಂದ್ರೂ ಪ್ರಯೋಜನವಿಲ್ಲ ಸ್ವಾಮಿ. ಇನ್ನೇನಿದ್ರು ದನಕರು ಗಳಿಗೆ ಮೇವಿನ ಬೆಳೆ ಬೆಳೆದುಕೊಳ್ಳಬಹುದು. ನೋಡಿ ಬೆಳೆ ಒಣಗಿ ಹೋಗಿವೆ~

- ತಾಲ್ಲೂಕಿನ ರೈತರ ಅಸಹಾಯಕ ನುಡಿಗಳು ಇವು. ಅರಸೀಕೆರೆ ತಾಲ್ಲೂಕಿನ ಯಾವ ಗ್ರಾಮಕ್ಕೆ ಕಾಲಿಟ್ಟರೂ ರೈತರು ಇದೇ ರೀತಿಯ ಮಾತುಗಳನ್ನು ಹೇಳುತ್ತಾರೆ. ಹಾಕಿರುವ ಬೀಜ ಮರುಳಿ ಬಂದರೆ ಅದೃಷ್ಟ ಎನ್ನುವಂತಾಗಿದೆ ರೈತರ ಸ್ಥಿತಿ. ಕೃಷಿ ಚಟುವಟಿಕೆ ಇಲ್ಲದೆ ಯುವಕರು ಬೆಂಗಳೂರಿನತ್ತ ವಲಸೆ ಹೋಗುತ್ತಿದ್ದಾರೆ. ಅರಸೀಕೆರೆ ತಾಲ್ಲೂಕಿನ ಪ್ರಮುಖ ಖುಷ್ಕಿ ಬೆಳೆಯಾದ ರಾಗಿ ಮಳೆ ಅಭಾವದ ನಡುವೆ ಸಾಧಾರಣ ಮಟ್ಟದಲ್ಲಿದ್ದು, ಈ ಬಾರಿ ಫಸಲು ಕ್ಷೀಣಿಸುತ್ತಿದೆ.

ತಾಲ್ಲೂಕಿನಲ್ಲಿ ಈವರೆಗೆ ಉತ್ತಮ ಮಳೆ ಬಿದ್ದಿಲ್ಲ. ಬಿದ್ದ ಮಳೆಯೂ ತಾಲ್ಲೂಕಿನ ಎಲ್ಲೆಡೆಗೂ ಹಂಚಿಕೆಯಾಗಿಲ್ಲ. ಬರಗಾಲ ಪೀಡಿತ ಎಂಬ ಹಣೆಪಟ್ಟಿ ಕಟ್ಟಿ ಕೊಂಡಿರುವ ಕಣಕಟ್ಟೆ ಹೋಬಳಿಯಲ್ಲಿ ಈ ವರ್ಷ ತೀರಾ ನಿರಾಶದಾಯಕ ಪರಿಸ್ಥಿತಿ ಇದೆ. ಹೋಬಳಿಯ ಬೊಮ್ಮಸಂದ್ರ, ಮದ್ದರಹಳ್ಳಿ, ಕಡಲಮಗೆ ಶಂಕರನಹಳ್ಳಿ, ಮಾಡಾಳು, ಕಣಕಟ್ಟೆ, ದಿಬ್ಬೂರು ವ್ಯಾಪ್ತಿಯಲ್ಲಿ ಜೂನ್- ಜುಲೈನಲ್ಲಿ ಮಳೆ ಬೀಳದೆ ಹೊಲಗಳಲ್ಲಿ ಬಿತ್ತನೆ ಸಾಧ್ಯವಾಗಲಿಲ್ಲ.

ಕಳೆದ ಒಂದು ದಶಕದಿಂದ ಬರ ತಾಲ್ಲೂಕನ್ನು ಬೆನ್ನುಹತ್ತಿದಂತೆ ಕಾಡುತ್ತಿದೆ. ಮನೆ ಸೇರಿದಂತೆ ಎಲ್ಲವನ್ನೂ ಅಡ ಇಟ್ಟು ಬೇಸಾಯ ಮಾಡಿದ್ದಾಗಿದೆ. ಇನ್ನೂ ಏನು ಉಳಿದಿಲ್ಲ. ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಸಾಯುವಂಥ ಸ್ಥಿತಿ ನಿರ್ಮಾಣ ಗೊಂಡಿದೆ. ಬದುಕು ಸಾಗಿಸುವುದು ಕಷ್ಟವಾಗಿದೆ ಎನ್ನುತ್ತಾರೆ ಮಾಡಾಳು ಗ್ರಾಮದ ಹಿರಿಯ ರೈತ ಮರುಳಪ್ಪ. ಬೆಳೆ ವಿಮೆ ರೈತರಿಗೆ ಸಿಕ್ಕಿಲ್ಲ; ತಾಲ್ಲೂಕಿನಲ್ಲಿ ಬರ ಆವರಿಸಿದ್ದರೂ ಕಳೆದ ವರ್ಷದ ಬೆಳೆ ವಿಮೆಯ ಹಣವೇ ರೈತರನ್ನು ಇನ್ನು ತಲುಪಿಲ್ಲ. ಇದು ರೈತರ ಇನ್ನೊಂದು ಚಿಂತೆಯಾಗಿದೆ.
 

ಜಾವಗಲ್ ವರದಿ: ಶಾಶ್ವತ ಬರಗಾಲ ಹಣೆ ಪಟ್ಟಿ ಕಟ್ಟಿಕೊಂಡಿರುವ ಮುಗಿಲ ಮಳೆಯನ್ನೇ ಆಶ್ರಯಿಸಿರುವ ಜಾವಗಲ್ ಹೋಬಳಿಗೆ ಈ ಬಾರಿಯೂ ಮತ್ತೆ ಬರಗಾಲ ಆವರಿಸಿದೆ. ರಾಗಿ ಒಣಗುತ್ತಿದ್ದು ರೈತರು ತೀವ್ರ ಕಂಗಾಲಾಗಿದ್ದಾರೆ.

ಈ ಹೋಬಳಿಯ ಜನ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಮುಂಗಾರು- ಹಿಂಗಾರು ವೈಫಲ್ಯದಿಂದ ರೈತ ಸಮುದಾಯದ ಪಾಲಿಗೆ ಅಕ್ಷರಶಃ ಶಾಪವಾಗಿ ರೈತರ ನಿದ್ದೆಗೆಡಿಸಿದೆ. ಈ ಹೋಬಳಿ ಕೃಷಿ ಮಳೆಯಾಧಾರಿತವಾಗಿದೆ. ಮಳೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾದ ಕಾರಣ ಆಗಿರುವ ಬಿತ್ತನೆ ಕಾರ್ಯ ಸಂಪೂರ್ಣ ಕುಂಠಿತಗೊಂಡಿದೆ. ಶೇ .60ರಷ್ಟು ರೈತರು ಬಿತ್ತನೆ ಮಾಡಿ ಮಳೆ ಬಾರದೆ ಮಳೆಗಾಗಿ ಮುಗಿಲು ನೋಡುವಂತಾಗಿದೆ.

ಈ ಬಾರಿ ರೈತರ ಕನಸು ಚೂರಾಗಿದೆ. ಆರಂಭದಲ್ಲಿ ಬಂದ ಮಳೆಯಲ್ಲಿಯೇ ಭೂಮಿಯನ್ನು ಹದ ಮಾಡಿಕೊಂಡು ಬಿತ್ತನೆ ಕಾರ್ಯ ನಡೆದ ಜಾವಗಲ್ ಹೋಬಳಿ ಗಳಲ್ಲಿ ಈಗ ಮಳೆರಾಯ ಕಣ್ಮರೆಯಾದ್ದರಿಂದ ಬೆಳೆಗಳು ಒಣಗಲಾರಂಭಿಸಿವೆ. ಮಳೆ ಸುರಿಯುವ ಕಾಲದಲ್ಲಿ ಉಷ್ಣಾಂಶ ಹೆಚ್ಚಾಗಿ ಬೆಳೆಗೆ ಪೂರಕ ವಾತಾವರಣ ಇಲ್ಲದೆ ರೈತರನ್ನು ಕಂಗೆಡಿಸಿವೆ. ಕಳೆದ ವಾರ ಕೆಲವು ಗ್ರಾಮಗಳಲ್ಲಿ ಮಾತ್ರ ಮಳೆ ಬಿದ್ದಾಗ ರೈತರು ಹರ್ಷಿತರಾಗಿದ್ದರು.

ಮಳೆಯಿಲ್ಲದೆ ಗ್ರಾಮದವರು ಮುಂದಿನ ದಿನದಲ್ಲಿ ನಮ್ಮೂರಿಗೂ ಮಳೆ ಬರಬಹುದೆಂದು ಸಮಾಧಾನ ನಿಟ್ಟುಸಿರು ಬಿಟ್ಟಿದ್ದರು. ಮಳೆ ಬಿದ್ದ ಪ್ರದೇಶಗಳಲ್ಲಿ ಸ್ವಲ್ಪ ಚೇತರಿಸಿಕೊಂಡಿದ್ದ ಬೆಳೆ ಇದೀಗ ಮೊದಲಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬತ್ತಿ ಒಣಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ರೈತರು ತೀವ್ರ ಮಾನಸಿಕ ಅಘಾತದಿಂದ ತೊಳಲಬೇಕಾಗುತ್ತದೆ. ಈ ವೇಳೆಗೆ ಹೂವಾಗಿ ಕಾಳು ಕಟ್ಟ ಬೇಕಾಗಿದ್ದ ಸೂರ್ಯಕಾಂತಿ ಬೆಳೆ ಸಂಪೂರ್ಣ ಸೊರಗಿದೆ.

ಮೆಕ್ಕೆ ಜೋಳದ ಗರಿಗಳು ಒಣಗಿ ತರಗು ಉದುರುತ್ತಿವೆ ಹತ್ತಿ ಬೆಳೆ ಸಹ ಹೂವಾಗಿದ್ದು, ಕಾಯಿ ಕಟ್ಟಲು ಮಳೆಯ ಅಗತ್ಯವಿದೆ. ಉಷ್ಣಾಂಶದ ತೀವ್ರತೆಗೆ ಶುಂಠಿ ಬೆಳೆ ಬಿಳಿ ಬಣ್ಣಕ್ಕೆ ತಿರುಗಿ ಹಲವಾರು ರೋಗಗಳಿಗೆ ತುತ್ತಾಗಿವೆ. ಶುಂಠಿ ಬೆಳೆ ಉಳಿಸಲು ರೈತರು ತುಂತುರು ನೀರಾವರಿ ಅಳವಡಿಸಿದರೂ ವಿದ್ಯುತ್ ಅಭಾವದಿಂದ ಭೂಮಿ ತಂಪಾಗಿಸುವ ಕೆಲಸ ರೈತರಿಗೆ ಅಸಾಧ್ಯವಾಗುತ್ತಿದೆ. ಮಳೆ ಸುರಿಯದೇ ಇರುವುದರಿಂದ ಕೃಷಿಕರು ಆತ್ಮ ಸ್ಥೈರ್ಯ ಕಳೆದುಕೊಂಡಿದ್ದಾರೆ.

ಬಾಣಾವರ ವರದಿ: ಬಯಲು ಸೀಮೆ ಬಾಣಾವರ ಹೋಬಳಿಯಲ್ಲಿ ಈ ವರ್ಷ ಮುಂಗಾರು ಮತ್ತು ಹಿಂಗಾರು ಎರಡೂ ಕೈ ಕೊಟ್ಟಿದ್ದು, ಬಿತ್ತಿದ ಬೆಳೆಗಳು ಒಣಗಿ ರೈತ ಪರಿತಪಿಸುತ್ತಿದ್ದಾನೆ. ಹಿಂಗಾರು ಮತ್ತು ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ಹೋಬಳಿಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಏನೂ ಬಿತ್ತನೇ ಮಾಡದೇ ಹಾಗೇ ಬಿಡಲಾಗಿದೆ. ಬೀಜ ಬಿತ್ತನೆ ಮಾಡಿದ ಕೆಲವು ಕಡೆ ಬೆಳೆ ನೆಲ ಕಚ್ಚಿದೆ. ಪೂರ್ಣ ಮಳೆ ಆಶ್ರಿತ ಬಾಣಾ ವರ ಹೋಬಳಿಯ ರೈತ ಮಾತ್ರ ಮಳೆಯ ಮುಖ ನೋಡದೆ ಚಿಂತಾಕ್ರಾಂತನಾಗಿದ್ದಾನೆ.

ಹೋಬಳಿಯಲ್ಲಿ 90 ಕಂದಾಯ ಗ್ರಾಮಗಳಿದ್ದು, 65 ರಿಂದ 70 ಸಾವಿರ ಎಕರೆ ಕೃಷಿ ಭೂಮಿ ಇದೆ. ಏಪ್ರಿಲ್-ಮೇ ನಲ್ಲಿ ಮುಂಗಾರು ಆರಂಭದಲ್ಲಿ ಸುರಿದ ವರ್ಷಧಾರೆಯಿಂದ ಉತ್ಸಾಹಗೊಂಡ ರೈತರು ಖುಷಿಯಿಂದಲೇ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದರು. ಆದರೆ ನಂತರ ಸರಿಯಾದ ಮಳೆಯೇ ಬಂದಿಲ್ಲ. ವರುಣನ ಅವಕೃಪೆ ಈ ಬಾರಿ ಕೃಷಿಕರಲ್ಲಿ ಬಾರಿ ನಿರಾಶೆ ಮೂಡಿಸಿದೆ. ವಾಣಿಜ್ಯ ಬೆಳೆಗಳಾದ ಸೂರ್ಯಕಾಂತಿ, ತೊಗರಿ, ಜೋಳ, ಎಳ್ಳು... ಕೈಗೆ ಸಿಗದೇ ನೊಂದಿದ್ದ ರೈತ ಕೊನೆ ಪಕ್ಷ ಹಿಂಗಾರಿನಲ್ಲಿ ರಾಗಿಯನ್ನಾದರೂ ಬೆಳೆದುಕೊಳ್ಳುವ ಉತ್ಸಾಹ ದಲ್ಲಿದ್ದ. ಹಿಂಗಾರು ಮಳೆಯೂ ಕೈ ಕೊಟ್ಟಿದ್ದು ರೈತನ ಆಸೆಗೆ ತಣ್ಣಿರೆರಚಿದಂತಾಗಿದೆ.
ಮುಂಗಾರು ಆರಂಭದಲ್ಲಿ ಒಮ್ಮೆ ಬಂದ ಮಳೆ ಮತ್ತೆ ಇತ್ತ ಮುಖ ಮಾಡದೇ ಬಿತ್ತಿದ್ದ ಸೂರ್ಯಕಾಂತಿ, ಎಳ್ಳು, ಜೋಳ, ತೊಗರಿ ಬೆಳೆಗಳು ಒಣಗಿವೆ. ಸಾಲ- ಸೋಲ ಮಾಡಿ, ಮನೆಯಲ್ಲಿದ್ದ ಚೂರು ಪಾರು ಚಿನ್ನ ಅಡವಿಟ್ಟುತಂದ ಹಣದಲ್ಲಿ  ಬಿತ್ತನೆ ಬೀಜ ಗೊಬ್ಬರ ತಂದು ಹುತ್ತಿ- ಬಿತ್ತಿ ಬೆಳೆಗಳನ್ನೇ ನೆಚ್ಚಿಕೊಂಡಿದ್ದ ರೈತರು ಇತ್ತ ಬೆಳೆ ಇಲ್ಲದೇ ಅತ್ತ ಸಾಲದಿಂದ ಮುಕ್ತಿ ದೊರೆಯದೇ ತ್ರಿಶಂಕು ಸ್ಥಿತಿ ನಮ್ಮದಾಗಿದೆ ಎಂದು ಇಲ್ಲಿನ ರೈತರು ಅವಲತ್ತುಕೊಳ್ಳುತ್ತಾರೆ.

ಕಳೆದ ಒಂದು ದಶಕದಿಂದ ಸರಿಯಾಗಿ ುಳೆ ಬಾರದೆ ರೈತರನ್ನು ಬರದ ಬೇಗೆಗೆ ನೂಕಿದೆ. ಬರದ ಛಾಯೆಯಲ್ಲೇ ಬದುಕುತ್ತಿರುವ ಇಲ್ಲಿನ ಅನ್ನದಾತರಿಗೆ ಈ ವರ್ಷವೂ ಬರದ ಭೀತಿ ಆವರಿಸಿದೆ. ಅಂತರ್ಜಲದ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲೂ ನೀರು ಕಡಿಮೆಯಾಗಿದೆ. ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿನ ರೈತರು ಅತಿ ಹೆಚ್ಚಿನ ಸಂಕಷ್ಟ ಪರಿಸ್ಥಿತಿಗೆ ಸಿಲುಕಿದ್ದಾರೆ. ಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕಾದ ಅಗತ್ಯವಿದೆ.

-ಮಾಡಾಳು ಶಿವಲಿಂಗಪ್ಪ. (ಅರಸೀಕೆರೆ), -ಜಾವಗಲ್ ವಸಂತ ಕುಮಾರ, -ಪ್ರಸನ್ನಕುಮಾರ್‌ಸುರೆ (ಬಾಣಾವರ)

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT