ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿ ಜಯಿಸಿದ ರೆಹಾನ್

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ತನ್ನ ಏಳನೇ ವಯಸ್ಸಿನಲ್ಲೇ ಅಸ್ತಮಾದಿಂದ ಬಳಲುವ ಹುಡುಗನೊಬ್ಬನಿಗೆ ವೈದ್ಯರು ಸೂಚಿಸಿದ ಈಜಿನ ಚಿಕಿತ್ಸೆಯೇ ಮುಂದೆ ಆ ಹುಡುಗ ವಿಶ್ವವಿಖ್ಯಾತನಾಗಲು ಸಹಕಾರಿಯಾಯಿತು ಎಂದರೆ ನಮಗೆ ಆಶ್ಚರ್ಯವಾಗುವುದೇನೋ ನಿಜ. ಆದರೆ ಸ್ವತಃ ರೆಹಾನ್ ಪೂಂಚಾಗೆ ಈ ವಿಷಯ ಆಶ್ಚರ್ಯವೆನಿಸಿದೆಯಂತೆ. ಆದರೂ ಈಜಿನ ಮೇಲಿನ ಪ್ರೀತಿ, ಶ್ರದ್ಧೆ ಹಾಗೂ ಪೋಷಕರ ಪ್ರೋತ್ಸಾಹ ಈತನ ಆಶ್ಚರ್ಯಕ್ಕೆ ಕಾರಣವಾಗಿರುವುದಂತೂ ನಿಜ. ಒಲಿಂಪಿಯನ್ ಆಗಿರುವ ರೆಹಾನ್, ಕಾಮನ್‌ವೆಲ್ತ್, ಏಷ್ಯಾ ಕ್ರಿಡಾ ಕೂಟದಲ್ಲಿ ಗಮನಾರ್ಹ ಸಾಧನೆಗೈದವರು. ಬೀಜಿಂಗ್ ಒಲಿಂಪಿಕ್‌ನಲ್ಲಿ ಪಾಲ್ಗೊಂಡು ಭರವಸೆ ಮೂಡಿಸಿದ್ದ ಈತ ಈಗ ಲಂಡನ್ ಒಲಿಂಪಿಕ್ ಕನಸು ಕಾಣುತ್ತಿದ್ದಾರೆ. ಈಜಿನಲ್ಲಿನ ಈತನ ಸಾಧನೆಯಿಂದಲೇ ಕ್ರೀಡಾ ಉಡುಪುಗಳನ್ನು ಸಿದ್ಧಪಡಿಸುವ `ಪೂಮಾ~ ಕಂಪೆನಿ ಈತನನ್ನು ತನ್ನ ರಾಯಭಾರಿಯನ್ನಾಗಿ ನೇಮಿಸಿಕೊಂಡಿದೆ. ಇದರ ಅನ್ವಯ ನಡೆದ ಕಾರ್ಯಕ್ರಮದಲ್ಲಿ ರೆಹಾನ್ ತಮ್ಮ ಕೆಲವು ಅನಿಸಿಕೆಗಳನ್ನು `ಮೆಟ್ರೊ~ದೊಂದಿಗೆ ಹಂಚಿಕೊಂಡರು.

ಮುಂಬೈ ಮೂಲದ ರೆಹಾನ್ ಪೂಂಚಾ ಅವರ ತಂದೆ ರೇಸಿನ ಕುದುರೆಗಳಿಗೆ ಆಹಾರ ಪೂರೈಸುವ ವ್ಯಾಪಾರಿ. ತಾಯಿ ಗೃಹಿಣಿ. ಅಸ್ತಮಾಕ್ಕೆ ಪಡೆದ ಈಜಿನ ಚಿಕಿತ್ಸೆಯಿಂದಾಗಿ ಈಜಿನತ್ತ ತೀರ್ವವಾಗಿ ಆಸಕ್ತಿ ಹೊಂದಿದ ರೆಹಾನ್ ಅದಾಗಾಗಲೇ ಮುಂಬೈನಲ್ಲಿ ಈಜು ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿಗಳಿಸಿದ್ದರು. ಶಿಷ್ಯನ ಸಾಧನೆ ಹಾಗೂ ಈತನಿಗಿರುವ ಈಜಿನ ಮೇಲಿನ ಪ್ರೀತಿಯನ್ನು ಬಹುವಾಗಿ ಮೆಚ್ಚಿದ ರೆಹಾನ್‌ನ ಮೊದಲ ಗುರು ಈತನನ್ನು ಹೆಚ್ಚಿನ ತರಬೇತಿಗೆ ಬೆಂಗಳೂರಿಗೆ ಹೋಗುವಂತೆ ಸೂಚಿಸಿದರು. ಮಗನ ಆಕಾಂಕ್ಷೆಯನ್ನು ಮನಗಂಡ ಪೋಷಕರು ರೆಹಾನ್‌ನನ್ನು ಕರೆದುಕೊಂಡು ಹನ್ನೊಂದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದರು. ಮುಂಬೈನಿಂದ ಬೆಂಗಳೂರಿಗೆ ಮಾರುತಿ 800 ಕಾರಿನಲ್ಲಿ ಬಂದಿದ್ದು ರೆಹಾನ್ ಇನ್ನೂ ಮರೆತಿಲ್ಲ. ಆ ಕ್ಷಣ ಹಾಗೂ ಪೋಷಕರ ಪ್ರೋತ್ಸಾಹ ರೆಹಾನ್ ಸದಾ ನೆನಪಿಸಿಕೊಳ್ಳುವ ಕ್ಷಣವಂತೆ.

ಬೆಂಗಳೂರು ಹಾಗೂ ನಿಮ್ಮ ನಡುವಿನ ಸಂಬಂಧವೇನು?

ಇಂದಿನ ನನ್ನ ಈ ಸಾಧನೆಗೆ ಮೂಲ ಕಾರಣ ಬೆಂಗಳೂರು ಎಂದರೆ ಅತಿಶಯೋಕ್ತಿಯಾಗಲಾರದು. ಬಸವನಗುಡಿ ಆಕ್ವೆಟಿಕ್ ಸೆಂಟರ್ ಮೂಲಕ ಬೆಂಗಳೂರಿನೊಂದಿಗೆ ನನ್ನ ಸಂಪರ್ಕ ಬೆಸೆಯಿತು. ಭಾರತದಲ್ಲಿ ಎಲ್ಲಿಯಾದರೂ ಶ್ರೇಷ್ಠ ಗುಣಮಟ್ಟದ ಈಜು ತರಬೇತಿ ಸಿಗುವ ಕೇಂದ್ರವೆಂದರೆ ಅದು ಬೆಂಗಳೂರು ಮಾತ್ರ. ಹೀಗಾಗಿ ನಾನು ಮುಂಬೈನಿಂದ ಬೆಂಗಳೂರಿಗೆ ಬರುವ ಸಂಕಲ್ಪ ಮಾಡಿದೆ. ಇದನ್ನು ನನ್ನ ಪೋಷಕರು ಪುರಸ್ಕರಿಸಿದ್ದು ಮಾತ್ರ ನನ್ನ ಅದೃಷ್ಟವೇ ಸರಿ. ಇಲ್ಲಿಗೆ ಬಂದ ನಂತರ ತರಬೇತುದಾರ ಪ್ರವೀಣ್ ಕುಮಾರ್ ಅವರ ತರಬೇತಿಯಿಂದಲೇ ನಾನು ಅಂತರರಾಷ್ಟ್ರೀಯಮಟ್ಟದಲ್ಲಿ ನನ್ನನ್ನು ನಾನು ಗುರುತಿಸಿಕೊಳ್ಳಲು ಸಾಧ್ಯವಾಗಿದೆ.

ಈಜು ಸ್ಪರ್ಧೆಯಲ್ಲಿ ಸದ್ಯ ಭಾರತದ ಸಾಧನೆ?

ಈ ಹಿಂದಿಗಿಂತಲೂ ಭಾರತದ ಈಜುಗಾರರು ಸಾಕಷ್ಟು ನುರಿತಿದ್ದಾರೆ. ವಿಶ್ವ ರ‌್ಯಾಂಕಿಂಗ್ ಪಟ್ಟಿಯಲ್ಲೂ ಭಾರತೀಯರ ಹೆಸರು ದಾಖಲಾಗುತ್ತಿವೆ. ಆದರೆ ಕೆಲವು ಪ್ರಶಸ್ತಿ ಗಳಿಸಿದ ನಂತ ಕೆಲ ಈಜು ಸ್ಪರ್ಧಿಗಳು ನೌಕರಿಗಾಗಿ ಈಜಿಗೆ ವಿದಾಯ ಹೇಳುತ್ತಾರೆ. ಇದಕ್ಕೆ ತರಬೇತಿಗೆ ತಗಲುವ ಅತಿಯಾದ ಖರ್ಚೂ ಕಾರಣವಿರಬಹುದು. ಇದರಿಂದ ಹೆಚ್ಚು ಸಾಧನೆ ಮಾಡಿದ ಹಲವರನ್ನು ನಾವು ಹೆಚ್ಚು ಕಾಲ ನೆನಪಿನಲ್ಲಿ ಇಡಲು ಸಾಧ್ಯವಾಗುತ್ತಿಲ್ಲ.

ಈಜು ದುಬಾರಿಯೇ?

ಹೌದು, ಈಜು ಬಲು ದುಬಾರಿ ಕ್ರೀಡೆ. ಕಾಮನ್‌ವೆಲ್ತ್ ಕ್ರೀಡೆಗಾಗಿ ನಾನು ಆರು ತಿಂಗಳ ಕಾಲ ಎಲ್ಲೆಯಲ್ಲಿ ತರಬೇತಿ ಪಡೆದೆ. ಇದಕ್ಕೆ ಸರ್ಕಾರ ಎರಡು ತಿಂಗಳ ನೆರವು ನೀಡಿತು. ಆದರೆ ಉಳಿದ ನಾಲ್ಕು ತಿಂಗಳ ಖರ್ಚನ್ನು ನಾನೇ ಭರಿಸಬೇಕಾಯಿತು. ನನಗೆ ಪೋಷಕರ ಬೆಂಬಲವಿತ್ತು. ಆದರೆ ಎಷ್ಟು ಜನ ಈಜುಪಟುಗಳಿಗೆ ದುಬಾರಿ ಬೆಲೆಯ ತರಬೇತಿ ಪಡೆಯಲು ಸಾಧ್ಯ?

ಕ್ರೀಡಾ ವಸ್ತ್ರ ತಯಾರಕ ಕಂಪೆನಿಯೊಂದಿಗಿನ ಒಪ್ಪಂದ ನಿಮ್ಮ ಈಜಿಗೆ ಎಷ್ಟು ಸಹಕಾರಿ?

ಈಜುಕೊಳದಲ್ಲಿ ಹೆಚ್ಚಿನ ವಸ್ತ್ರಗಳ ಅಗತ್ಯವಿಲ್ಲ. ಆದರೆ ನಾನು ಈಜುಕೊಳದಿಂದ ಹೊರಬಂದಾಗ ನನ್ನ ಸ್ಟೈಲ್‌ಗೆ ಈ ಕಂಪೆನಿ ಸಹಕಾರಿಯಾಗಲಿದೆ. ಏಕೆಂದರೆ ನಾಲ್ಕು ವರ್ಷಗಳ ಹಿಂದೆ ನಾನು ಮುಂದೆ ಹೀಗಾಗುತ್ತೇನೆಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ನನ್ನ ಈ ಸಾಧನೆಯೇ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಈ ಒಪ್ಪಂದದಿಂದ ನನಗೂ ಹಾಗೂ ಒಪ್ಪಂದ ಮಾಡಿಕೊಂಡಿರುವ ಕಂಪೆನಿಗೂ ಸಮನಾಗಿ ಲಾಭವಾಗಲಿದೆ ಎನ್ನುವುದು ನನ್ನ ನಂಬಿಕೆ.

ಅದೃಷ್ಟದಲ್ಲಿ ನಿಮಗೆ ನಂಬಿಕೆ ಇದೆಯೇ?

ಖಂಡಿತಾ ಇದೆ. ದೇವರು, ಅದೃಷ್ಟ ಹಾಗೂ ಪ್ರೀತಿಯಲ್ಲಿ ನನಗೆ ಅಪಾರ ನಂಬಿಕೆ. ಆದರೆ ಪರಿಶ್ರಮವಿಲ್ಲದೆ ಅದೃಷ್ಟವನ್ನು ನಂಬುವುದು ಅಸಾಧ್ಯ.

ಭವಿಷ್ಯದಲ್ಲಿ ನಿಮ್ಮ ಯೋಜನೆಗಳೇನು?

ಭವಿಷ್ಯ ಎಂದರೆ ನನಗೆ ಭಯ. ನಾನು ಕನಸಿನಲ್ಲೂ ನಾಳೆಯನ್ನು ಕಲ್ಪಿಸಿಕೊಳ್ಳುವುದಿಲ್ಲ. ಇಂದಿಗೆ ಏನು ಬೇಕೋ ಅದನ್ನಷ್ಟೇ ನಾನು ಯೋಚಿಸುತ್ತೇನೆ. ನಾಳೆಯದನ್ನು ನಾಳೆಗೇ ಬಿಡುತ್ತೇನೆ. ಸದ್ಯ ಲಂಡನ್ ಒಲಿಂಪಿಕ್‌ಗೆ ಪ್ರವೇಶ ಪಡೆದು ಅಲ್ಲಿ ಉತ್ತಮ ಸಾಧನೆ ಮಾಡುವುದು ನನ್ನ ಮುಂದಿರುವ ಯೋಜನೆ.

ಬೆಂಗಳೂರಿನಲ್ಲಿ ಇಷ್ಟಪಡುವ ಜಾಗ?

ವಾರಾಂತ್ಯದ ಮೋಜು, ಪಾರ್ಟಿ-ಕ್ಲಬ್‌ನಲ್ಲಿ ಕಾಲಕಳೆಯುವುದೆಂದರೆ ನನಗೆ ಆಗದು. ಆದರೆ ಆಹಾರವನ್ನು ಹೆಚ್ಚಾಗಿ ಇಷ್ಟಪಡುತ್ತೇನೆ. ಅದರಲ್ಲೂ ಸಮುದ್ರ ಖಾದ್ಯಗಳೆಂದರೆ ಪಂಚಪ್ರಾಣ. ಹೀಗಾಗಿ ಎಂ.ಜಿ.ರಸ್ತೆಯಲ್ಲಿರುವ ಕುಡ್ಲ ನನ್ನ ನೆಚ್ಚಿನ ರೆಸ್ಟೋರೆಂಟ್. ಇನ್ನು ರಿಲಾಕ್ಸ್ ಮಾಡಿಕೊಳ್ಳಲು ಡ್ರೈವ್ ಮಾಡುತ್ತೇನೆ. ಕಾರನ್ನು ಓಡಿಸುವುದರಿಂದ ನನಗೆ ಮಾನಸಿಕ ನೆಮ್ಮದಿ ಸಿಗುತ್ತದೆ. ಹೀಗಾಗಿ ಬೆಂಗಳೂರು ಸುತ್ತಮುತ್ತ ಕಾರು ಚಲಿಸುವ ಮೂಲಕ ಮನಸ್ಸು ಹಗುರ ಮಾಡಿಕೊಳ್ಳುತ್ತೇನೆ.

ಹೀಗೆ ತಮ್ಮ ಪೂರ್ವಾಪರ, ಸಾಧನೆ ಹಾಗೂ ಯೋಜನೆ ಕುರಿತು ಮುಕ್ತವಾಗಿ ಹರಟಿದ ರೆಹಾನ್ ಪೂಂಚ ಸದ್ಯ ಜೈನ್ ಕಾಲೇಜಿನಲ್ಲಿ ಎಂ.ಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. 25 ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಈತ ಅರ್ಜುನ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಮುಂಬೈನಿಂದ ಬೆಂಗಳೂರಿಗೆ ಬಂದು ಈಗ ಲಂಡನ್ ಒಲಿಂಪಿಕ್‌ಗೆ ಅಭ್ಯಾಸ ನಡೆಸುತ್ತಿರುವ ರೆಹಾನ್ ಈಗ ನಮ್ಮೂರ ಹುಡುಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT