ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪ್ಟಿಗರ ಕಿಡಿ ನಮ್ಮೊಳಗೂ ಇದೆಯೇ...?

Last Updated 10 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಇತ್ತೀಚಿನ ವರ್ಷಗಳಲ್ಲಿ ಕೇಳಿ ಬರುತ್ತಿರುವ ಸುದ್ದಿಗಳೆಂದರೆ, ಪಕ್ಷಗಳ ಪರಸ್ಪರ ದೋಷಾರೋಪ, ಪಕ್ಷ ಪಕ್ಷಗಳ ಕಾಲೆಳೆಯುವ ಸ್ಪರ್ಧೆ, ಭ್ರಷ್ಟಾಚಾರದ ವಿಶ್ವರೂಪ ದರ್ಶನ, ಶಾಸನಸಭೆಗಳಲ್ಲಿ ಗರಡಿಯಾಟ, ವೈಯಕ್ತಿಕ ನಿಂದನೆ, ರಾಜೀನಾಮೆಗೆ ಒತ್ತಾಯಿಸುವ ವಿನೋದ, ಅಲ್ಲೊಂದು ಇಲ್ಲೊಂದು ಮಾನನಷ್ಟ ಮೊಕದ್ದಮೆಯ ಜೋಕು..! ಇದು ಎಲ್ಲಾ ದೇಶಗಳ ಹಣೆಬರಹವೇನೋ ಎಂದುಕೊಳ್ಳುತ್ತಿರುವಾಗಲೇ...

ಮುಂಜಾನೆ ಪತ್ರಿಕೆಯ ಮುಖಪುಟಗಳಲ್ಲಿ ಕಂಡ ವಿದೇಶಿ ಸುದ್ದಿಯೊಂದು ಕತ್ತಲಿನ ನಡುವೆ ಕೋಲ್ಮಿಂಚಿನಂತೆ ರೋಮಾಂಚನ ಮೂಡಿಸಿತು. ನಾವೆಲ್ಲ ನಮ್ಮ ನಾಡಿನ ಎಂಥದೇ ರಾಜಕೀಯ ವಿಪ್ಲವಗಳಿಂದ ವಿಚಲಿತರಾಗದೆ ಬದುಕುತ್ತಿರುವಾಗ ಈಜಿಪ್ಟ್‌ನಲ್ಲಿ ಭ್ರಷ್ಟ ಆಡಳಿತದ ವಿರುದ್ಧ ಹತ್ತು ಲಕ್ಷಕ್ಕೂ ಹೆಚ್ಚು ನಾಗರಿಕರು ಏಕಕಾಲದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಿರುವ ಸುದ್ದಿ ಅದು. ಜೊತೆಗೆ ಆ ದೇಶದ ಸೇನಾಪಡೆಯು ‘ಜನರ ಹೋರಾಟ ನ್ಯಾಯಯುತವಾಗಿದೆ. ನಮ್ಮ ಸೈನ್ಯ ಈ ಹೋರಾಟವನ್ನು ಹತ್ತಿಕ್ಕುವುದಿಲ್ಲ. ಜನರ ಮೇಲೆ ಗುಂಡು ಹಾರಿಸುವುದಿಲ್ಲ. ಶಾಂತಿಯುತ ಪ್ರತಿಭಟನೆ ಮಾಡುವವರ ಮೇಲೆ ಯಾವುದೇ ಕಾರಣಕ್ಕೂ ಬಲ ಪ್ರಯೋಗ ಮಾಡುವುದಿಲ್ಲ’ ಎಂದು ಪರೋಕ್ಷ ಬೆಂಬಲ ಘೋಷಿಸಿರುವುದು. ಅಲ್ಲದೆ, ಸೇನಾ ಪಡೆಯವರೇ ಮುಂದೆ ನಿಂತು ರ್ಯಾಲಿಯಲ್ಲಿ ಭಾಗವಹಿಸುವ ನಾಗರಿಕರ ಗುರುತು ಪತ್ರ ಪರಿಶೀಲಿಸಿ ಪ್ರತಿಭಟನೆಯ ಸ್ಥಳಕ್ಕೆ ಪ್ರವೇಶ ನೀಡುತ್ತಿರುವುದು.

ಯಾವುದೇ ದೇಶದ ಪ್ರಜ್ಞಾವಂತ ನಾಗರಿಕನ ಜಡ್ಡುಗಟ್ಟಿದ ಮನಸ್ಸುಗಳಲ್ಲಿ ವಿದ್ಯುತ್ ಸಂಚಾರವಾಗಲು ಇಂತಹ ಒಂದು ಸುದ್ದಿ ಸಾಕು!
ಪ್ರಜಾತಂತ್ರ ವ್ಯವಸ್ಥೆಯಲ್ಲಿದ್ದರೂ ನಾವು ಎಲ್ಲವನ್ನೂ ಸಹಿಸಿಕೊಂಡು ಗೊಣಗುತ್ತಿದ್ದೇವೆ. ಇಂತಹ ಹಲವಾರು ದುಃಸ್ಥಿತಿಗಳನ್ನು ಕಣ್ಣಾರೆ ಕಂಡರೂ ನೆಮ್ಮದಿ ಕೆಡಿಸಿಕೊಳ್ಳದೆ, ನಿರ್ಲಿಪ್ತರಾಗಿ ಬದುಕು ಸಾಗಿಸುತ್ತಿರುವವರು ನಾವು! ‘ಪ್ರಜಾಪ್ರಭುತ್ವದ ಒಡೆಯರು, ಮತದಾರ ಪ್ರಭುಗಳು’ ಅಂತ ಯಾರೋ ಹತ್ತಿಸಿದ ಪುಕ್ಕಟ್ಟೆ ರೈಲು ಹತ್ತಿ ವಿಹರಿಸುತ್ತಿರುವವರು. ಇಂತಹ ಯಾವುದೇ ರಾಜಕೀಯ ಸಂದಿಗ್ಧ ಪರಿಸ್ಥಿತಿಯ ದುಷ್ಪರಿಣಾಮ ನಾಡಿನ ಪ್ರತಿಯೊಬ್ಬ ಪ್ರಜೆಯ ಮೇಲೂ ಪರೋಕ್ಷವಾಗಿಯಾದರೂ ಆಗುತ್ತದೆಂಬ ಅರಿವು, ಆತಂಕಗಳಿಲ್ಲದೆ ನಾವೆಲ್ಲ ಇಂದು ನಾಗರಿಕ ಸಮಾಜ ಎಂಬ ಸೋಗಿನಲ್ಲಿ ನಿಶ್ಚಿಂತವಾಗಿ ಬದುಕುತ್ತಿದ್ದೇವೆ!

ರಾಜಕೀಯಕ್ಕೂ ಬದುಕಿಗೂ ಸಂಬಂಧವೇ ಇಲ್ಲವೇನೋ ಎಂಬಂತೆ, ಕೇವಲ ಆಡಳಿತ ಯಂತ್ರದ ಬಗ್ಗೆ ಕನಸಿನ ಗೋಪುರ ಕಟ್ಟಿಕೊಂಡ ಅಮಾಯಕರು ನಮ್ಮಲ್ಲಿ ಹಲವರು. ಯೋಜನೆಗಳನ್ನು ನೋಡಿ ಸಂಭ್ರಮಿಸುವ ಹುಂಬತನ ಸ್ವಾತಂತ್ರ್ಯ ಬಂದು ಅರ್ಧ ಶತಮಾನ ಕಳೆದರೂ ಹೋಗಿಲ್ಲ. ಒಬ್ಬೊಬ್ಬರದೂ ಒಂದೊಂದು ದಿಕ್ಕಿನ ನೋಟ. ದೇಶಕ್ಕೂ ನಮಗೂ  ಸಂಬಂಧವೇ ಇಲ್ಲ ಎಂಬಂತೆ ಸದಾ ತಮ್ಮ ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ಮುಳುಗಿರುವ ಉದ್ಯಮಪತಿಗಳು ಒಂದೆಡೆ ನೆಮ್ಮದಿಯಾಗಿದ್ದಾರೆ. ‘ರಾಜಕೀಯದ ಬಗ್ಗೆ ಮಾತಾಡೋಕೆ ಏನು ಉಳಿದಿದೆ? ಅದೆಲ್ಲ ಹೊಲಸು ಅನ್ನೋ ನೆಪದಿಂದಲೋ, ಹುದ್ದೆ, ಪ್ರಶಸ್ತಿಗಳ ಮರ್ಜಿಗೆ ಬಿದ್ದಿರುವುದರಿಂದಲೋ ಇಂದು ಬಹುತೇಕ ಸಾಹಿತಿ, ಬುದ್ಧಿಜೀವಿಗಳು ಮಾತು ಕಳೆದುಕೊಂಡಿದ್ದಾರೆ. ಇನ್ನು ಈ ವ್ಯವಸ್ಥೆಯ ಬಗ್ಗೆ ಪತ್ರಿಕೆ ಓದಿದಾಗಲೋ ಟಿ.ವಿ.ಯಲ್ಲಿ ನೋಡಿದಾಗಲೋ ಒಂದು ಕ್ಷಣ ಸಿಡಿದು ಮರುಕ್ಷಣದಲ್ಲೇ ‘ಟುಸ್’ ಎನ್ನುವ ದೀಪಾವಳಿ ಪಟಾಕಿಗಳು ಕೆಲವರು.

ಮತ್ತೊಂದೆಡೆ, ಸದಾ ದೇಶ, ರಾಜಕೀಯ, ವಿದೇಶಗಳ ಬಗ್ಗೆಯೇ ಮಾತನಾಡುತ್ತಾ ಅದನ್ನು ಕೇವಲ ಹರಟೆಯ ವಸ್ತುವಾಗಿಸಿಕೊಂಡು ‘ಟೈಂಪಾಸ್’ ಮಾಡುತ್ತಿರುವವರ ದೊಡ್ಡ ಗುಂಪೇ ನಮ್ಮ ನಾಡಿನಲ್ಲಿ ಬೆಳೆಯುತ್ತಿದೆ. ಇಂತಹದೇ ಅರ್ಹತೆಯುಳ್ಳ ಕೆಲವು ಗುಂಪುಗಳು ಅದನ್ನೇ ಬಂಡವಾಳ ಮಾಡಿಕೊಂಡು ಸದ್ಯಕ್ಕೆ ಸರಿಯಾದ ‘ಸೀಸನ್’ಗಳಲ್ಲಿ ಸಿಕ್ಕಷ್ಟು ಲಾಭ ಮಾಡಿಕೊಂಡು ಭಾವೀ ನಾಯಕರಾಗುವ ಕನಸು ಕಾಣುತ್ತಿದ್ದಾರೆ. ಇಂತಹ ‘ದೇಶೋದ್ಧಾರಕ ಸಂತತಿ’ಗಳು ಹಳ್ಳಿ, ನಗರ ಎಂಬ ಭೇದವಿಲ್ಲದೆ ನಾಯಿ ಕೊಡೆಗಳಂತೆ ಬೆಳೆಯುತ್ತಿವೆ. ವಾಸ್ತವವಾಗಿ ಇವರ್ಯಾರಿಗೂ ಪ್ರಜಾಪ್ರಭುತ್ವದ ಸಮಾನ ಅರ್ಥವೂ ತಿಳಿದಂತಿಲ್ಲ. ಇವರ ದೃಷ್ಟಿಯಲ್ಲಿ ರಾಜಕೀಯ ಹೊಟ್ಟೆ ಪಾಡಿನ ಸಂಗತಿ ಮಾತ್ರ. ಹಾಗಾಗಿ ಇವರಿಗೆ ಗೆದ್ದವರಷ್ಟೇ ಮುಖ್ಯ.

ಚುನಾವಣೆಗಳ ಫಲಿತಾಂಶಗಳನ್ನು ನಿರ್ಧರಿಸುತ್ತಿರುವ ಮುಗ್ಧ ‘ಮತದಾರ ಪ್ರಭು’ವಿನ ಬದುಕು ಬವಣೆಗಳು ಚಿಂತಾಜನಕ. ಇವೆಲ್ಲಾ ಅವನೇ ಮಾಡಿಕೊಂಡ ಸ್ವಯಂಕೃತ ಅಪರಾಧಕ್ಕೆ ಅನುಭವಿಸುತ್ತಿರುವ ಪ್ರಾಯಶ್ಚಿತ್ತಗಳೇ. ಚುನಾವಣೆಗಳನ್ನು ತಮ್ಮ ಸತ್ವ ಪರೀಕ್ಷೆಯ ಸಂದರ್ಭಗಳೆಂದು ಭಾವಿಸದೆ, ಮೋಜಿನ ಹಬ್ಬಗಳೆಂದು ಭಾವಿಸಿ, ಮೂರು ಕಾಸಿಗೋ ಸಿಕ್ಕಷ್ಟು ಹೆಂಡಕ್ಕೋ ತಮ್ಮ ಅಮೂಲ್ಯ ಹಕ್ಕನ್ನು ಅಡವಿಟ್ಟು ನಂತರ ಬಿಡಿಸಿಕೊಳ್ಳಲಾಗದೆ ಜೀವನ ಪೂರ್ತಿ ಕೊರಗಿ ಸಾಯುವವರು....!! - ಇವೆಲ್ಲ ಈ ಶತಮಾನದ ನಮ್ಮ ಜಾಗೃತ ಸಮಾಜದ ಚದುರಿದ ಚಿತ್ರಗಳು.

ಪ್ರಜಾಪ್ರಭುತ್ವವನ್ನು ಸಂಪಾದಿಸಿ ಕೇವಲ ಅರವತ್ತು ವರ್ಷ ತುಂಬುವಷ್ಟರಲ್ಲೇ ಸ್ವಾತಂತ್ರ್ಯ ಎಂಬುದು ಒಂದು ಜವಾಬ್ದಾರಿ ಎಂಬ ಕಹಿ ಸತ್ಯವನ್ನು ಅತ್ತ ನುಂಗಲಾರದೆ ಇತ್ತ ಉಗುಳಲಾರದೆ ದೇಶದ ಭವಿಷ್ಯವನ್ನು ಬಲಿಕೊಡುತ್ತಾ ಸ್ವಾರ್ಥಕ್ಕೆ ದಾಸರಾದವರು ನಾವು. ಇದು ನಮ್ಮ ನಿರ್ಲಕ್ಷ್ಯದ ಪ್ರತಿಫಲಗಳೇ! ಸ್ವಾತಂತ್ರ್ಯ ಗಳಿಸಿದ ಇಷ್ಟು ವರ್ಷಗಳ ನಂತರವೂ ರಾಜಕೀಯ ಅಸ್ಥಿರತೆ, ಜಾತೀಯತೆ, ಅಸಮಾನತೆಯ ‘ಗುಮ್ಮ’ಗಳು  ಪ್ರತಿಯೊಬ್ಬರನ್ನೂ ಕಂಗೆಡಿಸುತ್ತಿರುವುದನ್ನು ನೋಡಿದರೆ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಒಳ್ಳೆಯ ಭವಿಷ್ಯವಿದೆಯೇ ಅನಿಸತೊಡಗಿದೆ...!!

ಮೊನ್ನೆ ಈಜಿಪ್ಟ್‌ನಲ್ಲಿ ದಬ್ಬಾಳಿಕೆ, ಭ್ರಷ್ಟಾಚಾರದ ಅಧ್ಯಕ್ಷೀಯ ಆಳುವ ವ್ಯವಸ್ಥೆಯ ವಿರುದ್ಧವೇ ನಾಗರಿಕರು ತಿರುಗಿ ಬಿದ್ದಿರುವ ಸುದ್ದಿ ನಮ್ಮ ವ್ಯವಸ್ಥೆಯ ಬಗ್ಗೆ ಜುಗುಪ್ಸೆ ಬರಿಸಿಕೊಂಡಿದ್ದ ಎಂಥವರಿಗೂ ಬಡಿದೆಬ್ಬಿಸುವ ಟಾನಿಕ್‌ನಂತಹ ಬೆಳವಣಿಗೆ. ನಮ್ಮ ದೇಶದಲ್ಲೂ ನಿರಂತರವಾಗಿ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಆಡಳಿತ ವ್ಯವಸ್ಥೆ ಹದಗೆಟ್ಟಾಗಲೂ, ಇದನ್ನೆಲ್ಲ ಸಹಿಸಿಕೊಂಡು ಮತ ಹಾಕಿ ಕಳುಹಿಸಿದ ನಾವೇಕೆ ಸುಮ್ಮನಿದ್ದೇವೆ? ಇದಕ್ಕೆ ಪರಿಹಾರವೆಂದರೆ ದಾರಿ ತಪ್ಪಿದ ಆಡಳಿತದ ವಿರುದ್ಧ ಜನರೇ ಹೋರಾಟಕ್ಕಿಳಿಯುವುದು ಎಂದೆಲ್ಲ ಎಷ್ಟೋ ಬಾರಿ ಬಡಬಡಿಸಿದ್ದೇವೆ. ಮರುಕ್ಷಣ ನಮ್ಮ ರಾಜಕೀಯ ಪಕ್ಷಗಳ ತಂತ್ರ ಪ್ರತಿತಂತ್ರಗಳೊಳಗೆ, ಎಲ್ಲದಕ್ಕೂ ಅಂಟಿಕೊಳ್ಳುವ ಜಾತಿಯ ಬಣ್ಣದ ನಡುವೆ  ಹೇಸಿಗೆ ಪಟ್ಟುಕೊಂಡು ಕಡೆಗೇನೂ ಮಾಡಲೂ ಧೈರ್ಯವಿಲ್ಲದೆ ಮೌನಿಗಳಾಗುತ್ತೇವೆ.
ನಮ್ಮೊಳಗಿನ ಸ್ವಾಭಿಮಾನಕ್ಕೆ ಸಣ್ಣ ಹಣತೆ ಹೊತ್ತಿಸಿಕೊಳ್ಳುವ ಕಿಡಿ ಇನ್ನೂ ನಮ್ಮ ಮನದ ಯಾವ ಮೂಲೆಯಲ್ಲಾದರೂ ಉಳಿದಿದೆಯೇ?  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT